ಮೊದಲನೇ ವಾಚನ: ಯೆಶಾಯ 1:10, 16-20
ಸೊದೋಮಿನ ಅಧಿಪತಿಗಳಂತಿರುವವರೇ, ಸರ್ವೇಶ್ವರಸ್ವಾಮಿಯ ಮಾತನ್ನು ಕೇಳಿರಿ. ಗೊಮೋರದ ಪ್ರಜೆಗಳನ್ನು ಹೋಲುವವರೇ, ನಮ್ಮ ದೇವರ ಉಪದೇಶಕ್ಕೆ ಕಿವಿಗೊಡಿ. ತೊಳೆದುಕೊಳ್ಳಿರಿ, ನಿಮ್ಮನ್ನೆ ಶುದ್ಧ ಮಾಡಿಕೊಳ್ಳಿರಿ. ಕಣ್ಣಿಗೆ ಕಟ್ಟಿದಂತಿರುವ ನಿಮ್ಮ ದುಷ್ಕ್ರತ್ಯಗಳು ನೀಗಿ ಹೋಗಲಿ. ಕೇಡನ್ನು ಬಿಟ್ಟು ಒಳಿತನ್ನು ಕೈಗೊಳ್ಳಿರಿ. ನ್ಯಾಯನೀತಿಗಳಲ್ಲಿ ನಿರತರಾಗಿರಿ. ಹಿಂಸಾತ್ಮಕರನ್ನು ತಿದ್ದಿ ಸರಿಪಡಿಸಿರಿ. ಅನಾಥರಿಗೆ ನ್ಯಾಯದೊರಕಿಸಿರಿ. ವಿಧವೆಯರ ಪರವಾಗಿ ವಾದಿಸಿರಿ. ಸರ್ವೇಶ್ವರಸ್ವಾಮಿ ಇಂತೆನ್ನುತ್ತಾರೆ: “ಬನ್ನಿರಿ, ಈಗ ವಾದಿಸೋಣ. ನಿಮ್ಮ ಪಾಪಗಳು ಕಡುಗೆಂಪಾಗಿದ್ದರೂ ಹಿಮದಂತೆ ಬಿಳುಪಾಗುವುವು. ರಕ್ತಗೆಂಪಾಗಿದ್ದರೂ ಉಣ್ಣೆಯಂತೆ ಬೆಳ್ಳಗಾಗುವುವು. ನೀವು ಮನಃಪೂರ್ವಕವಾಗಿ ನನಗೆ ವಿಧೇಯರಾದರೆ ಈ ನಾಡಿನ ಸತ್ಫಲವನ್ನು ಸವಿಯುವಿರಿ. ಇದಕ್ಕೊಪ್ಪದೆ ಪ್ರತಿಭಟಿಸಿದ್ದೇ ಆದರೆ, ಸಾವಿಗೆ ತುತ್ತಾಗುವಿರಿ. ಸ್ವಾಮಿಯಾದ ನಾನೇ ಇದನ್ನು ನುಡಿದಿದ್ದೇನೆ.”
ಕೀರ್ತನೆ: 50:8-9, 16-17, 21, 23
ಶ್ಲೋಕ: ಸನ್ಮಾರ್ಗ ಹಿಡಿದವನಿಗೆ ತೋರುವೆ ಪರಮ ಜೀವೋದ್ಧಾರವನು.
ಶಭಸಂದೇಶ: ಮತ್ತಾಯ 23:1-12
ಜನ ಸಮೂಹವನ್ನೂ ತಮ್ಮ ಶಿಷ್ಯರನ್ನೂ ಉದ್ದೇಶಿಸಿ ಯೇಸುಸ್ವಾಮಿ ಇಂತೆಂದರು: “ಧರ್ಮಶಾಸ್ತ್ರಿಗಳೂ ಫರಿಸಾಯರೂ ಮೋಶೆಯ ಸ್ಥಾನದಲ್ಲಿ ಇದ್ದಾರೆ. ಆದುದರಿಂದ ಅವರು ನಿಮಗೆ ಉಪದೇಶಿಸುವುದನ್ನೆಲ್ಲಾ ಆಲಿಸಿರಿ ಹಾಗೂ ಪಾಲಿಸಿರಿ. ಆದರೆ ಅವರ ನಡತೆಯನ್ನು ಅನುಸರಿಸಬೇಡಿ. ಏಕೆಂದರೆ ಅವರು ನುಡಿದಂತೆ ನಡೆಯುವುದಿಲ್ಲ. ಭಾರವಾದ ಹಾಗೂ ಹೊರಲಾಗದ ಹೊರೆಗಳನ್ನು ಕಟ್ಟಿ ಮಾನವರ ಹೆಗಲ ಮೇಲೆ ಹೇರುತ್ತಾರೆ. ತಾವಾದರೋ ಅವನ್ನು ಕಿರು ಬೆರಳಿನಿಂದಲೂ ಮುಟ್ಟಲೊಲ್ಲರು. ತಾವು ಕೈಗೊಳ್ಳುವ ಕಾರ್ಯಗಳನ್ನೆಲ್ಲಾ ಜನರು ನೋಡಲೆಂದೇ ಮಾಡುತ್ತಾರೆ. ತಮ್ಮ ಧಾರ್ಮಿಕ ಹಣೆಪಟ್ಟಿಗಳನ್ನು ಅಗಲ ಮಾಡಿಕೊಳ್ಳುತ್ತಾರೆ. ಮೇಲಂಗಿಯ ಗೊಂಡೆಗಳನ್ನು ಉದ್ದುದ್ದ ಮಾಡಿಕೊಳ್ಳುತ್ತಾರೆ. ಔತಣಕೂಟಗಳಲ್ಲಿ ಶ್ರೇಷ್ಠ ಸ್ಥಾನಮಾನಗಳನ್ನೂ ಪ್ರಾರ್ಥನಾಮಂದಿರಗಳಲ್ಲಿ ಉನ್ನತ ಆಸನಗಳನ್ನೂ ಪೇಟೆಬೀದಿಗಳಲ್ಲಿ ವಂದನೋಪಚಾರಗಳನ್ನೂ ಅವರು ಅಪೇಕ್ಷಿಸುತ್ತಾರೆ. ಅದು ಮಾತ್ರವಲ್ಲ, ‘ಗುರುವೇ’ ಎಂದು ಕರೆಸಿಕೊಳ್ಳಲು ಇಚ್ಛಿಸುತ್ತಾರೆ. ಹಾಗೆ ಕರೆಸಿಕೊಳ್ಳುವುದು ನಿಮಗೆ ಬೇಡ. ನಿಮಗಿರುವ ಗುರುವು ಒಬ್ಬರೇ ಮತ್ತು ನೀವೆಲ್ಲರೂ ಸಹೋದರರು. ಇಹದಲ್ಲಿ ನೀವು ಯಾರನ್ನೂ ‘ಪಿತನೇ’ ಎಂದು ಸಂಬೋಧಿಸಬೇಡಿ. ಏಕೆಂದರೆ ನಿಮ್ಮ ಪಿತ ಒಬ್ಬರೇ. ಅವರು ಸ್ವರ್ಗದಲ್ಲಿದ್ದಾರೆ. ಒಡೆಯ ಎಂದೂ ಕರೆಯಿಸಿಕೊಳ್ಳಬೇಡಿ; ಏಕೆಂದರೆ ನಿಮಗಿರುವ ಒಡೆಯ ಒಬ್ಬನೇ, ‘ಆತನೇ ಕ್ರಿಸ್ತ.’ ನಿಮ್ಮಲ್ಲಿ ಶ್ರೇಷ್ಠನು ಯಾರೋ ಅವನು ನಿಮ್ಮ ಸೇವಕನಾಗಿರಬೇಕು. ತನ್ನನ್ನು ತಾನೇ ಮೇಲಕ್ಕೇರಿಸಿಕೊಳ್ಳುವ ಪ್ರತಿಯೊಬ್ಬನನ್ನೂ ದೇವರು ಕೆಳಗಿಳಿಸುವರು. ತನ್ನನ್ನು ತಾನೇ ತಗ್ಗಿಸಿಕೊಳ್ಳುವವನನ್ನು ದೇವರು ಮೇಲಕ್ಕೇರಿಸುವರು.
ಮನಸ್ಸಿಗೊಂದಿಷ್ಟು : ಇಂದಿನ ಮೊದಲನೆಯ ವಾಚನದಲ್ಲಿ ದೇವರಿಗೆ ವಿಧೇಯರಾಗಿರುವುದರ ಬಗ್ಗೆ ಯೆಶಾಯ ಹೇಳಿದರೆ, ಯೇಸು ಶುಭ ಸಂದೇಶದಲ್ಲಿ ವಿನಯತೆಯ ಮಹತ್ವದ ಬಗ್ಗೆ ಹೇಳುತ್ತಾರೆ. ಇವೆರಡನ್ನೂ ಕಡ್ಡಾಯವಾಗಿ ಪಾಲಿಸುವತ್ತ, ಅಭ್ಯಾಸಿಸುವತ್ತ ನಾವು ಹೆಜ್ಜೆ ಹಾಕಬೇಕು. ಏಕೆಂದರೆ ನಮ್ಮನ್ನೇ ತಗ್ಗಿಸುಕೊಳ್ಳುತ್ತಾ ದೇವರ ಕಣ್ಣಿನಲ್ಲಿ ಮೇಲೇರುವ ಫಲದಾಯಕ ಅವಕಾಶ ನಮ್ಮದಾಗಿದೆ.
ಪ್ರಶ್ನೆ: ನಮ್ಮನ್ನೇ ತಗ್ಗಿಸಿಕೊಳ್ಳಲು ನಮಗೇಕಿಷ್ಟು ಅಳುಕು, ಹಿಂಜರಿಕೆ?
ಪ್ರಭುವೇ,
ವಿನಯ ವಿಧೇಯತೆ
ಆಗಲಿ ನಮ್ಮ ಆದ್ಯತೆ
ತಗ್ಗಿಸಿಕೊಳ್ಳುವ ದೀನತೆ
ಆಗಲೀ ಹೃದಯದ ಹಣತೆ
-ಚಿತ್ತ
No comments:
Post a Comment