ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

06.10.23 - " ನಿಮ್ಮನ್ನು ಅಲಕ್ಷ್ಯ ಮಾಡುವವನು ನನ್ನನ್ನು ಕಳುಹಿಸಿದಾತನನ್ನೇ ಅಲಕ್ಷ್ಯ ಮಾಡುತ್ತಾನೆ."

ಮೊದಲನೆಯ ವಾಚನ: ಬಾರೂಕ 1:15-22

ನಾವು ಮಾಡಬೇಕಾದ ಪಾಪನಿವೇದನೆ ಹೀಗಿರಲಿ: ನಮ್ಮ ದೇವರಾದ ಸರ್ವೇಶ್ವರ ಸತ್ಯಸ್ವರೂಪರು; ನಾವಾದರೋ ಇಂದು ನಾಚಿಕೆಗೀಡಾಗಿದ್ದೇವೆ. ನಾವು ಮಾತ್ರವಲ್ಲ, ಜುದೇಯದ ಜನರು, ಜೆರುಸಲೇಮಿನ ನಿವಾಸಿಗಳು, ನಮ್ಮ ಅರಸರು, ಅಧಿಪತಿಗಳು, ಪ್ರವಾದಿಗಳು, ನಮ್ಮ ಪೂರ್ವಜರು ಎಲ್ಲರೂ ಅಂತೆಯೇ ನಾಚಿಕೆಗೀಡಾಗಿದ್ದೇವೆ. ಏಕೆಂದರೆ ದೇವರ ಮುಂದೆ ನಾವು ಪಾಪಿಗಳು, ಅವರಿಗೆ ಅವಿಧೇಯರಾಗಿ ನಡೆದುಕೊಂಡಿದ್ದೇವೆ. ನಾವು ನಮ್ಮ ದೇವರಾದ ಸರ್ವೇಶ್ವರನ ಮಾತಿಗೆ ಕಿವಿಗೊಡಲಿಲ್ಲ ; ಅವರು ನಮಗೆ ಕೊಟ್ಟ ಆಜ್ಞೆಗಳನ್ನು ಪಾಲಿಸಲಿಲ್ಲ. ನಮ್ಮ ದೇವರಾದ ಸರ್ವೇಶ್ವರನ ನಮ್ಮ ಪೂರ್ವಜರನ್ನು ಈಜಿಪ್ಟ್ ದೇಶದಿಂದ ಕರೆತಂದ ದಿನದಿಂದ ಇಂದಿನವರೆಗೂ ನಾವು ಅವರಿಗೆ ಅವಿಧೇಯರಾಗಿಯೇ ನಡೆದುಕೊಂಡಿದ್ದೇವೆ. ಅವರ ಮಾತನ್ನು ಕೇಳದೆ ಉದಾಸೀನರಾಗಿದ್ದೇವೆ. ಆದುದರಿಂದಲೇ ಉಪದ್ರವಗಳು ನಮಗೆ ಅಂಟಿಕೊಂಡಿವೆ. ಹಾಲೂ ಜೇನೂ ಹರಿಯುವ ನಾಡನ್ನು ನಮಗೆ ಕೊಡುವುದಕ್ಕಾಗಿ ನಮ್ಮ ಪೂರ್ವಜರನ್ನು ಈಜಿಪ್ಟ್ ದೇಶದಿಂದ ಕರೆತಂದ ನಮ್ಮ ದೇವರಾದ ಸರ್ವೇಶ್ವರಸ್ವಾಮಿ ತಮ್ಮ ದಾಸ ಮೋಶೆಯ ಮೂಲಕ ಹಾಕಿಸಿದ ಶಾಪ ನಮ್ಮನ್ನು ಇಂದಿಗೂ ಬಿಟ್ಟಿಲ್ಲ. ನಮ್ಮ ದೇವರಾದ ಸರ್ವೇಶ್ವರ ನಮ್ಮ ಬಳಿಗೆ ಕಳುಹಿಸಿದ ಪ್ರವಾದಿಗಳು ನುಡಿದ ದೈವೋಕ್ತಿಗಳನ್ನು ನಾವು ಆಲಿಸದೆ, ಅವರ ಮಾತಿಗೆ ಕಿವಿಗೊಡದೆ ಹೋದೆವು. ಮಾತ್ರವಲ್ಲ, ನಮ್ಮಲ್ಲಿ ಪ್ರತಿಯೊಬ್ಬನು ಅವನವನ ಹೃದಯ ದುಷ್ಪ್ರೇರಣೆಗೆ ಒಳಪಟ್ಟು, ಅನ್ಯದೇವತೆಗಳ ಪೂಜೆಮಾಡಿದ್ದಾನೆ. ನಮ್ಮ ದೇವರಾದ ಸರ್ವೇಶ್ವರನ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವುದನ್ನೇ ಮಾಡಿದ್ದಾನೆ.

