ಮೊದಲನೇ ವಾಚನ: ಪ್ರಕಟಣಾ ಗ್ರಂಥ 14:14-19
ಕೀರ್ತನೆ: 96:10, 11-12, 13
ಶ್ಲೋಕ: ಪ್ರಭು ಧರೆಗೆ ನ್ಯಾಯತೀರಿಸಲು ಬಂದೇ ಬರುವರು ಖರೆಯಾಗಿ
ಶುಭಸಂದೇಶ: ಲೂಕ 21:5-11
“ಈ ಮಹಾದೇವಾಲಯವು ಅಂದವಾದ ಕಲ್ಲುಗಳಿಂದಲೂ ಅಮೂಲ್ಯವಾದ ಕೊಡುಗೆಗಳಿಂದಲೂ ಎಷ್ಟು ಅಲಂಕೃತವಾಗಿದೆ!” ಎಂದು ಕೆಲವರು ಮಾತನಾಡುತ್ತಿದ್ದರು. ಆಗ ಯೇಸು, “ಇವುಗಳನ್ನು ನೀವು ನೋಡುತ್ತಿದ್ದೀರಲ್ಲವೆ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದು; ಎಲ್ಲವನ್ನೂ ಕೆಡವಿಹಾಕುವ ಕಾಲವೊಂದು ಬರುವುದು,” ಎಂದರು. “ಗುರುವೇ, ಇದು ಸಂಭವಿಸುವುದು ಯಾವಾಗ? ಇದೀಗಲೆ ಸಂಭವಿಸಲಿದೆ ಎಂದು ತಿಳಿಸುವ ಪೂರ್ವಸೂಚನೆ ಯಾವುದು?” ಎಂದು ಕೆಲವರು ಕೇಳಿದರು. ಅದಕ್ಕೆ ಯೇಸುಸ್ವಾಮಿ, “ನೀವು ಮೋಸ ಹೋಗದಂತೆ ಜಾಗರೂಕರಾಗಿರಿ. ‘ಅನೇಕರು ನಾನೇ ಆತ, ನಾನೇ ಆತ,’ ಎನ್ನುತ್ತಾ ನನ್ನ ಹೆಸರನ್ನೇ ಇಟ್ಟುಕೊಂಡು ಬಂದು, ‘ಕಾಲವು ಸಮೀಪಿಸಿಬಿಟ್ಟಿತು,’ ಎಂದು ಹೇಳುತ್ತಾರೆ. ಅವರನ್ನು ಹಿಂಬಾಲಿಸಬೇಡಿ. ಸಮರ ಸಂಕಲಹಗಳ ಸುದ್ದಿ ಬಂದಾಗ ದಿಗಿಲುಗೊಳ್ಳಬೇಡಿ; ಇವೆಲ್ಲವೂ ಮೊದಲು ಸಂಭವಿಸಲೇಬೇಕು. ಆದರೂ ಅಂತ್ಯವು ಕೂಡಲೇ ಬರುವುದಿಲ್ಲ,” ಎಂದರು. ಅದೂ ಅಲ್ಲದೆ ಯೇಸು ಇಂತೆಂದರು: “ಜನಾಂಗಕ್ಕೆ ವಿರುದ್ಧವಾಗಿ ಜನಾಂಗ, ರಾಷ್ಟ್ರಕ್ಕೆ ವಿರುದ್ಧವಾಗಿ ರಾಷ್ಟ್ರ ಯುದ್ಧಕ್ಕಿಳಿಯುವುವು; ಭೀಕರ ಭೂಕಂಪಗಳಾಗುವುವು; ಕ್ಷಾಮಡಾಮರಗಳು ತಲೆದೋರುವುವು, ಭಯಂಕರ ಘಟನೆಗಳೂ ಬಾಹ್ಯಾಕಾಶದಲ್ಲಿ ಅಪೂರ್ವ ಸೂಚನೆಗಳೂ ಕಾಣಿಸಿಕೊಳ್ಳುವುವು.
No comments:
Post a Comment