ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 5:27-33
ಕೀರ್ತನೆ: 34:2, 9, 17-18, 19-20
ಶ್ಲೋಕ: ನಿರ್ಗತಿಕನು ಮೊರೆಯಿಡಲು ಪ್ರಭು ಕಿವಿಗೊಟ್ಟನು
ಶುಭಸಂದೇಶ: ಯೊವಾನ್ನ 3:31-36
ಸ್ನಾನಿಕ ಯೊವಾನ್ನನು ತನ್ನ ಶಿಷ್ಯರಿಗೆ ಹೀಗೆಂದು ಹೇಳಿದನು: "ಮೇಲಿನಿಂದ ಬಂದವನೇ ಎಲ್ಲರಿಗಿಂತ ಮೇಲಾದವನು. ಇಹಲೋಕದಿಂದ ಬಂದವನಾದರೋ ಈ ಲೋಕಕ್ಕೆ ಸೇರಿದವನು; ಅವನು ಲೌಕಿಕವಾದುದನ್ನೇ ಹೇಳುವವನು. ಸ್ವರ್ಗದಿಂದ ಬಂದವನಾದರೋ ಸರ್ವರಿಗೂ ಶ್ರೇಷ್ಠನು. ