ಮೊದಲನೇ ವಾಚನ: ತೀತನಿಗೆ 3:1-7
ಆಳುವವರಿಗೂ ಅಧಿಕಾರಿಗಳಿಗೂ ಕ್ರೈಸ್ತವಿಶ್ವಾಸಿಗಳು ವಿಧೇಯರಾಗಿ ನಡೆದುಕೊಳ್ಳಬೇಕೆಂದು ಜ್ಞಾಪಕಪಡಿಸು. ಎಲ್ಲಾ ಸತ್ಕಾರ್ಯಗಳನ್ನು ಕೈಗೊಳ್ಳಲು ಅವರು ಸಿದ್ಧರಿರಬೇಕು. ಅವರು ಯಾರನ್ನೂ ದೂಷಿಸದೆ, ಯಾರೊಡನೆಯೂ ಜಗಳವಾಡದೆ, ಸಾಧುಗುಣದಿಂದ ಎಲ್ಲರೊಡನೆ ಸೌಜನ್ಯದಿಂದ ನಡೆದುಕೊಳ್ಳಲಿ. ಹಿಂದೆ ನಾವು ಅವಿವೇಕಿಗಳೂ ಅವಿಧೇಯರೂ ಆಗಿ ದಾರಿ ತಪ್ಪಿಹೋಗಿದ್ದೆವು. ಅನೇಕ ಪ್ರಲೋಭನೆಗಳಿಗೂ ದುರಿಚ್ಛೆಗಳಿಗೂ ಗುಲಾಮರಾಗಿದ್ದೆವು. ದುಷ್ಟತನ ಹಾಗೂ ಮತ್ಸರಗಳಲ್ಲಿ ಕಾಲ ಕಳೆಯುತ್ತಾ ಅಸಹ್ಯರೂ ಪರಸ್ಪರ ದ್ವೇಷಿಗಳೂ ಆಗಿದ್ದೆವು. ಹೀಗಿರುವಾಗ, ಜಗದ್ರಕ್ಷಕರಾದ ದೇವರ ದಯೆಯೂ ಅವರ ಜನಪ್ರೇಮವೂ ಪ್ರಕಟವಾದವು.ಆಗ ಅವರೇ ನಮ್ಮನ್ನು ಉದ್ಧರಿಸಿದರು. ನಮ್ಮ ಸ್ವಂತ ಪುಣ್ಯಕಾರ್ಯಗಳು ನಮಗೆ ಈ ಉದ್ಧಾರವನ್ನು ತರಲಿಲ್ಲ. ಪುನರ್ಜನ್ಮವನ್ನು ಸೂಚಿಸುವ ಸ್ನಾನ ಹಾಗೂ ನೂತನ ಜೀವವನ್ನೀಯುವ ಪವಿತ್ರಾತ್ಮ ಈ ಮೂಲಕ ಅವರೇ ನಮ್ಮನ್ನು ಕರುಣೆಯಿಂದ ಉದ್ಧಾರಮಾಡಿದರು. ಪವಿತ್ರಾತ್ಮರನ್ನು ನಮ್ಮ ಉದ್ಧಾರಕ ಯೇಸುಕ್ರಿಸ್ತರ ಮುಖಾಂತರ ದೇವರು ನಮಗೆ ಧಾರಾಳವಾಗಿ ಅನುಗ್ರಹಿಸಿದ್ದಾರೆ. ಹೀಗೆ ದೈವಾನುಗ್ರಹದಿಂದ ನಾವು ದೇವರೊಡನೆ ಸತ್ಸಂಬಂಧವನ್ನು ಹೊಂದಿದೆವು. ನಿತ್ಯಜೀವದ ಭರವಸೆಯನ್ನು ಪಡೆದು ಆ ಜೀವಕ್ಕೆ ಬಾಧ್ಯಸ್ಥರಾದೆವು. ಇದು ಸತ್ಯವಾದ ಮಾತು.
ಕೀರ್ತನೆ: 23:1-3, 3-4, 5, 6
ಶ್ಲೋಕ: ಪ್ರಭು ಕುರಿಗಾಹಿಯಾಗಿರಲು ನನಗೆ, ಕುಂದುಕೊರತೆಗಳೆಲ್ಲಿಯವು ಎನಗೆ?
ಶುಭಸಂದೇಶ: ಲೂಕ 17:11-19
“ನಿಮಗೆ ಒಬ್ಬ ಆಳಿದ್ದಾನೆಂದು ಭಾವಿಸೋಣ. ಅವನು ಹೊಲ ಉತ್ತೋ, ಕುರಿ ಮೇಯಿಸಿಯೋ ಮನೆಗೆ ಬರುತ್ತಾನೆ. ಬಂದಾಕ್ಷಣವೇ, ‘ಬಾ, ನನ್ನೊಂದಿಗೆ ಊಟಮಾಡು,’ ಎಂದು ನಿಮ್ಮಲ್ಲಿ ಯಾರಾದರೂ ಅವನಿಗೆ ಹೇಳುತ್ತಾರೆಯೇ? ಇಲ್ಲ. ಅದಕ್ಕೆ ಬದಲಾಗಿ ‘ಊಟ ಸಿದ್ಧಮಾಡು; ನಾನು ಊಟಮಾಡಿ ಮುಗಿಸುವ ತನಕ ನಡುಕಟ್ಟಿಕೊಂಡು ನನಗೆ ಉಪಚಾರಮಾಡು. ಅನಂತರ ನೀನು ಊಟಮಾಡುವೆಯಂತೆ,’ ಎಂದು ಹೇಳುತ್ತಾರಲ್ಲವೇ? ತಮ್ಮ ಆಜ್ಞೆಯ ಪ್ರಕಾರ ನಡೆದುಕೊಂಡ ಆಳಿಗೆ ಅವರು ಕೃತಜ್ಞತೆ ಸಲ್ಲಿಸುತ್ತಾರೆಯೇ? ಇಲ್ಲ. ಹಾಗೆಯೇ ನೀವು ಸಹ. ನಿಮಗೆ ವಿಧಿಸಿದ್ದನ್ನು ಮಾಡಿ ಮುಗಿಸಿದ ನಂತರ, ‘ನಾವು ಕೇವಲ ಆಳುಗಳು; ನಮ್ಮ ಕರ್ತವ್ಯವನ್ನು ನಾವು ಮಾಡಿದ್ದೇವೆ,’ ಎಂದುಕೊಳ್ಳಿರಿ,” ಎಂದರು.
No comments:
Post a Comment