ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

03.10.23

ಮೊದಲನೆಯ ವಾಚನ: ಜೆಕರ್ಯ 8:20-23

ಸೇನಾಧೀಶ್ವರ ಸರ್ವೇಶ್ವರ ಇಂತೆನ್ನುತ್ತಾರೆ: ಇನ್ನು ಮುಂದೆ ಜನಾಂಗಗಳೂ ಹಲವು ನಗರ ನಿವಾಸಿಗಳೂ ಜೆರುಸಲೇಮಿಗೆ ಬರುವರು. ' ಸೇನಾಧೀಶ್ವರ ಸರ್ವೇಶ್ವರಸ್ವಾಮಿಯನ್ನು ಆರಾಧಿಸಲು, ಅವರ ಆಶೀರ್ವಾದವನ್ನು ಬೇಡಲು ದೇವಾಲಯಕ್ಕೆ ಹೋಗುತ್ತಿದ್ದೇವೆ. ನಮ್ಮೊಡನೆ ಬನ್ನಿ, ಹೋಗೋಣ ' ಎಂದು ಒಂದು ಊರಿನವರು ಮತ್ತೊಂದೂರಿನವರಿಗೆ ಹೇಳುವರು. ನಾನಾ ದೇಶಗಳಿಂದ, ಪ್ರಬಲ ರಾಷ್ಟ್ರಗಳಿಂದ ಸೇನಾಧೀಶ್ವರ ಸರ್ವೇಶ್ವರಸ್ವಾಮಿಯನ್ನು ಆರಾಧಿಸಿ, ಅವರ ಆಶೀರ್ವಾದವನ್ನು ಕೋರಲು ಜನರು ಜೆರುಸಲೇಮಿಗೆ ಬರುವರು. ಆ ದಿನದಲ್ಲಿ ವಿವಿಧ ಭಾಷೆಗಳನ್ನಾಡುವ ರಾಷ್ಟ್ರಗಳಿಂದ ಹತ್ತು ಹತ್ತು ಮಂದಿ ಬಂದು ಯೆಹೂದ್ಯನೊಬ್ಬನ ಸೆರಗನ್ನು ಹಿಡಿದುಕೊಂಡು, ' ನಾವೂ ನಿಮ್ಮೊಂದಿಗೆ ಬರುತ್ತೇವೆ. ಏಕೆಂದರೆ ದೇವರು ನಿಮ್ಮೊಡನೆ ಇದ್ದಾರೆ ಎಂಬ ಸುಧ್ಧಿಯನ್ನು ಕೇಳಿದ್ದೇವೆ ' ಎಂದು ಹೇಳುವರು. ಇದು ಸೇನಾಧೀಶ್ವರ ಸರ್ವೇಶ್ವರಸ್ವಾಮಿಯ ನುಡಿ.

ಕೀರ್ತನೆ 87:1-7
ಶ್ಲೋಕ: ದೇವರು ನಮ್ಮೊಡನೆ ಇದ್ದಾರೆ.

ಪವಿತ್ರ ಪರ್ವತದಲಿ ಕರ್ತನು ಸ್ಥಾಪಿಸಿಹನು ತನ್ನ ನಗರವನು|
ಯಕೋಬ ವಂಶದ ಸಕಲ ನಿವಾಸಿಗಳಿಗಿಂತ|
ಸಿಯೋನ್ ದ್ವಾರಗಳು ಆತನಿಗೆ ಸುಪ್ರೀತ||
ದೈವ ಶ್ರೀನಗರವೇ, ಕೇಳು ಇವನ್ನು|
ನಿನ್ನ ಕುರಿತ ಅತಿಶಯೋಕ್ತಿಗಳನು: ||

" ನನಗೆ ಮಣಿಯುವ ರಾಷ್ಟ್ರಗಳಲಿ|
ಈಜಿಪ್ಟ್, ಬಾಬೆಲ್ ದೇಶಗಳನ್ನು ಲೆಕ್ಕಿಸುವೆ||
ಜೆರುಸಲೇಮಿನ ನಿವಾಸಿಗಳಲಿ ಫಿಲಿಷ್ಟಿಯ, ಟೈರ್, ಎಥಿಯೋಪಿಯ ಜನ ಸೇರಿವೆ||
ಸಕಲ ಜನಾಂಗಗಳ ಜನನಿ ಸಿಯೋನ್ ನಗರವೇ|
ಅದನು ಸ್ಥಾಪಿಸಿದವ ಪರಾತ್ಪರ ಪ್ರಭುವೇ"||

ಪ್ರಭು ಪಟ್ಟಿಮಾಡುವಾಗ ಸಕಲ ಜಾತಿಜನಾಂಗಗಳನು|
ನಿನ್ನ ಜನಾಂಗವೆಂದೇ ಪರಿಗಣಿಸುವನು ಪ್ರತಿಯೊಂದನು||
ಗಾಯಕ ನರ್ತಕರೂ ಹಾಡುವರೀ ಹಾಡ|
ನಮ್ಮೆಲ್ಲರ ಜೀವದೊರೆತೆ ನೀನೇ ನೋಡ||

ಶುಭಸಂದೇಶ: ಲೂಕ 9:51-56

ಆ ಕಾಲದಲ್ಲಿ ಸ್ವರ್ಗರೋಹಣವಾಗುವ ದಿನಗಳು ಸಮೀಪಿಸಲು ಯೇಸು ಜೆರುಸಲೇಮಿಗೆ ಅಭಿಮುಖವಾಗಿ ಹೊರಡಲು ನಿರ್ಧರಿಸಿದರು. ಅಲ್ಲದೆ ತಮಗೆ ಮುಂದಾಗಿ ದೂತರನ್ನು ಕಳುಹಿಸಿದರು. ಇವರು ಹೊರಟು ಯೇಸುವಿಗೆ ಬೇಕಾದುದನ್ನು ಸಿದ್ದಮಾಡಲು ಸಮಾರಿಯದ ಒಂದು ಹಳ್ಳಿಗೆ ಬಂದರು. ಯೇಸು ಜೆರುಸಲೇಮಿಗೆ ಹೋಗುತ್ತಿದ್ದ ಕಾರಣ ಅವರನ್ನು ಅಲ್ಲಿಯ ಜನರು ಬರಗೊಳಿಸಲಿಲ್ಲ. ಇದನ್ನು ಕಂಡು ಶಿಷ್ಯರಾದ ಯಕೋಬ ಮತ್ತು ಯೊವಾನ್ನ, " ಪ್ರಭೂ, ಆಕಾಶದಿಂದ ಅಗ್ನಿಮಳೆ ಸುರಿದು ಇವರನ್ನು ನಾಶಮಾಡಲಿ ಎಂದು ನಾವು ಆಜ್ಞೆಮಾಡಬಹುದಲ್ಲವೇ ? " ಎಂದರು. ಯೇಸು ಅವರ ಕಡೆ ತಿರುಗಿ, " ನೀವು ಎಂಥ ಸ್ವಭಾವಿಗಳೆಂದು ನಿಮಗೇ ತಿಳಿಯದು. ನರಪುತ್ರನು ಬಂದಿರುವುದು ಮಾನವ ಜೀವಿಗಳ ವಿನಾಶಕ್ಕೆ ಅಲ್ಲ, ಉದ್ಧಾರಕ್ಕೆ, " ಎಂದು ಅವರನ್ನು ಖಂಡಿಸಿದರು. ಅನಂತರ ಯೇಸು ಮತ್ತು ಶಿಷ್ಯರು ಬೇರೆ ಹಳ್ಳಿಗೆ ಹೋದರು.

No comments:

Post a Comment