ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

15.03.2020 - "ಲೋಕೋದ್ಧಾರಕ ಇವರೇ ಎಂದು ನಮಗೀಗ ತಿಳಿಯಿತು,”

ಮೊದಲನೇ ವಾಚನ: ವಿಮೋಚನಕಾಂಡ 17:3-7

ಜನರು ನೀರಿಲ್ಲದೆ ಬಾಯಾರಿಕೆಯ ಬೇಸರದಿಂದ, ಮೋಶೆಯ ವಿರುದ್ಧ ಗೊಣಗುಟ್ಟಿದರು. “ನೀನು ನಮ್ಮನ್ನು, ನಮ್ಮ ಮಕ್ಕಳನ್ನು ಹಾಗು ದನಕರುಗಳನ್ನು ಈಜಿಪ್ಟಿನಿಂದ ಕರೆದು ತಂದದ್ದು ಏಕೆ? ನೀರಿಲ್ಲದೆ ಸಾಯಿಸುವುದಕ್ಕೋ?” ಎಂದು ದೂರಿದರು. ಆಗ ಮೋಶೆ ಸರ್ವೇಶ್ವರನಿಗೆ ಮೊರೆ ಇಟ್ಟನು. “ಈ ಜನರಿಗಾಗಿ ನಾನೇನು ಮಾಡಲಿ? ಅವರು ನನ್ನನ್ನು ಕಲ್ಲೆಸೆದು ಕೊಲ್ಲುವಂತಿದ್ದಾರೆ” ಎಂದು ಪ್ರಾರ್ಥಿಸಿದನು. ಅದಕ್ಕೆ ಸರ್ವೇಶ್ವರ, “ನೀನು ನೈಲ್ ನದಿಯನ್ನು ಹೊಡೆದ ಕೋಲನ್ನು ಕೈಯಲ್ಲಿ ಹಿಡಿದುಕೊಂಡು, ಇಸ್ರಯೇಲರ ಹಿರಿಯರಲ್ಲಿ ಕೆಲವರನ್ನು ಕರೆದುಕೊಂಡು, ನಾನು ತೋರಿಸುವ ಸ್ಥಳಕ್ಕೆ ಜನರ ಮುಂದೆ ಹೋಗು. ಅಲ್ಲೇ ಹೋರೇಬಿನಲ್ಲಿರುವ ಬಂಡೆಯೊಂದರ ಮೇಲೆ ನಾನೇ ನಿನ್ನ ಮುಂದೆ ನಿಲ್ಲುವೆನು. ಆ ಬಂಡೆಯನ್ನು ನೀನು ಹೊಡೆ. ಆಗ ಅದರಿಂದ ನೀರು ಹೊರಡುವುದು; ಜನರು ಕುಡಿಯಲಿ,” ಎಂದು ಅಪ್ಪಣೆಕೊಟ್ಟರು. ಹಾಗೆಯೇ ಮೋಶೆ ಇಸ್ರಯೇಲರ ಹಿರಿಯರ ಕಣ್ಣೆದುರಿನಲ್ಲೆ ಮಾಡಿದನು. ಸರ್ವೇಶ್ವರಸ್ವಾಮಿ ತಮ್ಮ ಮಧ್ಯೆ ಇದ್ದಾರೋ ಇಲ್ಲವೋ ಎಂದು ಇಸ್ರಯೇಲರು ಅಲ್ಲಿ ಪರೀಕ್ಷಿಸಿದ್ದರಿಂದ ಮೋಶೆ ಆ ಸ್ಥಳಕ್ಕೆ ‘ಮಸ್ಸಾ’ ಎಂತಲೂ ಜನರು ತನ್ನೊಡನೆ ವಾಗ್ವಾದ ಮಾಡಿದ್ದರಿಂದ ‘ಮೆರೀಬಾ’ ಎಂತಲೂ ಹೆಸರಿಟ್ಟನು.

