18.03.2026 - ಪಿತನು ಮಾಡುವುದನ್ನೇ ಪುತ್ರನೂ ಮಾಡುವುದು

ಪ್ರವಾದಿ ಯೆಶಾಯನ ಗ್ರಂಥ 49:8-15



ತಮ್ಮ  ಪ್ರಜೆಗೆ  ಇಂತೆನ್ನುತ್ತಾರೆ  ಸರ್ವೇಶ್ವರಸ್ವಾಮಿ:ನಿನಗೆ  ದಯಪಾಲಿಸುವೆನು  ಸದುತ್ತರವನು  ಪ್ರಸನ್ನತೆಯ  ಕಾಲದಲಿ ಸಹಾಯ  ನೀಡುವೆನು  ರಕ್ಷಣೆಯ  ದಿನದಲಿ ನಿನ್ನನ್ನು  ಕಾಪಾಡಿ  ನೇಮಿಸುವೆನು  ಜನತೆಗೆ  ಸ್ಥಿರ  ಒಡಂಬಡಿಕೆಯಾಗಿ.'ಹೊರಟುಹೋಗಿರಿ'  ಎನ್ನುವೆನು  ಸೆರೆಯಾಳುಗಳಿಗೆ 'ಬೆಳಕಿಗೆ  ಬನ್ನಿರಿ'  ಎನ್ನುವೆನು  ಕತ್ತಲಲ್ಲಿರುವವರಿಗೆ ಪಾಳುಬಿದ್ದ  ಸೊತ್ತುಗಳನ್ನು  ಹಂಚಿಕೊಡುವೆನು  ಅವರಿಗೆ.ದೇಶವನ್ನು  ಪುನಃ  ತರುವೆನು  ಪೂರ್ವ  ಸ್ಥಿತಿಗೆ ದಾರಿಯುದ್ದಕ್ಕೂ  ಆಹಾರ  ಒದಗಿಸುವೆನು  ನನ್ನ  ಪ್ರಜೆಗೆ ಬೋಳು  ಬೆಟ್ಟಗಳೆಲ್ಲ  ಹುಲ್ಲುಗಾವಲುಗಳಾಗುವುವು  ನನ್ನಾ  ಮಂದೆಗೆ. ಇರದು  ಅವರಿಗೆ  ಹಸಿವು  ಬಾಯಾರಿಕೆ,  ಬಡಿಯವು  ಅವರಿಗೆ  ಬಿಸಿಲು  ಬೇಗೆ. ನಡೆಸುವೆನು  ನೀರುಕ್ಕುವ  ಚಿಲುಮೆಗಳ  ಬಳಿಗೆ,  ಕರುಣಾಕರನು  ದಾರಿತೋರಿಸುವನು  ಅವರಿಗೆ.ಸಮ  ದಾರಿಯಾಗಿಸುವೆನು  ನನ್ನ  ಬೆಟ್ಟಗುಡ್ಡಗಳನು,  ಎತ್ತರಿಸುವೆನು  ನನ್ನ  ರಾಜಮಾರ್ಗಗಳನು.ನೋಡಿ,  ಬರುತಿಹರು  ನನ್ನ  ಜನರು  ದೂರದಿಂದ ಹೌದು,  ಬರುತಿಹರು  ಉತ್ತರ  ಪಶ್ಚಿಮದಿಂದ,  ದಕ್ಷಿಣದ  ಆ  ಅಶ್ವಾನ್  ನಾಡಿನಿಂದ.ಹರ್ಷಧ್ವನಿಗೈ  ಆಕಾಶವೇ,  ಉಲ್ಲಾಸಪಡು  ಪೊಡವಿಯೇ,  ತಟ್ಟಾಡಿರಿ  ಬೆಟ್ಟಗುಡ್ಡಗಳೇ,ಏಕೆನೆ  ಸಂತೈಸಿಹನು  ಸರ್ವೇಶ್ವರ  ತನ್ನ  ಪ್ರಜೆಯನು,  ಕನಿಕರಿಸಿಹನು  ಶೋಷಿತರಾದ  ತನ್ನ  ಜನರನು.ಜೆರುಸಲೇಮಿನ  ಜನರಾದರೋ  ಇಂತೆಂದರು: 'ಸರ್ವೇಶ್ವರ  ನಮ್ಮನ್ನು  ಕೈಬಿಟ್ಟಿಹನು,  ಆ  ಸ್ವಾಮಿ  ನಮ್ಮನ್ನು  ಮರೆತುಬಿಟ್ಟಿಹನು.'ಹೆತ್ತ  ತಾಯಿಗೆ  ತನ್ನ  ಕಂದನ  ಪ್ರೀತಿ  ಬತ್ತಿಹೋಗುವುದುಂಟೆ?  ಆಕೆ  ತನ್ನ  ಮೊಲೆಗೂಸನ್ನು  ಮರೆತುಬಿಡುವುದುಂಟೆ?           ಒಂದು  ವೇಳೆ  ಆಕೆ  ಮರೆತರೂ  ನಾ   ನಿನ್ನನ್ನು  ಮರೆಯೆ."

ಪ್ರಭುವಿನ  ವಾಕ್ಯ.

ಕೀರ್ತನೆ, 145: 8-9, 14-15, 18-19,  v. 8

ಶ್ಲೋಕ:  ಪ್ರಭು ದಯಾನಿಧಿ, ಕೃಪಾಸಾಗರನು| ಸಹನಶೀಲನು, ಪ್ರೀತಿಪೂರ್ಣನು||

1.  ಪ್ರಭು  ದಯಾನಿಧಿ, ಕೃಪಾಸಾಗರನು | ಸಹನಶೀಲನು,   ಪ್ರೀತಿಪೂರ್ಣನು||

ಪ್ರಭುವಿನ  ಕರುಣೆ  ಎಲ್ಲರ  ಮೇಲೆ| ಆತನ  ಕೃಪೆಯು  ಸೃಷ್ಟಿಯ  ಮೇಲೆ|| ಶ್ಲೋಕ

2.  ನುಡಿಯಲಿ  ಪ್ರಭು  ಸದಾ  ಪ್ರಾಮಾಣಿಕನು| ನಡೆಯಲಿ  ಆತನು  ಸದಾ  ಪ್ರೀತಿಮಯನು||

ಎತ್ತುವನಾತ  ಬಿದ್ದವರನ್ನೆಲ್ಲ| ಉದ್ಧರಿಪನು    ಕುಗ್ಗಿದವರನ್ನೆಲ್ಲ|| ಶ್ಲೋಕ

3.  ಪ್ರಭುವಿನ  ಮಾರ್ಗ  ಧರ್ಮಸಮ್ಮತ| ಆತನ  ಕಾರ್ಯವೆಲ್ಲ  ಪುನೀತ||

ಹತ್ತಿರ  ಇಹನು  ಪ್ರಭು  ಕರೆಯುವವರೆಲ್ಲರಿಗೆ| ಯಥಾರ್ಥವಾಗಿ  ಆತನನು  ಅರಸುವವರಿಗೆ|| ಶ್ಲೋಕ


ಯೊವಾನ್ನನು ಬರೆದ ಪವಿತ್ರ ಶುಭಸಂದೇಶ  5:17-30


ಆ  ಕಾಲದಲ್ಲಿ  ಯೆಹೂದ್ಯರ  ಆಕ್ಷೇಪಣೆಗೆ  ಉತ್ತರವಾಗಿ  ಯೇಸು,  "ನನ್ನ  ಪಿತ  ಸತತವೂ  ಕಾರ್ಯನಿರತರು.  ಅವರಂತೆಯೇ  ನಾನು  ಸದಾ  ಕಾರ್ಯನಿರತನಾಗಿದ್ದೇನೆ,"  ಎಂದು  ನುಡಿದರು.  ಯೇಸು  ಸಬ್ಬತ್ತಿನ  ನಿಯಮವನ್ನು  ಮುರಿದುದೇ  ಅಲ್ಲದೆ,  ದೇವರನ್ನು  ತನ್ನ  ಪಿತನೆಂದು  ಹೇಳಿಕೊಳ್ಳುತ್ತಾ,  ತನ್ನನ್ನೇ  ದೇವರಿಗೆ  ಸರಿಸಮ ಮಾಡಿಕೊಳ್ಳುತ್ತಿದ್ದಾನೆಂದು  ಯೆಹೂದ್ಯರು  ಅವರನ್ನು  ಕೊಲ್ಲಲು  ಮತ್ತಷ್ಟು  ಹವಣಿಸಿದರು.  ಯೇಸು  ಅವರನ್ನು  ಉದ್ದೇಶಿಸಿ  ಹೀಗೆಂದರು:  ನಾನು  ನಿಮಗೆ  ಸತ್ಯವಾಗಿ  ಹೇಳುತ್ತೇನೆ:  ಪುತ್ರನು  ತನ್ನಷ್ಟಕ್ಕೆ  ತಾನೇ  ಏನೂ  ಮಾಡಲಾರನು;  ಪಿತನು  ಮಾಡುವುದನ್ನು  ಕಂಡು  ತಾನೂ  ಹಾಗೆಯೇ  ಮಾಡುತ್ತಾನೆ.  