ಮೊದಲನೇ ವಾಚನ: ರೋಮನರಿಗೆ 1:16-25
ಶುಭಸಂದೇಶದ ವಿಷಯದಲ್ಲಿ ನಾನು ನಾಚಿಕೆಪಡುವವನೇ ಅಲ್ಲ. ಯೆಹೂದ್ಯರನ್ನು ಮೊದಲ್ಗೊಂಡು ಇತರರಿಗೂ ವಿಶ್ವಾಸಿಸುವ ಪ್ರತಿಯೊಬ್ಬನಿಗೂ ಈ ಶುಭಸಂದೇಶವು ಜೀವೋದ್ಧಾರವನ್ನು ತರುವ ದೇವರ ಶಕ್ತಿಯಾಗಿದೆ. ದೇವರು ಮಾನವನನ್ನು ಹೇಗೆ ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ ಎಂಬುದನ್ನು ಶುಭಸಂದೇಶವು ಪ್ರಕಟಿಸುತ್ತದೆ. ಇಂಥ ಸಂಬಂಧವು ಆದಿಯಿಂದ ಅಂತ್ಯದವರೆಗೂ ವಿಶ್ವಾಸದಿಂದ ಮಾತ್ರ ಸಾಧ್ಯ. "ಯಾರು ದೇವರೊಡನೆ ಸತ್ಸಂಬಂಧ ಹೊಂದಿರುತ್ತಾರೋ ಅವರು ವಿಶ್ವಾಸದಿಂದಲೇ ಸಜ್ಜೀವವನ್ನು ಪಡೆಯುತ್ತಾರೆ" ಎಂದು ಪವಿತ್ರ ಗ್ರಂಥದಲ್ಲಿ ಲಿಖಿತವಾಗಿದೆ. ಮಾನವರ ಎಲ್ಲಾ ಪಾಪಕ್ರಮಗಳ ಮೇಲೆ ದೇವರ ಕೋಪಾಗ್ನಿ ಸ್ವರ್ಗದಿಂದ ಎರಗುವುದೆಂದು ಪ್ರಕಟವಾಗುತ್ತಿದೆ. ಏಕೆಂದರೆ, ಅವರ ಅಕ್ರಮ ನಡತೆ ಸತ್ಯವನ್ನು ಅಡಗಿಸುತ್ತಿದೆ. ದೇವರ ವಿಷಯವಾಗಿ ಮಾನವರು ಏನನ್ನು ಅರಿತುಕೊಳ್ಳಲು ಸಾಧ್ಯವೋ ಅದು ಅವರಿಗೆ ಚೆನ್ನಾಗಿ ತಿಳಿದಿದೆ. ದೇವರೇ ಅದನ್ನು ಅವರಿಗೆ ಸ್ಪಷ್ಟಪಡಿಸಿದ್ದಾರೆ. ದೇವರು ಲೋಕವನ್ನು ಸೃಷ್ಟಿಸಿದಂದಿನಿಂದ ಅವರ ಅಗೋಚರ ಗುಣಲಕ್ಷಣಗಳು, ಅವರ ಅನಂತ ಶಕ್ತಿ ಮತ್ತು ದೈವಸ್ವಭಾವ ಮನುಷ್ಯರಿಗೆ ಸೃಷ್ಟಿಗಳ ಮೂಲಕವೇ ವೇದ್ಯವಾಗುತ್ತಿವೆ. ಆದುದರಿಂದ ಮಾನವರು ತಮ್ಮ ಅಜ್ಞಾನಕ್ಕೆ ಯಾವ ನೆಪವನ್ನು ಒಡ್ಡಲೂ ಸಾಧ್ಯವಿಲ್ಲ. ದೇವರನ್ನು ಅವರು ಅರಿತಿದ್ದರೂ ದೇವರೆಂದು ಗೌರವಿಸಲಿಲ್ಲ; ದೇವರಿಗೆ ಉಪಕಾರ ಸ್ಮರಣೆಯನ್ನು ಮಾಡಲಿಲ್ಲ. ಬದಲಾಗಿ ಅವರು ವ್ಯರ್ಥ ಆಲೋಚನೆಗಳಲ್ಲಿ ಮಗ್ನರಾದರು. ಅವರ ವಿವೇಕರಹಿತ ಮನಸ್ಸು ಅಂಧಕಾರಮಯವಾಯಿತು. ತಾವೇ ಜ್ಞಾನಿಗಳೆಂದು