ಪೇತ್ರನು ಇತರ ಹನ್ನೊಂದು ಮಂದಿ ಪ್ರೇಷಿತರೊಡನೆ ಎದ್ದುನಿಂತು, ಜನಸಮೂಹವನ್ನು ಉದ್ದೇಶಿಸಿ, ಗಟ್ಟಿಯಾದ ಧ್ವನಿಯಿಂದ ಹೀಗೆಂದು ಪ್ರಬೋಧಿಸಿದನು: "ಯೆಹೂದ್ಯ ಸ್ವಜನರೇ, ಜೆರಸಲೇಮಿನ ಸಕಲ ನಿವಾಸಿಗಳೇ, ನನಗೆ ಕಿವಿಗೊಡಿ. ಈ ಘಟನೆಯ ಅರ್ಥ ನಿಮಗೆ ಮನದಟ್ಟಾಗಲಿ. ಇಸ್ರಯೇಲ್ ಬಾಂಧವರೇ, ನನ್ನ ಮಾತುಗಳನ್ನು ಆಲಿಸಿರಿ. ನಜರೇತಿನ ಯೇಸು ದೈವನಿಯಮಿತ ವ್ಯಕ್ತಿ ಎಂಬುದನ್ನು ದೇವರೇ ಅವರ ಮುಖಾಂತರ ನಡೆಸಿದ ಅದ್ಬುತಕಾರ್ಯಗಳಿಂದ, ಮಹತ್ಕಾರ್ಯಗಳಿಂದ ಹಾಗೂ ಸೂಚಕಕಾರ್ಯಗಳಿಂದ ನಿಮಗೆ ಸ್ಪಷ್ಟಪಡಿಸಲಾಗಿದೆ. ಇದು ನಿಮಗೆ ತಿಳಿದಿರುವ ವಿಷಯ. ದೇವರು ತಮ್ಮ ಸ್ಥಿರಸಂಕಲ್ಪದಲ್ಲಿ ಹಾಗೂ ಭವಿಷ್ಯತ್ ಜ್ಞಾನದಲ್ಲಿ ಯೇಸು ನಿಮ್ಮ ವಶವಾಗಬೇಕೆಂದು ಈ ಮೊದಲೇ ನಿರ್ಧರಿಸಿದ್ದರು. ನೀವು ಅವರನ್ನು ಪರಕೀಯರ ಕೈಗೊಪ್ಪಿಸಿ, ಶಿಲುಬೆಗೆ ಹಾಕಿಸಿ, ಕೊಲ್ಲಿಸೀದಿರಿ. ಆದರೆ ದೇವರು ಅವರನ್ನು ಮೃತ್ಯುಶೂಲೆಯಿಂದ ಬಿಡಿಸಿ ಎಬ್ಬಿಸಿದರು. ಕಾರಣ-ಅವರನ್ನು ಬಂಧಿಸಿಡುವುದು ಮೃತ್ಯುವಿಗೆ ಅಸಾಧ್ಯವಾಗಿತ್ತು. ಅವರನ್ನು ಕುರಿತು ದಾವೀದನು ಹೀಗೆಂದಿದ್ದಾನೆ:
'ಪ್ರಭು ಇಹನು ಎನ್ನ
ಕಣ್ಮುಂದೆ ಸತತ,
ನಾ ಹೆದರದಂತೆ ಆತನಿಹನು
ಎನ್ನ ಹತ್ತಿರ.
ಇದಕಾರಣ ಹರ್ಷಿಸಿತು
ಎನ್ನ ಹೃದಯ,
ತುಳುಕಿತು ಸಂತಸ ಎನ್ನ
ನಾಲಗೆಯಿಂದ,
ನಂಬಿ ನಿರೀಕ್ಷೆಯಿಂದಿರು
ವುದು ಎನ್ನ ಮರ್ತ್ಯದೇಹ.
ಏಕೆನೆ, ದೂಡಲಾರೆ
ಪಾತಾಳಕೆ ನೀನೆನ್ನ
ಜೀವಾತ್ಮವನು.
ಕೊಳೆಯಬಿಡಲಾರೆ
ನೀನೊಲಿದಾತನನು.
ಅಮರ ಜೀವಮಾರ್ಗವನೆನಗೆ
ತೋರ್ಪಡಿಸಿದೆ,
ನಿನ್ನ ಶ್ರೀ ಸಾನ್ನಿಧ್ಯ
ಸಂತಸದಿಂದೆನ್ನ
ಭರಿತನಾಗಿಸುವೆ.'
