ಮೊದಲನೇಯ ವಾಚನ : ಧರ್ಮೋಪದೇಶಕಾಂಡ 26:16-19
“ಈ ಆಜ್ಞಾವಿಧಿಗಳನ್ನು ನೀವು ಅನುಸರಿಸಬೇಕದು ನಿಮ್ಮ ದೇವರಾದ ಸರ್ವೇಶ್ವರ ನಿಮಗೆ ಇಂದು ಆಜ್ಞಾಪಿಸಿದ್ದಾರೆ. ಆದುದರಿಂದ ನೀವು ಪೂರ್ಣ ಹೃದಯದಿಂದಲೂ ಮನಸ್ಸಿನಿಂದಲೂ ಇವುಗಳನ್ನು ಕೈಕೊಂಡು ನಡೆಯಬೇಕು. ನಮಗೆ ಸರ್ವೇಶ್ವರನೇ ದೇವರಾಗಿರುವರೆಂದು ಹಾಗು ಅವರು ಹೇಳಿದ ಮಾರ್ಗದಲ್ಲೇ ನಡೆದು ಅವರ ಆಜ್ಞಾವಿಧಿನಿರ್ಣಯಗಳನ್ನು ಕೈಕೊಂಡು ಅವರ ಮಾತಿಗೆ ಲಕ್ಷ್ಯಕೊಡುವೆವೆಂದೂ ನೀವು ಈಗ ಒಡಂಬಟ್ಟಿದ್ದೀರಿ. ಸರ್ವೇಶ್ವರ ಸ್ವಾಮಿ ಆದರೋ ನಿಮ್ಮ ವಿಷಯದಲ್ಲಿ,‘ಇವರು ನನ್ನ ಆಜ್ಞೆಗಳನ್ನೆಲ್ಲ ಅನುಸರಿಸುವವರಾದರೆ ನನ್ನ ವಾಗ್ದಾನಾನುಸಾರ ನನಗೆ ಸ್ವಕೀಯಜನರಾಗಿರುವರು. ನಾನು ನಿರ್ಮಿಸಿದ ಬೇರೆ ಎಲ್ಲಾ ಜನಾಂಗಗಳಿಗಿಂತ ಇವರಿಗೆ ಹೆಚ್ಚಾದ ಕೀರ್ತಿಘನಮಾನಗಳನ್ನುಂಟು ಮಾಡುವೆನು ಹಾಗು ಇವರು ನನ್ನ ಮಾತಿನ ಮೇರೆಗೆ ತಮ್ಮ ದೇವರಾದ ಸರ್ವೇಶ್ವರನಿಗೆ ಮೀಸಲಾದ ಜನರಾಗಲು ಒಡಂಬಟ್ಟಿದ್ದಾರೆ,’ ಎನ್ನುವರು,” ಎಂದು ಹೇಳಿದನು.
