ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

12.03.2020 - "ಮೋಶೆಗೂ ಪ್ರವಾದಿಗಳಿಗೂ ಅವರು ಕಿವಿಗೊಡದಿದ್ದರೆ, ಸತ್ತವನು ಜೀವಂತನಾಗಿ ಎದ್ದು ಬಂದರೂ ಅವರು ನಂಬುವುದಿಲ್ಲ,"

ಮೊದಲನೇ ವಾಚನ: ಯೆರೆಮಿಯ 17:5-10 

ಇವು ಸರ್ವೇಶ್ವರನ ಮಾತುಗಳು: “ಮಾನವ ಮಾತ್ರದವರಲ್ಲಿ ಭರವಸೆಯಿಟ್ಟು ನರಜನ್ಮದವರನ್ನೇ ತನ್ನ ಭುಜ ಬಲವೆಂದುಕೊಂಡು ಸರ್ವೇಶ್ವರನನ್ನೇ ತೊರೆಯುವಂಥ ಹೃದಯವುಳ್ಳವನು ಶಾಪಗ್ರಸ್ತನು! ಇಂಥವನು ಅಡ ವಿಯಲ್ಲಿನ ಜಾಲಿ ಗಿಡಕ್ಕೆ ಸಮಾನನು. ಶುಭಸಂಭವಿಸಿದರೂ ಅದು ಅವನ ಕಣ್ಣಿಗೆ ಕಾಣದು. ಜನರಾರೂ ವಾಸಿಸದ ಚೌಳು ನೆಲದೊಳು ಬೆಳೆಯಿಲ್ಲದ ಬೆಂಗಾಡಿನೊಳು ವಾಸಿಸುವವನ ಪರಿಸ್ಥಿತಿ ಅವನದು. ಸರ್ವೇಶ್ವರನಲ್ಲಿ ಭರವಸೆಯಿಟ್ಟವನಾದರೋ ಧನ್ಯ! ಅಂಥವನಿಗೆ ಸರ್ವೇಶ್ವರನಲ್ಲೇ ವಿಶ್ವಾಸ. ನೀರರುಗಿನಲೆ ನೆಡಲಾದ, ನದಿಯ ಬದಿಯಲೆ ಬೇರು ಹರಡಿದ ಬಿಸಿಲ ಧಗೆಗೆ ಹೆದರದ, ಬರಗಾಲದಲ್ಲೂ ನಿಶ್ಚಿಂತವಾದ ಹಸಿರೆಲೆ ಬಿಡುವ, ಫಲ ನೀಡುವ ಮರಕ್ಕೆ ಸಮಾನನು ಆತ. ಮಾನವ ಹೃದಯ ಎಲ್ಲಕ್ಕಿಂತ ವಂಚಕ ಅದಕ್ಕೆ ಅಂಟಿದೆ ಗುಣವಾಗದ ರೋಗ ಅದರ ಗುಟ್ಟನ್ನು ಅರಿತುಕೊಳ್ಳಬಲ್ಲವರೂ ಇಲ್ಲ. ಸರ್ವೇಶ್ವರನಾದ ನಾನು ಹೃದಯ ಪರಿಶೀಲಕ ಹೌದು, ಅಂತರಿಂದ್ರಿಯಗಳನ್ನು ಪರಿಶೋಧಿಸುವಾತ.