"ಪ್ರಿಯ ಸಹೋದರರೇ, ಪಿತಾಮಹ ದಾವೀದರಸನ ವಿಷಯದಲ್ಲಿ ನಾನು ನಿಮಗೆ ಸ್ಥಷ್ಟವಾಗಿ ಮಾತನಾಡಬೇಕಾಗಿದೆ. ಆತನು ಮೃತನಾದನು, ಆತನನ್ನು ಸಮಾಧಿಮಾಡಲಾಯಿತು. ನಿಮಗೆಲ್ಲರಿಗೆ ತಿಳಿದಿರುವ ಆತನ ಸಮಾಧಿ ನಮ್ಮ ಮಧ್ಯೆ ಇಂದಿನವರೆಗೂ ಇದೆ. ಆತನೊಬ್ಬ ಪ್ರವಾದಿಯೂ ಆಗಿದ್ದ. ತನ್ನ ಸಂತತಿಯಲ್ಲೇ ಒಬ್ಬನನ್ನು ಅರಸನನ್ನಾಗಿ ಮಾಡುವುದಾಗಿ ದೇವರು ಮಾಡಿದ್ದ ವಾಗ್ದಾನವನ್ನು ಆತನು ಮರೆತಿರಲಿಲ್ಲ. ಹೀಗಿರುವಲ್ಲಿ ಕ್ರಿಸ್ತಯೇಸುವಿನ ಪುನರುತ್ಥಾನವನ್ನು ಮುಂಚಿತವಾಗಿ ಅರಿತು ಅದರ ವಿಷಯವಾಗಿ ಹೀಗೆಂದು ಪ್ರವಾದನೆ ಮಾಡಿದ: 'ಆತನನ್ನು ಪಾತಾಳಕ್ಕೆ ದೂಡಲಿಲ್ಲ, ದೇಹ ಕೊಳೆತುಹೋಗಲು ಬಿಡಲಿಲ್ಲ. ಈ ಯೇಸುವನ್ನೇ ದೇವರು ಪುನರುತ್ಥಾನಗೊಳಿಸೀದ್ದಾರೆ, ಈ ಘಟನೆಗೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ. ಯೇಸು ದೇವರ ಬಲಪಾರ್ಶ್ವಕ್ಕೆ ಆರೋಹಿತರಾದರು. ಅವರು ತಮ್ಮ ಪಿತ ವಾಗ್ದಾನಮಾಡಿದ ಪವಿತ್ರಾತ್ಮ ಅವರನ್ನು ಪಡೆದು, ನಮ್ಮ ಮೇಲೆ ಸುರಿಸಿದ ಆ ವರವನ್ನೇ ನೀವು ಈಗ ನೋಡುತ್ತಿರುವುದು ಹಾಗೂ ಕೇಳುತ್ತಿರುವುದು."
ಕೀರ್ತನೆ 16:1-2, 5, 7-11
ಶ್ಲೋಕ: ನೀಡು ದೇವಾ ರಕ್ಷಣೆಯನು, ನಾ ನಿನಗೆ ಶರಣಾಗತನು.
ನೀಡು ದೇವಾ ರಕ್ಷಣೆಯನು|
ನಾ ನಿನಗೆ ಶರಣಾಗತನು||
"ನೀನೇ ನನ್ನೊಡೆಯ" ಎಂದು ನಾ ನುಡಿದೆ|
ನಿನ್ನ ಹೊರತು ನನಗಿಲ್ಲ ಒಳಿತು ಎಂದೆ||
ನನ್ನ ಸ್ವತ್ತೂ ಸ್ವಾಸ್ಥ್ಯವೂ ನೀನೇ|
ನಿನ್ನ ಕೈಯಲ್ಲಿದೆ ಪ್ರಭೂ, ನನ್ನ ವಿಮೆ||
ಪ್ರಭುವಿಗೆನ್ನ ಧನ್ಯವಾದ - ಆತನೇ ನನಗೆ ಮಾರ್ಗದರ್ಶಕ|
ಅಂದಕಾರದೊಳೂ ನನ್ನ ಮನಸ್ಸಾಕ್ಷಿಯೇ ನನಗೆ ಬೋಧಕ||
ಇರಿಸಿಕೊಳ್ಳುವೆ ಪ್ರಭುವನು ಸತತ ನನ್ನೆದುರಿಗೆ|
ಆತನಿರಲು ಬಲಕ್ಕೆ ನನಗೆಲ್ಲಿಯದು ಹೆದರಿಕೆ?||
ಇದು ಕಾರಣ ಹರ್ಷದಿಂದಿದೆ ಎನ್ನಯ ಹೃದಯ|
ಆನಂದಗೊಂಡಿದೆ ಮನ ಸುರಕ್ಷಿತವಿದೆ ಕಾಯ||
ಏಕೆನೆ ದೂಡುವುದಿಲ್ಲ ನೀನು ಎನ್ನನು ಅಧೋಲೋಕಕೆ|
ಬಿಟ್ಟುಕೊಡುವುದಿಲ್ಲ ನಿನ್ನ ಈ ಭಕ್ತನನು ಪಾತಾಳಕೆ||
ತೋರ್ಪಡಿಸುವೆ ಎನಗೆ ಅಮರ ಜೀವಮಾರ್ಗವನು|
ನಿನ್ನ ಸನ್ನಿಧಿ ಕೊಡುವುದು ಪರಮಾನಂದವನು|
ನಿನ್ನ ಬಲಗೈ ನೀಡುವುದು ಭಾಗ್ಯವನು||
ಘೋಷಣೆ ಕೀರ್ತನೆ 118:24
ಅಲ್ಲೆಲೂಯ, ಅಲ್ಲೆಲೂಯ ! ಪ್ರಭುವೇ ನಿಯೋಜಿಸಿದ ದಿನವಿದು | ಷರ್ಷಿಸಿ ಆನಂದಿಸೋಣ ಇಂದು || ಅಲ್ಲೆಲೂಯ !
