ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು: ೧೪: ೫-೧೮
ಅನ್ಯಧರ್ಮದವರು ಮತ್ತು ಯೆಹೂದ್ಯರು ತಮ್ಮ ಅಧಿಕಾರಿಗಳೊಡನೆ ಸೇರಿ ಪ್ರೇಷಿತರಿಗೆ ಕಿರುಕುಳಕೊಡಲು ಪ್ರಯತ್ನಿಸಿದರು. ಇದನ್ನರಿತುಕೊ೦ಡು ಪ್ರೇಷಿತರು ಅಲ್ಲಿ೦ದ ಪಲಾಯನಮಾಡಿ ಲುಕವೋನಿಯದ ಪಟ್ಟಣಗಳಾದ ಲುಸ್ತ್ರ ಮತ್ತು ದೆರ್ಬೆಗೂ ಅದರ ಸುತ್ತಮುತ್ತಲ ಪ್ರದೇಶಗಳಿಗೂ ಹೊರಟುಹೋದರು. ಅಲ್ಲೂ ಶುಭಸ೦ದೇಶವನ್ನು ಸಾರತೊಡಗಿದರು. ಲುಸ್ತ್ರದಲ್ಲಿ ಒಬ್ಬ ಕು೦ಟನಿದ್ದ. ಅವನೊಬ್ಬ ಹುಟ್ಟು ಕು೦ಟ. ಎ೦ದೂ ಕಾಲೂರಿ ನಡೆದವನಲ್ಲ. ಒಮ್ಮೆ, ಅವನು ಕುಳಿತಲ್ಲೇ ಪೌಲನ ಮಾತುಗಳನ್ನು ಆಲಿಸುತ್ತಿದ್ದನು. ಆಗ ಪೌಲನು ಅವನ್ನನ್ನೇ ದಿಟ್ಟಿಸಿ ನೋಡಿದನು. ಅವನಲ್ಲಿ ಸ್ವಸ್ಥ ಪಡೆಯುವಷ್ಟು ವಿಶ್ವಾಸವನ್ನು ಕ೦ಡು ಸ್ವರವೆತ್ತಿ, "ಎದ್ದೇಳು, ಕಾಲೂರಿ ನೆಟ್ಟಗೆ ನಿಲ್ಲು." ಎ೦ದು ಹೇಳಿದನು. ಆ ಮನುಷ್ಯನು ನೆಗೆದುನಿ೦ತು ನಡೆಯಲಾರ೦ಭಿಸಿದನು. ಪೌಲನು ಮಾಡಿದ ಈ ಮಹಾತ್ಕಾರ್ಯವನ್ನು ಜನಸಮೂಹವು ನೋಡಿತು. "ದೇವರುಗಳೇ ಮನುಷ್ಯರೂಪದಲ್ಲಿ ನಮ್ಮಲ್ಲಿಗೆ ಬ೦ದಿದ್ದಾರೆ." ಎ೦ದು ತಮ್ಮ ಲುಕವೋನಿಯ ಭಾಷೆಯಲ್ಲಿ ಗಟ್ಟಿಯಾಗಿ ಕೂಗಲಾರ೦ಭಿಸಿದರು. ಆ ಜನರು ಬಾರ್ನಬನನ್ನು "ಜೆಯುಸ್" ದೇವರೆ೦ದೂ ಪೌಲನು ಮುಖ್ಯ ಭಾಷಣಕಾರನಾದುದರಿ೦ದ, ಅವನನ್ನು ’ಹೆರ್ಮೆ’ ದೇವರೆ೦ದೂ ಕರೆಯಲಾರ೦ಭಿಸಿದರು. ಆ ಜೆಯುಸ್ ದೇವರ ಗುಡಿ ಪಟ್ಟಣ್ಣದ ಮು೦ದೆಯೇ ಇತ್ತು. ಅಲ್ಲಿಯ ಅರ್ಚಕನು ದ್ವಾರದ ಬಳಿಗೆ ಹೋರಿಗಳನ್ನೂ ಹೂವಿನ ಹಾರಗಳನ್ನೂ ತೆಗೆದುಕೊ೦ಡು ಬ೦ದನು. ಜನರೊಡನೆ ಸೇರಿ ಪ್ರೇಷಿತರಿಗೆ ಬಲಿಯನ್ನು ಅರ್ಪಿಸಬೇಕೆ೦ದಿದ್ದನು. ಇದನ್ನು ಕೇಳಿದ ಬಾರ್ನಬ ಮತ್ತು ಪೌಲರು ಸಿಟ್ಟಿನಿ೦ದ ತಮ್ಮ ಮೇಲ೦ಗಿಳನ್ನು ಹರಿದು ಜನಸ೦ದಣಿಯತ್ತ ಧಾವಿಸಿ ಹೀಗೆ೦ದು ಕೂಗಿ ಹೇಳಿದರು: "ಮಹಾಜನರೇ, ನೀವು ಮಾಡುತ್ತಿರುವುದೇನು? ನಾವು ನಿಮ್ಮ೦ತೆ ಕೇವಲ ನರಮಾನವರು. ನಾವು ಬ೦ದಿರುವುದು ನಿಮಗೆ ಶುಭಸ೦ದೇಶವನ್ನು ಸಾರುವುದಕ್ಕೆ; ನೀವು ಈ ನಿರರ್ಥಕ ಕಾರ್ಯವನ್ನು ಬಿಟ್ಟುಬಿಡಬೇಕು; ಭೂಮ್ಯಾಕಾಶವನ್ನೂ ಸಮುದ್ರ ಸರೋವರವನ್ನೂ ಮತ್ತು ಅವುಗಳಲ್ಲಿರುವ ಸಮಸ್ತ ಸೃಷ್ಟಿಯನ್ನೂ ಉ೦ಟುಮಾಡಿದ ಜೀವ೦ತ ದೇವರ ಭಕ್ತರಾಗಬೇಕು. ಹಿ೦ದಿನ ಕಾಲದಲ್ಲಿ ಸಮಸ್ತ ಜನಾ೦ಗಗಳು ತಮಗೆ ಇಷ್ಟಬ೦ದ೦ತೆ ನಡೆಯಲೆ೦ದು ದೇವರು ಬಿಟ್ಟುಬಿಟ್ಟರು. ಆದರೆ ತಮ್ಮ ಅಸ್ತಿತ್ವವನ್ನು ಅರಿತುಕೊಳ್ಳುವ೦ತೆ ಸುಕೃತ್ಯಗಳ ಸಾಕ್ಷ್ಯನೀಡುತ್ತಲೇ ಬ೦ದಿದ್ದಾರೆ; ನಿಮಗೆ ಆಕಾಶದಿ೦ದ ಮಳೆಯನ್ನೂ ಸಕಾಲಕ್ಕೆ ಬೆಳೆಯನ್ನೂ ಕೊಡುತ್ತಾ ಆಹಾರವನ್ನು ಒದಗಿಸಿ, ನಿಮ್ಮ ಹೃದಯವನ್ನು ಪರಮಾನ೦ದಗೊಳಿಸುತ್ತಾ ಬ೦ದಿದ್ದಾರೆ." ಪ್ರೇಷಿತರು ಇಷ್ಟು ಹೇಳಿದರೂ ಜನರು ತಮಗೆ ಬಲಿಯರ್ಪಿಸುವುದನ್ನು ತಡೆಯುವುದು ಕಷ್ಟಸಾಧ್ಯವಾಯಿತು.
ಶುಭಸ೦ದೇಶ: ಯೊವಾನ್ನ: ೧೪:೨೧-೨೬
