ಮೊದಲನೇ ವಾಚನ: ಯೆರೆಮಿಯ: 18:18-20
ಆಗ ಜನರು, “ಬನ್ನಿ, ಈ ಯೆರೆವಿೂಯನ ವಿರುದ್ಧ ಒಳಸಂಚು ಮಾಡೋಣ. ಧರ್ಮೋಪದೇಶಕ್ಕೆ ಯಾಜಕರಿದ್ದಾರೆ. ಮಂತ್ರಾಲೋಚನೆಗೆ ಜ್ಞಾನಿಗಳಿದ್ದಾರೆ. ದೈವೋಕ್ತಿಗೆ ಪ್ರವಾದಿಯ ಕೊರತೆ ಎಂದಿಗೂ ಇಲ್ಲ. ಬನ್ನಿ, ಇವನ ಬಾಯಿ ಬಡಿಯೋಣ. ಇವನ ಯಾವ ಮಾತಿಗೂ ನಾವು ಕಿವಿಗೊಡಬೇಕಾಗಿಲ್ಲ,” ಎಂದುಕೊಂಡರು. ಯೆರೆವಿೂಯ: “ಸರ್ವೇಶ್ವರಾ, ನನ್ನ ಕಡೆಗೆ ಕಿವಿಗೊಡಿ. ನನ್ನೊಡನೆ ವಾದಿಸುವವರ ಮಾತನ್ನು ಗಮನಿಸಿ ನೋಡಿ. ಮಾಡಿದ ಮೇಲಿಗೆ ಕೇಡಿನ ಪ್ರತಿಫಲವೆ? ನನ್ನ ಪ್ರಾಣ ಹಿಡಿಯಲು ಗುಂಡಿಯನ್ನು ತೋಡಿದ್ದಾರೆ. ಅವರ ಮೇಲೆ ನಿಮಗಿದ್ದ ಕೋಪಾವೇಶವನ್ನು ಶಮನಗೊಳಿಸಲು ನಿಮ್ಮ ಮುಂದೆ ನಿಂತು ನಾನು ವಿನಂತಿಸಿದ್ದನ್ನು ನೆನಪಿಗೆ ತಂದುಕೊಳ್ಳಿ.
ಕೀರ್ತನೆ: 31:5-6, 14, 15-16
ಶ್ಲೋಕ: ಪ್ರಭೂ, ಕಾಪಾಡಲಿ ಎನ್ನನು ನಿನ್ನನಂತ ಪ್ರೇಮವು
ಶಭಸಂದೇಶ: ಮತ್ತಾಯ 20:17-18
ಯೇಸುಸ್ವಾಮಿ ಜೆರುಸಲೇಮಿನತ್ತ ಹೋಗುವಾಗ ದಾರಿಯಲ್ಲಿ, ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ಪ್ರತ್ಯೇಕವಾಗಿ ಕರೆದು, “ನೋಡಿ, ನಾವು ಜೆರುಸಲೇಮಿಗೆ ಹೋಗುತ್ತಿದ್ದೇವೆ. ಅಲ್ಲಿ ನರಪುತ್ರನನ್ನು ಮುಖ್ಯಯಾಜಕರ ಮತ್ತು ಧರ್ಮಶಾಸ್ತ್ರಿಗಳ ವಶಕ್ಕೆ ಒಪ್ಪಿಸುವರು. ಆತನು ಮರಣ ದಂಡನೆಗೆ ಅರ್ಹನೆಂದು ಅವರು ತೀರ್ಮಾನಿಸಿ ಪರಕೀಯರ ಕೈಗೊಪ್ಪಿಸುವರು. ಇವರು ಆತನನ್ನು ಪರಿಹಾಸ್ಯ ಮಾಡುವರು, ಕೊರಡೆಗಳಿಂದ ಹೊಡೆಯುವರು, ಮತ್ತು ಶಿಲುಬೆಗೇರಿಸುವರು. ಆತನಾದರೋ ಮೂರನೇ ದಿನ ಪುನರುತ್ಥಾನ ಹೊಂದುವನು,” ಎಂದರು. ಆಗ ಜೆಬೆದಾಯನ ಮಕ್ಕಳ ತಾಯಿ ತನ್ನ ಪುತ್ರರ ಸಮೇತ ಯೇಸುಸ್ವಾಮಿಯ ಬಳಿಗೆ ಬಂದಳು. “ತಮ್ಮಿಂದ ನನಗೊಂದು ಉಪಕಾರ ಆಗಬೇಕು,” ಎಂದು ಸ್ವಾಮಿಯ ಪಾದಕ್ಕೆರಗಿದಳು. “ನಿನ್ನ ಕೋರಿಕೆ ಏನು?” ಎಂದರು ಯೇಸು. ಅದಕ್ಕೆ ಅವಳು, “ತಮ್ಮ ಸಾಮ್ರಾಜ್ಯದಲ್ಲಿ, ನನ್ನ ಈ ಇಬ್ಬರು ಮಕ್ಕಳಲ್ಲಿ ಒಬ್ಬನು ತಮ್ಮ ಬಲಗಡೆಯಲ್ಲೂ ಇನ್ನೊಬ್ಬನು ತಮ್ಮ ಎಡಗಡೆಯಲ್ಲೂ ಆಸೀನರಾಗುವಂತೆ ಅಪ್ಪಣೆಯಾಗಬೇಕು,” ಎಂದು ಕೋರಿದಳು. ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ನೀವು ಕೋರಿಕೊಂಡದ್ದು ಏನೆಂದು ನಿಮಗೇ ತಿಳಿಯದು. ನಾನು ಕುಡಿಯಬೇಕಾದ ಪಾತ್ರೆಯಿಂದ ಕುಡಿಯಲು ನಿಮ್ಮಿಂದ ಆದೀತೆ?” ಎಂದು ಪ್ರಶ್ನಿಸಿದರು. “ಹೌದು, ಆಗುತ್ತದೆ,” ಎಂದು ಅವರು ಮರುನುಡಿದರು. ಆಗ ಯೇಸು, “ನನ್ನ ಪಾತ್ರೆಯಿಂದ ನೀವೇನೋ ಕುಡಿಯುವಿರಿ. ಆದರೆ ನನ್ನ ಬಲಗಡೆಯಲ್ಲಾಗಲೀ ಎಡಗಡೆಯಲ್ಲಾಗಲೀ ಆಸೀನರಾಗುವಂತೆ ಅನುಗ್ರಹಿಸುವುದು ನನ್ನದಲ್ಲ. ಅದು ಯಾರಿಗಾಗಿ ನನ್ನ ಪಿತನಿಂದ ಸಿದ್ಧಮಾಡಲಾಗಿದೆಯೋ ಅವರಿಗೇ ಸಿಗುವುದು,” ಎಂದು ನುಡಿದರು. ಉಳಿದ ಹತ್ತುಮಂದಿ ಶಿಷ್ಯರು ಇದನ್ನು ಕೇಳಿದಾಗ ಆ ಇಬ್ಬರು ಸಹೋದರರ ಮೇಲೆ ಸಿಟ್ಟುಗೊಂಡರು. ಯೇಸುವಾದರೋ, ಶಿಷ್ಯರೆಲ್ಲರನ್ನೂ ತಮ್ಮ ಬಳಿಗೆ ಕರೆದು, “ಲೋಕದ ಪ್ರಜಾಧಿಪತಿಗಳು ತಮ್ಮ ಪ್ರಜೆಗಳ ಮೇಲೆ ದರ್ಪದಿಂದ ದೊರೆತನ ಮಾಡುತ್ತಾರೆ; ಜನನಾಯಕರು ಎನ್ನಿಸಿಕೊಳ್ಳುವವರು ಜನರ ಮೇಲೆ ಅಧಿಕಾರ ಪ್ರದರ್ಶನ ಮಾಡುತ್ತಾರೆ. ಇದು ನಿಮಗೆ ಗೊತ್ತು. ನೀವು ಹಾಗಿರಬಾರದು. ನಿಮ್ಮಲ್ಲಿ ಶ್ರೇಷ್ಠನಾಗಿರಲು ಇಚ್ಛಿಸುವವನು ನಿಮಗೆ ಸೇವಕನಾಗಿರಲಿ. ಪ್ರಥಮನಾಗಿರಲು ಆಶಿಸುವವನು ನಿಮ್ಮ ದಾಸನಾಗಿರಲಿ. ಹಾಗೆಯೇ ನರಪುತ್ರನು ಸೇವೆ ಮಾಡಿಸಿಕೊಳ್ಳುವುದಕ್ಕೆ ಅಲ್ಲ, ಇತರರ ಸೇವೆ ಮಾಡುವುದಕ್ಕೂ ಸರ್ವರ ಉದ್ಧಾರಕ್ಕಾಗಿ ತನ್ನ ಪ್ರಾಣವನ್ನು ಈಡಾಗಿ ಕೊಡುವುದಕ್ಕೂ ಬಂದಿದ್ದಾನೆ,” ಎಂದು ಹೇಳಿದರು.
