ಮೊದಲನೇ ವಾಚನ: ಪ್ರಕಟಣಾ ಗ್ರಂಥ 1:1-4; 2:1-5
ದೇವರು ಯೇಸುಕ್ರಿಸ್ತರಿಗಿತ್ತ ಪ್ರಕಟನೆ ಇದು. ಅತಿ ಶೀಘ್ರದಲ್ಲಿಯೇ ಸಂಭವಿಸಲಿರುವ ಘಟನೆಗಳನ್ನು ತಮ್ಮ ದಾಸರಿಗೆ ತಿಳಿಯಪಡಿಸುವುದಕ್ಕಾಗಿ ಕ್ರಿಸ್ತಯೇಸುವಿಗೆ ಈ ಪ್ರಕಟನೆಯನ್ನು ದೇವರು ದಯಪಾಲಿಸಿದರು. ಕ್ರಿಸ್ತಯೇಸು ತಮ್ಮ ದೂತನನ್ನು ಕಳುಹಿಸಿ ತಮ್ಮ ದಾಸನಾದ ಯೊವಾನ್ನನಿಗೆ ಇವುಗಳನ್ನು ಪ್ರಕಟಿಸಿದರು. ಯೊವಾನ್ನನು ದೇವರ ಸಂದೇಶಕ್ಕೂ ಕ್ರಿಸ್ತೇಸು ತಿಳಿಸಿದ ಸತ್ಯಕ್ಕೂ ಸಾಕ್ಷಾತ್ ಸಾಕ್ಷಿಯಾಗಿದ್ದಾನೆ. ಈ ಪ್ರವಾದನಾ ಸಂದೇಶವನ್ನು ಓದುವವನು ಧನ್ಯನು: ಓದಿದ್ದನ್ನು ಕೇಳಿಸಿಕೊಳ್ಳುವವರೂ ಧನ್ಯರು ಮತ್ತು ಈ ಪ್ರವಾದನೆಯಲ್ಲಿ ಲಿಖಿತವಾಗಿರುವುದನ್ನು ಕೈಗೊಂಡು ನಡೆಯುವವರು ಸಹ ಧನ್ಯರು! ಏಕೆಂದರೆ, ಕಾಲ ಸನ್ನಿಹಿತವಾಯಿತು. ಏಷ್ಯಾಸೀಮೆಯಲ್ಲಿರುವ ಏಳು ಸಭೆಗಳಿಗೆ ಯೊವಾನ್ನನೆಂಬ ನಾನು ಬರೆಯುವುದೇನೆಂದರೆ: ವರ್ತಮಾನಕಾಲದಲ್ಲಿ ‘ಇರುವಾತನೂ,’ ಭೂತಕಾಲದಲ್ಲಿ ‘ಇದ್ದಾತನೂ,’ ಭವಿಷ್ಯತ್‍ಕಾಲದಲ್ಲಿ ‘ಬರುವಾತನೂ’ ಆದ ದೇವರಿಂದ ನಿಮಗೆ ಕೃಪಾಶೀರ್ವಾದವೂ ಶಾಂತಿಸಮಾಧಾನವೂ ಲಭಿಸಲಿ!
ಯೇಸುಸ್ವಾಮಿ ಜೆರಿಕೊ ಪಟ್ಟಣವನ್ನು ಸಮೀಪಿಸುತ್ತಿದ್ದಾಗ ಕುರುಡನೊಬ್ಬನು ದಾರಿಯ ಪಕ್ಕದಲ್ಲಿ ಕುಳಿತು ಭಿಕ್ಷೆ ಬೇಡುತ್ತಿದ್ದನು. ಜನಸಂದಣಿಯ ಶಬ್ದವನ್ನು ಆಲಿಸಿ, ಅದೇನೆಂದು ವಿಚಾರಿಸಿದನು. “ನಜರೇತಿನ ಯೇಸು ಈ ಮಾರ್ಗವಾಗಿ ಹೋಗುತ್ತಿದ್ದಾರೆ,” ಎಂದು ಅವನಿಗೆ ತಿಳಿಸಲಾಯಿತು. ಕೂಡಲೇ ಅವನು, “ಯೇಸುವೇ, ದಾವೀದ ಕುಲಪುತ್ರರೇ, ನನಗೆ ದಯೆತೋರಿ,” ಎಂದು ಗಟ್ಟಿಯಾಗಿ ಕೂಗಿಕೊಂಡನು. ಮುಂದೆ ಹೋಗುತ್ತಿದ್ದವರು, “ಸುಮ್ಮನಿರು” ಎಂದು ಅವನನ್ನು ಗದರಿಸಿದರು. ಅವನಾದರೋ, “ದಾವೀದ ಕುಲಪುತ್ರರೇ, ನನಗೆ ದಯೆತೋರಿ,” ಎಂದು ಮತ್ತಷ್ಟು ಗಟ್ಟಿಯಾಗಿ ಕೂಗಿಕೊಂಡನು. ಇದನ್ನು ಕೇಳಿ ಯೇಸು, ಅಲ್ಲೇ ನಿಂತು, ಅವನನ್ನು ತಮ್ಮ ಬಳಿಗೆ ಕರೆದುತರುವಂತೆ ಅಪ್ಪಣೆ ಮಾಡಿದರು. ಅವನು ಹತ್ತಿರಕ್ಕೆ ಬಂದಾಗ, “ನನ್ನಿಂದ ನಿನಗೇನಾಗಬೇಕು?” ಎಂದು ಕೇಳಲು ಅವನು, “ಸ್ವಾಮೀ, ನನಗೆ ಕಣ್ಣು ಕಾಣುವಂತೆ ಮಾಡಿ,” ಎಂದು ಪ್ರಾರ್ಥಿಸಿದನು. ಯೇಸು ಅವನಿಗೆ, “ದೃಷ್ಟಿಯನ್ನು ಪಡೆ; ನಿನ್ನ ವಿಶ್ವಾಸವೇ ನಿನ್ನನ್ನು ಸ್ವಸ್ಥಮಾಡಿದೆ,” ಎಂದರು. ಆ ಕ್ಷಣವೇ ಅವನಿಗೆ ದೃಷ್ಟಿಬಂದಿತು. ದೇವರನ್ನು ಸ್ತುತಿಸುತ್ತಾ ಅವನೂ ಯೇಸುವನ್ನು ಹಿಂಬಾಲಿಸಿದನು. ಇದನ್ನು ನೋಡಿದ ಜನರೆಲ್ಲರೂ ದೇವರನ್ನು ಕೊಂಡಾಡಿದರು.
No comments:
Post a Comment