ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

22.10.23 - "ಚಕ್ರವರ್ತಿಗೆ ಸಲ್ಲತಕ್ಕದ್ದನ್ನು ಚಕ್ರವರ್ತಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ"

 ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 45:1, 4-6 

ಇಂತೆಂದರು ಸರ್ವೇಶ್ವರ ತಾನು ಅಭಿಷೇಕಿಸಿದ ಕೋರೆಷನಿಗೆ “ರಾಷ್ಟ್ರಗಳನ್ನು ನೀ ಸದೆಬಡಿಯುವಂತೆ ರಾಜಮಹಾರಾಜರನು ನಿಶ್ಯಸ್ತ್ರರನ್ನಾಗಿ ಮಾಡುವಂತೆ ಮುಚ್ಚಲಾಗದ ಹಾಗೆ ಬಾಗಿಲು ಹೆಬ್ಬಾಗಿಲುಗಳನು ತೆರೆಯುವಂತೆ ನಾನಿನ್ನ ಕೈಹಿಡಿದು ನಡೆಸುವೆನು ಮುಂದೆ. ನನ್ನ ಸೇವಕನಾದ ಯಕೋಬನ ನಿಮಿತ್ತ ನಾನು ಆರಿಸಿಕೊಂಡ ಇಸ್ರಯೇಲಿನ ನಿಮಿತ್ತ ನನ್ನ ಅರಿವೇ ಇಲ್ಲದ ನಿನ್ನನು ಹೆಸರುಹಿಡಿದು ಕರೆದಿರುವೆನು, ಬಿರುದಿತ್ತು ಸನ್ಮಾನಿಸಿರುವೆನು. ಸರ್ವೇಶ್ವರ ನಾನಲ್ಲದೆ ಬೇರಾರು ಅಲ್ಲ ನನ್ನ ಹೊರತು ಯಾವ ದೇವರು ಇಲ್ಲ. ನೀನು ನನ್ನನು ಅರಿಯದವನಾಗಿರುವೆ ಆದರೂ ನಿನ್ನನ್ನು ಶಸ್ತ್ರಧಾರಿಯಾಗಿಸುವೆ. ಇದ ಕಂಡು ತಿಳಿಯುವರೆಲ್ಲರು ಪೂರ್ವದಿಂದ ಪಶ್ಚಿಮದವರೆಗು: ನನ್ನ ವಿನಾ ದೇವರಾರು ಇಲ್ಲವೆಂದು ನಾನೇ ಸರ್ವೇಶ್ವರ ಮತ್ತಾರು ಅಲ್ಲವೆಂದು;

ಕೀರ್ತನೆ: 96:1, 3, 4-5, 7-8, 9-10 

ಶ್ಲೋಕ: ಶಕ್ತಿಸಾಮರ್ಥ್ಯ ಪ್ರಭುವಿನದೆ ಎಂದು ಜಗದ ರಾಷ್ಟ್ರಗಳು ಘಣಪಡಿಸಲಿ 

ಎರಡನೇ ವಾಚನ: 1 ಥೆಸೆಲೋನಿಯರಿಗೆ  1:1-5 


ಪಿತನಾದ ದೇವರ ಹಾಗೂ ಪ್ರಭುವಾದ ಯೇಸುಕ್ರಿಸ್ತರ ಅನ್ಯೋನ್ಯತೆಯಲ್ಲಿರುವ ಥೆಸಲೋನಿಕದ ಸಭೆಯವರಿಗೆ - ಪೌಲ, ಸಿಲ್ವಾನ ಹಾಗೂ ತಿಮೊಥೇಯ ಇವರು ಬರೆಯುವ ಪತ್ರ. ದೈವಾನುಗ್ರಹವೂ ಶಾಂತಿಸಮಾಧಾನವೂ ನಿಮಗೆ ಲಭಿಸಲಿ! ನಾವು ಪ್ರಾರ್ಥಿಸುವಾಗಲೆಲ್ಲಾ ನಿಮ್ಮನ್ನು ಸ್ಮರಿಸುತ್ತಾ, ನಿಮ್ಮೆಲ್ಲರಿಗಾಗಿ ದೇವರಿಗೆ ನಿರಂತರ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ವಿಶ್ವಾಸಭರಿತವಾದ ನಿಮ್ಮ ಕಾರ್ಯವನ್ನೂ ಪ್ರೀತಿಪೂರಿತವಾದ ನಿಮ್ಮ ದುಡಿಮೆಯನ್ನೂ ಪ್ರಭು ಯೇಸುವಿನಲ್ಲಿ ನೀವಿಟ್ಟಿರುವ ಅಚಲ ನಿರೀಕ್ಷೆಯನ್ನೂ ತಂದೆಯಾದ ದೇವರ ಸನ್ನಿಧಿಯಲ್ಲಿ ಜ್ಞಾಪಿಸಿಕೊಳ್ಳುತ್ತೇವೆ. ಸಹೋದರರೇ, ನೀವು ದೇವರಿಗೆ ಪ್ರಿಯರು; ದೇವರಿಂದಲೇ ಆಯ್ಕೆಗೊಂಡವರು ಎಂದು ನಾವು ಬಲ್ಲೆವು. ನಮ್ಮ ಶುಭಸಂದೇಶ ಕೇವಲ ಬಾಯಿಮಾತಿನದಲ್ಲ; ಅದು ಶಕ್ತಿಪೂರ್ಣವಾಗಿ ಪವಿತ್ರಾತ್ಮರ ಸಮೇತವಾಗಿ ಪೂರ್ಣ ಪ್ರಮಾಣದಿಂದ ಬಂದದ್ದು. ನಾವು ನಿಮ್ಮ ನಡುವೆಯಿದ್ದಾಗ, ನಿಮಗೋಸ್ಕರ ಹೇಗೆ ವರ್ತಿಸಿದೆವು ಎಂದು ನೀವೇ ಬಲ್ಲಿರಿ. 