ಕೀರ್ತನೆ: 95:1-2, 6-7, 8-9

ಶ್ಲೋಕ: ಪ್ರಭು ಸಹನಶೀಲನು, ಪ್ರೀತಿಮಯನು

ಎರಡನೇ ವಾಚನ: ರೋಮನರಿಗೆ 5:1-2,  5-8

ವಿಶ್ವಾಸದ ಮೂಲಕ ದೇವರೊಡನೆ ಸತ್ಸಂಬಂಧದಲ್ಲಿರುವ ನಾವು ನಮ್ಮ ಪ್ರಭು ಯೇಸುಕ್ರಿಸ್ತರ ಮುಖಾಂತರ ದೇವರೊಡನೆ ಶಾಂತಿಸಮಾಧಾನದಿಂದಿರುತ್ತೇವೆ. ವಿಶ್ವಾಸದ ಮೂಲಕ ನಾವು ದೈವಾನುಗ್ರಹವನ್ನು ಸವಿಯುವಂತೆ ಯೇಸುಕ್ರಿಸ್ತರು ದಾರಿ ತೋರಿಸಿದರು. ನಾವೀಗ ನೆಲೆಗೊಂಡಿರುವುದು ಆ ಅನುಗ್ರಹದಲ್ಲಿಯೇ. ಆದ್ದರಿಂದಲೇ, ದೇವರ ಮಹಿಮೆಯಲ್ಲಿ ನಾವೂ ಪಾಳುಗೊಳ್ಳುತ್ತೇವೆಂಬ ಭರವಸೆಯಿಂದ ಹೆಮ್ಮೆಪಡುತ್ತೇವೆ. ಈ ನಂಬಿಕೆ ನಿರೀಕ್ಷೆಯು ನಮಗಿರುವುದರಿಂದ ನಮಗೆ ಆಶಾಭಂಗವಾಗುವುದಿಲ್ಲ. ಏಕೆಂದರೆ, ನಮಗೆ ದಾನವಾಗಿ ದಯಪಾಲಿಸಿರುವ ಪವಿತ್ರಾತ್ಮ ಅವರ ಮುಖಾಂತರ ದೇವರು ತಮ್ಮ ಪ್ರೀತಿಯನ್ನು ನಮ್ಮ ಹೃದಯಗಳಲ್ಲಿ ಧಾರಾಳವಾಗಿ ಸುರಿಸಿದ್ದಾರೆ. ನಾವು ಪಾಪದಿಂದ ದುರ್ಬಲರಾಗಿದ್ದಾಗಲೇ ನಿಯಮಿತ ಕಾಲದಲ್ಲಿ ಕ್ರಿಸ್ತಯೇಸು ಪಾಪಿಗಳಿಗೋಸ್ಕರ ಪ್ರಾಣತ್ಯಾಗಮಾಡಿದರು. ನೀತಿವಂತನಿಗಾಗಿ ಒಬ್ಬನು ತನ್ನ ಪ್ರಾಣಕೊಡುವುದು ವಿರಳ. ಸತ್ಪುರುಷನಿಗಾಗಿ ಒಬ್ಬನು ತನ್ನ ಪ್ರಾಣವನ್ನು ಕೊಟ್ಟರೂ ಕೊಟ್ಟಾನು. ಆದರೆ ನಾವಿನ್ನೂ ಪಾಪಿಗಳಾಗಿರುವಾಗಲೇ ಕ್ರಿಸ್ತಯೇಸು ನಮಗೋಸ್ಕರ ಪ್ರಾಣತ್ಯಾಗ ಮಾಡಿದರು. ಇದರಿಂದ ನಮ್ಮ ಮೇಲೆ ದೇವರಿಗಿರುವ ಪ್ರೀತಿ ಎಷ್ಟೆಂದು ವ್ಯಕ್ತವಾಗುತ್ತದೆ.

