ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

20.10.23 - " ನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ."

ಮೊದಲನೆಯ ವಾಚನ: ರೋಮನರಿಗೆ 4:1-8

ಸಹೋದರರೇ, ವಂಶಾನುಕ್ರಮವಾಗಿ ನಮ್ಮ ಮೂಲಪಿತನಾದ ಅಬ್ರಹಾಮನ ಅನುಭವವನ್ನು ಕುರಿತು ಏನು ಹೇಳೋಣ? ಆತನು ತನ್ನ ಸತ್ಕಾರ್ಯಗಳಿಂದ ದೇವರೊಡನೆ ಸತ್ಸಂಬಂಧವನ್ನು ಹೊಂದಿದ್ದರೆ ಆಗ ಹೊಗಳಿಕೊಳ್ಳುವುದಕ್ಕೆ ಆತನಿಗೆ ಆಸ್ಪದವಿರುತ್ತಿತ್ತು, ಆದರೆ ಅದು ದೇವರ ಸಾನ್ನಿಧ್ಯದಲ್ಲಿ ಅಲ್ಲ. ಏಕೆಂದರೆ, ಪವಿತ್ರ ಗ್ರಂಥದಲ್ಲಿ ಹೀಗೆ ಹೇಳಿದೆ: " ಅಬ್ರಹಾಮನು ದೇವರಲ್ಲಿ ವಿಶ್ವಾಸವಿಟ್ಟನು, ಆತನು ತಮ್ಮ ಸತ್ಸಂಬಂಧದಲ್ಲಿ ಇರುವುದಾಗಿ ದೇವರು ಪರಿಗಣಿಸಿದರು." ದುಡಿಯುವವನಿಗೆ ದೊರಕುವ ಕೂಲಿ ಉಚಿತ ದಾನವಲ್ಲ, ಅದು ಕಷ್ಟಾರ್ಜಿತ ಸಂಪಾದನೆ. ಆದರೆ ಸತ್ಕಾರ್ಯಸಂಪಾದನೆ ಇಲ್ಲದಿದ್ದರೂ ಯಾರೂ ಅಧರ್ಮಿಗಳನ್ನು ಸದ್ಧರ್ಮಿಗಳನ್ನಾಗಿಸುವ ದೇವರಲ್ಲಿ ವಿಶ್ವಾಸವಿಡುತ್ತಾರೋ ಅಂಥವರ ವಿಶ್ವಾಸವನ್ನು ದೇವರು ಅಂಗೀಕರಿಸಿ, ತಮ್ಮೊಡನೆ ಸತ್ಸಂಬಂಧದಲ್ಲಿ ಇರಿಸಿಕೊಳ್ಳುತ್ತಾರೆ. ಅಂತೆಯೇ ಸತ್ಕಾರ್ಯಸಂಪಾದನೆ ಇಲ್ಲದಿದ್ದರೂ ಯಾರು ದೇವರೊಡನೆ ಸತ್ಸಂಬಂಧದಲ್ಲಿ ಇರುತ್ತಾರೋ ಅಂಥವರು ಭಾಗ್ಯವಂತರು ! ಇದನ್ನು ಕುರಿತು ದಾವೀದನು ಹೀಗೆನ್ನುತ್ತಾನೆ: " ಯಾರ ಅಪರಾಧಗಳು ಪರಿಹರಿಸಲಾಗಿವೆಯೋ, ಯಾರ ಪಾಪಗಳು ಕ್ಷಮಿಸಲಾಗಿವೆಯೋ ಅವರು ಭಾಗ್ಯವಂತರು ! ಯಾರ ಪಾಪವನ್ನು ಸರ್ವೇಶ್ವರ ಲೆಕ್ಕಿಸುವುದಿಲ್ಲವೋ ಆತನು ಭಾಗ್ಯವಂತನು!"

ಕೀರ್ತನೆ 32:1-2, 5, 11
ಶ್ಲೋಕ: ನೀನೇ ನನಗೆ ಮರೆಯು, ಆಪತ್ತಿನಲಾಸರೆಯು.

