ಮೊದಲನೆಯ ವಾಚನ: ರೋಮನರಿಗೆ 4:13, 16-18
ಸಹೋದರರೇ, ಅಬ್ರಹಾಮನಿಗೂ ಆತನ ಸಂತತಿಗೂ ಜಗತ್ತನ್ನೆ ಕೊಡುವುದಾಗಿ ದೇವರು ವಾಗ್ದಾನ ಮಾಡಿದರು. ಈ ವಾಗ್ದಾನವನ್ನು ಅಬ್ರಹಾಮನು ಪಡೆದದ್ದು ಧರ್ಮಶಾಸ್ತ್ರದ ಪಾಲನೆಯಿಂದ ಅಲ್ಲ, ಆದರೆ ವಿಶ್ವಾಸದ ಮೂಲಕ ದೇವರೊಡನೆ ಸತ್ಸಂಬಂಧವನ್ನು ಹೊಂದಿದ್ದರಿಂದ. ದೈವವಾಗ್ದಾನಕ್ಕೆ ವಿಶ್ವಾಸವೇ ಆಧಾರ. ಇವೆಲ್ಲಕ್ಕೂ ದೈವಾನುಗ್ರಹವೇ ಮೂಲ. ಇವು ಅಬ್ರಹಾಮನ ಸಂತತಿಯವರಿಗೆ, ಅಂದರೆ, ಧರ್ಮಶಾಸ್ತ್ರವನ್ನು ಅನುಸರಿಸಿ ನಡೆಯುವವರಿಗೆ ಮಾತ್ರವಲ್ಲ, ಅಬ್ರಹಾಮನಂತೆ ದೇವರಲ್ಲಿ ವಿಶ್ವಾಸವಿಟ್ಟವರೆಲ್ಲರಿಗೂ ಖಚಿತವಾಗಿ ದೂರೆಯುತ್ತದೆ. ಏಕೆಂದರೆ, ಅಬ್ರಹಾಮನೇ ನಮ್ಮೆಲ್ಲರಿಗೂ ಮೂಲಪಿತ. "ನಾನು ನಿನ್ನನ್ನು ಅನೇಕ ಜನಾಂಗಗಳಿಗೆ ಮೂಲಪಿತನನ್ನಾಗಿ ನೇಮಿಸಿದ್ದೇನೆ, " ಎಂದು ಪವಿತ್ರಗ್ರಂಥದಲ್ಲೇ ಬರೆದಿದೆ. ಹೌದು, ಮೃತರನ್ನು ಜೀವಂತಗೊಳಿಸುವವರೂ ಅಸ್ತಿತ್ವದಲ್ಲಿ ಇಲ್ಲದ್ದನ್ನು ಅಸ್ತಿತ್ವಕ್ಕೆ ತರುವಂಥವರೂ ಆದ ದೇವರಲ್ಲಿ ಆತನು ವಿಶ್ವಾಸವಿಟ್ಟನು. ಆದ್ದರಿಂದ ಈ ವಾಗ್ದಾನವನ್ನು ಸಾಕ್ಷಾತ್ ದೇವರಿಂದಲೇ ಪಡೆದನು. ಆತನ ವಿಶ್ವಾಸ ಮತ್ತು ಭರವಸೆ ಎಷ್ಟರಮಟ್ಟಿಗೆ ಇತ್ತೆಂದರೆ, ಈ ದೈವವಾಗ್ದಾನವು ನೆರವೇರುವ ನಿರೀಕ್ಷೆ ಇಲ್ಲದಿದ್ದರೂ ಆತನು ದೇವರನ್ನು ನಂಬಿದನು. ಆದುದರಿಂದಲೇ, " ನಿನ್ನ ಸಂತಾನವು ನಕ್ಷತ್ರಗಳಷ್ಟು ಅಸಂಖ್ಯಾತ ಆಗುವುದು, " ಎಂಬ ಹೇಳಿಕೆಯಂತೆ ಆತನು ಅನೇಕ ಜನಾಂಗಗಳಿಗೆ ಮೂಲಪಿತನಾದನು.