ಶುಭಸಂದೇಶ: ಯೊವಾನ್ನ 4:5-42


ಯೇಸು ಸಮಾರಿಯದ ಸಿಖಾರೆಂಬ ಊರನ್ನು ತಲುಪಿದರು. ಈ ಊರಿನ ಪಕ್ಕದಲ್ಲೇ ಯಕೋಬನು ತನ್ನ ಮಗನಾದ ಜೋಸೆಫನಿಗೆ ಕೊಟ್ಟ ಭೂಮಿ ಇದೆ. ಅಲ್ಲೇ ಯಕೋಬನ ಬಾವಿಯೂ ಇದೆ. ಪಯಣದಿಂದ ಬಳಲಿದ್ದ ಯೇಸು ಬಾವಿಯ ಬಳಿ ಕುಳಿತುಕೊಂಡರು. ಆಗ ಸುಮಾರು ಮಧ್ಯಾಹ್ನದ ಹೊತ್ತು. ಒಬ್ಬ ಸಮಾರಿಯದ ಮಹಿಳೆ ನೀರು ಸೇದಲು ಅಲ್ಲಿಗೆ ಬಂದಳು. ಆಗ ಯೇಸು, “ಕುಡಿಯಲು ಕೊಂಚ ನೀರು ಕೊಡು,” ಎಂದು ಕೇಳಿದರು. ಶಿಷ್ಯರು ಊಟಕ್ಕೆ ಏನಾದರೂ ಕೊಂಡು ತರುವುದಕ್ಕೆ ಊರಿನೊಳಗೆ ಹೋಗಿದ್ದರು. ಅದಕ್ಕೆ ಆಕೆ, “ನೀವು ಯೆಹೂದ್ಯರು, ನಾನು ಸಮಾರಿಯದವಳು. ಹೀಗಿರುವಲ್ಲಿ ನೀವು ನನ್ನಿಂದ ನೀರು ಕೇಳಬಹುದೇ?” ಎಂದಳು. (ಯೆಹೂದ್ಯರಿಗೂ ಸಮಾರಿಯದವರಿಗೂ ಹೊಕ್ಕುಬಳಕೆ ಇರಲಿಲ್ಲ). ಆಗ ಯೇಸು, “ದೇವರು ಕೊಡುವ ವರದಾನವನ್ನು ಮತ್ತು ಕುಡಿಯಲು ನಿನ್ನಿಂದ ನೀರು ಕೇಳುತ್ತಿರುವ ವ್ಯಕ್ತಿಯನ್ನು ನೀನು ಅರಿತಿದ್ದರೆ ಆಗ ನೀನೇ ಆತನಲ್ಲಿ ಬೇಡುತ್ತಿದ್ದೆ. ಆತನು ನಿನಗೆ ಜೀವಜಲವನ್ನು ಕೊಡುತ್ತಿದ್ದನು,” ಎಂದು ಉತ್ತರಕೊಟ್ಟರು. ಅದಕ್ಕೆ ಆಕೆ, “ನೀರು ಸೇದುವುದಕ್ಕೆ ನಿಮ್ಮಲ್ಲಿ ಏನೂ ಇಲ್ಲ, ಬಾವಿಯೂ ಆಳವಾಗಿದೆ; ಹೀಗಿರುವಲ್ಲಿ ನಿಮಗೆ ಜೀವಜಲ ಎಲ್ಲಿಂದ ಬಂದೀತು? ನಮಗೆ ಈ ಬಾವಿಯನ್ನು ಕೊಟ್ಟವನು ನಮ್ಮ ಪಿತಾಮಹ ಯಕೋಬನು. ಆತನು, ಆತನ ಮಕ್ಕಳು ಮತ್ತು ದನಕರುಗಳು ಇದೇ ಬಾವಿಯ ನೀರನ್ನು ಕುಡಿದರು. ಅಂಥ ಪಿತಾಮಹನಿಗಿಂತ ತಾವು ದೊಡ್ಡವರೋ?” ಎಂದಳು. ಆಗ ಯೇಸು, “ಈ ನೀರನ್ನು ಕುಡಿಯುವ ಎಲ್ಲರಿಗೂ ಮತ್ತೆ ದಾಹವಾಗುತ್ತದೆ. ಆದರೆ ನಾನು ಕೊಡುವ ನೀರನ್ನು ಕುಡಿದವನಿಗೆ ಎಂದಿಗೂ ದಾಹವಾಗದು; ಆ ನೀರು ಅವನಲ್ಲಿ ಉಕ್ಕಿ ಹರಿಯುವ ಬುಗ್ಗೆಯಾಗಿ, ನಿತ್ಯಜೀವವನ್ನು ತರುತ್ತದೆ,” ಎಂದು ಉತ್ತರಕೊಟ್ಟರು. ಅದಕ್ಕೆ ಆಕೆ, “ಸ್ವಾವಿೂ, ಅಂಥ ನೀರನ್ನು ಕೊಡಿ; ಇನ್ನು ಮುಂದೆ ನನಗೆ ದಾಹವಾಗದಿರಲಿ. ನೀರು ಸೇದಲು ಇಷ್ಟು ದೂರ ಬರುವುದು ತಪ್ಪಲಿ,” ಎಂದಳು. ಅದಕ್ಕೆ ಯೇಸು, “ಹೋಗಿ ನಿನ್ನ ಗಂಡನನ್ನು ಕರೆದುಕೊಂಡು ಬಾ,” ಎಂದು ಹೇಳಿದರು. ಆಕೆ, “ನನಗೆ ಗಂಡನಿಲ್ಲ,” ಎಂದಳು. ಗಂಡನಿಲ್ಲವೆಂದು ಸರಿಯಾಗಿ ಹೇಳಿದೆ. ನಿನಗೆ ಐದು ಜನ ಗಂಡಂದಿರು ಇದ್ದರು. ಈಗ ನಿನ್ನೊಡನೆ ಇರುವವನು ನಿನ್ನ ಗಂಡನಲ್ಲ, ನೀನು ಹೇಳಿದ್ದು ಸರಿಯೇ,” ಎಂದರು ಯೇಸುಸ್ವಾಮಿ. ಅದಕ್ಕೆ ಆ ಮಹಿಳೆ, “ಸ್ವಾವಿೂ, ತಾವು ಪ್ರವಾದಿ ಎಂದು ನನಗೀಗ ತಿಳಿಯಿತು. ನಮ್ಮ ಪೂರ್ವಜರು ಈ ಬೆಟ್ಟದ ಮೇಲೆ ದೇವರನ್ನು ಆರಾಧಿಸುತ್ತಿದ್ದರು. ಆದರೆ ಆರಾಧಿಸತಕ್ಕ ಕ್ಷೇತ್ರ ಇರುವುದು ಜೆರುಸಲೇಮಿನಲ್ಲೇ ಎಂದು ಯೆಹೂದ್ಯರಾದ ನೀವು ಹೇಳುತ್ತೀರಲ್ಲ” ಎಂದಳು. ಆಗ ಯೇಸು, “ತಾಯಿ, ನಾನು ಹೇಳುವುದನ್ನು ಕೇಳು. ಪಿತನ ಆರಾಧನೆಗೆ ಈ ಬೆಟ್ಟಕ್ಕೂ ಬರಬೇಕಾಗಿಲ್ಲ; ಜೆರುಸಲೇಮಿಗೂ ಹೋಗಬೇಕಾಗಿಲ್ಲ. ಅಂಥ ಕಾಲವೂ ಬರುವುದು. ನೀವು ಆರಾಧಿಸುವುದು ಯಾರೆಂದು ನಿಮಗೇ ತಿಳಿಯದು. ನಾವು ಆರಾಧಿಸುವುದು ಯಾರೆಂದು ನಮಗೆ ತಿಳಿದಿದೆ. ಏಕೆಂದರೆ ಲೋಕೋದ್ಧಾರಕ ಬರುವುದು ಯೆಹೂದ್ಯರಿಂದಲೇ. ಕಾಲ ಬರುವುದು; ಅದು ಈಗಲೇ ಬಂದಿದೆ. ಇನ್ನು ಮೇಲೆ ನಿಜವಾದ ಆರಾಧಕರು ಪಿತನನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುವರು. ಅಂಥವರೇ ತಮ್ಮನ್ನು ಆರಾಧಿಸಬೇಕೆಂದು ಪಿತ ಆಶಿಸುತ್ತಾರೆ. ದೇವರು ಆತ್ಮಸ್ವರೂಪಿ. ಅವರನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸತಕ್ಕದ್ದು,” ಎಂದು ಹೇಳಿದರು. ಆಕೆ “ಅಭಿಷಿಕ್ತನಾದ ಲೋಕೋದ್ಧಾರಕ ಬರುವನೆಂದು ನಾನು ಬಲ್ಲೆ. ಆತನು ಬಂದಾಗ ಎಲ್ಲವನ್ನೂ ತಿಳಿಸುವನು,” ಎಂದು ಹೇಳಿದಳು. ಆಗ ಯೇಸು, “ನಿನ್ನೊಡನೆ ಮಾತನಾಡುತ್ತಿರುವ ನಾನೇ ಆತನು,” ಎಂದು ನುಡಿದರು. ಅಷ್ಟರಲ್ಲಿ ಹಿಂದಿರುಗಿ ಬಂದ ಶಿಷ್ಯರು ಯೇಸು ಆ ಮಹಿಳೆಯೊಡನೆ ಮಾತನಾಡುತ್ತಿರುವುದನ್ನು ಕಂಡು ಆಶ್ಚರ್ಯಪಟ್ಟರು. ಆದರೆ, “ಏನು ಬೇಕು?” ಎಂದು ಆಕೆಯನ್ನಾಗಲಿ, “ಆಕೆಯೊಡನೆ ಏಕೆ ಮಾತನಾಡುತ್ತಿದ್ದೀರಿ?” ಎಂದು ಯೇಸುವನ್ನಾಗಲಿ ಅವರು ಕೇಳಲಿಲ್ಲ. ಆ ಮಹಿಳೆ ತನ್ನ ಕೊಡವನ್ನು ಅಲ್ಲಿಯೇ ಬಿಟ್ಟು ಊರಿಗೆ ನಡೆದಳು. “ನಾನು ಮಾಡಿದ್ದ ಕೃತ್ಯಗಳನ್ನೆಲ್ಲಾ ಕಂಡಂತೆ ತಿಳಿಸಿದ ಒಬ್ಬ ವ್ಯಕ್ತಿ ಅಲ್ಲಿ ಇದ್ದಾರೆ. ಬಂದು ನೋಡಿ. ಅವರೇ ಅಭಿಷಿಕ್ತನಾದ ಲೋಕೋದ್ಧಾರಕ ಏಕಾಗಿರಬಾರದು?” ಎಂದು ಊರಿನ ಜನರನ್ನು ಕರೆದಳು. ಅವರು ಯೇಸುವಿನ ಬಳಿಗೆ ಬಂದರು. ಈ ಮಧ್ಯೆ ಶಿಷ್ಯರು, “ಗುರುದೇವಾ, ಊಟಮಾಡಿ,” ಎಂದು ಯೇಸುವನ್ನು ಒತ್ತಾಯ ಮಾಡಿದರು. ಆಗ ಯೇಸು, “ನಿಮಗೆ ತಿಳಿಯದಂಥ ಆಹಾರ ನನ್ನಲ್ಲಿದೆ,” ಎಂದರು. ಶಿಷ್ಯರು, “ಯಾರಾದರೂ ಅವರಿಗೆ ತಿನ್ನಲು ತಂದು ಕೊಟ್ಟಿರಬಹುದೇ?” ಎಂದು ಮಾತನಾಡಿಕೊಂಡರು. ಯೇಸು ಅವರಿಗೆ, “ನನ್ನನ್ನು ಕಳುಹಿಸಿದಾತನ ಚಿತ್ತವನ್ನು ನೆರವೇರಿಸುವುದೇ ನನಗೆ ಆಹಾರ. ಆತನು ಕೊಟ್ಟ ಕಾರ್ಯಗಳನ್ನು ಪೂರೈಸುವುದೇ ನನಗೆ ತಿಂಡಿತೀರ್ಥ. ಇನ್ನು ನಾಲ್ಕು ತಿಂಗಳು ಆದ ಮೇಲೆ ಸುಗ್ಗಿ ಬರುತ್ತದೆ ಎಂದು ನೀವು ಹೇಳುವುದಿಲ್ಲವೆ? ಇಗೋ, ಕಣ್ಣುಹಾಯಿಸಿ ನೋಡಿ; ಬಲಿತು ಕೊಯ್ಲಿಗೆ ಬಂದಿರುವ ಹೊಲಗಳನ್ನು ನೋಡಿ. ಕೊಯ್ದವನು ಈಗಾಗಲೇ ಕೂಲಿಯನ್ನು ಪಡೆಯುತ್ತಾನೆ. ಅವನು ನಿತ್ಯಜೀವಕ್ಕೆ ಫಲವನ್ನು ಕೂಡಿಸಿಡುತ್ತಾನೆ. ಹೀಗೆ ಬಿತ್ತುವವನೂ ಕೊಯ್ಯುವವನೂ ಒಟ್ಟಿಗೆ ಸಂತೋಷಪಡುತ್ತಾರೆ. ‘ಬಿತ್ತುವವನೊಬ್ಬ, ಕೊಯ್ಯುವವನಿನ್ನೊಬ್ಬ,’ ಎಂಬ ನಾಣ್ನುಡಿ ನಿಜವಾದುದು. ನೀವು ದುಡಿಯದ ಎಡೆಯಲ್ಲಿ ಕೊಯ್ಲು ಮಾಡಲು ನಾನು ನಿಮ್ಮನ್ನು ಕಳುಹಿಸಿದ್ದೇನೆ. ದುಡಿದವರು ಬೇರೆ. ಅವರ ದುಡಿಮೆಯ ಫಲ ಬರುವುದು ನಿಮ್ಮ ಪಾಲಿಗೆ,” ಎಂದು ಹೇಳಿದರು. ‘ನಾನು ಮಾಡಿದ ಕೃತ್ಯಗಳನ್ನೆಲ್ಲಾ ಕಂಡಂತೆ ಹೇಳಿದ ವ್ಯಕ್ತಿ’ ಎಂದು ಸಾರಿದ ಮಹಿಳೆಯ ಮಾತಿನಿಂದ ಸಮಾರಿಯ ಊರಿನ ಹಲವು ಮಂದಿಗೆ ಯೇಸುವಿನಲ್ಲಿ ನಂಬಿಕೆ ಹುಟ್ಟಿತು. ಎಂದೇ ಆ ಊರಿನ ಜನರು ಯೇಸುವಿನ ಬಳಿಗೆ ಬಂದು ತಮ್ಮಲ್ಲಿಯೇ ತಂಗಬೇಕೆಂದು ಬೇಡಿಕೊಂಡರು. ಅಂತೆಯೇ ಯೇಸು, ಅಲ್ಲಿ ಎರಡು ದಿನ ಉಳಿದರು. ಇನ್ನೂ ಅನೇಕರಿಗೆ ಯೇಸುವಿನ ಬೋಧನೆಯನ್ನು ಅವರ ಬಾಯಿಂದಲೇ ಕೇಳಿ ಅವರಲ್ಲಿ ನಂಬಿಕೆ ಮೂಡಿತು. ಆಗ ಅವರು, ಆ ಮಹಿಳೆಗೆ, “ನೀನು ಹೇಳಿದುದರಿಂದ ಮಾತ್ರವೇ ಈಗ ನಾವು ನಂಬುತ್ತಿಲ್ಲ, ನಾವೇ ಕಿವಿಯಾರೆ ಕೇಳಿ ನಂಬಿದ್ದೇವೆ; ಲೋಕೋದ್ಧಾರಕ ಇವರೇ ಎಂದು ನಮಗೀಗ ತಿಳಿಯಿತು,” ಎಂದರು. 

