ಮೊದಲನೇ ವಾಚನ: ಮೀಕ 7:14-15, 18-20

ಕೀರ್ತನೆ: 103:1-2, 3-4, 9-10, 11-12
ಶ್ಲೋಕ: ಪ್ರಭು ದಯಾಳು, ಕೃಪಾಪೂರ್ಣನು ಸಹನಶೀಲನು, ಪ್ರೀತಿಮಯನು
ಶುಭಸಂದೇಶ: ಲೂಕ 15:1-3, 11-32
ಯೇಸುಸ್ವಾಮಿಯ ಉಪದೇಶವನ್ನು ಕೇಳಲು ಎಲ್ಲಾ ಸುಂಕದವರೂ ಪಾಪಿಗಳೂ ಬರುತ್ತಿದ್ದರು. ಇದನ್ನು ಕಂಡ ಫರಿಸಾಯರು ಮತ್ತು ಧರ್ಮಶಾಸ್ತ್ರಿಗಳು, “ಈ ಮನುಷ್ಯ ಪಾಪಿಗಳನ್ನು ಬರಮಾಡಿಕೊಳ್ಳುತ್ತಾನೆ; ಅವರೊಡನೆ ಊಟಮಾಡುತ್ತಾನೆ,” ಎಂದು ಗೊಣಗಿದರು. ಆ ಸಂದರ್ಭದಲ್ಲಿ ಯೇಸು ಈ ಸಾಮತಿಯನ್ನು ಹೇಳಿದರು: “ಒಬ್ಬಾತನಿಗೆ ಇಬ್ಬರು ಮಕ್ಕಳಿದ್ದರು. ಅವರಲ್ಲಿ ಕಿರಿಯವನು ‘ಅಪ್ಪಾ, ಆಸ್ತಿಯಲ್ಲಿ ನನಗೆ ಬರಬೇಕಾದ ಪಾಲನ್ನು ಕೊಟ್ಟುಬಿಡು,’ ಎಂದು ಕೇಳಿದ. ತಂದೆ ಅವರಿಬ್ಬರಿಗೂ ಆಸ್ತಿಯನ್ನು ಹಂಚಿಕೊಟ್ಟ. ಕೆಲವು ದಿವಸಗಳಾದ ಮೇಲೆ ಕಿರಿಯ ಮಗ ತನ್ನ ಆಸ್ತಿಯನ್ನೆಲ್ಲಾ ಮಾರಿ, ಬಂದ ಹಣವನ್ನು ತೆಗೆದುಕೊಂಡು ಮನೆಬಿಟ್ಟು ಹೋದ. ದೂರದೇಶಕ್ಕೆ ಹೋಗಿ, ದುಂದು ಜೀವನ ನಡೆಸಿ ಹಣವನ್ನೆಲ್ಲಾ ಪೋಲು ಮಾಡಿಬಿಟ್ಟ. ಹೀಗೆ ಅವನು ಎಲ್ಲವನ್ನು ಹಾಳುಮಾಡಿಕೊಂಡಮೇಲೆ ಆ ದೇಶದಾದ್ಯಂತ ಘೋರವಾದ ಕ್ಷಾಮ ತಲೆದೋರಿತು. ನಿರ್ಗತಿಕನಾದ ಅವನು ಹೋಗಿ, ಆ ದೇಶದ ನಿವಾಸಿಯೊಬ್ಬನನ್ನು ಆಶ್ರಯಿಸಿದ. ಆತ ಇವನನ್ನು ಹಂದಿ ಮೇಯಿಸಲು ತನ್ನ ರೊಪ್ಪಗಳಿಗೆ ಕಳುಹಿಸಿದ. ಅಲ್ಲಿ ಹಂದಿ ತಿನ್ನುತ್ತಿದ್ದ ಕಾಳುಗಳನ್ನಾದರೂ ತಿಂದು ಹಸಿವನ್ನು ನೀಗಿಸಿಕೊಳ್ಳಲು ಹಂಬಲಿಸಿದ. ಆದರೆ ಅದನ್ನೂ ಅವನಿಗೆ ಯಾರೂ ಕೊಡಲಿಲ್ಲ. ಆಗ ಅವನಿಗೆ ಬುದ್ಧಿ ಬಂದಿತು. ‘ನನ್ನ ತಂದೆಯ ಮನೆಯಲ್ಲಿ ಎಷ್ಟೋ ಮಂದಿ ಕೂಲಿಯಾಳುಗಳಿಗೆ ತಿಂದು ತೇಗುವಷ್ಟು ಆಹಾರವಿದೆ. ನಾನಾದರೋ ಇಲ್ಲಿ ಹಸಿವಿನಿಂದ ಸಾಯುತ್ತಾ ಇದ್ದೇನೆ. ನಾನು ಇದೀಗಲೇ ಹೊರಟು, ತಂದೆಯ ಬಳಿಗೆ ಹೋಗಿ, ‘ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನು ಎನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ; ನನ್ನನ್ನು ನಿಮ್ಮ ಮನೆಯ ಕೂಲಿಯಾಳುಗಳಲ್ಲಿ ಒಬ್ಬನನ್ನಾಗಿ ಇಟ್ಟುಕೊಳ್ಳಿ ಎಂದು ಬೇಡಿಕೊಳ್ಳುತ್ತೇನೆ,’ ಎಂದುಕೊಂಡ. ಅಂತೆಯೇ ಎದ್ದು ತಂದೆಯ ಬಳಿಗೆ ಹೊರಟ. “ಮಗನು ಇನ್ನೂ ಅಷ್ಟುದೂರದಲ್ಲಿ ಇರುವಾಗಲೇ ತಂದೆ ನೋಡಿದ. ಆತನ ಹೃದಯ ಕನಿಕರದಿಂದ ಕರಗಿಹೋಯಿತು. ಓಡಿಹೋಗಿ, ಮಗನನ್ನು ಬಿಗಿಯಾಗಿ ತಬ್ಬಿಕೊಂಡು ಮುತ್ತಿಟ್ಟ. ಆದರೂ ಮಗನು, ‘ಅಪ್ಪಾ, ದೇವರಿಗೂ ನಿಮಗೂ ವಿರುದ್ಧವಾಗಿ ಪಾಪಮಾಡಿದ್ದೇನೆ; ನಿಮ್ಮ ಮಗನೆನಿನಿಸಿಕೊಳ್ಳುವ ಯೋಗ್ಯತೆಯೂ ನನಗಿಲ್ಲ’ ಎಂದ. ತಂದೆಯಾದರೋ ಆಳುಗಳನ್ನು ಕರೆದು, ‘ಅತ್ಯುತ್ತಮವಾದ ಅಂಗಿಯನ್ನು ತಕ್ಷಣವೇ ತಂದು ಇವನಿಗೆ ಉಡಿಸಿರಿ. ಬೆರಳಿಗೆ ಉಂಗುರವನ್ನು ತೊಡಿಸಿರಿ, ಕಾಲಿಗೆ ಪಾದರಕ್ಷೆಯನ್ನು ಮೆಟ್ಟಿಸಿರಿ; ಕೊಬ್ಬಿಸಿದ ಪ್ರಾಣಿಯನ್ನು ತಂದು ಕೊಯ್ಯಿರಿ; ಹಬ್ಬ ಮಾಡೋಣ, ಆನಂದಿಸೋಣ. ಏಕೆಂದರೆ, ಈ ನನ್ನ ಮಗ ಸತ್ತುಹೋಗಿದ್ದ, ಈಗ ಬದುಕಿ ಬಂದಿದ್ದಾನೆ. ತಪ್ಪಿ ಹೋಗಿದ್ದ, ಈಗ ಸಿಕ್ಕಿದ್ದಾನೆ,’ ಎಂದು ಹೇಳಿದ. ಒಡನೆಯೇ ಹಬ್ಬದ ಸಡಗರ ತೊಡಗಿತು. “ಇತ್ತ ಹೊಲಕ್ಕೆ ಹೋಗಿದ್ದ ಹಿರಿಯ ಮಗ ಹಿಂದಿರುಗಿ ಮನೆಯನ್ನು ಸಮೀಪಿಸುವಾಗ ಗಾನ, ನರ್ತನಗಳ ಶಬ್ದವು ಅವನ ಕಿವಿಗೆ ಬಿತ್ತು. ಮನೆಯಲ್ಲೇನು ವಿಶೇಷ?’ ಎಂದು ಒಬ್ಬ ಆಳನ್ನು ಕರೆದು ವಿಚಾರಿಸಿದ. ‘ನಿಮ್ಮ ತಮ್ಮ ಬಂದಿದ್ದಾರೆ; ಅವರು ಮರಳಿ ಸುರಕ್ಷಿತವಾಗಿ ಬಂದುದಕ್ಕಾಗಿ ಕೊಬ್ಬಿಸಿದ ಪ್ರಾಣಿಯನ್ನು ನಿಮ್ಮ ತಂದೆ ಕೊಯ್ಯಿಸಿದ್ದಾರೆ,’ ಎಂದು ಆಳು ತಿಳಿಸಿದ. ಇದನ್ನು ಕೇಳಿದ ಹಿರಿಯ ಮಗನಿಗೆ ಸಿಟ್ಟು