ಪಿತನು  ಮಾಡುವುದನ್ನೇ  ಪುತ್ರನೂ  ಮಾಡುವುದು.  ಪುತ್ರನೆಂದರೆ  ಪಿತನಿಗೆ  ಪ್ರೀತಿ.  ಆದುದರಿಂದ  ತಾವು  ಮಾಡುವುದನ್ನೆಲ್ಲಾ  ಪುತ್ರನಿಗೆ  ತೋರಿಸುತ್ತಾರೆ.  ಇದಲ್ಲದೆ  ಇನ್ನೂ  ಎಷ್ಟೋ  ಮಿಗಿಲಾದ  ಕಾರ್ಯಗಳನ್ನು  ಪುತ್ರನಿಗೆ  ತೋರಿಸುತ್ತಾರೆ.  ಅವುಗಳನ್ನು  ಕಂಡು  ನೀವು  ಬೆರಗಾಗುವಿರಿ.  ಪಿತನು  ಸತ್ತವರನ್ನು  ಎಬ್ಬಿಸಿ  ಅವರಿಗೆ  ಜೀವವನ್ನು  ಕೊಡುವಂತೆಯೇ  ಪುತ್ರನೂ  ತನಗೆ  ಬೇಕಾದವರಿಗೆ  ಜೀವವನ್ನು  ಕೊಡುತ್ತಾನೆ.  ಅಲ್ಲದೆ,  ಪಿತನು  ಯಾರನ್ನೂ  ತೀರ್ಪಿಗೆ  ಗುರಿಮಾಡುವುದಿಲ್ಲ.  ತೀರ್ಪುಕೊಡುವ  ಅಧಿಕಾರವನ್ನೆಲ್ಲಾ  ಅವರು  ಪುತ್ರನಿಗೆ  ಕೊಟ್ಟಿದ್ದಾರೆ.  ಏಕೆಂದರೆ,  ತಮ್ಮನ್ನು  ಗೌರವಿಸುವಂತೆಯೇ  ಜನರೆಲ್ಲರು  ಪುತ್ರನನ್ನು  ಗೌರವಿಸಬೇಕೆಂಬುದು  ಅವರ  ಬಯಕೆ.  ಪುತ್ರನನ್ನು  ಗೌರವಿಸದವನು  ಆತನನ್ನು  ಕಳುಹಿಸಿದ  ಪಿತನನ್ನೂ  ಗೌರವಿಸುವುದಿಲ್ಲ.  ನಾನು  ನಿಮಗೆ  ಸತ್ಯವಾಗಿ  ಹೇಳುತ್ತೇನೆ:  ನನ್ನ  ಮಾತಿಗೆ  ಕಿವಿಗೊಟ್ಟು  ನನ್ನನ್ನು  ಕಳುಹಿಸಿದ  ಆತನಲ್ಲಿ  ವಿಶ್ವಾಸವಿಡುವವನು  ನಿತ್ಯ  ಜೀವವನ್ನು  ಪಡೆದಿರುತ್ತಾನೆ.  ಅವನು  ಖಂಡನೆಗೆ  ಗುರಿಯಾಗನು;  ಅವನು  ಈಗಾಗಲೇ  ಸಾವನ್ನು  ದಾಟಿ  ಜೀವವನ್ನು  ಸೇರಿರುತ್ತಾನೆ.  ಸತ್ಯವಾಗಿ  ನಿಮಗೆ  ಮತ್ತೆ  ಹೇಳುತ್ತೇನೆ;  ಸತ್ತವರು  ದೇವರ  ಪುತ್ರನ  ಧ್ವನಿಯನ್ನು  ಕೇಳುವ  ಕಾಲ  ಬರುವುದು;  ಈಗಾಗಲೇ  ಬಂದಿದೆ;  ಈ  ಧ್ವನಿಯನ್ನು  ಕೇಳುವವರು  ಜೀವಿಸುವರು.  ಪಿತನು  ತಾವೇ  ಸ್ವಯಂ  ಜೀವಮೂಲವಾಗಿರುವಂತೆ  ಪುತ್ರನು  ಸಹ  ಸ್ವಯಂ  ಜೀವಮೂಲವಾಗಿರುವಂತೆ  ಕರುಣಿಸಿದ್ದಾರೆ.  ಅದೂ  ಅಲ್ಲದೆ,  ಆತನು  ನರಪುತ್ರನಾಗಿರುವ  ಕಾರಣ  ತೀರ್ಪನ್ನು  ಕೊಡುವ  ಹಕ್ಕನ್ನು  ಆತನಿಗೇ  ದಯಪಾಲಿಸಿದ್ದಾರೆ.  ಇದನ್ನು  ಕೇಳಿ  ನೀವು  ಬೆರಗಾಗುವುದು  ಬೇಡ.  ಸತ್ತು  ಸಮಾಧಿಯಲ್ಲಿರುವವರೆಲ್ಲರೂ  ಆತನ  ಧ್ವನಿಯನ್ನು  ಕೇಳುವ  ಕಾಲ  ಬರುವುದು.  ಹಾಗೆ  ಕೇಳಿದವರೆಲ್ಲಾ  ಸಮಾಧಿಯನ್ನು  ಬಿಟ್ಟು  ಎದ್ದುಬರುವರು;  ಸಜ್ಜನರು  ಸಜ್ಜೀವಕ್ಕಾಗಿ  ಪುನರುತ್ಥಾನರಾಗುವರು,  ದುರ್ಜನರು  ದಂಡನಾ ತೀರ್ಪಿಗಾಗಿ  ಪುನರುತ್ಥಾನರಾಗುವರು.  ನನ್ನಷ್ಟಕ್ಕೆ  ನಾನೇ  ಏನೂ  ಮಾಡಲಾರೆ.  ಪಿತನು  ನನಗೆ  ತಿಳಿಸಿದ  ಪ್ರಕಾರ  ನಾನು  ತೀರ್ಪು  ಕೊಡುತ್ತೇನೆ.  ಈ  ನನ್ನ  ತೀರ್ಪು  ನ್ಯಾಯಬದ್ದ  ಆದುದು.  ಏಕೆಂದರೆ,  ನಾನು  ನನ್ನ  ಸ್ವಂತ  ಇಚ್ಛೆಯನ್ನು  ನೆರವೇರಿಸದೆ  ಪಿತನ  ಚಿತ್ತವನ್ನೆ  ನೆರವೇರಿಸಲು  ಆಶಿಸುತ್ತೇನೆ."

ಪ್ರಭುವಿನ  ಶುಭಸಂದೇಶ

No comments:

Post a Comment

18.03.2026 - ಪಿತನು ಮಾಡುವುದನ್ನೇ ಪುತ್ರನೂ ಮಾಡುವುದು

ಪ್ರವಾದಿ ಯೆಶಾಯನ ಗ್ರಂಥ 49:8-15 ತಮ್ಮ  ಪ್ರಜೆಗೆ  ಇಂತೆನ್ನುತ್ತಾರೆ  ಸರ್ವೇಶ್ವರಸ್ವಾಮಿ:ನಿನಗೆ  ದಯಪಾಲಿಸುವೆನು  ಸದುತ್ತರವನು  ಪ್ರಸನ್ನತೆಯ  ಕಾಲದಲಿ ಸಹಾಯ  ನೀಡುವೆ...