ಕೀರ್ತನೆ : 119:1-2,
4-5, 7-8
ಶ್ಲೋಕ : ಪ್ರಭುವಿನ ಶಾಸ್ರ್ತಾನುಸಾರ ನಡೆಸುವವರು ಧನ್ಯರು
ಶುಭ ಸಂದೇಶ : ಮತ್ತಾಯ 5:43-48
‘ಮಿತ್ರರನ್ನು ಪ್ರೀತಿಸು, ಶತ್ರುವನ್ನು ದ್ವೇಷಿಸು’ ಎಂದು ಹೇಳಿರುವುದು ನಿಮಗೆ ತಿಳಿದೇ ಇದೆ. ನಾನು ಹೇಳುವುದನ್ನು ಗಮನಿಸಿರಿ; ನಿಮ್ಮ ಶತ್ರುಗಳನ್ನು ಪ್ರೀತಿಸಿರಿ; ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥಿಸಿರಿ. ಇದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ನೀವು ಮಕ್ಕಳಾಗುವಿರಿ. ಅವರು ಸಜ್ಜನರ ಮೇಲೂ ದುರ್ಜನರ ಮೇಲೂ ತಮ್ಮ ಸೂರ್ಯನು ಉದಯಿಸುವಂತೆ ಮಾಡುತ್ತಾರೆ; ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆಗರೆಯುತ್ತಾರೆ. ನಿಮ್ಮನ್ನು ಪ್ರೀತಿಸುವವರನ್ನು ಮಾತ್ರ ನೀವು ಪ್ರೀತಿಸಿದರೆ ಅದರಿಂದೇನು ಫಲ? ಸುಂಕ ವಸೂಲಿಮಾಡುವವರೂ ಹಾಗೆ ಮಾಡುವುದಿಲ್ಲವೇ? ನಿಮ್ಮ ಮಿತ್ರರನ್ನು ಮಾತ್ರ ನೀವು ಗೌರವಿಸಿದರೆ ಅದರಲ್ಲೇನು ವಿಶೇಷ? ಅನ್ಯಜನರೂ ಹಾಗೆ ಮಾಡುತ್ತಾರಲ್ಲವೇ? ಆದುದರಿಂದ ಸ್ವರ್ಗದಲ್ಲಿರುವ ನಿಮ್ಮ ತಂದೆ ಪರಿಪೂರ್ಣರಾಗಿರುವಂತೆ ನೀವೂ ಪರಿಪೂರ್ಣರಾಗಿರಿ.”
ಮನಸ್ಸಿಗೊಂದಿಷ್ಟು : ’ಶತ್ರುವಿಗಾಗಿ ಪ್ರೀತಿಸಿ’ ಎಂದ ಯೇಸು ’ನಿಮ್ಮನ್ನು ಪೀಡಿಸುವವರಿಗಾಗಿ ಪ್ರಾರ್ಥಿಸಿರಿ’ ಎನ್ನುತ್ತಾ ಮತ್ತೊಂದು ಕಠಿಣವಾದ ಮೆಟ್ಟಿಲನ್ನು ಏರಲು ಹೇಳುತ್ತಿದ್ದಾರೆ. ಅದು ಕಠಿಣ ಎನಿಸಿದರೆ ಅವರ ಮುಂದಿನ ಮಾತು ನಮ್ಮ ಕಣ್ಣು ತೆರೆಸಬೇಕು. ಪಾಪಿ ಪುಣ್ಯವಂತರೆನ್ನದೆ ಎಲ್ಲರ ಮೇಲೆ ಬೆಳಕು, ಮಳೆ ಸುರಿಸುವ ದೇವರ ಕಾರುಣ್ಯದ ಒಂದಷ್ಟು ಭಾಗವಾದರೂ ನಮ್ಮ ಹೃದಯಕ್ಕೆ ಬರಲು ನಾವು ಅವಕಾಶ ಮಾಡಿಕೊಡಬೇಕಾಗಿದೆ.
ಪ್ರಶ್ನೆ : ನಮ್ಮ ಶತ್ರುಗಳನ್ನು ಪ್ರೀತಿಸುವುದು ಕಷ್ಟವೋ? ಅವರಿಗಾಗಿ ಪ್ರಾರ್ಥಿಸಿವುದು ಹೆಚ್ಚು ಕಷ್ಟವೋ?
ಪ್ರಭುವೇ,
ಮಿತ್ರರಿಗಿಂತ ಶತ್ರುಗಳೇ ಹೆಚ್ಚು
ನಮ್ಮ ಆಲೋಚನೆಗಳಲ್ಲಿರಲು
ಅವರ ಪ್ರೀತಿಸಿ ಪ್ರಾರ್ಥಿಸಿ
ನಿಮ್ಮಂತೆ ಪರಿಪೂರ್ಣರಾಗಲು
ಅರಿವಿನ ಬೆಳಕಾಗಿ ನನ್ನಲ್ಲಿ ಬನ್ನಿ
ಒಲವಿನ ಮಳೆಯನ್ನು ತನ್ನಿ
No comments:
Post a Comment