ಮನಸ್ಸಿಗೊಂದಿಷ್ಟು: ಆಕಸ್ಮಿಕವಾಗಿ ಯೇಸುವನ್ನು ಕಂಡು, ಸಂಭಾಷಣೆಗಿಳಿಯುತ್ತಾಳೆ ಸಮಾರಿಯಾದ ಹೆಂಗಸು. ಕೆಲವೇ ನಿಮಿಷಗಳ ಈ ಭೇಟಿಯ ಕೊನೆಗೆ 'ಯೇಸುವೇ ಲೋಕೊದ್ಧಾರಕ'  ಎಂದು ತಾನು ನಂಬುವುದು ಮಾತ್ರವಲ್ಲದೆ ಇಡೀ ಹಳ್ಳಿಗೆ ಹೋಗಿ ಹೇಳುತ್ತಾಳೆ. ಹೀಗೆ ತಾನೇ ಶುಭಸಂದೇಶದ ಮೊದಲ ಪ್ರಚಾರಕಿ ಆಗುತ್ತಾಳೆ.  ಹುಟ್ಟಿನಿಂದಲೇ  ಯೇಸುವಿನ ಅನುಯಾಯಿಗಳಾದ ನಮಗೆ ಯೇಸುವಿನ ಬಗ್ಗೆ ಆ ಅಭಿಮಾನ, ವಿಶ್ವಾಸ ಹಾಗೂ ಶುಭ ಸಂದೇಶ ಸಾರುವ ಕಾತುರ ಇದೆಯೇ? 

ಪ್ರಶ್ನೆ: ಇದುವರೆಗಿನ ನಮ್ಮ ಜೀವನದಲ್ಲಿ ಶುಭಸಂದೇಶದ ಪ್ರಚಾರದಲ್ಲಿ ನಾವು ತೊಡಗಿಕೊಂಡದೆಷ್ಟು?

ಪ್ರಭುವೇ,
ಜಾರಿಯಲ್ಲಿರಲಿ  
ಸದಾ  ನನ್ನ ನಿಮ್ಮ 
ನಡುವೆ ಸಂಭಾಷಣೆ    
ಅದರೊಂದಿಗೆ 
ನಾನ್ಯಾರೆಂಬ 
ಅನ್ವೇಷಣೆ 
ನನ್ನಲಿರಿಸಿ 
ಜೀವಜಲಕ್ಕಂಬಲಿಸುವ   
ಕಾತುರ 
ಲೋಕೋದ್ಧಾರಕ ನೀವೇ 
ಎಂದು ಜಗಕ್ಕೆ 
ಸಾರುವ ಆತುರ 
-ಚಿತ್ತ 

No comments:

Post a Comment