ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

29.10.23 - ಸಮಸ್ತ ಧರ್ಮಶಾಸ್ತ್ರಕ್ಕೂ ಪ್ರವಾದಿಗಳ ಪ್ರವಚನಕ್ಕೂ ಈ ಎರಡು ಆಜ್ಞೆಗಳೇ ಆಧಾರ

 ಮೊದಲನೇ ವಾಚನ: ವಿಮೋಚನಕಾಂಡ  22:20-26 



ಸರ್ವೇಶ್ವರಸ್ವಾಮಿ ಇಂತೆನ್ನುತ್ತಾರೆ: “ಪರದೇಶೀಯನಿಗೆ ಅನ್ಯಾಯ ಮಾಡಬಾರದು, ಅವನನ್ನು ಪೀಡಿಸಬಾರದು. ನೀವು ಕೂಡ ಈಜಿಪ್ಟಿನಲ್ಲಿ ಪರದೇಶೀಯರಾಗಿದ್ದೀರಲ್ಲವೆ?  ವಿಧವೆಯರನ್ನಾಗಲಿ ದಿಕ್ಕಿಲ್ಲದ ಮಕ್ಕಳನ್ನಾಗಲಿ ಬಾಧಿಸಬಾರದು.  ನೀವು ಇಂಥವರನ್ನು ಬಾಧಿಸಿದರೆ ಅವರು ನನಗೆ ಮೊರೆಯಿಡುವರು. ಆ ಮೊರೆಗೆ ನಾನು ಕಿವಿಗೊಡದೆ ಇರೆನೆಂಬುದು ನಿಮಗೆ ತಿಳಿದಿರಲಿ.  ನಾನು ಕೋಪಗೊಂಡು ನಿಮ್ಮನ್ನು ಶತ್ರುಗಳ ಕೈಯಿಂದ ಸಂಹಾರ ಮಾಡಿಸುವೆನು. ನಿಮ್ಮ ಹೆಂಡತಿಯರು ವಿಧವೆಗಳಾಗುವರು. ನಿಮ್ಮ ಮಕ್ಕಳು ದಿಕ್ಕಿಲ್ಲದವರಾಗುವರು. “ನನ್ನ ಜನರಲ್ಲಿ ಒಬ್ಬ ಬಡವನಿಗೆ ನೀನು ಸಾಲಕೊಟ್ಟರೆ ಅವನನ್ನು ಸಾಲಗಾರನಂತೆ ಕಾಣಬಾರದು. ಅವನಿಂದ ಬಡ್ಡಿಯನ್ನು ಕೇಳಬಾರದು. “ನೀನು ಒಬ್ಬನ ಕಂಬಳಿಯನ್ನು ಅಡವು ಇಟ್ಟುಕೊಂಡರೆ ಸೂರ್ಯನು ಮುಳುಗುವಷ್ಟರಲ್ಲಿ ಅದನ್ನು ಹಿಂದಕ್ಕೆ ಕೊಡು.  ಏಕೆಂದರೆ ಅವನಿಗುರುವ ಹೊದಿಕೆ ಅದೊಂದೇ; ಅದನ್ನೇ ಮೈಗೆ ಸುತ್ತಿಕೊಳ್ಳಬೇಕು; ಬೇರೆ ಯಾವುದನ್ನು ಹೊದ್ದುಕೊಂಡು ಮಳಗಾನು? ಅವನು ನನಗೆ ಮೊರೆಯಿಟ್ಟರೆ ಕಿವಿಗೊಡುವೆನು. ಏಕೆಂದರೆ ನಾನು ದಯಾಮಯನು!

ಕೀರ್ತನೆ: 18:2-3, 3-4, 47, 51 

ಶ್ಲೋಕ: ಪ್ರಭುವೇ, ನನಗಿದೆ ನಿನ್ನಲ್ಲೇ ಒಲವು. 

