ಅಜರ್ಯನ ಗೀತೆಯಿಂದ ವಾಚನ: 1:2, 11-20
ಆಗ ಅಜರ್ಯನು ಬೆಂಕಿಯ ನಡುವೆ ನಿಂತುಕೊಂಡು ಗಟ್ಟಿಯಾಗಿ ಕೂಗಿ ಹೀಗೆಂದು ಪ್ರಾರ್ಥನೆ ಮಾಡಿದ: ನಮ್ಮ ಪೂರ್ಜರ ದೇವರಾದ ಪ್ರಭು ದೇವಾ, ನಿಮ್ಮ ನಾಮದ ಪ್ರಯುಕ್ತ ನಮ್ಮನ್ನು ಎಂದೆಂದಿಗೂ ತ್ಯಜಿಸಬೇಡಿ, ನಿಮ್ಮ ಒಡಂಬಡಿಕೆಯನ್ನು ರದ್ದುಗೊಳಿಸಬೇಡಿ. ನಿಮ್ಮ ಮಿತ್ರ ಅಬ್ರಹಾಮನ ನಿಮಿತ್ತ ನಿಮ್ಮ ದಾಸ ಇಸಾಕನ, ನಿಮ್ಮ ಭಕ್ತ ಯಕೋಬನ ಪ್ರಯುಕ್ತ ನಿಮ್ಮ ಕೃಪೆ ನಮ್ಮನ್ನು ಬಿಟ್ಟಗಲದಿರಲಿ. ಇವರಿಗೆ, "ಇವರಿಗೆ, "ನಿಮ್ಮ ಸಂತಾನವನ್ನು ಆಕಾಶದ ನಕ್ಷತ್ರಗಳಂತೆ ಸಮುದ್ರ ತೀರದ ಮರಳಿನಂತೆ ಅಸಂಖ್ಯವಾಗಿಸುವೆ" ಎಂದು ನೀವು ವಾಗ್ದಾನ ಮಾಡಿದಿರಲ್ಲವೆ? ಒಡೆಯಾ, ಉಳಿದ ರಾಷ್ಟ್ರಗಳಿಗಿಂತ ನಾವು ಕನಿಷ್ಟರಾಗಿಬಿಟ್ಟೆವು, ನಮ್ಮ ಪಾಪಗಳ ಕಾರಣ ಜಗದಲ್ಲಿನ ಹೀನಸ್ಥಿತಿಗೆ ಇಳಿದುಬಿಟ್ಟೆವು. ನಮಗೀಗ ರಾಜರಿಲ್ಲ, ಪ್ರವಾದಿಗಳಿಲ್ಲ, ನಾಯಕರಿಲ್ಲ, ಹೋಮವಿಲ್ಲ, ಬಲಿದಾನವಿಲ್ಲ, ನೈವೇದ್ಯವಿಲ್ಲ, ಧೂಪವಿಲ್ಲ. ಕಾಣಿಕೆಯನರ್ಪಿಸಿ ನಿಮ್ಮ ಕೈಪೆ ಪಡೆಯಲು ಸ್ಥಳವೂ ಇಲ್ಲ, ಆದರೂ ಪಶ್ಚಾತ್ತಾಪದ ಹೃದಯ, ದೀನಮನ ನಿಮಗೆ ಅಂಗೀಕೃತವಾಗಲಿ. ಹೋತಹೋರಿಗಳ, ಸಾವಿರಾರು ಕೊಬ್ಬಿದ ಕುರಿಮರಿಗಳ ದಹನಬಲಿದಾನದಂತೆ ನಮ್ಮೀ ಅಂತರಂಗದ ಬಲಿ ನಿಮಗಿಂದು ಅಂಗೀಕೃತವಾಗಲಿ. ಪೂರ್ಣ ಹೃದಯದಿಂದ ನಾವು ನಿಮ್ಮನ್ನು ಹಿಂಬಾಲಿಸುವಂತೆ ಅನುಗ್ರಹಿಸಿರಿ. ಏಕೆಂದರೆ ನಿಮ್ಮಲ್ಲಿ ನಂಬಿಕೆಯಿಡುವವರಿಗೆ ಆಶಾಭಂಗವಾಗುವುದಿಲ್ಲ. ಪೂರ್ಣ ಹೃದಯದಿಂದ ನಿಮ್ಮನ್ನೀಗ ಹಿಂಬಾಲಿಸುತ್ತೇವೆ ನಿಮ್ಮಲ್ಲಿ ಭಯಭಕ್ತಿಯಿಡುತ್ತೇವೆ ನಿಮ್ಮ ಸನ್ನಿಧಿಯನ್ನು ಮತ್ತೆ ಅರಸುತ್ತೇವೆ. ನಮ್ಮನ್ನು ನಿರಾಶೆಗೊಳಿಸಬೇಡಿ ನಿಮ್ಮ ಕೃಪಾತಿಶಯದ ಪ್ರಕಾರ ನಮ್ಮ ಸಂಗಡ ವರ್ತಿಸಿ. ಸರ್ವೇಶ್ವರಾ, ನಿಮ್ಮ ಮಹತ್ಕಾರ್ಯಗಳ ಮೂಲಕ ನಮ್ಮನ್ನು ಬಿಡುಗಡೆಮಾಡಿ ನಿಮ್ಮ ಹೆಸರಿಗೆ ಹೊಸ ಕೀರ್ತಿ ಬರುವಂತೆ ಮಾಡಿ.
-ಪ್ರಭುವಿನ ವಾಕ್ಯ
ಕೀರ್ತನೆ: 25:4-5, 6-7, 8-9
ಘೋಷಣೆ: ನೆನೆಸಿಕೋ ಪ್ರಭೂ, ನಿನ್ನ ನಿರಂತರ ಕರುಣೆಯನು.
