ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 5:34-42
ಆಗ ಆ ಸಭಾಸದಸ್ಯರಲ್ಲಿ ಒಬ್ಬನಾದ ಗಮಲಿಯೇಲ್ ಎಂಬ ಫರಿಸಾಯನು ಅಲ್ಲಿದ್ದನು. ಅವನೊಬ್ಬ ಗೌರವಾನ್ವಿತ ಮತ್ತು ಧರ್ಮಪಂಡಿತ. ಅವನು ಎದ್ದು ನಿಂತು ಪ್ರೇಷಿತರನ್ನು ಸ್ವಲ್ಪ ಹೊತ್ತು ಸಭೆಯಿಂದ ಹೊರಗೆ ಕಳುಹಿಸುವಂತೆ ಹೇಳಿ ಸಭೆಯನ್ನುದ್ದೇಶಿಸಿ, “ಇಸ್ರಯೇಲ್ ಸಬಾಸದಸ್ಯರೇ, ಇವರ ವಿರುದ್ಧ ನೀವು ಕೈಗೊಳ್ಳಬೇಕೆಂದಿರುವ ಕ್ರಮದ ಬಗ್ಗೆ ಎಚ್ಚರಿಕೆಯಿಂದಿರಿ. ಸ್ವಲ್ಪ ಕಾಲಕ್ಕೆ ಹಿಂದೆ ತೈದ ಎಂಬವನಿದ್ದ. ತಾನೊಬ್ಬ ಮಹಾಪುರುಷನು ಎಂದು ಹೇಳಿಕೊಳ್ಳುತ್ತಿದ್ದ. ಸುಮಾರು ನಾನೂರು ಮಂದಿ ಅವನ ಅನುಯಾಯಿಗಳಾದರು. ಅವನ ಕೊಲೆಯಾದದ್ದೇ, ಅವನನ್ನು ಹಿಂಬಾಲಿಸಿದವರೆಲ್ಲರೂ ಚದರಿಹೋದರು. ಅವನ ಪಕ್ಷ ನಿರ್ನಾಮವಾಯಿತು. ಅನಂತರ ಜನಗಣತಿಯ ಕಾಲದಲ್ಲಿ ಗಲಿಲೇಯದ ಯೂದ ಎಂಬವನು ಪ್ರಸಿದ್ಧಿಗೆ ಬಂದ. ತನ್ನೆಡೆಗೆ ಹಲವರನ್ನು ಆಕರ್ಷಿಸಿಕೊಂಡ. ಅವನೂ ಹತನಾದ. ಹಿಂಬಾಲಕರೆಲ್ಲರೂ ಚದುರಿಹೋದರು. ಆದುದರಿಂದ ನಾನು ನಿಮಗೆ ಹೇಳುವುದೇನೆಂದರೆ: ಈ ವ್ಯಕ್ತಿಗಳ ಗೊಡವೆಗೆ ಹೋಗಬೇಡಿ; ಇವರನ್ನು ಸುಮ್ಮನೆ ಬಿಟ್ಟುಬಿಡಿ. ಇವರ ಯೋಜನೆ ಅಥವಾ ಕಾರ್ಯ ಮಾನವಕಲ್ಪಿತವಾಗಿದ್ದರೆ ಅದರಷ್ಟಕ್ಕೆ ಅದೇ ನಾಶವಾಗುವುದು. ಇದು ದೈವಸಂಕಲ್ಪವಾಗಿದ್ದರೆ ಅವರನ್ನು ನಾಶಮಾಡಲು ನಿಮ್ಮಿಂದಾಗದು. ನೀವು ದೇವರಿಗೆ ವಿರುದ್ಧ ಹೋರಾಡಿದಂತೆ ಆದೀತು,” ಎಂದು ಹೇಳಿದನು. ಸಭಾಸದಸ್ಯರು ಗಮಲಿಯೇಲನ ಸಲಹೆಯನ್ನು ಅಂಗೀಕರಿಸಿದರು. ಪ್ರೇಷಿತರನ್ನು ಒಳಗೆ ಕರೆದು, ಚಾವಟಿಯಿಂದ ಹೊಡೆದು, ಇನ್ನು ಮೇಲೆ ಯೇಸುವಿನ ಹೆಸರಿನಲ್ಲಿ ಬೋಧಿಸಬಾರದೆಂದು ಕಟ್ಟಪ್ಪಣೆಮಾಡಿ ಅವರನ್ನು ಬಿಟ್ಟುಬಿಟ್ಟರು. ಯೇಸುವಿನ ನಾಮಕ್ಕೋಸ್ಕರ ಅಪಮಾನವನ್ನು ಅನುಭವಿಸುವ ಅರ್ಹತೆಯನ್ನು ಪಡೆದೆವೆಂದು ಪ್ರೇಷಿತರು ಸಂತೋಷಭರಿತರಾಗಿ ನ್ಯಾಯಸಭೆಯಿಂದ ಹೊರಬಂದರು. ಯೇಸುವೇ ಲೋಕೋದ್ದಾರಕನೆಂದು ಪ್ರತಿದಿನ ದೇವಾಲಯದಲ್ಲೂ ಮನೆಮನೆಗಳಲ್ಲೂ ಉಪದೇಶಿಸುವುದರಲ್ಲಿ ಹಾಗೂ ಸಾರುವುದರಲ್ಲಿ ನಿರತರಾದರು.
ಶುಭಸಂದೇಶ: ಯೊವಾನ್ನ 6:1-15
ಇಂದಿನ ಶುಭ ಸಂದೇಶವು ಹಳೆಯ ಒಡಂಬಡಿಕೆಯ ಪ್ರವಾದಿ ಎಲೀಷನ ಇದೇ ರೀತಿಯ ಘಟನೆಯನ್ನು (2 ಅರಸರು 4:42:44) ನೆನಪಿಸುತ್ತದೆ. ಈ ಶುಭ ಸಂದೇಶದ ಭಾಗದಲ್ಲಿ ನಾವು ಅನೇಕ ಪಾತ್ರಗಳನ್ನು ಕಾಣಬಹುದು. ಈ ಪಾತ್ರಗಳಲ್ಲಿ ನಾವು ಯಾವ ಪಾತ್ರಕ್ಕೆ ಹತ್ತಿರವಾಗಿದ್ದೇವೆ ಎಂಬುದಾಗಿ ಪ್ರಶ್ನಿಸಿಕೊಳ್ಳಲು ಸಹಾಯ ಮಾಡುತ್ತದೆ.
ಯೇಸುವನ್ನು ನೋಡಲು, ಅವರ ಮಾತುಗಳನ್ನು ಕೇಳಲು ಗುಣವಾಗಲು ಬಂದವರ ಜೊತೆ ಪಾಸ್ಕ ಹಬ್ಬಕ್ಕೆ ಹೊರಟಿದ್ದ ಪ್ರವಾಸಿಗರು ಎಲ್ಲರೂ ಅಲ್ಲಿ ಬಂದು ಸೇರಿದ್ದರು. ಯೇಸು ಜನರನ್ನು ನೋಡಿ ಮರುಕ ಗೊಳ್ಳುತ್ತಾರೆ ಅವರಿಗೆ ತಿನ್ನಲು ಏನಾದರೂ ನೀಡಬೇಕು ಎಂದುಕೊಳ್ಳುತ್ತಾರೆ. ಆದರೆ ಪರೀಕ್ಷಿಸಲೋ ಎಂಬಂತೆ ಫಿಲೀಪನನ್ನು ಕೇಳುತ್ತಾರೆ.