ಕೀರ್ತನೆ: 1:1-2, 3, 4, 6

ಶ್ಲೋಕ: ಪ್ರಭುವಿನಲ್ಲೇ ಭರವಸೆಯಿಟ್ಟು ನಡೆವಾತನು ಧನ್ಯನು

ಶುಭಸಂದೇಶ: ಲೂಕ 16:19-31


ಯೇಸುಸ್ವಾಮಿ ಫರಿಸಾರನ್ನುದ್ದೇಶಿಸಿ ಈ ಸಾಮತಿಯನ್ನು ಹೇಳಿದರು: “ಒಬ್ಬ ಧನಿಕನಿದ್ದ. ಬೆಲೆ ಬಾಳುವ ಉಡುಗೆ-ತೊಡುಗೆಗಳನ್ನೂ ನಯವಾದ ನಾರು ಮಡಿಗಳನ್ನೂ ಧರಿಸಿಕೊಂಡು ದಿನ ನಿತ್ಯವೂ ಸುಖಭೋಗಗಳಲ್ಲಿ ಮೈಮರೆಯುತ್ತಿದ್ದ. ಅವನ ಮನೆಯ ಬಾಗಿಲಲ್ಲೇ ಲಾಜರನೆಂಬ ಒಬ್ಬ ಭಿಕಾರಿ ಬಿದ್ದಿರುತ್ತಿದ್ದ. ಅವನ ಮೈಯೆಲ್ಲಾ ಹುಣ್ಣು. ಧನಿಕನು ತಿಂದು ಬಿಸಾಡಿದ ಎಂಜಲಿನಿಂದ ಹಸಿವು ನೀಗಿಸಿಕೊಳ್ಳಲು ಅವನು ಹಂಬಲಿಸುತ್ತಿದ್ದ. ಅಷ್ಟು ಮಾತ್ರವಲ್ಲ, ನಾಯಿಗಳು ಬಂದು ಅವನ ಹುಣ್ಣುಗಳನ್ನು ನೆಕ್ಕುತ್ತಿದ್ದವು. “ಒಂದು ದಿನ ಆ ಭಿಕಾರಿ ಸತ್ತುಹೋದ. ದೇವದೂತರು ಅವನನ್ನು ತೆಗೆದುಕೊಂಡು ಹೋಗಿ ಸ್ವರ್ಗ ಸೌಭಾಗ್ಯದಲ್ಲಿದ್ದ ಅಬ್ರಹಾಮನ ಪಕ್ಕದಲ್ಲೇ ಕೂರಿಸಿದರು. ಧನಿಕನು ಕೂಡ ಸತ್ತುಹೋದ. ಅವನ ಶವ ಸಂಸ್ಕಾರವೂ ಮುಗಿಯಿತು. ಪಾತಾಳದಲ್ಲಿ ಯಾತನೆ ಪಡುತ್ತಾ ಅವನು ಕಣ್ಣೆತ್ತಿ ನೋಡಿದಾಗ, ದೂರದಲ್ಲಿ ಅಬ್ರಹಾಮನನ್ನೂ ಅವನ ಪಕ್ಕದಲ್ಲೇ ಕುಳಿತಿದ್ದ ಲಾಜರನನ್ನೂ ಕಂಡ. ‘ಓ ಪಿತಾಮಹ ಅಬ್ರಹಾಮ, ನನ್ನ ಮೇಲೆ ಕನಿಕರವಿಡು. ಈ ಅಗ್ನಿಜ್ವಾಲೆಯಲ್ಲಿ ಬಾಧೆ ಪಡುತ್ತಿದ್ದೇನೆ; ಲಾಜರನು ತನ್ನ ತುದಿ ಬೆರಳನ್ನು ತಣ್ಣೀರಿನಲ್ಲಿ ಅದ್ದಿ, ನನ್ನ ನಾಲಗೆಗೆ ತಂಪನ್ನುಂಟು ಮಾಡುವಂತೆ ಅವನನ್ನು ಇಲ್ಲಿಗೆ ಕಳುಹಿಸಿಕೊಡು’ ಎಂದು ದನಿಯೆತ್ತಿ ಮೊರೆಯಿಟ್ಟ. ಅದಕ್ಕೆ ಅಬ್ರಹಾಮನು, ‘ಮಗನೇ, ಜೀವಮಾನದಲ್ಲಿ ಬೇಕಾದಷ್ಟು ಸುಖ ಸಂಪತ್ತನ್ನು ನೀನು ಅನುಭವಿಸಿದೆ; ಲಾಜರನಾದರೋ ದುಃಖ ದಾರಿದ್ರ್ಯವನ್ನು ಅನುಭವಿಸಿದ ಎಂಬುದನ್ನು ನೆನಪಿಗೆ ತಂದುಕೊ. ಆದರೆ ಈಗ ಅವನು ಇಲ್ಲಿ ಸುಖ ಪಡುತ್ತಿದ್ದಾನೆ; ನೀನು ಅಲ್ಲಿ ಸಂಕಟಪಡುತ್ತಿರುವೆ. ಅಷ್ಟೇ ಮಾತ್ರವಲ್ಲ, ನಮಗೂ ನಿಮಗೂ ನಡುವೆ ಅಗಾಧ ಪ್ರಪಾತವು ಚಾಚಿದೆ. ಆದ ಕಾರಣ ಈ ಕಡೆಯಿಂದ ನಿಮ್ಮ ಬಳಿಗೆ ಬರಬೇಕೆಂದಿದ್ದರೂ ಬರಲಾಗದು; ಆ ಕಡೆಯಿಂದ ನಮ್ಮ ಬಳಿಗೆ ದಾಟಿ ಬರಲೂ ಸಾಧ್ಯವಿಲ್ಲ,’ ಎಂದ. ಆಗ ಆ ಧನಿಕ, ‘ಪಿತಾಮಹ ಅಬ್ರಹಾಮ, ಲಾಜರನನ್ನು ನನ್ನ ತಂದೆಯ ಮನೆಗಾದರೂ ಕಳುಹಿಸು. ನನಗೆ ಐವರು ಸೋದರರಿದ್ದಾರೆ; ಅವರೂ ಈ ಯಾತನಾ ಸ್ಥಳಕ್ಕೆ ಬಾರದಂತೆ ಇವನು ಹೋಗಿ ಎಚ್ಚರಿಕೆಕೊಡಲಿ,’ ಎಂದು ಬೇಡಿಕೊಂಡ. ಅದಕ್ಕೆ ಅಬ್ರಹಾಮನು, ‘ಅವರಿಗೆ ಎಚ್ಚರಿಕೆ ಕೊಡಲು ಮೋಶೆ ಮತ್ತು ಪ್ರವಾದಿಗಳ ಗ್ರಂಥಗಳಿವೆ. ಅವುಗಳಿಗೆ ಕಿವಿಗೊಡಲಿ,’ ಎಂದು ಉತ್ತರಕೊಟ್ಟ. ‘ಇಲ್ಲ, ಪಿತಾಮಹ ಅಬ್ರಹಾಮ, ಸತ್ತವರ ಕಡೆಯಿಂದ ಒಬ್ಬನು ಅವರ ಬಳಿಗೆ ಹೋದರೆ ಅವರು ಪಾಪಕ್ಕೆ ವಿಮುಖರಾಗುವರು,’ ಎಂದು ಧನಿಕನು ಮತ್ತೆ ಕೇಳಿಕೊಂಡ. ಅದಕ್ಕೆ ಅಬ್ರಹಾಮನು, ‘ಮೋಶೆಗೂ ಪ್ರವಾದಿಗಳಿಗೂ ಅವರು ಕಿವಿಗೊಡದಿದ್ದರೆ, ಸತ್ತವನು ಜೀವಂತನಾಗಿ ಎದ್ದು ಬಂದರೂ ಅವರು ನಂಬುವುದಿಲ್ಲ,’ ಎಂದ."

