ಮೊದಲನೇ ವಾಚನ: ಯೆಶಾಯ 4:2-6
ಆ ದಿನದಂದು ಸರ್ವೇಶ್ವರಸ್ವಾಮಿ ಅನುಗ್ರಹಿಸುವ ಗಿಡಮರಗಳು ಸುಂದರವಾಗಿರುವುವು, ಸಮೃದ್ಧಿಯಾಗಿ ಬೆಳೆಯುವುವು. ಭೂಮಿಯ ಸಿರಿಸುಗ್ಗಿ ಅಳಿದುಳಿದ ಇಸ್ರಯೇಲರಿಗೆ ಹಿಗ್ಗನ್ನೂ ಹೆಮ್ಮೆಯನ್ನೂ ತರುವುದು. ಸಿಯೋನಿನಲ್ಲಿ ಉಳಿದವರು, ಜೆರುಸಲೇಮಿನಲ್ಲಿ ಮಿಕ್ಕವರು - ಅಂದರೆ ಜೀವಬಾಧ್ಯರ ಪಟ್ಟಿಯಲ್ಲಿ ಲಿಖಿತವಾಗಿರುವ ಜೆರುಸಲೇಮಿನ ನಿವಾಸಿಗಳೆಲ್ಲರು - ಪವಿತ್ರರೆನಿಸಿಕೊಳ್ಳುವರು. ಆಗ ಒಡೆಯರಾದ ಸ್ವಾಮಿ ನ್ಯಾಯ ನಿರ್ಣಯ ಮಾಡುವ ತಮ್ಮ ಚೈತನ್ಯದಿಂದಲೂ ಸುಟ್ಟು ಶುಚಿ ಮಾಡುವ ಚೈತನ್ಯದಿಂದಲೂ ಸಿಯೋನಿನ ಮಹಿಳೆಯರ ಕಲ್ಮಶವನ್ನು ತೊಡೆದು ಹಾಕುವರು. ಸಿಯೋನ್ ಪರ್ವತದ ಮೇಲೆಲ್ಲಾ, ಅಲ್ಲಿನ ಸಭಾ ಕೂಟಗಳ ಮೇಲೆಲ್ಲಾ ಹಗಲಲ್ಲಿ ಧೂಮ ಮೇಘವನ್ನು, ರಾತ್ರಿಯಲ್ಲಿ ಪ್ರಜ್ವಲಿಸುವ ಅಗ್ನಿ ಪ್ರಕಾಶವನ್ನು ಉಂಟು ಮಾಡುವರು. ದೇವರ ಮಹಿಮೆ ಛತ್ರಿಯಂತೆಯೂ ಚಪ್ಪರದಂತೆಯೂ ಎಲ್ಲರನ್ನು ಆವರಿಸುವುದು. ಅದು ಹಗಲಿನ ಬಿಸಿಲಲ್ಲಿ ನೆರಳನ್ನೂ ಮಳೆ ಗಾಳಿ ಬಂದಾಗ ಆಶ್ರಯವನ್ನೂ ಕೊಡುವ ಮಂಟಪವಾಗಿರುವುದು.
ಕೀರ್ತನೆ: 122:1-2, 3-4, 4-5, 6-7, 8-9
ಶ್ಲೋಕ: ಪ್ರಭುವಿನಾಲಯಕ್ಕೆ ಹೋಗೋಣ ಬಾ ಎಂದಾಗ ಆಯಿತೆನಗೆ ಆನಂದ, ಜನರೆನ್ನ ಕರೆದಾಗ
ಶುಭಸಂದೇಶ: ಮತ್ತಾಯ 8:5-11
ಯೇಸುಸ್ವಾಮಿ ಕಫೆರ್ನವುಮ್ ಊರಿಗೆ ಬಂದಾಗ ಶತಾಧಿಪತಿಯೊಬ್ಬನು ಅವರನ್ನು ಎದುರುಗೊಂಡನು. "ಪ್ರಭೂ, ನನ್ನ ಸೇವಕ ಮನೆಯಲ್ಲಿ ಪಾರ್ಶ್ವವಾಯು ರೋಗದಿಂದ ಹಾಸಿಗೆ ಹಿಡಿದಿದ್ದಾನೆ. ಬಹಳವಾಗಿ ನರಳುತ್ತಿದ್ದಾನೆ," ಎಂದು ವಿನಂತಿಸಿದನು. ಯೇಸು, "ನಾನೇ ಬಂದು ಅವನನ್ನು ಗುಣಪಡಿಸುತ್ತೇನೆ," ಎಂದರು. ಅದಕ್ಕೆ ಆ ಶತಾಧಿಪತಿ, "ಪ್ರಭುವೇ, ತಾವು ನನ್ನ ಮನೆಗೆ ಬರುವಷ್ಟು ಯೋಗ್ಯತೆ ನನಗಿಲ್ಲ. ತಾವು ಒಂದೇ ಒಂದು ಮಾತು ಹೇಳಿದರೆ ಸಾಕು, ನನ್ನ ಸೇವಕ ಸ್ವಸ್ಥನಾಗುವನು. ಏಕೆಂದರೆ, ನಾನೂ ಮತ್ತೊಬ್ಬರ ಕೈ ಕೆಳಗಿರುವವನು, ನನ್ನ ಅಧೀನದಲ್ಲೂ ಸೈನಿಕರಿದ್ದಾರೆ. ಅವರಲ್ಲಿ ಒಬ್ಬನಿಗೆ ನಾನು, "ಬಾ" ಎಂದರೆ ಬರುತ್ತಾನೆ. ಇನ್ನೊಬ್ಬನಿಗೆ, "ಹೋಗು" ಎಂದರೆ ಹೋಗುತ್ತಾನೆ. ಸೇವಕನಿಗೆ, "ಇಂಥದ್ದನ್ನು ಮಾಡು" ಎಂದರೆ ಮಾಡುತ್ತಾನೆ," ಎಂದನು. ಈ ಮಾತನ್ನು ಕೇಳಿದ್ದೇ ಯೇಸುವಿಗೆ ಅತ್ಯಾಶ್ಚರ್ಯವಾಯಿತು. ತಮ್ಮನ್ನು ಹಿಂಬಾಲಿಸಿ ಬರುತ್ತಿದ್ದ ಜನರನ್ನು ನೋಡಿ ಹೀಗೆಂದರು: "ಇಂಥ ಗಾಢ ವಿಶ್ವಾಸವನ್ನು ನಾನು ಇಸ್ರಯೇಲ್ ಜನರಲ್ಲಿ ಕೂಡ ಕಾಣಲಿಲ್ಲವೆಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಪೂರ್ವ ಪಶ್ಚಿಮ ದಿಕ್ಕುಗಳಿಂದ ಆನೇಕ ಜನರು ಬಂದು ಅಬ್ರಾಹಾಮ, ಇಸಾಕ, ಯಕೋಬರ ಸಮೇತ ಸ್ವರ್ಗಸಾಮ್ರಾಜ್ಯ ಹಬ್ಬದೂಟದಲ್ಲಿ ಭಾಗಿಗಳಾಗುವರು.
No comments:
Post a Comment