ಬಂದಿತು. ಮನೆಯೊಳಕ್ಕೆ ಕಾಲಿಡಲೂ ಒಪ್ಪಲಿಲ್ಲ. ತಂದೆಯೇ ಹೊರಗೆ ಬಂದು ಬೇಡಿಕೊಂಡಾಗ ಅವನು, ‘ನೋಡಿ, ನಾನು ಇಷ್ಟು ವರ್ಷಗಳಿಂದ ನಿಮಗೆ ಗುಲಾಮನಂತೆ ಸೇವೆ ಮಾಡುತ್ತಿದ್ದೇನೆ. ನಿಮ್ಮ ಮಾತನ್ನು ಎಂದೂ ಮೀರಿಲ್ಲ; ಆದರೂ ನಾನು ನನ್ನ ಸ್ನೇಹಿತರೊಡನೆ ಹಬ್ಬಮಾಡಲು ಒಂದು ಆಡುಮರಿಯನ್ನು ಕೂಡ ನೀವು ಕೊಟ್ಟಿಲ್ಲ. ಆದರೆ ನಿಮ್ಮ ಆಸ್ತಿಪಾಸ್ತಿಯನ್ನೆಲ್ಲಾ ವೇಶ್ಯೆಯರಿಗೆ ಸುರಿದ ಈ ನಿಮ್ಮ ಮಗ ಬಂದದ್ದೇ ಕೊಬ್ಬಿಸಿದ ಪ್ರಾಣಿಯನ್ನು ಕೊಯ್ಯಿಸಿದ್ದೀರಿ!’ ಎಂದು ವಾದಿಸಿದ. ಆಗ ತಂದೆ ಅವನಿಗೆ, ‘ಮಗನೇ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ; ನನ್ನ ಸರ್ವಸ್ವವೂ ನಿನ್ನದೇ ಆಗಿದೆ. ಈ ನಿನ್ನ ತಮ್ಮ ನಮ್ಮ ಪಾಲಿಗೆ ಸತ್ತುಹೋಗಿದ್ದ, ಈಗ ಬದುಕಿ ಬಂದಿದ್ದಾನೆ. ತಪ್ಪಿ ಹೋಗಿದ್ದ, ಈಗ ಸಿಕ್ಕಿದ್ದಾನೆ. ಆದುದರಿಂದ ನಾವು ಹಬ್ಬಮಾಡಿ ಆನಂದಿಸುವುದು ಸಹಜವಲ್ಲವೇ?’ ಎಂದನು.”
ಮನಸ್ಸಿಗೊಂದಿಷ್ಟು : ತನ್ನ ತಂದೆಯಿಂದ ದೂರ ಹೋಗಿದ್ದ ರಾಜನ ಮಗನೊಬ್ಬ ಮತ್ತೆ ತನ್ನ ತಂದೆಯ ಬಳಿಗೆ ಬರಲು ಮನಸು ಮಾಡುತ್ತಾನೆ. ಆದರೆ ತಂದೆಯನ್ನು ಮತ್ತೆ ಎದುರಿಸುವ ಧೈರ್ಯ ಸಾಲದೆ ಹಿಂಜರಿಯುತ್ತಾನೆ. ಇದನ್ನು ತಿಳಿದ ರಾಜ ಮಗನಿಗೆ ಹೇಳಿ ಕಳುಹಿಸುತ್ತಾನೆ, " ನಿನಗೆಷ್ಟು ಸಾಧ್ಯವೋ ಅಷ್ಟು ದೂರ ಮರಳಿ ಬಾ, ಮಿಕ್ಕ ದಾರಿ ನಾನೇ ಬಂದು ಕರೆದುಕೊಂಡು ಬರುತ್ತೇನೆ. ಇದು ದೇವರ ಪ್ರೀತಿಯ ಅಗಾಧತೆಯ ಅನಂತತೆಯ ಉದಾಹರಣೆ. ದೇವರಿಂದ ನಾವೆಷ್ಟೇ ದೂರ ಹೋದರೂ , ಅವರು ನಮ್ಮ ಮರಳುವಿಕೆಯ ಸಣ್ಣ ಹೆಜ್ಜೆಯನ್ನು ನಿರೀಕ್ಷಿಸುತ್ತಾರೆ, ಅವರೇ ಬಂದು ನಮ್ಮನ್ನು ತಬ್ಬಿ ಸ್ವಾಗತಿಸುತ್ತಾರೆ. ಮರಳುವ ಮನಸ್ಸು ನಮ್ಮದಾಗಬೇಕು
ಪ್ರಶ್ನೆ : ದೇವರತ್ತ ಮತ್ತೆ ಮರಳಲು ನಮ್ಮ ಅಡೆ ತಡೆಗಳೇನು?