ಎರಡನೇ ವಾಚನ: 1 ಥೆಸೆಲೋನಿಯರಿಗೆ   1:5-10 

ಸಹೋದರರೇ, ನಾವು ನಿಮ್ಮ ನಡುವೆಯಿದ್ದಾಗ, ನಿಮಗೋಸ್ಕರ ಹೇಗೆ ವರ್ತಿಸಿದೆವು ಎಂದು ನೀವೇ ಬಲ್ಲಿರಿ. ನೀವು ನಮ್ಮನ್ನು ಹಾಗೂ ಪ್ರಭು ಯೇಸುವನ್ನು ಅನುಸರಿಸುವವರಾದಿರಿ. ಇದರಿಂದ ನೀವು ಬಹಳ ಹಿಂಸೆಯನ್ನು ಅನುಭವಿಸಬೇಕಾಗಿ ಬಂದರೂ ಪವಿತ್ರಾತ್ಮ ಪ್ರೇರಿತ ಆನಂದದಿಂದ ದೇವರ ವಾಕ್ಯವನ್ನು ಅಂಗೀಕರಿಸಿದಿರಿ. ಹೀಗೆ ಮಕೆದೋನಿಯ ಹಾಗೂ ಅಖಾಯ ಪ್ರಾಂತ್ಯದ ಕ್ರೈಸ್ತವಿಶ್ವಾಸಿಗಳಿಗೆ ನೀವು ಆದರ್ಶಪ್ರಾಯರಾದಿರಿ. ಪ್ರಭುವಿನ ಶುಭಸಂದೇಶ ನಿಮ್ಮಿಂದಲೇ ಘೋಷಿತವಾಯಿತು. ದೇವರಲ್ಲಿ ನೀವಿಟ್ಟಿರುವ ವಿಶ್ವಾಸ ಮಕೆದೋನಿಯ ಮತ್ತು ಅಖಾಯದಲ್ಲಿ ಮಾತ್ರವಲ್ಲದೆ ಎಲ್ಲೆಡೆಯಲ್ಲೂ ಪ್ರಸರಿಸಿತು. ಈ ನಿಮ್ಮ ವಿಶ್ವಾಸವನ್ನು ಕುರಿತು ನಾವು ಹೇಳಬೇಕಾದುದು ಏನೂ ಇಲ್ಲ; ಅಲ್ಲಿಯ ಜನರೇ ಹೇಳುತ್ತಾರೆ. ನಾವು ನಿಮ್ಮಲ್ಲಿಗೆ ಬಂದಾಗ, ನೀವು ನಮ್ಮನ್ನು ಹೇಗೆ ಸ್ವಾಗತಿಸಿದಿರಿ; ವಿಗ್ರಹಗಳನ್ನು ತೊರೆದು, ಸತ್ಯ ಹಾಗೂ ಜೀವಸ್ವರೂಪರಾದ ದೇವರ ಕಡೆಗೆ ಹೇಗೆ ಅಭಿಮುಖರಾದಿರಿ;  ಸಾವಿನಿಂದ ಜೀವಕ್ಕೆ ಎಬ್ಬಿಸಲಾದ ದೇವರ ಪುತ್ರ ಯೇಸು ಸ್ವರ್ಗದಿಂದ ಪುನರಾಗಮಿಸುವುದನ್ನು ನೀವು ಹೇಗೆ ಎದುರುನೋಡುತ್ತಿದ್ದೀರಿ - ಎಂಬುದನ್ನು ಆ ಜನರೇ ಹೇಳುತ್ತಾರೆ. ಈ ಯೇಸುವೇ ಮುಂದೆ ಬರಲಿರುವ ದೈವಕೋಪದಿಂದ ನಮ್ಮನ್ನು ಪಾರುಮಾಡುವವರು. 

ಶುಭಸಂದೇಶ: ಮತ್ತಾಯ 22:34-40 


ಯೇಸುಸ್ವಾಮಿ ಸದ್ದುಕಾಯರನ್ನು ಸದ್ದೆತ್ತದಂತೆ ಮಾಡಿದರೆಂಬ ಸಮಾಚಾರ ಫರಿಸಾಯರಿಗೆ ಮುಟ್ಟಿತು. ಅವರು ಒಟ್ಟಾಗಿ ಸ್ವಾಮಿಯ ಬಳಿಗೆ ಬಂದರು. ಅವರಲ್ಲಿ ಒಬ್ಬ ಧರ್ಮೋಪದೇಶಕನು ಯೇಸುವನ್ನು ಪರೀಕ್ಷಿಸುವ ಸಲುವಾಗಿ, ಹೀಗೆಂದು ಪ್ರಶ್ನಿಸಿದನು:  “ಬೋಧಕರೇ, ಧರ್ಮಶಾಸ್ತ್ರದಲ್ಲಿ ಪ್ರಮುಖವಾದ ಆಜ್ಞೆ ಯಾವುದು?”  ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ ‘ನಿನ್ನ ಸರ್ವೇಶ್ವರನಾದ ದೇವರನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ಪ್ರೀತಿಸು.’  ಇದೇ ಪ್ರಮುಖ ಹಾಗೂ ಪ್ರಥಮ ಆಜ್ಞೆ. ಇದಕ್ಕೆ ಸರಿಹೊಂದುವ ಎರಡನೇ ಆಜ್ಞೆ ಯಾವುದೆಂದರೆ, ‘ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು.’  ಸಮಸ್ತ ಧರ್ಮಶಾಸ್ತ್ರಕ್ಕೂ ಪ್ರವಾದಿಗಳ ಪ್ರವಚನಕ್ಕೂ ಈ ಎರಡು ಆಜ್ಞೆಗಳೇ ಆಧಾರ,” ಎಂದರು 

No comments:

Post a Comment