ಯಾರ ಪಾಪ ಪರಿಹಾರವಾಗಿದೆಯೋ|
ಯಾರ ದ್ರೋಹ ವಿಮೋಚನೆಯಾಗಿದೆಯೋ ಅವರೇ ಧನ್ಯರು||
ಯಾರಪರಾಧವನು ಪ್ರಭು ಎಣಿಸಿಲ್ಲವೋ|
ಯಾರಂತರಂಗದಲಿ ಕುತಂತ್ರವಿಲ್ಲವೋ ಅವರೇ ಧನ್ಯರು||

ಆಗ ನಾ ನಿವೇದಿಸಿದೆ ನಿನಗೆ ನನ್ನ ಪಾಪವನು|
ಮರೆಮಾಡಲಿಲ್ಲ ನಿನ್ನಿಂದ ನನ್ನ ದ್ರೋಹವನು||
ಪ್ರಭು ಮುಂದೆ ನನ್ನ ತಪ್ಪುಗಳನ್ನೊಪ್ಪಿಕೊಳ್ವೆ ಎಂದೆನು|
ಆಗ ನೀ ಪರಿಹರಿಸಿದೆ ನನ್ನ ಪಾಪದೋಷವನು||

ಸಜ್ಜನರೇ, ಸಂತೋಷಿಸಿರಿ, ಉಲ್ಲಾಸಿಸಿರಿ ಪ್ರಭುವಿನಲಿ|
ಯಥಾರ್ಥಚಿತರೇ, ಜಯಕಾರಮಾಡಿ ಆತನ ವಿಷಯದಲಿ||

ಶುಭಸಂದೇಶ: ಲೂಕ 12:1-7


ಆ ಕಾಲದಲ್ಲಿ ಸಾವಿರಾರು ಜನರು ಒಬ್ಬರನ್ನೊಬ್ಬರು ಒತ್ತರಿಸುತ್ತಾ ಕಿಕ್ಕಿರಿದು ನೆರೆದಿದ್ದರು. ಯೇಸು ಮೊದಲು ಶಿಷ್ಯರನ್ನು ಉದ್ದೇಶಿಸಿ, " ಫರಿಸಾಯರ ಹುಳಿಹಿಟ್ಟಿನ ಬಗ್ಗೆ, ಅಂದರೆ ಅವರ ಕಪಟತನದ ಬಗ್ಗೆ, ಎಚ್ಚರಿಕೆಯಿಂದಿರಿ. ಮುಚ್ಚುಮರೆಯಾಗಿರುವುದೆಲ್ಲಾ ಬಟ್ಟಬಯಲಾಗುವುದು, ಗುಟ್ಟಾಗಿರುವುದೆಲ್ಲಾ ರಟ್ಟಾಗುವುದು. ನೀವು ಕತ್ತಲಲ್ಲಿ ಹೇಳಿದ್ದೆಲ್ಲವನ್ನು ಬೆಳಕಿನಲ್ಲಿ ಕೇಳಲಾಗುವುದು, ಒಳಕೋಣೆಗಳಲ್ಲಿ ಕಿವಿಮಾತಾಗಿ ನೀವು ಹೇಳಿದ್ದೆಲ್ಲವನ್ನು ಮನೆಮಾಳಿಗೆಗಳ ಮೇಲಿಂದ ಸಾರಲಾಗುವುದು. ಗೆಳೆಯರೇ, ನನ್ನ ಮಾತಿಗೆ ಕಿವಿಗೊಡಿ : ದೇಹವನ್ನು ಕೊಂದುಹಾಕುವವರಿಗೆ ಭಯಪಡಬೇಡಿ. ಕೊಂದುಹಾಕಿದ ಮೇಲೆ ಹೆಚ್ಚೇನು ಮಾಡಲು ಅವರಿಂದಾಗದು. ನೀವು ಯಾರಿಗೆ ಭಯಪಡಬೇಕೆಂದು ಹೇಳುತ್ತೇನೆ, ಕೇಳಿ : ಸತ್ತ ಮೇಲೆ ನರಕದೊಳಕ್ಕೆ ದಬ್ಬಲು ಅಧಿಕಾರವುಳ್ಳಾತನಿಗೆ ಭಯಪಡಿ. ಹೌದು, ಆತನಿಗೆ ಭಯಪಡಿರೆಂದು ನಿಮಗೆ ಒತ್ತಿ ಹೇಳುತ್ತೇನೆ. ಎರಡು ಕಾಸಿಗೆ ಐದು ಗುಬ್ಬಚ್ಚಿಗಳನ್ನು ಮಾರುವುದಿಲ್ಲವೇ? ಆದರೂ ಅವುಗಳಲ್ಲಿ ಒಂದನ್ನೂ ದೇವರು ಮರೆಯುವುದಿಲ್ಲ. ಅಷ್ಟು ಮಾತ್ರವಲ್ಲ, ನಿಮ್ಮ ತಲೆಗೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ. ಭಯಪಡಬೇಡಿ, ಅನೇಕ ಗುಬ್ಬಚ್ಚಿಗಳಿಗಿಂತ ನೀವು ಎಷ್ಟೋ ಮೌಲ್ಯವುಳ್ಳವರು, " ಎಂದರು.

No comments:

Post a Comment