ಪ್ರಭುವೆ,
ನಿನ್ನತ್ತ ಮತ್ತೆ ಮರಳಿ
ಬಾರಲಾಗದಷ್ಟು
ದೂರಕ್ಕೆ ಈ ನನ್ನ
ಮನಸ್ಸು ಸಾಗದಿರಲಿ
ನಾನೆಷ್ಟೇ ದೂರ ಹೋದರೂ
ಮರಳಿ ಬರುವ ದಾರಿ
ಮರೆಯಾಗದಿರಲಿ
ಮನಸ್ಸಿಗೊಂದಿಷ್ಟು : ತನ್ನ ತಂದೆಯಿಂದ ದೂರ ಹೋಗಿದ್ದ ರಾಜನ ಮಗನೊಬ್ಬ ಮತ್ತೆ ತನ್ನ ತಂದೆಯ ಬಳಿಗೆ ಬರಲು ಮನಸು ಮಾಡುತ್ತಾನೆ. ಆದರೆ ತಂದೆಯನ್ನು ಮತ್ತೆ ಎದುರಿಸುವ ಧೈರ್ಯ ಸಾಲದೆ ಹಿಂಜರಿಯುತ್ತಾನೆ. ಇದನ್ನು ತಿಳಿದ ರಾಜ ಮಗನಿಗೆ ಹೇಳಿ ಕಳುಹಿಸುತ್ತಾನೆ, " ನಿನಗೆಷ್ಟು ಸಾಧ್ಯವೋ ಅಷ್ಟು ದೂರ ಮರಳಿ ಬಾ, ಮಿಕ್ಕ ದಾರಿ ನಾನೇ ಬಂದು ಕರೆದುಕೊಂಡು ಬರುತ್ತೇನೆ. ಇದು ದೇವರ ಪ್ರೀತಿಯ ಅಗಾಧತೆಯ ಅನಂತತೆಯ ಉದಾಹರಣೆ. ದೇವರಿಂದ ನಾವೆಷ್ಟೇ ದೂರ ಹೋದರೂ , ಅವರು ನಮ್ಮ ಮರಳುವಿಕೆಯ ಸಣ್ಣ ಹೆಜ್ಜೆಯನ್ನು ನಿರೀಕ್ಷಿಸುತ್ತಾರೆ, ಅವರೇ ಬಂದು ನಮ್ಮನ್ನು ತಬ್ಬಿ ಸ್ವಾಗತಿಸುತ್ತಾರೆ. ಮರಳುವ ಮನಸ್ಸು ನಮ್ಮದಾಗಬೇಕು
ಪ್ರಶ್ನೆ : ದೇವರತ್ತ ಮತ್ತೆ ಮರಳಲು ನಮ್ಮ ಅಡೆ ತಡೆಗಳೇನು?
ಪ್ರಭುವೆ,
ನಿನ್ನತ್ತ ಮತ್ತೆ ಮರಳಿ
ಬಾರಲಾಗದಷ್ಟು
ದೂರಕ್ಕೆ ಈ ನನ್ನ
ಮನಸ್ಸು ಸಾಗದಿರಲಿ
ನಾನೆಷ್ಟೇ ದೂರ ಹೋದರೂ
ಮರಳಿ ಬರುವ ದಾರಿ
ಮರೆಯಾಗದಿರಲಿ
No comments:
Post a Comment