ಮೊದಲನೆಯ ವಾಚನ: ನೆಹೆಮಿಯ 2:1-8
ನಾನು ರಾಜನ ಪಾನಸೇವಕನಾಗಿದ್ದೆ. ಅರ್ತಷಸ್ತರಾಜನ ಇಪ್ಪತ್ತನೆಯ ವರ್ಷದ ಚೈತ್ರಮಾಸದಲ್ಲಿ, ರಾಜನು ದ್ರಾಕ್ಷಾರಸ ಪಾನಮಾಡುವ ಹೊತ್ತಿನಲ್ಲಿ ದ್ರಾಕ್ಷಾರಸವನ್ನು ತಂದುಕೊಟ್ಟೆ. ನಾನು ಅವನ ಸನ್ನಿಧಿಯಲ್ಲಿ ಹಿಂದೆ ಎಂದೂ ಖಿನ್ನನಾಗಿರಲಿಲ್ಲ. ರಾಜ ನನಗೆ, " ನೀನು ಕಳೆಗುಂದಿದವನಾಗಿರುವೆ, ಏಕೆ? ನಿನ್ನ ದೇಹಾರೋಗ್ಯ ಚೆನ್ನಾಗಿದೆಯಲ್ಲವೇ? ಇದಕ್ಕೆ ಮನೋವೇದನೆಯೇ ಹೊರತು ಬೇರೇನೂ ಕಾರಣ ಇರಲಾರದು, " ಎಂದು ಹೇಳಿದ. ನನಗೆ ಮಹಾಭೀತಿಯುಂಟಾಯಿತು. ನಾನು ರಾಜನಿಗೆ, "ರಾಜಾಧಿರಾಜರು ಚಿರಂಜೀವಿಯಾಗಿರಲಿ! ನನ್ನ ಪೂರ್ವಿಕರ ಸಮಾಧಿಗಳಿರುವ ಪಟ್ಟಣವು ಹಾಳಾಗಿ ಅದರ ಬಾಗಿಲುಗಳು ಬೆಂಕಿಯಿಂದ ಸುಟ್ಟುಹೋಗಿವೆ; ಹೀಗಿರುವಲ್ಲಿ, ನನ್ನ ಮುಖ ಕಳೆಗುಂದದೆ ಇರಲು ಸಾಧ್ಯವೆ?, " ಎಂದು ಹೇಳಿದೆ. ಆಗ ರಾಜ, " ನಿನ್ನ ಆಸೆಯೇನು?, " ಎಂದು ಕೇಳಿದನು. ನಾನು ಪರಲೋಕದ ದೇವರನ್ನು ಪ್ರಾರ್ಥಿಸಿ, ಅವನಿಗೆ, "ರಾಜರ ಚಿತ್ತವಿರುವುದಾದರೆ, ಮತ್ತು ತಮ್ಮ ಸೇವಕನು ತಮ್ಮ ದೃಷ್ಟಿಯಲ್ಲಿ ದಯೆಗೆ ಪಾತ್ರನಾಗಿದ್ದರೆ, ನನ್ನ ಪಿತೃಗಳ ಸಮಾಧಿಗಳಿರುವ ಪಟ್ಟಣವನ್ನು ಮರಳಿ ಕಟ್ಟುವುದಕ್ಕೆ ಜುದೇಯ ನಾಡಿಗೆ ಹೋಗಲು ನನಗೆ ಅಪ್ಪಣೆಯಾಗಬೇಕು, " ಎಂದು ಹೇಳಿದೆ. ರಾಜರ ಹತ್ತಿರದಲ್ಲೇ ಕುಳಿತುಕೊಂಡಿದ್ದಳು ರಾಣಿ. "ಪ್ರಯಾಣಕ್ಕೆ ನಿನಗೆ ಎಷ್ಟು ಕಾಲಬೇಕು? ಯಾವಾಗ ಹಿಂದಿರುಗುವೆ? " ಎಂದು ವಿಚಾರಿಸಿದ. ನಾನು ಕಾಲವನ್ನು ಸೂಚಿಸಿದೆ. ಅವನು ಒಪ್ಪಿಕೊಂಡು ಹೋಗಿಬರಲು ಅಪ್ಪಣೆಕೊಟ್ಟ. ತರುವಾಯ ನಾನು ರಾಜನಿಗೆ, "ನದಿಯಾಚೆಯ ದೇಶಾಧಿಪತಿಗಳು ತಮ್ಮ ಪ್ರಾಂತ್ಯಗಳಲ್ಲಿ ಹಾದು ಜುದೇಯ ನಾಡಿಗೆ ಹೋಗುವುದಕ್ಕೆ ನನಗೆ ಅಪ್ಪಣೆಯಾಗಬೇಕಾಗುತ್ತದೆ. ರಾಜವನಪಾಲಕನಾದ ಆಸಾಫನು ದೇವಾಲಯದ ಕೋಟೆಯ ಬಾಗಿಲುಗಳನ್ನು ಪಟ್ಟಣದ ಪೌಳಿಗೋಡೆಯನ್ನೂ ನಾನು ಸೇರುವ ಮನೆಯನ್ನೂ, ಕಟ್ಟಲು ಬೇಕಾಗುವ ತೊಲೆಗಳಿಗಾಗಿ ಮರಗಳನ್ನು ಕೊಡಬೇಕಾಗುತ್ತದೆ; ಇದನ್ನೆಲ್ಲಾ ಕೊಡುವಂತೆ ರಾಜರು ನನ್ನ ಕೈಯಲ್ಲಿ ಪತ್ರಗಳನ್ನು ದಯಮಾಡಿ ನೀಡಬೇಕು, " ಎಂದು ಬಿನ್ನವಿಸಿದೆ. ನನ್ನ ದೇವರ ಕೃಪಾಹಸ್ತ ನನ್ನ ಮೇಲೆ ಇದ್ದುದರಿಂದ ರಾಜನು ಅವುಗಳನ್ನು ನನಗೆ ಕೊಟ್ಟನು.