ಶುಭಸಂದೇಶ: ಮತ್ತಾಯ 22:15-21 


ಫರಿಸಾಯರು ಒಟ್ಟುಗೂಡಿ ಯೇಸುವನ್ನು ಹೇಗೆ ಮಾತಿನಲ್ಲಿ ಸಿಕ್ಕಿಸುವುದೆಂದು ಸಮಾಲೋಚನೆ ಮಾಡಿಕೊಂಡರು.  ತಮ್ಮ ಶಿಷ್ಯರನ್ನು ಹೆರೋದನ ಪಕ್ಷದ ಕೆಲವರ ಸಮೇತ ಸ್ವಾಮಿಯ ಬಳಿಗೆ ಕಳುಹಿಸಿದರು. ಇವರು ಬಂದು, “ಬೋಧಕರೇ, ತಾವು ಸತ್ಯವಂತರು, ಸತ್ಯಕ್ಕನುಸಾರ ದೈವಮಾರ್ಗವನ್ನು ಬೋಧಿಸುವವರು, ಮುಖದಾಕ್ಷಿಣ್ಯಕ್ಕೆ ಎಡೆಕೊಡದವರು; ಎಂದೇ, ಸ್ಥಾನಮಾನಗಳಿಗೆ ಮಣಿಯದವರು. ಇದೆಲ್ಲಾ ನಮಗೆ ಚೆನ್ನಾಗಿ ಗೊತ್ತಿದೆ.  ಹೀಗಿರುವಲ್ಲಿ ರೋಮ್ ಚಕ್ರಾಧಿಪತಿಗೆ ತೆರಿಗೆಕೊಡುವುದು ಧರ್ಮಸಮ್ಮತವೋ ಅಲ್ಲವೋ, ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸುವಿರಾ?” ಎಂದು ಕೇಳಿದರು.  ಯೇಸು ಅವರ ಕುತಂತ್ರವನ್ನು ಅರಿತುಕೊಂಡು, “ಕಪಟಿಗಳೇ, ನನ್ನನ್ನೇಕೆ ಪರೀಕ್ಷಿಸುತ್ತೀರಿ?  ತೆರಿಗೆಗೆಂದು ಕೊಡಬೇಕಾದ ನಾಣ್ಯವನ್ನು ತೋರಿಸಿ,” ಎಂದರು. ಅವರೊಂದು ನಾಣ್ಯವನ್ನು ತಂದುಕೊಟ್ಟರು. ಆಗ ಯೇಸು, “ಇದರಲ್ಲಿರುವುದು ಯಾರ ಮುದ್ರೆ? ಯಾರ ಲಿಪಿ?” ಎಂದು ಕೇಳಿದರು.  ಅದಕ್ಕೆ ಅವರು, “ರೋಮ್ ಚಕ್ರವರ್ತಿಯವು,” ಎಂದರು. “ಹಾಗಾದರೆ, ಚಕ್ರವರ್ತಿಗೆ ಸಲ್ಲತಕ್ಕದ್ದನ್ನು ಚಕ್ರವರ್ತಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಸಲ್ಲಿಸಿರಿ,” ಎಂದು ಯೇಸು ಉತ್ತರಕೊಟ್ಟರು.

1 comment: