31.05.22 - "ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ!"

ಪೂಜ್ಯ ಕನ್ಯಾಮರಿಯಮ್ಮನವರು ಎಲೀಜಬೇತಳನ್ನು ಸಂಧಿಸಿದ್ದು

ಮೊದಲನೇ ವಾಚನ: ಜೆಫನ್ಯ 3:14-18

ಹರ್ಷಧ್ವನಿಗೈ, ಸಿಯೋನ್ ಕುವರಿಯೇ ಘೋಷಿಸು, ಇಸ್ರಯೇಲ್ ದೇಶವೇ, ಹೃತ್ಪೂರ್ವಕವಾಗಿ ಸಂತೋಷಿಸು, ಜೆರುಸಲೇಮ್ ನಗರವೇ, ತಪ್ಪಿಸಿಹನು ಸರ್ವೇಶ ನಿನಗೆ ವಿಧಿಸಿರುವ ದಂಡನೆಗಳನು ತಳ್ಳಿ ಹೊರಗಟ್ಟಿಹನು ನಿನ್ನ ಶತ್ರುಗಳನು ಇಸ್ರಯೇಲಿನ ರಾಜನಾದ ಸರ್ವೇಶ ಇಹನು ನಿನ್ನ ಮಧ್ಯೆ ನೀನಿರುವೆ ಇನ್ನೆಂದಿಗೂ ಕೇಡಿಗಂಜದೆ. ಜೆರುಸಲೇಮಿಗೆ ಈ ಪರಿ ಹೇಳುವರು ಆ ದಿನದೊಳು: "ಅಂಜಬೇಡ ಸಿಯೋನ್, ಸೋತು ಜೋಲುಬೀಳದಿರಲಿ ನಿನ್ನ ಕೈಗಳು." ಪ್ರಸನ್ನವಾಗಿಹನು ದೇವಾ, ಸರ್ವೇಶ ನಿನ್ನ ಮಧ್ಯೆ ಕೊಡುವನಾಶೂರ ನಿನಗೆ ರಕ್ಷಣೆ ಹರ್ಷಾನಂದಗೊಳ್ಳುವನು ನಿನ್ನ ವಿಷಯದಲ್ಲಿ ಪುನಶ್ಚೇತನಗೊಳಿಸುವನು ನಿನ್ನನ್ನು ಪ್ರಶಾಂತ ಪ್ರೀತಿಯಲಿ ಗಾನಗೀತೆಗಳಿಂದ ತೋಷಿಸುವನು ನಿನ್ನಲಿ ಹಬ್ಬಹುಣ್ಣಿಮೆಗಳ ತರದಲಿ. ತಡೆದುಬಿಡುವನು ಸರ್ವವಿನಾಶವನ್ನು ದೂರಮಾಡುವನು ನಿನ್ನಿಂದ ನಿಂದೆ ಅಪಮಾನವನು.