ಕೀರ್ತನೆ 79:1-5,8-9.V.9
ಶ್ಲೋಕ: ದೇವಾ, ನೆರವಾಗು ನಿನ್ನ ನಾಮಮಹಿಮೆಯ ನಿಮಿತ್ತ|


ಹೊಕ್ಕಿದರು ದೇವಾ, ಮ್ಲೇಚ್ಛರು ನಿನ್ನ ಸ್ವಂತನಾಡನು|
ಹೊಲೆ ಮಾಡಿಹರು ನಿನ್ನ ಪವಿತ್ರ ದೇವಾಲಯವನು||
ಹಾಳುದಿಬ್ಬವನ್ನಾಗಿಸಿಹರು ಜೆರುಸಲೇಮ್ ನಗರವನು|
ಅರ್ಪಿಸಿದರು ನಿನ್ನ ದಾಸರ ಶವಗಳನು ಪಕ್ಷಿಗಳಿಗೆ|
ಹಾಕಿದರು ನಿನ್ನ ಭಕ್ತರ ಮಾಂಸವನು ಕಾಡುಮೃಗಗಳಿಗೆ||

ನೀರಂತೆ ಚೆಲ್ಲಿದರು ನೆತ್ತರನು ಜೆರುಸಲೇಮ್ ಸುತ್ತಲು|
ನಮ್ಮವರ ಶವಗಳನು ಹೂಳಲು ಯಾರೂ ಇಲ್ಲದಿರಲು||
ನಿಂದಾಸ್ಪದರಾದೆವು ನೆರೆಹೊರೆಯ ಜನಾಂಗಗಳಿಗೆ|
ಗುರಿಯಾದೆವು ಸುತ್ತಣವರ ಹಾಸ್ಯಕುಚೋದ್ಯಗಳಿಗೆ||
ನಿನ್ನ ಕೋಪತಾಪ ಹೇ ಪ್ರಭೂ, ಇನ್ನೆಷ್ಟರವರೆಗೆ?|
ಉರಿಯುತ್ತಿರಬೇಕೆ ಸದಾ ನಿನ್ನ ರೋಷಾಗ್ನಿಯ ಧಗೆ?||

ಹೊರಿಸಬೇಡ ಪೂರ್ವಿಕರ ತಪ್ಪುಗಳನು ನಮ್ಮ ಮೇಲೆ|
ಉರಿಸಂಕಟದಲ್ಲಿರುವೆವು, ತೋರೆಮಗೆ ನಿನ್ನ ನಾಮಮಹಿಮೆಯ ನಿಮಿತ್ತ|
ಪಾಪಗಳನು ಅಳಿಸಿ ನಮ್ಮನುದ್ಧರಿಸು ನಿನ್ನ ನಾಮದ ಪ್ರಯುಕ್ತ||

ಘೋಷಣೆ ಕೀರ್ತನೆ 95:8
ಅಲ್ಲೆಲೂಯ, ಅಲ್ಲೆಲೂಯ!

ಪ್ರಭುವಿನ ಕರೆಗೆ ಕಿವಿಗೊಟ್ಟರೆನಿತೋ ಒಳ್ಳಿತು ನೀವಿಂದೇ | ಕಲ್ಲಾಗಿಸಿಕೊಳ್ಳದಿರಿ ಹೃದಯವನು ನಿಮ್ಮ ಪೂರ್ವಜರಂತೆ ||
ಅಲ್ಲೆಲೂಯ!

ಶುಭಸಂದೇಶ: ಲೂಕ 10:13-16

ಆ ಕಾಲದಲ್ಲಿ ಯೇಸು ಹೀಗೆಂದರು: "ಕೊರಾಜ್ಜಿನ್ ಪಟ್ಟಣವೇ, ನಿನಗೆ ದಿಕ್ಕಾರ ! ಬೆತ್ಸಾಯಿದ ಪಟ್ಟಣವೇ, ನಿನಗೆ ದಿಕ್ಕಾರ ! ನಿಮ್ಮಲ್ಲಿ ಮಾಡಿದ ಅದ್ಭುತಕಾರ್ಯಗಳನ್ನು ಟೈರ್ ಮತ್ತು ಸಿದೋನ್ ಪಟ್ಟಣಗಳಲ್ಲಿ ಮಾಡಿದ್ದರೆ, ಅಲ್ಲಿಯವರು ಎಂದೋ ಗೋಣಿತಟ್ಟನ್ನು ಉಟ್ಟುಕೊಂಡು, ಬೂದಿಯನ್ನು ಬಳಿದುಕೊಂಡು ಪಶ್ಚಾತ್ತಾಪಪಟ್ಟು ಪಾಪಕ್ಕೆ ವಿಮುಖರಾಗುತ್ತಿದ್ದರು. ಆದುದರಿಂದ ತೀರ್ಪಿನ ದಿನ ಟೈರ್ ಮತ್ತು ಸಿದೋನಿನ ಗತಿಯು ನಿಮಗಿಂತಲೂ ಸಹನೀಯವಾಗಿರುವುದು. ಎಲೈ ಕಫೆರ್ನವುಮ್ ಪಟ್ಟಣವೇ, ನೀನು ಸ್ವರ್ಗಕ್ಕೇರುವೆ ಎಂದು ನೆನಸುತ್ತೀಯೋ? ಇಲ್ಲ, ಪಾತಾಳಕ್ಕೆ ಇಳಿಯುವೆ. " ಅನಂತರ ತಮ್ಮ ಶಿಷ್ಯರನ್ನು ಉದ್ದೇಶಿಸಿ, " ನಿಮ್ಮನ್ನು ಆಲಿಸುವವನು ನನ್ನನ್ನೇ ಆಲಿಸುತ್ತಾನೆ ; ನಿಮ್ಮನ್ನು ಅಲಕ್ಷ್ಯ ಮಾಡುವವನು ನನ್ನನ್ನೇ ಅಲಕ್ಷ್ಯ ಮಾಡುತ್ತಾನೆ. ನನ್ನನ್ನು ಅಲಕ್ಷ್ಯ ಮಾಡುವವನಾದರೋ ನನ್ನನ್ನು ಕಳುಹಿಸಿದಾತನನ್ನೇ ಅಲಕ್ಷ್ಯ ಮಾಡುತ್ತಾನೆ, " ಎಂದರು.

No comments:

Post a Comment