ಮೊದಲನೇ ವಾಚನ : ದಾನಿಯೇಲ 7:13-14
ನಾನು ಕಂಡರಾತ್ರಿಯ ಕನಸ್ಸಿನಲ್ಲಿ ನರಪುತ್ರ-ನಂತಿರುವವನು ಆಕಾಶದ ಮೇಘಗಳೊಂದಿಗೆ ಬಂದು ಆ ಮಹಾವೃದ್ಧನನ್ನು ಸಮೀಪಿಸಿದನು. ಅವನನ್ನು ಆತನ ಸನ್ನಿಧಿಗೆ ತಂದರು. ಸಕಲ ರಾಷ್ಟ್ರ-ಕುಲ-ಭಾಷೆಗಳವರು. ಅವನಿಗೆ ಸೇವೆ ಸಲ್ಲಿಸಲೆಂದು ಅವನಿಗೆ ದೊರೆತನ, ಘನತೆ, ರಾಜ್ಯತ್ವ ಇವುಗಳನ್ನು ಕೊಡಲಾಯಿತು. ಅವನ ಆಳ್ವಿಕೆಗೆ ಅಂತ್ಯವಿಲ್ಲ, ಅದು ಶಾಶ್ವತವಾದುದು, ಅವನ ರಾಜ್ಯ ಎಂದಿಗೂ ಅಳಿಯದು!
ಕೀರ್ತನೆ:93:3, 1-2, 5
ಶ್ಲೋಕ: ವಹಿಸಿಹನು ಪ್ರಭು ರಾಜ್ಯಾಧಿಕಾರವನು.
ಎರಡನೇ ವಾಚನ: ಪ್ರಕಟನೆ 1:5-8
ನಂಬಲರ್ಹವಾದ ಸಾಕ್ಷಿಯೂ ಮೃತ್ಯು-ವಿನಿಂದ ಪುನರುತ್ದಾನ ಹೊಂದಿದವರಲ್ಲಿ ಪ್ರಪ್ರಥಮರೂ ಭೂರಾಜರ ಒಡೆಯರೂ ಆದ ಯೇಸುಕ್ರಿಸ್ತರಿಂದಲೂ ನಿಮಗೆ ಕೃಪಾಶೀರ್ವಾದವೂ ಶಾಂತಿಸಮಾಧಾನವೂ ಲಭಿಸಲಿ! ನಮ್ಮನ್ನು ಪ್ರೀತಿಸುವವರೂ ತಮ್ಮ ರಕ್ತದಿಂದ ನಮ್ಮ ಪಾಪಗಳನ್ನು ತೊಳೆದವರೂ ತಮ್ಮ ಪಿತನಾದ ದೇವರ ಸೇವೆಗೆ ನಮ್ಮನ್ನು ದೈವೀರಾಜ್ಯದ ಯಾಜಕರನ್ನಾಗಿ ಮಾಡಿದವರೂ ಆದ ಯೇಸುಕ್ರಿಸ್ತರಿಗೆ ಮಹಿಮೆ ಮತ್ತು ಅಧಿಪತ್ಯ ಯುಗಯುಗಾಂತರಕ್ಕೂ ಸಲ್ಲಲಿ! ಆಮೆನ್, ಇಗೋ ನೋಡು, ಮೇಘಾರೂಢನಾಗಿ ಬರುತಿಹನು ಪ್ರತಿಯೊಂದು ಕಣ್ಣೂ ಕಾಣುವುದು ಆತನನ್ನು, ಆತನನ್ನು ಇರಿದವರೂ ವೀಕ್ಷಿಸುವರು, ಗೋಳಾಡುವರಾತನನ್ನು ಕಂಡು ಲೋಕದ ಜನರೆಲ್ಲರು ಹೌದು, ಅದರಂತೆಯೇ ಆಗುವುದು, ಆಮೆನ್. "ಅ'ಕಾರವೂ, 'ಳ' ಕಾರವೂ ನಾನೇ. ವರ್ತಮಾನಕಾಲದಲ್ಲಿ, 'ಇರುವಾತನೂ' ಭೂತಕಾಲದಲ್ಲಿ 'ಇದ್ಧಾತನೂ' ಭವಿಷ್ಯತ್ಕಾಲದಲ್ಲಿ 'ಬರುವಾತನೂ' ಸರ್ವಶಕ್ತನೂ ನಾನೇ" ಎಂದು ಪ್ರಭು ದೇವರು ನುಡಿಯುತ್ತಾರೆ.
ಶುಭಸಂದೇಶ ಯೊವಾನ್ನ 18:33-37
ಆಗ ಪಿಲಾತನು ಅರಮನೆಯೊಳಗೆ ಹೋಗಿ ಯೇಸುಸ್ವಾಮಿಯನ್ನು ಕರೆಯಿಸಿ, "ನೀನು ಯೆಹೂದ್ಯರ ಅರಸನೋ?" ಎಂದು ಕೇಳಿದನು. ಅದಕ್ಕೆ ಯೇಸು, "ನೀವಾಗಿಯೇ ಇದನ್ನು ಹೇಳುತ್ತಿರುವಿರೋ ಅಥವಾ ಬೇರೆ ಯಾರಾದರೂ ನನ್ನನ್ನು ಕುರಿತು ಹೀಗೆ ಹೇಳಿದರೋ?" ಎನ್ನಲು ಪಿಲಾತನು, "ನಾನೇನು ಯೆಹೂದ್ಯನೇ? ನಿನ್ನ ಸ್ವಂತ ಜನರು ಮತ್ತು ಮುಖ್ಯಯಾಜಕರು ನಿನ್ನನ್ನು ನನ್ನ ಕೈಗೆ ಒಪ್ಪಿಸಿದ್ದಾರೆ ನೀನು ಏನು ಮಾಡಿದ್ದೀಯ?" ಎಂದು ಕೇಳಿದನು. ಅದಕ್ಕೆ ಯೇಸು, "ನನ್ನ ಸಾಮ್ರಾಜ್ಯ ಈ ಲೋಕದ್ದಲ್ಲ, ನನ್ನ ಸಾಮ್ರಾಜ್ಯ ಈ ಲೋಕದ್ದಾಗಿದ್ದರೆ, ಯೆಹೂದ್ಯರ ಕೈಗೆ ನಾನು ಬೀಳದಂತೆ ನನ್ನ ಅನುಯಾಯಿಗಳು ಕಾದಾಡುತ್ತಿದ್ದರು. ನಿಜವಾಗಿಯೂ ನನ್ನ ಸಾಮ್ರಾಜ್ಯ ಇಹಲೋಕದ್ದಲ್ಲ." ಎಂದರು. ಪಿಲಾತನು, "ಹಾಗಾದರೆ ನೀನೊಬ್ಬ ಅರಸನೋ?" ಎಂದು ಕೇಳಲು ಯೇಸು,' "ಅರಸ, ಎನ್ನುವುದು ನೀವು ಹೇಳುವ ಮಾತು. ಸತ್ಯವನ್ನು ಕುರಿತು ಸಾಕ್ಷಿ ಹೇಳುವುದು ನನ್ನ ಕೆಲಸ. ಅದಕ್ಕಾಗಿಯೇ ನಾನು ಹುಟ್ಟಿದುದು. ಅದಕ್ಕಾಗಿಯೇ ನಾನು ಜಗತ್ತಿಗೆ ಬಂದುದು. ಸತ್ಯಪರರೆಲ್ಲರೂ ನನ್ನ ಮಾತಿಗೆ ಕಿವಿಗೊಡುತ್ತಾರೆ," ಎಂದು ಹೇಳಿದರು.
No comments:
Post a Comment