ಯೆಶಾಯ: 12:2-3, 4, 5-6
ಶ್ಲೋಕ: ಹಾಡಿರಿ ಹಾಡಿರಿ ಭಜನ ಇಸ್ರಯೇಲಿನಾ ಸ್ವಾಮಿ ಪರಮ ಪಾವನ

ಶುಭಸಂದೇಶ: ಲೂಕ 1:39-56

ಇದಾದ ಕೆಲವು ದಿನಗಳಲ್ಲೇ ಮರಿಯಳು ಪ್ರಯಾಣ ಹೊರಟು ಜುದೇಯದ ಗುಡ್ಡಗಾಡಿನಲ್ಲಿರುವ ಒಂದು ಊರಿಗೆ ತ್ವರೆಯಾಗಿ ಬಂದಳು ಅಲ್ಲಿ ಜಕರೀಯನ ಮನೆಗೆ ಹೋಗಿ ಎಲಿಜಬೇತಳನ್ನು ವಂದಿಸಿದಳು. ಮರಿಯಳ ವಂದನೆಯನ್ನು ಎಲಿಜಬೇತಳು ಕೇಳಿದ್ದೇ ತಡ, ಆಕೆಯ ಗರ್ಭದಲ್ಲಿದ್ದ ಶಿಶು ನಲಿದಾಡಿತು; ಎಲಿಜಬೇತಳು ಪವಿತ್ರಾತ್ಮಭರಿತಳಾಗಿ ಹರ್ಷೋದ್ಗಾರದಿಂದ ಹೀಗೆಂದಳು: "ಸ್ತ್ರೀಯರಲ್ಲೆಲ್ಲಾ ಧನ್ಯಳು ನೀನು; ನಿನ್ನ ಕರುಳ ಕುಡಿಯೂ ಧನ್ಯ! ನನ್ನ ಪ್ರಭುವಿನ ತಾಯಿ ನೀನು; ನನ್ನ ಬಳಿಗೆ ಬಂದುದು ಅದೆಂಥ ಭಾಗ್ಯ!ನಿನ್ನ ವಂದನೆಯ ದನಿ ನನ್ನಕಿವಿ ತಾಕಿದೊಡನೆ ನಲಿದಾಡಿತು ಆನಂದದಿಂದ, ನನ್ನ ಕರುಳ ಕುಡಿ! ನಂಬಿ ಧನ್ಯಳಾದೆ ನೀನು, ದೇವರಿಂದ ಬಂದ ವಾರ್ತೆ ನೆರವೇರಿಯೇ ತೀರುವುದೆಂದು." ಆಗ ಹೀಗೆಂದು ಮರಿಯಳು ಹೊಗಳಿದಳು. "ಎನ್ನ ಮನ ಮಾಡುತ್ತಿದೆ ಸರ್ವೇಶ್ವರನ ಸ್ತುತಿ! ಉಲ್ಲಾಸಿಸುತ್ತಿದೆ ಮುಕ್ತಿದಾತ ದೇವನಲಿ! ತನ್ನ ದಾಸಿಯ ದೀನತೆಯನು ನೆನಪಿಗೆ ತಂದುಕೊಂಡನಾತ! ಧನ್ಯಳೆಂದು ಹೊಗಳುವರೆನ್ನನ್ನು ಇಂದಿನಿಂದ ಸರ್ವ ಜನಾಂಗ! ಏಕೆನೆ ಮಾಡಿಹನೆನಗೆ ಸರ್ವಶಕ್ತನು ಮಹತ್ಕಾರ್ಯ! ನಿಜಕ್ಕೂ ಆತನ ನಾಮಧೇಯ ಪರಮಪೂಜ್ಯ! ಆತನಲ್ಲಿ ಭಯಭಕ್ತಿಯುಳ್ಳವರಿಗೆ!  ಆತನ ಪ್ರೀತಿ ತಲತಲಾಂತರದವರೆಗೆ! ಗರ್ವಹೃದಯಿಗಳನಾತ ಚದುರಿಸಿರುವನು! ಪ್ರದರ್ಶಿಸಿರುವನು ತನ್ನ ಬಾಹುಬಲವನ್ನು! ಇಳಿಸಿಹನು ಗದ್ದುಗೆಯಿಂದ ಘನಾಧಿಪತಿಗಳನು! ಏರಿಸಿರುವನು ಉನ್ನತಿಗೆ ದೀನದಲಿತರನು! ತೃಪ್ತಿಪಡಿಸಿರುವನಾತ ಹಸಿದವರನು ಮೃಷ್ಟಾನ್ನದಿ! ಹೊರದೂಡಿರುವನು ಸಿರಿವಂತರನು ಬರಿಗೈಯಲಿ! ನೆರವಾದನು ತನ್ನ ದಾಸ ಇಸ್ರಯೇಲನಿಗೆ! ಪೂರ್ವಜನರಿಗಿತ್ತ ವಾಗ್ದಾನದ ಮೇರೆಗೆ! ಮರೆಯಲಿಲ್ಲ ಆತ ಕರುಣೆತೋರಲು ಅಬ್ರಹಾಮನಿಗೆ! ಅವನ ಸಂತತಿಗೆ, ಯುಗಯುಗಾಂತರದವರೆಗೆ! ಮರಿಯಳು ಸುಮಾರು ಮೂರು ತಿಂಗಳು ಎಲಿಜಬೇತಳೊಡನೆ ತಂಗಿದ್ದು ತನ್ನ ಮನೆಗೆ ಹಿಂದಿರುಗಿದಳು.


No comments:

Post a Comment

15.07.2026 - ಯೇಸುಸ್ವಾಮಿ ಅದ್ಭುತ ಕಾರ್ಯಗಳನ್ನು ಹೇರಳವಾಗಿ ಮಾಡಿದ್ದರೋ ಆ ಪಟ್ಟಣಗಳ ಜನರೇ ಪಾಪಕ್ಕೆ ವಿಮುಖರಾಗಲಿಲ್ಲ

  ಮೊದಲನೇ ವಾಚನ: ಪ್ರವಾದಿ ಯೆಶಾಯನ ಗ್ರಂಥ 7:1-9 ಅದು ಆಹಾಜನ ಕಾಲ. ಇವನು ಯೋತಾಮನ ಮಗ, ಉಜ್ಜೀಯನ ಮೊಮ್ಮಗ, ಜುದೇಯದ ಅರಸ. ಇವನ ಕಾಲದಲ್ಲಿ ಸಿರಿಯದ ಅರಸ ರೆಚೀನ ಮತ್ತು ರೆಮ...