ಮನಸ್ಸಿಗೊಂದಿಷ್ಟು : ಯೇಸು ತಮ್ಮ ಘೋರ ಯಾತನೆ, ಸಾವು , ಪುನರುತ್ಥಾನದ ಬಗ್ಗೆ ಮಾತನಾಡುತ್ತಿದ್ದರೆ, ಶಿಷ್ಯರು ಅವರ ಮುಂದಿನ ರಾಜ್ಯಭಾರದಲ್ಲಿ ಯಾರು ಬಲಗಡೆ, ಎಡಗಡೆ ಕೂರಬೇಕು ಎನ್ನುವ ಚರ್ಚೆಯಲ್ಲಿದ್ದಾರೆ. ಇದು ಆ ಸಮಯಕ್ಕೆ ಅಭಾಸವಾಗಿ, ಸ್ವಾರ್ಥವಾಗಿ ಕಂಡರೂ ಇದರಲ್ಲಿ ಶಿಷ್ಯರ ಭರವಸೆ ಹಾಗು ಆಶಾಭಾವವನ್ನು ನಾವು ಕಾಣಬಹುದಾಗಿದೆ. ಯೇಸುವಿಗೆ ಯಾವುದೋ ಒಂದು ಅಪಾಯ ಜೆರುಸಲೇಮಿನಲ್ಲಿ
ಸಂಭವಿಸಬಹುದು ಎಂಬ ಅರಿವಿದ್ದರೂ ಕೊನೆಯ ಜಯ ಯೇಸುವಿನದೇ, ಅವರೇ ಮುಂದೆ ರಾಜರಾಗುತ್ತಾರೆ, ರಾಜ್ಯಭಾರ ಮಾಡುತ್ತಾರೆ ಎಂಬ ನಿರೀಕ್ಷೆ ಆ ಶಿಷ್ಯರದು. ಯೇಸುವಿನ ಬಗ್ಗೆ ನಮ್ಮದು ನಿರೀಕ್ಷೆ, ಆಶಾಭಾವ ಇದೆ ರೀತಿಯಾಗಿರಬೇಕಲ್ಲವೇ?
ಪ್ರಶ್ನೆ: ನಮ್ಮ ಮನಸ್ಸು ಶಿಷ್ಯರ ಮನಸ್ಸಿಗಿಂತ ಅದೆಷ್ಟು ದೂರ, ಭಿನ್ನ?
ಪ್ರಭುವೇ,
ಶ್ರೇಷ್ಠತೆಯ ಬಯಸಿಹೆ
ಸೇವಕನಾಗಿಸು
ಪ್ರಥಮನಾಗಲು ಕಾತರಿಸುತಿಹೆ
ದಾಸನಾಗಿಸು
ನಿನ್ನ ನಿಸ್ವಾರ್ಥ ಮನವನ್ನೇ
ನನ್ನ ಗುರಿಯಾಗಿಸು
ನಿನ್ನ ಶಿಲುಬೆಯಲ್ಲಿ
ನನ್ನ ಹೆಗಲಿಗೊಂದು
ಪಾಲಿರಿಸು
-ಚಿತ್ತ
No comments:
Post a Comment