ಮೊದಲನೆಯ ವಾಚನ: ರೋಮನರಿಗೆ 11:1-2, 11-12, 25-29
ಸಹೋದರರೇ, ದೇವರು ತಮ್ಮ ಜನರಾದ ಇಸ್ರಯೇಲರನ್ನು ತಿರಸ್ಕರಿಸಿದ್ದಾರೆ ಎಂದು ಹೇಳೋಣವೇ? ಎಂದಿಗೂ ಇಲ್ಲ. ನಾನು ಸಹ ಇಸ್ರಯೇಲನು, ಅಬ್ರಹಾಮನ ಸಂತತಿಯವನು, ಬೆನ್ಯಮಿನ್ ಮನೆತನಕ್ಕೆ ಸೇರಿದವನು. ದೇವರು ಮುಂಚಿತವಾಗಿಯೇ ಆರಿಸಿಕೊಂಡಿದ್ದ ತಮ್ಮ ಜನಾಂಗವನ್ನು ತಿರಸ್ಕರಿಸಲಿಲ್ಲ. ಹಾಗಾದರೆ ಇಸ್ರಯೇಲರು ಮೇಲೇಳದಂತೆ ಮುಗ್ಗರಿಸಿ ಬಿದ್ದರು ಎಂದು ಹೇಳೋಣವೆ? ಎಂದಿಗೂ ಇಲ್ಲ. ಅವರ ಅಪರಾಧದ ನಿಮಿತ್ತ ಇತರರಿಗೆ ಉದ್ಧಾರ ಲಭಿಸುವಂತಾಯಿತು. ಹೀಗೆ ಇತರರನ್ನು ನೋಡಿ ಅವರೇ ಅಸೂಯೆ ಪಡುವಂತಾಯಿತು. ಅವರ ಅಪರಾಧ ಜಗತ್ತಿಗೆಲ್ಲ ಸೌಭಾಗ್ಯವನ್ನೂ ಅವರ ಅಪಜಯವು ಇತರರಿಗೆಲ್ಲಾ ಆಶೀರ್ವಾದವನ್ನೂ ತರಲು ಕಾರಣವಾದರೆ, ಅವರ ಸಂಪೂರ್ಣ ಪರಿವರ್ತನೆ ಮತ್ತೆಷ್ಟೋ ಕಲ್ಯಾಣವನ್ನು ಉಂಟುಮಾಡಬೇಕಲ್ಲವೆ? ಪ್ರಿಯ ಸಹೋದರರೇ, ನೀವೇ ಬುದ್ದಿವಂತರೆಂದು ಉಬ್ಬಿ ಹೋಗಬೇಡಿ. ನಿಮಗೊಂದು ನಿಗೂಢ ರಹಸ್ಯವನ್ನು ತಿಳಿಸಬಯಸುತ್ತೇನೆ. ಅದೇನೆಂದರೆ, ಇಸ್ರಯೇಲರ ಮೊಂಡುತನವು ತಾತ್ಕಾಲಿಕವಾದುದು. ಇಸ್ರಯೇಲರಲ್ಲದವರು ಪೂರ್ಣ ಸಂಖ್ಯೆಯಲ್ಲಿ ದೇವರ ಬಳಿಗೆ ಬರುವ ತನಕ ಮಾತ್ರ ಅದು ಇರುತ್ತದೆ. ಅನಂತರ ಇಸ್ರಯೇಲ್ ಜನಾಂಗವೆಲ್ಲವೂ ಜೀವೋದ್ಧಾರವನ್ನು ಹೊಂದುವುದು. ಇದಕ್ಕೆ ಆಧಾರವಾಗಿ ಪವಿತ್ರಗ್ರಂಥದಲ್ಲಿ ಹೀಗೆ ಬರೆಯಲಾಗಿದೆ: ಲೋಕೋದ್ಧಾರಕನು ಬರುವನು ಸಿಯೋನಿನಿಂದ, ಅಧರ್ಮತೆಯನು ನೀಗಿಸುವನು ಯಕೋಬವಂಶದಿಂದ. ನಾನು ಪರಿಹರಿಸುವೆನು ಅವರ ಪಾಪಗಳನ್ನು ಅವರೊಡನೆ ಮಾಡಿಕೋಳ್ಳುವೆನಾಗ ಒಡಂಬಡಿಕೆಯನು." ಶುಭಸಂದೇಶವನ್ನು ತಿರಸ್ಕರಿಸಿದ್ದರಿಂದ ಇಸ್ರಯೇಲರು ದೇವರಿಗೆ ಶತ್ರುಗಳಾದರು. ಹೀಗಾದುದು ನಿಮ್ಮ ಹಿತಕ್ಕೋಸ್ಕರವೇ. ದೇವರಿಂದ ಆಯ್ಕೆಯಾದವರಾದ್ದರಿಂದ, ಪಿತಾಮಹ ಅಬ್ರಹಾಮ್, ಇಸಾಕ್ ಮತ್ತು ಯಕೋಬರ ನಿಮಿತ್ತ ಅವರು ದೇವರಿಗೆ ಮಿತ್ರರಾದರು. ದೇವರು ತಾವೇ ನೀಡುವ ವರಗಳನ್ನಾಗಲಿ, ಕೊಡುವ ಕರೆಯನ್ನಾಗಲಿ ಹಿಂತೆದುಕೋಳ್ಳುವವರಲ್ಲ.
