ಮೊದಲನೇ ವಾಚನ: ರೋಮನರಿಗೆ 7:18-25
ಸಹೋದರರೇ, ನನ್ನಲ್ಲಿ, ಅಂದರೆ ನನ್ನ ಶಾರೀರಿಕ ಸ್ವಭಾವದಲ್ಲಿ ಒಳ್ಳೆಯತನವೆಂಬುದೇನೂ ನೆಲೆಗೊಂಡಿಲ್ಲ. ಇದು ನನಗೆ ಗೊತ್ತು. ಏಕೆಂದರೆ, ಒಳಿತನ್ನು ಮಾಡಬೇಕೆಂಬ ಮನಸ್ಸು ನನಗಿದ್ದರೂ ಅದನ್ನು ಮಾಡಲು ನನ್ನಿಂದ ಆಗುತ್ತಿಲ್ಲ. ನಾನು ಬಯಸುವ ಒಳ್ಳೆಯದನ್ನು ಮಾಡದೆ, ನಾನು ಬಯಸದ ಕೆಟ್ಟದ್ದನ್ನೇ ಮಾಡುವವನಾಗಿದ್ದೇನೆ. ನಾನು ಬಯಸದೆ ಇರುವುದನ್ನೇ ಮಾಡಿದರೆ ಅದನ್ನು ಮಾಡಿದವನು ನಾನಲ್ಲ, ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡಿತು. ನಾನು ಒಳಿತನ್ನು ಮಾಡಬಯಸಿದರೂ ಕೇಡು ನನ್ನ ಕೈಬಿಡುತ್ತಿಲ್ಲ. ಇದೇ ಒಂದು ನಿಯಮವಾಗಿ ನನ್ನಲ್ಲಿ ಕಂಡುಬರುತ್ತದೆ. ನನ್ನ ಅಂತರಂಗದಲ್ಲಿ ದೈವ ನಿಯಮವನ್ನು ಕುರಿತು ಆನಂದಿಸುತ್ತೇನೆ. ನನ್ನ ಇಂದ್ರಿಯಗಳಲ್ಲಿಯಾದರೋ ಬೇರೊಂದು ನಿಯಮವನ್ನು ಕಾಣುತ್ತೇನೆ. ಇದು ನನ್ನ ಅಂತರಂಗ ನಿಯಮಕ್ಕೆ ತದ್ವಿರುದ್ಧವಾಗಿ ಕಾದಾಡುತ್ತದೆ; ನನ್ನ ಇಂದ್ರಿಯಗಳಲ್ಲಿ ನೆಲೆಗೊಂಡಿರುವ ಪಾಪ ನಿಯಮಕ್ಕೆ ನನ್ನನ್ನು ಖೈದಿಯನ್ನಾಗಿಸುತ್ತದೆ. ಅಯ್ಯೋ, ನಾನೆಂಥ ನಿರ್ಭಾಗ್ಯನು! ಸಾವಿನ ದವಡೆಗೆ ಸಿಕ್ಕಿರುವ ಈ ಶರೀರದಿಂದ ನನ್ನನ್ನು ಬಿಡಿಸುವವರು ಯಾರು? ದೇವರೇ. ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ಅವರಿಗೆ ಕೃತಜ್ಞತೆ ಸಲ್ಲಲಿ! ನನ್ನಷ್ಟಕ್ಕೆ ನಾನೇ ದೇವರ ನಿಯಮವನ್ನು ಮನಃಪೂರ್ವಕವಾಗಿ ಪಾಲಿಸಲು ಬಯಸುತ್ತೇನೆ. ನನ್ನ ಈ ದೇಹದಲ್ಲಾದರೋ ಪಾಪದ ನಿಯಮಕ್ಕೆ ಬದ್ಧನಾಗಿದ್ದೇನೆ.
ಕೀರ್ತನೆ: 119:66, 68, 76-77, 93-94
ಶ್ಲೋಕ: ಪ್ರಭೂ, ಬೋಧಿಸೆನಗೆ ನಿನ್ನ ನಿಬಂಧನೆಗಳನು
ಶುಭಸಂದೇಶ: ಲೂಕ 12:54-59
ಯೇಸುಸ್ವಾಮಿ ಜನಸಮೂಹವನ್ನು ನೋಡಿ, "ಪಶ್ಚಿಮ ದಿಕ್ಕಿನಲ್ಲಿ ಮೋಡ ಏಳುವುದನ್ನು ನೀವು ನೋಡಿದ ಕೂಡಲೇ, ಭಾರಿ ಮಳೆ ಬರುತ್ತದೆ ಎನ್ನುತ್ತೀರಿ; ಹಾಗೆಯೇ ಆಗುತ್ತದೆ. ದಕ್ಷಿಣ ದಿಕ್ಕಿನ ಗಾಳಿ ಬೀಸಿದಾಗ ಉರಿಬಿಸಿಲು ಎನ್ನುತ್ತೀರಿ; ಅಂತೆಯೇ ಇರುತ್ತದೆ. ಆಷಾಡಭೂತಿಗಳೇ, ಭೂಮ್ಯಾಕಾಶಗಳ ಲಕ್ಷಣಗಳನ್ನು ನೀವು ಸರಿಯಾಗಿ ಅರಿತುಕೊಳ್ಳಬಲ್ಲಿರಿ; ಆದರೆ ಪ್ರಸ್ತುತ ಕಾಲವನ್ನು ಅರ್ಥಮಾಡಿಕೊಳ್ಳಲಾರಿರಾ? ನ್ಯಾಯನಿರ್ಣಯವನ್ನು ನಿಮ್ಮಲ್ಲಿಯೇ ನೀವು ಏಕೆ ಮಾಡಿಕೊಳ್ಳಬಾರದು? ನೀನು ನ್ಯಾಯಾಧಿಪತಿಯ ಬಳಿಗೆ ಹೋಗಬೇಕಾಗಿ ಬಂದಲ್ಲಿ, ದಾರಿಯಲ್ಲೇ ನಿನ್ನ ವಿರೋಧಿಯೊಡನೆ ವ್ಯಾಜ್ಯ ತೀರಿಸಿಕೊಳ್ಳಲು ಪ್ರಯತ್ನಿಸು. ಇಲ್ಲದಿದ್ದರೆ ಅವನು ನಿನ್ನನ್ನು ನ್ಯಾಯಾಧಿಪತಿಯ ಮುಂದೆ ಎಳೆದೊಯ್ಯಬಹುದು; ನ್ಯಾಯಾಧಿಪತಿ ನಿನ್ನನ್ನು ಸೆರೆಯಾಧಿಕಾರಿಯ ಕೈಗೊಪ್ಪಿಸಬಹುದು ಸೆರೆಯಧಿಕಾರಿ ನಿನ್ನನ್ನು ಸೆರೆಮನೆಯಲ್ಲಿ ಹಾಕಬಹುದು. ಅಲ್ಲಿಂದ ನೀನು ಹೊರಗೆ ಬರಬೇಕಾದರೆ ಕಡೇ ಕಾಸನ್ನೂ ಬಿಡದೆ ಎಲ್ಲವನ್ನೂ ಸಲ್ಲಿಸಬೇಕಾಗುವುದೆಂಬುದು ನಿಶ್ಚಯ," ಎಂದರು.
No comments:
Post a Comment