ಮನಸ್ಸಿಗೊಂದಿಷ್ಟು : ಇಂದಿನ ಶುಭಸಂದೇಶದ ಸಾಮತಿಯಲ್ಲಿ ಧನಿಕ ಮಾಡಿದ ಪಾಪವಾದರೂ ಏನು? ತನ್ನ ಮನೆಯ ಬಾಗಿಲ ಬಳಿಯೇ ನರಳುತ್ತಿದ್ದ ಲಾಜರನ ನೋವು ಹಸಿವೆಗೆ ಗಮನಕೊಡದೆ  ಇದ್ದದ್ದೇ ದೊಡ್ಡ ಪಾಪವೆಂಬಂತೆ ದೇವರು ನರಕಕ್ಕೆ ಅವನನ್ನು ತಳ್ಳುತ್ತಾರೆ. ಲೋಕದ ಸುಖಗಳಲ್ಲಿ ಮುಳುಗುವ ನಮಗೆ ಸಾಮತಿಯ ಕೊನೆಯಲ್ಲಿ ಹೇಳಿದಂತೆ ಪ್ರವಾದಿಗಳ, ದೈವ ವಾಕ್ಯಗಳ ಎಚ್ಚರಿಕೆ ರುಚಿಸುವುದಿಲ್ಲ. ಇತರರ ನೋವಿಗೆ, ದೈವ ವಾಕ್ಯಗಳ ಆಶಯಕ್ಕೆ ಬೆನ್ನು ಮಾಡದಿರೋಣ. 

ಪ್ರಶ್ನೆ : ನಮ್ಮ ನಡುವಿನ, ಸುತ್ತಮುತ್ತಲಿನ ಲಾಜರುಗಳಿಗೆ ನಾವೆಷ್ಟು ಸ್ಪಂದಿಸುತ್ತಿದ್ದೇವೆ?

ಪ್ರಭುವೇ,
ಸುಖ ಭೋಗಗಳಲ್ಲಿ 
ಮರೆಯಾಗದೆ 
ಆಸೆ ದುರಾಸೆಗಳಿಗೆ  
ಸೆರೆಯಾಗದೆ 
ಸಹಾಯದ ಕೂಗಿಗೆ 
ಕಿವಿಯಾಗಿಸು 
ನೋವು ನರಳಿಕೆಗೆ 
ಕಣ್ಣಾಗಿಸು 
ಮೂಕ ಕೊರಳಿಗೆ 
ದನಿಯಾಗಿಸು  

No comments:

Post a Comment