ಕೀರ್ತನೆ 105:5, 7, 8-9, 42-43
ಶ್ಲೋಕ : ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು.
ಆತನ ದಾಸ ಅಬ್ರಹಾಮನ ಸಂತತಿಯವರೇ|
ಆತನಾರಿಸಿಕೊಂಡ ಯಾಕೋಬನ ವಂಶದವರೇ||
ಪ್ರಭು ನಮ್ಮ ದೇವನೆಂಬುದು ಶುತ್ರ|
ಆತನಿತ್ತ ತೀರ್ಪು ಇದೋ ವಿಶ್ವವ್ಯಾಪ್ತ||
ನೆನಪಿನಲ್ಲಿಡುವನು ಪ್ರಭು ತನ್ನ ವಾಗ್ದಾನವನು|
ಸಾವಿರಾರು ತಲೆಗಳವರೆಗೂ ತನ್ನೊಪ್ಪಂದವನು||
ಅಬ್ರಹಾಮನೊಡನೆ ಮಾಡಿಕೊಂಡ ಒಡಂಬಡಿಕೆಯನು|
ಇಸಾಕನಿಗೆ ಆಣೆಯಿಟ್ಟು ಆತ ಹೇಳಿದುದನು||
ಸ್ಮರಿಸಿಕೊಂಡನು ಪ್ರಭು ತನ್ನ ವಾಗ್ದಾನವನು|
ತನ್ನ ದಾಸ ಅಬ್ರಹಾಮನಿಗೆ ಕೊಟ್ಟ ಮಾತನು||
ಹೊರತಂದನು ತನ್ನ ಪ್ರಜೆಯನು ಉಲ್ಲಾಸದಿಂದ|
ತಾನಾರಿಸಿಕೊಂಡವರನು ಹರ್ಷೋದ್ಗಾರದಿಂದ||
ಶುಭಸಂದೇಶ: ಲೂಕ 12:8-12
ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ಯಾವನು ಜನರ ಮುಂದೆ ಬಹಿರಂಗವಾಗಿ ತಾನು ನನ್ನವನೆಂದು ಒಪ್ಪಿಕೊಳ್ಳುತ್ತಾನೋ, ಅವನನ್ನು ನರಪುತ್ರನು ಸಹ ದೇವದೂತರ ಮುಂದೆ ತನ್ನವನೆಂದು ಒಪ್ಪಿಕೊಳ್ಳುವನು. ಆದರೆ ಯಾವನು ತಾನು ನನ್ನವನಲ್ಲ ಎಂದು ಜನರ ಮುಂದೆ ಬಹಿರಂಗವಾಗಿ ನಿರಾಕರಿಸಲಾಗುವುದೆಂಬುದು ನಿಶ್ಚಯ. ಯಾವನಾದರೂ ನರಪುತ್ರನ ವಿರುದ್ಧ ಮಾತನಾಡಿದರೆ ಅವನಿಗೆ ಕ್ಷಮೆ ದೊರಕಬಹುದು. ಆದರೆ ಪವಿತ್ರಾತ್ಮ ಅವರನ್ನು ದೂಷಿಸುವವನಿಗೆ ಕ್ಷಮೆಯೇ ದೊರಕದು. ಪ್ರಾರ್ಥನಾಮಂದಿರಗಳಿಗೆ ಮತ್ತು ನ್ಯಾಯಾಧಿಪತಿಗಳ ಹಾಗೂ ದೇಶಾಧಿಕಾರಿಗಳ ಮುಂದೆ ನಿಮ್ಮನ್ನು ಎಳೆದೊಯ್ಯುವಾಗ ಹೇಗೆ ವಾದಿಸುವುದು, ಏನು ಹೇಹುವುದು ಎಂದು ಚಿಂತಾಕ್ರಾಂತರಾಗಬೇಡಿ. ಏಕೆಂದರೆ, ನೀವು ಹೇಳತಕ್ಕದ್ದನ್ನು ಪವಿತ್ರಾತ್ಮ ಅದೇ ಗಳಿಗೆಯಲ್ಲಿ ನಿಮಗೆ ಕಲಿಸಿಕೊಡುವರು."
No comments:
Post a Comment