ಮೊದಲನೇ ವಾಚನ: ಯೆಶಾಯ 65:17-21

ಕೀರ್ತನೆ: 30:2, 4, 5-6, 11-12, 13
ಶ್ಲೋಕ: ನಿನಗೆನ್ನ ವಂದನೆ ಪ್ರಭೂ, ನನ್ನನ್ನುದ್ಧರಿಸಿದೆ
ಶುಭಸಂದೇಶ: ಯೊವಾನ್ನ 4:43-54
ಎರಡು ದಿನಗಳಾದ ಬಳಿಕ ಯೇಸುಸ್ವಾಮಿ ಅಲ್ಲಿಂದ ಗಲಿಲೇಯಕ್ಕೆ ಹೊರಟರು. ಪ್ರವಾದಿಗೆ ಸ್ವಗ್ರಾಮದಲ್ಲಿ ಮರ್ಯಾದೆ ಇಲ್ಲ ಎಂದು ಅವರೇ ಸಾರಿದ್ದರು. ಗಲಿಲೇಯವನ್ನು ತಲುಪಿದೊಡನೆ ಜನರು ಅವರನ್ನು ಆದರದಿಂದ ಬರಮಾಡಿಕೊಂಡರು. ಏಕೆಂದರೆ, ಹಬ್ಬಕ್ಕಾಗಿ ಆ ಜನರು ಜೆರುಸಲೇಮಿಗೆ ಹೋಗಿದ್ದಾಗ ಹಬ್ಬದ ಸಮಯ ದಲ್ಲಿ ಯೇಸು ಮಾಡಿದ್ದನ್ನೆಲ್ಲಾ ನೋಡಿದ್ದರು. ಯೇಸು ಗಲಿಲೇಯದ ಕಾನಾ ಊರಿಗೆ ಮರಳಿ ಬಂದರು. ಅವರು ಹಿಂದೆ ನೀರನ್ನು ದ್ರಾಕ್ಷಾರಸವನ್ನಾಗಿ ಮಾಡಿದ್ದು ಅಲ್ಲಿಯೇ. ಕಫೆರ್ನವುಮಿನಲ್ಲಿ ರಾಜಸೇವೆಯಲ್ಲಿದ್ದ ಒಬ್ಬ ಅಧಿಕಾರಿಯ ಮಗನಿಗೆ ಕಾಯಿಲೆಯಾಗಿತ್ತು. ಯೇಸು ಜುದೇಯದಿಂದ ಗಲಿಲೇಯಕ್ಕೆ ಬಂದಿರುವುದನ್ನು ಕೇಳಿದ ಆ ಅಧಿಕಾರಿ, ಅವರ ಬಳಿಗೆ ಬಂದು, ಸಾವಿನ ದವಡೆಯಲ್ಲಿರುವ ತನ್ನ ಮಗನನ್ನು ಬಂದು ಬದುಕಿಸಬೇಕೆಂದು ಬೇಡಿಕೊಂಡನು. ಯೇಸು ಅವನಿಗೆ “ಸೂಚಕಕಾರ್ಯಗಳನ್ನೂ ಅದ್ಭುತಗಳನ್ನೂ ಕಂಡ ಹೊರತು ನೀವು ನಂಬುವುದಿಲ್ಲವಲ್ಲಾ,” ಎಂದರು. ಆದರೂ ಆ ಅಧಿಕಾರಿ, “ನನ್ನ ಮಗನು ಪ್ರಾಣಬಿಡುವ ಮೊದಲೇ ಬನ್ನಿ ಸ್ವಾವಿೂ,” ಎಂದು ಅಂಗಲಾಚಿದನು. ಆಗ ಯೇಸು, “ಹೋಗು, ನಿನ್ನ ಮಗನು ಬದುಕುತ್ತಾನೆ,” ಎಂದು ಹೇಳಿದರು. ಆ ಅಧಿಕಾರಿ ಯೇಸುವಿನ ಮಾತನ್ನು ನಂಬಿ ಹೊರಟನು. ಅವನು ಅರ್ಧದಾರಿಯಲ್ಲಿ ಇದ್ದಾಗಲೇ ಆಳುಗಳು ಅವನಿಗೆ ಎದುರಾಗಿ ಬಂದು, “ನಿಮ್ಮ ಮಗ ಬದುಕಿಕೊಂಡ,” ಎಂದು