ಫೀಲಿಪ್ಪನದು ನಮ್ಮಂತೆಯೇ ಮನೋಭಾವ. ಅಲ್ಲಿ ಸೇರಿದ ದೊಡ್ಡ ಜನಸಮೂಹ, ಇರುವ ೨೦೦ ದಿನಾರಿಯಷ್ಟು ಸಣ್ಣ ಹಣ ಅವನನ್ನು ನಿರುತ್ಸಾಹಗೊಳಿಸುತ್ತದೆ. ಯೇಸುವೇ ತನ್ನ ಜೊತೆ ಇದ್ದಾರೆ ಎನ್ನುವುದನ್ನು ಆತ ಮರೆಯುತ್ತಾನೆ. ಅಂದ್ರೆಯ ಎಂದಿನಂತೆ ಉತ್ಸಾಹ ತೋರುತ್ತಾನೆ. 5 ರೊಟ್ಟಿ 2 ಮೀನು ಇಟ್ಟಿದ್ದ ಹುಡುಗನನ್ನು ಹುಡುಕಿ ಯೇಸುವಿನ ಬಳಿ ಕರೆ ತರುತ್ತಾನೆ. ಹುಡುಗ ತನ್ನ ಬಳಿಯಿದ್ದ ಆಹಾರವನ್ನು ಹಂಚಿಕೊಳ್ಳಲು ಒಪ್ಪುತ್ತಾನೆ. ಮುಂದಿನದು ಇತಿಹಾಸ. 5000ಕ್ಕಿಂತ ಹೆಚ್ಚಿನ ಜನರ ಹಸಿವು ನೀಗುತ್ತದೆ.
ಈ ಶುಭ ಸಂದೇಶದಲ್ಲಿ ಬರುವ ವಿವಿಧ ರೀತಿಯ ಜನರಲ್ಲಿ ನಾವು ಯಾವ ರೀತಿಯ ವ್ಯಕ್ತಿತ್ವದವರು ಎಂಬುದನ್ನು ಪ್ರಶ್ನಿಸಿಕೊಳ್ಳಬಹುದು. ಯೇಸುವಿನ ಮಾತನ್ನು ಕೇಳಲು ಮಾತ್ರ ಬಂದವರೇ, ಅವರ ಕಾರ್ಯಗಳನ್ನು ನೋಡಲು ಬಂದವರೇ? ನಿಜ ಪ್ರೀತಿಯಿಂದ ಹಾತೊರೆದು ಬಂದವರೇ? ಕೇವಲ ಕುತೂಹಲದಿಂದ ನೊಡಲು ಬಂದ ಪಯಣಿಗರೇ? ಅವರ ಅಗಾಧ ಮಹಿಮೆಯನ್ನು ಕಾಣದ ಫಿಲಿಪ್ ನಂಥವರೇ? ಅದ್ಭುತಕ್ಕೆ ಮುನ್ನುಡಿಯಾದ ಅಂದ್ರೆಯನಂಥವರೇ? ಹಂಚಿಕೊಳ್ಳಲು ಸಿದ್ಧನಾಗಿ ಅದ್ಭುತಕ್ಕೆ ಕಾರಣನಾದ ಆ ಹುಡುಗನಂತೆಯೇ?
ಕೊನೆಗೆ ತಮ್ಮ ಅದ್ಭುತ ಕಾರ್ಯದಿಂದ ಸೃಷ್ಟಿಯಾದ ಆಹಾರವು ಸ್ವಲ್ಪವೂ ಹಾಳಾಗದಂತೆ ಎಲ್ಲವನ್ನು ಯೇಸು ಒಟ್ಟುಗೂಡಿಸುತ್ತಾರೆ. ಅವರ ಅದ್ಭುತ ಹಸ್ತದಲ್ಲಿ ಬಾಳುತ್ತಿರುವ ನಮ್ಮ ಜೀವನ ಹಾಳಾಗದಂತೆ ಅವರಲ್ಲಿ ಒಟ್ಟುಗೂಡೋಣ
No comments:
Post a Comment