ಕೀರ್ತನೆ 94:12-13, 14-15, 17-18
ಶ್ಲೋಕ: ಕೈಬಿಡನು ಪ್ರಭು ತನ್ನ ಸ್ವಕೀಯರನು.
ಪ್ರಭೂ, ನಿನ್ನಿಂದ ಶಿಕ್ಷಿತನಾದ ಮಾನವ ಧನ್ಯ|
ನಿನ್ನಿಂದ ಧರ್ಮೋಪದೇಶ ಪಡೆದವನು ಧನ್ಯ|
ನೆಮ್ಮದಿ ನೀಡುವೆ ಅವನು ಸಂಕಟದಲ್ಲಿರುವಾಗ||
ತಳ್ಳಿಬಿಡಲು ಪ್ರಭು, ತನ್ನ ಜನರನು|
ಕೈಬಿಡುವನು ತನ್ನ ಸ್ವಕೀಯರನು||
ನ್ಯಾಯತೀರ್ಪು ಮರಳಿ ತಿರುಗುವುದು ನೀತಿಯತ್ತ|
ನೇರ ಮನಸ್ಕರೆಲ್ಲ ಮಾಡುವರು ಅದನು ಸಮರ್ಥ||
ನನಗಿಲ್ಲದಿದ್ದರೆ ಪ್ರಭುವಿನ ಮರುಕ|
ಮರೆಯಾಗುತ್ತಿತ್ತೆನಗೆ ಅಧೋಲೋಕ||
ನನ್ನ ಕಾಲು ಜಾರಿಹೋಯಿತು ಎನ್ನುವುದರೊಳಗೆ|
ನಿನ್ನ ಅಚಲ ಪ್ರೀತಿ, ಪ್ರಭು ನೆರವಾಯಿತೆನಗೆ||
ಶುಭಸಂದೇಶ: ಲೂಕ 14:1, 7-11
ಆ ಕಾಲದಲ್ಲಿ ಸಬ್ಬತ್ ದಿನ ಯೇಸು ಒಬ್ಬ ಪ್ರಮುಖ ಫರಿಸಾಯನ ಮನೆಗೆ ಊಟಕ್ಕೆ ಹೋದರು. ಎಲ್ಲರ ಕಣ್ಣು ಅವರ ಮೇಲಿತ್ತು. ಅಲ್ಲಿಗೆ ಬಂದಿದ್ದ ಅತಿಥಿಗಳು ಪಂಕ್ತಿಯಲ್ಲಿ ಉತ್ತಮ ಸ್ಥಾನಗಳನ್ನು ಆರಿಸಿಕೊಳ್ಳುತ್ತಿದ್ದರು. ಇದನ್ನು ಗಮನಿಸಿದ ಯೇಸು ಸಾಮತಿ ರೂಪದಲ್ಲಿ ಹೀಗೆಂದರು: " ಮದುವೆಯ ಔತನಕ್ಕೆ ನಿನ್ನನ್ನು ಯಾರಾದರೂ ಆಹ್ವಾನಿಸಿದಾಗ ಪ್ರಧಾನ ಆಸನದಲ್ಲಿ ಹೋಗಿ ಕುಳಿತುಕೊಳ್ಳಬೇಡ. ಏಕೆಂದರೆ, ನಿನಗಿಂತ ಗೌರವಸ್ಥನನ್ನು ಆಹ್ವಾನಿಸಿರಬಹುದು. ನಿಮ್ಮಿಬ್ಬರನ್ನು ಕರೆದಾತ ನಿನ್ನ ಹತ್ತಿರ ಬಂದು, " ಇವನಿಗೆ ನಿನ್ನ ಸ್ಥಳವನ್ನು ಬಿಟ್ಟುಕೊಡು, ' ಎನ್ನಬಹುದು. ಆಗ ನೀನು ನಾಚಿಕೆ ಪಟ್ಟುಕೊಂಡು ಕಡೆಯ ಸ್ಥಾನದಲ್ಲಿ ಹೋಗಿ ಕುಳಿತುಕೊಳ್ಳಬೇಕಾಗಬಹುದು. ಅದಕ್ಕೆ ಬದಲಾಗಿ ನಿನ್ನನ್ನು ಆಹ್ವಾನಿಸಿದಾಗ ಕಡೆಯ ಸ್ಥಾನದಲ್ಲಿ ಹೋಗಿ ಕುಳಿತುಕೋ. ಕರೆದವನು ಬಂದು, ' ಗೆಳೆಯಾ, ಮೇಲೆ ಬಾ ' ಎಂದು ಹೇಳುವನು. ಆಗ ಜೊತೆಗೆ ಕುಳಿತಿರುವ ಅತಿಥಿಗಳೆಲ್ಲರ ಮುಂದೆ ನಿನಗೆ ಗೌರವ ಸಿಗುವುದು. ಅಂತೆಯೇ, ತನ್ನನ್ನು ತಾನೇ ಮೇಲಕ್ಕೆಏರಿಸಿಕೊಳ್ಳುವವನನ್ನು ದೇವರು ಕೆಳಗಿಳಿಸುವರು, ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು, " ಎಂದರು.
No comments:
Post a Comment