ಶುಭಸಂದೇಶ: ಮತ್ತಾಯ 28:8-15
ಆ ಕಾಲದಲ್ಲಿ ಮಹಿಳೆಯರು ಭಯಮಿಶ್ರಿತ ಆನಂದದಿಂದ ಸಮಾಧಿಯನ್ನು ಬಿಟ್ಟು ಕೂಡಲೇ ಹೊರಟರು. ಶಿಷ್ಯರಿಗೆ ಈ ಸಮಾಚಾರವನ್ನು ಮುಟ್ಟಿಸಲು ಧಾವಿಸಿದರು. ತಟ್ಟನೆ, ಯೇಸುವೇ ಅವರನ್ನು ಎದುರುಗೊಂಡು, "ನಿಮಗೆ ಶುಭವಾಗಲಿ! ಎಂದರು. ಆ ಮಹಿಳೆಯರು ಹತ್ತಿರಕ್ಕೆ ಬಂದು, ಅವರ ಪಾದಕ್ಕೆರಗಿ ಪೂಜಿಸಿದರು. ಆಗ ಯೇಸು ಅವರಿಗೆ, "ಭಯಪಡಬೇಡಿ, ನನ್ನ ಸೋದರರ ಬಳಿಗೆ ಹೋಗಿ ಅವರು ಗಲಿಲೇಯಕ್ಕೆ ಹೋಗಬೇಕೆಂದೂ ಅಲ್ಲಿ ಅವರು ನನ್ನನ್ನು ಕಾಣುವರೆಂದೂ ತಿಳಿಸಿರಿ, " ಎಂದು ಹೇಳಿದರು. ಇತ್ತ ಆ ಮಹಿಳೆಯರು ಹೋಗುತ್ತಿದ್ದಂತೆ, ಅತ್ತ ಕಾವಲಕಗಾರರಲ್ಲಿ ಕೆಲವರು ನಗರಕ್ಕೆ ಬಂದು ನಡೆದ ಸಂಗತಿಯನ್ನೆಲ್ಲಾ ಮುಖ್ಯ ಯಾಜಕರಿಗೆ ವರದಿ ಮಾಡಿದರು. ಇವರು ಪ್ರಮುಖರೊಂದಿಗೆ ಸಭೆ ಸೇರಿ ಒಂದು ಸಂಚುಹೂಡಿದರು. ಸೈನಿಕರಿಗೆ ಭಾರಿ ಲಂಚ ಕೊಟ್ಟು, " ಅವನ ಶಿಷ್ಯರು ರಾತ್ರಿ ವೇಳೆಯಲ್ಲಿ ಬಂದು, ನಾವು ನಿದ್ರೆಮಾಡುತ್ತಿದ್ದಾಗ ಅವನನ್ನು ಕದ್ದ ಕೊಂಡು ಹೋದರೆಂದು ಜನರಿಗೆ ಹೇಳಿರಿ, ಈ ಸುದ್ದಿ ರಾಜ್ಯಪಾಲನ ಕಿವಿಗೆ ಬಿದ್ದರೆ, ನಾವು ಅವರನ್ನು ಸಮಾಧಾನ ಪಡಿಸುತ್ತೇವೆ, ನಿಮಗೇನೂ ಆಗದಂತೆ ನೋಡಿಕೊಳ್ಳುತ್ತೇವೆ, "ಎಂದು ಹೇಳಿದರು. ಸೈನಿಕರು ಲಂಚವನ್ನು ತೆಗೆದುಕೊಂಡು ತಮಗೆ ಹೇಳಿ ಕೋಟ್ಟಂತೆಯೇ ಮಾಡಿದರು. ಈ ಕಟ್ಟುಕತೆ ಯೆಹೂದ್ಯರಲ್ಲಿ ಹಬ್ಬಿ ಇಂದಿನವರೆಗೂ ಪ್ರಚಲಿತವಾಗಿದೆ.
No comments:
Post a Comment