ಕೊಚ್ಚಿಕೊಳ್ಳುತ್ತ ಅವರು ನಿಜವಾಗಿಯೂ ಮೂರ್ಖರಾದರು. ಅಮರ ದೇವರನ್ನು ಆರಾಧಿಸುವುದನ್ನು ಬಿಟ್ಟು ಅಳಿದುಹೋಗುವಂಥ ನರಮಾನವರ ಪ್ರಾಣಿಪಕ್ಷಿಗಳ, ಸರ್ಪಾದಿಗಳ ವಿಗ್ರಹಗಳನ್ನು ಮಾಡಿ ಆರಾಧಿಸತೊಡಗಿದರು. ಆದುದರಿಂದ, ಮಾನವರು ಮನಸ್ಸಿನ ಆಶಾಪಾಶಾಗಳಿಗೆ ಬಲಿಯಾಗಿ ತಮ್ಮ ದೇಹಗಳಿಂದ, ತಮ್ಮತಮ್ಮಲ್ಲೇ ಅಶ್ಲೀಲ ಕೃತ್ಯಗಳೆಸಗಲೆಂದು ದೇವರು ಅವರನ್ನು ಅಶುದ್ಧ ನಡತೆಗೆ ಬಿಟ್ಟುಬಿಟ್ಟರು. ಅವರು ದೇವರ ಸತ್ಯವನ್ನು ಬಿಟ್ಟು ಆಸತ್ಯವಾದುದನ್ನು ಅಂಗೀಕರಿಸಿದರು; ಸೃಷ್ಟಿಕರ್ತನನ್ನು ಆರಾಧಿಸದೆ, ಸೃಷ್ಟಿಯಾದ ವಸ್ತುಗಳನ್ಯೇ ಆರಾಧಿಸಿ, ಸೇವೆ ಸಲ್ಲಿಸಿದರು. ಸರ್ವಕಾಲಕ್ಕೂ ಸೃಷ್ಟಿಕರ್ತರೊಬ್ಬರಿಗೇ ಸ್ತುತಿಸ್ತೋತ್ರ ಸಲ್ಲತಕ್ಕದ್ದು, ಆಮೆನ್.
ಕೀರ್ತನೆ: 19:2-3, 4-5
ಶ್ಲೋಕ: ಆಕಾಶಮಂಡಲ ಸಾರುತಿದೆ ದೇವರ ಮಹಿಮೆಯನು
ಶುಭಸಂದೇಶ: ಲೂಕ 11:37-41
ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಗಿಸಿದಾಗ, ಫರಿಸಾಯನೊಬ್ಬನು ಅವರನ್ನು ಊಟಕ್ಕೆ ಆಮಂತ್ರಿಸಿದನು. ಯೇಸು ಒಳಕ್ಕೆ ಹೋಗಿ ಊಟಕ್ಕೆ ಕುಳಿತುಕೊಂಡರು. ಊಟಕ್ಕೆ ಮುಂಚೆ ಅವರು ಕೈ ತೊಳೆಯದೆ ಹೋದುದನ್ನು ಕಂಡು ಫರಿಸಾಯನು ಚಕಿತನಾದನು. ಆಗ ಯೇಸು, "ಫರಿಸಾಯರಾದ ನೀವು ಲೋಟ ಹಾಗೂ ಊಟದ ತಟ್ಟೆಗಳ ಹೊರಭಾಗವನ್ನು ಶುಚಿ ಮಾಡುತ್ತೀರಿ; ಆದರೆ ನಿಮ್ಮ ಒಳಭಾಗವು ಲೋಭದಿಂದಲೂ ಕೆಡುಕಿನಿಂದಲೂ ತುಂಬಿದೆ. ಮೂರ್ಖರೇ, ಹೊರಭಾಗವನ್ನು ಮಾಡಿದಾತನು ಒಳಭಾಗವನ್ನು ಮಾಡಲಿಲ್ಲವೇ? ನಿಮ್ಮ ತಟ್ಟೆ ಲೋಟಗಳಲ್ಲಿ ಇರುವುದನ್ನು ಮೊಟ್ಟಮೊದಲು ದಾನಮಾಡಿರಿ. ಆಗ ಸಮಸ್ತವೂ ನಿಮಗೆ ಶುದ್ಧಿಯಾಗಿರುವುದು.
No comments:
Post a Comment