ಕೀರ್ತನೆ 137:1-6.V.6
ಶ್ಲೋಕ: ಪ್ರಭುವಿನ ನಾಮ ಸ್ಮರಣೆ ಮಾಡದಿದ್ದಲ್ಲಿ, ಸೇದಿ ಹೋಗಲಿ ನಾಲಿಗೆ ನನ್ನ ಬಾಯಲಿ |
ಬಾಬಿಲೋನಿನ ನದಿಗಳ ತೀರದಲಿ ಕುಳಿತು|
ಅತ್ತು ಪ್ರಲಾಪಿಸಿದೆವು ಸಿಯೋನನ್ನು ನೆನೆದು||
ಆ ನಾಡಿನಲಿ ಕಿನ್ನರಿಗಳನ್ನೇ ತೂಗುಹಾಕಿದೆವು|
ನೀರವಂಜಿ ಮರಗಳಿಗೆ ಅವನ್ನು ನೇತುಹಾಕಿದೆವು||
ಸೆರೆಹಿಡಿದು ಬಂಧಿಸಿದಾ ಜನ ಈಪರಿ ಪೀಡಿಸಿದರೆಮ್ಮನು|
ಹಾಡಿ, ನಮ್ಮ ವಿವೋದಕ್ಕಾಗಿ ಸಿಯೋನಿನ ಗೀತೆಗಳಲೊಂದನು||
ಪ್ರಭುಗೀತೆಗಳ ನಾವು ಗಾನಮಾಡುವುದೆಂತು|
ಅನ್ಯನಾಡಿನೊಳು ಅವುಗಳನು ಹಾಡುವುದೆಂತು||
ಜೆರುಸಲೇಮ್, ನಾನು ನಿನ್ನ ಮರೆತಲ್ಲಿ|
ನನ್ನ ಬಲಹಸ್ತ ಬತ್ತಿಹೋಗಿಬಿಡಲಿ||
ಜೆರುಸಲೇಮನು ನಾ ಸ್ಮರಣೆಮಾಡದಿದ್ದಲ್ಲಿ|
ಆ ಸ್ಮರಣೆ ಸರ್ವೋತ್ತಮ ನಲಿವು ನನಗಾಗದಿದ್ದಲ್ಲಿ|
ಸೇದಿಹೋಗಲಿ ನಾಲಿಗೆ ನನ್ನ ಬಾಯಲಿ||
ಶುಭಸಂದೇಶ: ಲೂಕ 9:57-62
ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರೊಂದಿಗೆ ದಾರಿಯಲ್ಲಿ ಹೋಗುತ್ತಿದ್ದಾಗ ಒಬ್ಬನು ಅವರಿಗೆ, " ನೀವು ಎಲ್ಲಿಗೆ ಹೋದರೂ ನಿಮ್ಮನ್ನು ಹಿಂಬಾಲಿಸುತ್ತೇನೆ, " ಎಂದನು. ಯೇಸು ಅವನಿಗೆ, "ನರಿಗಳಿಗೆ ಗುಹೆಗಳುಂಟು; ಆಕಾಶದ ಪಕ್ಷಿಗಳಿಗೆ ಗೂಡುಗಳುಂಟು; ಆದರೆ ನರಪುತ್ರನಿಗೆ ತಲೆಯಿಡುವುದಕ್ಕೂ ಸ್ಥಳವಿಲ್ಲ, " ಎಂದರು. ಇನ್ನೊಬ್ಬನಿಗೆ ಯೇಸು, "ನನ್ನನ್ನು ಹಿಂಬಾಲಿಸು, " ಎಂದು ಹೇಳಿದಾಗ ಅವನು, "ಸ್ವಾಮಿ, ಮೊದಲು ನನ್ನ ತಂದೆಯ ಉತ್ತರಕ್ರಿಯೆಗಳನ್ನು ಮುಗಿಸುವ ತನಕ ಸಮಯಕೊಡಿ, " ಎಂದನು. ಅವನಿಗೆ ಯೇಸು, "ಸತ್ತವರೇ ತಮ್ಮ ಸತ್ತವರನ್ನು ಸಮಾಧಿಮಾಡಿಕೊಳ್ಳಲಿ; ನೀನಾದರೋ ಹೋಗು, ದೇವರ ಸಾಮ್ರಾಜ್ಯವನ್ನು ಪ್ರಚಾರಮಾಡು, " ಎಂದು ಹೇಳಿದರು. ಮತ್ತೊಬ್ಬನು, "ನಿಮ್ಮನ್ನು ಹಿಂಬಾಲಿಸುತ್ತೇನೆ ಪ್ರಭೂ, ಆದರೆ ಮೊದಲು ಮನೆಯವರನ್ನು ಬೀಳ್ಕೊಟ್ಟು ಬರಲು ಅಪ್ಪಣೆಯಾಗಬೇಕು, "ಎಂದನು. ಯೇಸು ಅವನನ್ನು ನೋಡಿ, " ನೇಗಿಲಿಗೆ ಕೈಹಾಕಿ ಹಿಂದಕ್ಕೆ ನೋಡುವವನು ದೇವರ ಸಾಮ್ರಾಜ್ಯಕ್ಕೆ ತಕ್ಕವನಲ್ಲ, " ಎಂದರು.
No comments:
Post a Comment