ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

03.11.23 - "ಸಬ್ಬತ್ ದಿನ ಗುಣಪಡಿಸುವುದು ಸರಿಯೋ ತಪ್ಪೋ? "

ಮೊದಲನೆಯ ವಾಚನ: ರೋಮನರಿಗೆ 9:1-5
ನನ್ನ ಜನರಾದ ಯೆಹೂದ್ಯರ ವಿಷಯವಾಗಿ ನನಗೆ ಅತೀವ ದುಃಖವೂ ನಿರಂತರ ಮನೋವೇದನೆಯೂ ಉಂಟಾಗುತ್ತದೆ. ಇದು ಸುಳ್ಳಲ್ಲ, ಕ್ರಿಸ್ತ ಯೇಸುವಿನಲ್ಲಿ ಸತ್ಯವಾಗಿಯೇ ಹೇಳುತ್ತಿದ್ದೇನೆ. ಪವಿತ್ರಾತ್ಮಧೀನವಾಗಿರುವ ನನ್ನ ಮನಸ್ಸೇ ಇದಕ್ಕೆ ಸಾಕ್ಷಿಯಾಗಿದೆ. ಸ್ವದೇಶಿಯರೂ ರಕ್ತಸಂಬಂಧಿಕರೂ ಆದ ನನ್ನ ಸಹೋದರರ ಪರವಾಗಿ ನಾನು ಕ್ರಿಸ್ತ ಯೇಸುವಿನಿಂದ ಬಹಿಷ್ಕ್ರತನಾಗಿ ಶಾಪಗ್ರಸ್ತನಾಗಲು ಸಹ ಸಿದ್ದನಿದ್ದೇನೆ. ಅವರೇ ಇಸ್ರಯೇಲರು. ದೇವರೇ ಇವರನ್ನು ಮಕ್ಕಳನ್ನಾಗಿ ಆರಿಸಿಕೊಂಡರು, ಇವರಿಗೆ ತಮ್ಮ ಮಹಿಮೆಯನ್ನು ವ್ಯಕ್ತಪಡಿಸಿದರು, ಇವರೊಡನೆ ಒಡಂಬಡಿಕೆಯನ್ನು ಮಾಡಿಕೊಂಡರು, ಇವರಿಗೆ ಧರ್ಮಶಾಸ್ತ್ರವನ್ನೂ ಸಭಾರಾಧನೆಯನ್ನೂ ವಾಗ್ದಾನಗಳನ್ನೂ ದಯಪಾಲಿಸಿದರು. ಅಬ್ರಹಾಮ್, ಇಸಾಕ್, ಮತ್ತು ಯಕೋಬ ಎಂಬ ಪಿತಾಮಹರೂ ಸಹ ಇವರಿಗೆ ಸೇರಿದವರೇ. ಶಾರೀರಿಕವಾಗಿ ಕ್ರಿಸ್ತ ಯೇಸುವೂ ಇವರ ವಂಶದಲ್ಲಿ ಹುಟ್ಟಿದವರೇ. ಸಕಲಕ್ಕೂ ಒಡೆಯರಾದ ದೇವರಿಗೆ ನಿರಂತರ ಸ್ತುತಿಸ್ತೋತ್ರ ಸಲ್ಲಲಿ, ಆಮೆನ್.

ಕೀರ್ತನೆ 147:12-15, 19-20
ಶ್ಲೋಕ: ಹೊಗಳಲಿ ಇವರೆಲ್ಲರೂ ಪ್ರಭುವಿನ ನಾಮವನು.

ಯುವಕರೂ ಯುವತಿಯರೂ ಮುದುಕರೂ ಮಕ್ಕಳೂ|
ಹೊಗಳಲಿ ಇವರೆಲ್ಲರೂ ಪ್ರಭುವಿನ ನಾಮವನು||
ಭೂಮ್ಯಾಕಾಶ ಮೀರಿದ ಆತನ ನಾಮವನು|
ಆತನ ಮಹತ್ತದ ಏಕೈಕ ನಾಮವನು||

ಕೋಡು ಮೂಡಿಸಿಹನು ಪ್ರಭು ತನ್ನ ಪ್ರಜೆಗೆ|
ಖ್ಯಾತಿ ತಂದಿಹನು ತನ್ನ ಭಕ್ತಾದಿಗಳಿಗೆ|
ತನ್ನ ಆಪ್ತಜನರಾದ ಇಸ್ರಯೇಲರಿಗೆ||
ಕಳುಹಿಸುವನು ಧರೆಗೆ ತನ್ನ ಆಣತಿ|
ಸಿದ್ಧಿಯಾಗುವುದದು ಬಲು ಶೀಘ್ರದಿ||

ಕಳಿಸಿಹನು ತನ್ನ ವಾಕ್ಯವನು ಯಕೋಬ್ಯರಿಗೆ|
ತನ್ನ ವಿಧಿನಿಯಮಗಳನು ಇಸ್ರಯೇಲರಿಗೆ||
ಬೇರಾವ ಜನಾಂಗಗಕ್ಕೂ ಆತ ಹೀಗೆ ಮಾಡಿಲ್ಲ|
ಆತನ ವಿಧಿವಿಧಾನಗಳನು ಅವರಿಗೆ ತಿಳಿಸಿಲ್ಲ||

ಶುಭಸಂದೇಶ: ಲೂಕ 14:1-6


ಆ ಕಾಲದಲ್ಲಿ ಸಬ್ಬತ್ ದಿನ. ಯೇಸು ಒಬ್ಬ ಪ್ರಮುಖ ಫರಿಸಾಯನ ಮನೆಗೆ ಊಟಕ್ಕೆ ಹೋದರು. ಎಲ್ಲರ ಕಣ್ಣು ಅವರ ಮೇಲಿತ್ತು. ಅಲ್ಲೇ ಅವರ ಮುಂದೆ ಜಲೋದರ ರೋಗಿಯೊಬ್ಬನು ಇದ್ದನು. "ಸಬ್ಬತ್ ದಿನ ಗುಣಪಡಿಸುವುದು ಸರಿಯೋ ತಪ್ಪೋ? " ಎಂದು ಯೇಸು ಫರಿಸಾಯರನ್ನೂ ಶಾಸ್ತ್ರಜ್ಞರನ್ನೂ ಕೇಳಿದರು. ಅದಕ್ಕವರು ಮೌನವಾಗಿದ್ದರು. ಯೇಸು ರೋಗಿಯ ಕೈ ಹಿಡಿದು ಗುಣಪಡಿಸಿ ಕಳಿಸಿಬಿಟ್ಟರು. ಅನಂತರ, " ನಿಮ್ಮಲ್ಲಿ ಒಬ್ಬನ ಮಗನಾಗಲಿ, ಎತ್ತಾಗಲಿ ಬಾವಿಯಲ್ಲಿ ಬಿದ್ದರೆ, ಸಬ್ಬತ್ ದಿನವಾಗಿದ್ದರೂ ನೀವು ತಡ ಮಾಡದೆ ಮೇಲಕ್ಕೆ ಎತ್ತುವುದಿಲ್ಲವೇ? " ಎಂದು ಕೇಳಿದರು. ಅದಕ್ಕೂ ಅವರು ನಿರುತ್ತರರಾದರು.

No comments:

Post a Comment