ತಿಳಿಸಿದರು. ಎಷ್ಟು ಹೊತ್ತಿಗೆ ತನ್ನ ಮಗ ಚೇತರಿಸಿಕೊಂಡನೆಂದು ಆ ಅಧಿಕಾರಿ ವಿಚಾರಿಸಿದಾಗ, “ನಿನ್ನೆ ಮಧ್ಯಾಹ್ನ: ಒಂದು ಗಂಟೆಗೆ ಅವನ ಜ್ವರ ಬಿಟ್ಟಿತು,” ಎಂದು ಆಳುಗಳು ಉತ್ತರಕೊಟ್ಟರು. ನಿನ್ನ ಮಗ ಬದುಕುತ್ತಾನೆ’ ಎಂದು ಯೇಸು ಹೇಳಿದ್ದ ಗಳಿಗೆಯಲ್ಲಿಯೇ ತನ್ನ ಮಗ ಬದುಕಿಕೊಂಡನೆಂದು ತಂದೆಗೆ ತಿಳಿಯಿತು. ಅವನೂ ಅವನ ಮನೆಯವರೆಲ್ಲರೂ ಯೇಸುವನ್ನು ವಿಶ್ವಾಸಿಸಿದರು. ಯೇಸು ಜುದೇಯದಿಂದ ಗಲಿಲೇಯಕ್ಕೆ ಬಂದು, ಮಾಡಿದ ಎರಡನೆಯ ಸೂಚಕಕಾರ್ಯ ಇದು.
ಮನಸ್ಸಿಗೊಂದಿಷ್ಟು : ಜರ್ಮನಿಯ ಕವಿ ಹೆನ್ರಿಚ್ ಹೇನ್, ಕೊಲೊನ್ ಎಂಬ ಸ್ಥಳದ ಸುಂದರವಾದ ಕೆಥೆಡ್ರಲ್ ದೇವಾಲಯವನ್ನು ಕಂಡು ಉದ್ಘಾರಿಸುತ್ತಾನೆ "ನಮ್ಮ ಹಿರಿಯರಲ್ಲಿ ಇದ್ಧ ವಿಶ್ವಾಸದಿಂದಾಗಿ ಇಂತಹ ಸುಂದರ ದೇವಾಲಯಗಳನ್ನು ಕಟ್ಟಲು ಸಾಧ್ಯವಾಯಿತು. ನಮ್ಮದಾದರೋ ಕೇವಲ ಅಭಿಪ್ರಾಯಗಳು. ಅಭಿಪ್ರಾಯಗಳಿಂದ ದೇವಾಲಯಗಳು ಏಳುವುದಿಲ್ಲ." ಇಂದಿನ ಶುಭ ಸಂದೇಶದಲ್ಲಿ ಅಧಿಕಾರಿ ವಿಶ್ವಾಸವಿಟ್ಟು, ತನ್ನ ಮಗನನ್ನು ಉಳಿಸಿಕೊಳ್ಳುತ್ತಾನೆ. ನಮ್ಮ ವಿಶ್ವಾಸ ಅದೆಷ್ಟೋ ಸಲ "ನೆರೆವೇರಬಹುದು" ಎಂಬಲ್ಲಿಯೇ ಇರುತ್ತದೆ. "ನೆರವೇರುತ್ತದೆ" ಎಂಬ ಅಚಲ ವಿಶ್ವಾಸವೇ ನಮ್ಮನ್ನು ದಡ ಸೇರಿಸುತ್ತದೆ.
ಪ್ರಶ್ನೆ : ನಮ್ಮಲ್ಲಿಯ ವಿಶ್ವಾಸದ ಪ್ರಮಾಣವೆಷ್ಟು?
ಪ್ರಭುವೇ,
ಕಲಿಸಿ ವಿಶ್ವಾಸವಿರಿಸಲು
ಎಲ್ಲವನ್ನು ನಿಮ್ಮ ಹಸ್ತದಲ್ಲಿರಿಸಲು
ಕಲಿಸಿ ವಿಶ್ವಾಸವಿರಿಸಲು
ಕರೆದೊಯ್ಯುವ ಕಡೆ
ನಡೆವ ಮಗುವಿನೊಲು
ಕಲಿಸಿ ವಿಶ್ವಾಸವಿರಿಸಲು
ಎಲ್ಲದರಲ್ಲೂ ನಿಮ್ಮನ್ನೇ
ನೆಚ್ಚುತ್ತಾ ಅವಲಂಬಿಸಲು
No comments:
Post a Comment