ಶುಭಸಂದೇಶ : ಮತ್ತಾಯನು - 18:21-35
"ಆದರೆ ಅದೇ ಸೇವಕ ಹೊರಗೆ ಬಂದದ್ದೇ ತನಗೆ ಕೇವಲ ನೂರು 'ಬೆಳ್ಳಿಕಾಸು' ಸಾಲ ತೆರಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಎದುರುಗೊಂಡ. ಅವನನ್ನು ಹಿಡಿದು, 'ನನಗೆ ಕೊಡಬೇಕಾದ ಸಾಲವನ್ನು ಈಗಲೇ ಕೊಟ್ಟು ತೀರಿಸು, 'ಎಂದು ಕುತ್ತಿಗೆ ಹಿಸುಕಿದ. ಆಗ ಆ ಜೊತೆಗಾರ, 'ಸ್ವಲ್ಪ ಸೈರಿಸಿಕೊ, ಕೊಟ್ಟುಬಿಡುತ್ತೇನೆ, 'ಎಂದು ಕಾಲಿಗೆ ಬಿದ್ದು ಕೇಳಿಕೊಂಡ. ಆದರೂ ಅವನು ಒಪ್ಪಲಿಲ್ಲ. ಅಷ್ಟು ಮಾತ್ರವಲ್ಲ, ಸಾಲ ತೀರಿಸುವ ತನಕ ಆ ಜೊತೆಗಾರನನ್ನು ಸೆರೆಗೆ ಹಾಕಿಸಿದ. ಇದೆಲ್ಲವನ್ನು ಕಂಡ ಇತರ ಸೇವಕರು ಬಹಳವಾಗಿ ನೊಂದುಕೊಂಡರು. ರಾಜನ ಬಳಿಗೆ ಹೋಗಿ ನಡೆದುದೆಲ್ಲವನ್ನೂ ವರದಿಮಾಡಿದರು. ರಾಜನು ಅವನನ್ನು ಕರೆಯಿಸಿ, 'ಎಲೋ ನೀಚ, ನೀನು ಬೇಡಿಕೊಂಡಿದ್ದರಿಂದ ಪೂರ್ತಿ ಸಾಲವನ್ನು ನಾನು ಮನ್ನಾಮಾಡಿದೆ. ನಾನು ನಿನಗೆ ದಯೆತೋರಿಸಿದಂತೆ ನೀನೂ ನಿನ್ನ ಜೊತೆಗಾರನಿಗೆ ದಯೆ ತೋರಿಸಬೇಕಿತ್ತು ಅಲ್ಲವೇ? 'ಎಂದು ಸಿಟ್ಟುಗೊಂಡ. ಬಳಿಕ ತನಗೆ ಬರಬೇಕಾಗಿದ್ದ ಸಾಲವನ್ನು ತೀರಿಸುವವರೆಗೂ ಅನನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಿದ. "ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸೋದರನನ್ನು ಮನಃಪೂರ್ವಕವಾಗಿ ಕ್ಷಮಿಸಬೇಕು. ಇಲ್ಲದಿದ್ದರೆ ಸ್ವರ್ಗದಲ್ಲಿರುವ ನನ್ನ ತಂದೆ ನಿಮಗೆ ಇದರಂತೆಯೇ ಮಾಡುವರು, 'ಎಂದರು.
- ಪ್ರಭುಕ್ರಿಸ್ತರ ಶುಭಸಂದೇಶ
ಮನಸ್ಸಿಗೊಂದಿಷ್ಟು : ಏಳು ಸಲ ಕ್ಷಮಿಸಬೇಕೇ ಎಂದು ಕೇಳಿ ಯೇಸುವಿನ ಮೆಚ್ಚುಗೆ ಪಡಯುವ ಬಯಕೆ ಪೇತ್ರನಿಗಿತ್ತೆನೋ. ಆದರೆ ಯೇಸು
ಏಳೆಪ್ಪತ್ತೇಳು ಸಲ ಎನ್ನುತ್ತಾ ನಾವು ಸದಾ ಕ್ಷಮಾವಂತರಾಗಿರಬೇಕು ಎನ್ನುತ್ತಾರೆ. ಕ್ರೈಸ್ತರಾಗಿ ದಾಟಬೇಕಾದ ಮತ್ತೊಂದು ಕಠಿಣ ಸೇತುವೆ. ನಮ್ಮ ಬೌದ್ಧಿಕ , ಲೌಕೀಕ ಲೆಕ್ಕಾಚಾರದಲ್ಲಿ ಇದು ಅಸಾಧ್ಯವೇನೊ ಆದರೆ ಶಿಲುಬೆ ಮೇಲಿಂದ ಕ್ಷಮಿಸಿದ ಕ್ರಿಸ್ತನೇ ನಮ್ಮ ಮೇಲ್ಪಂಕ್ತಿಯಾಗಲಿ.
ಪ್ರಶ್ನೆ : ಕ್ಷಮೆ ನೀಡುವುದು ನಮಗೆಷ್ಟು ಕಷ್ಟ?
ಪ್ರಭುವೇ,
ನಾ ನಿಮ್ಮ ಅಪರಮಿತ
ಕ್ಷಮೆಯ ಫಲಾನುಭವಿ
ಕ್ಷಮೆ ನೀಡುವುದರಲ್ಲಿ
ಮಾತ್ರ ಅನನುಭವಿ
ಕಲಿಸಿ ನಮಗೆ
ಕ್ಷಮೆಯ ಭಾವ
ನಿರಾಳತೆಯಲ್ಲಿ
ನಲಿಯಲಿ ಈ ಜೀವ
No comments:
Post a Comment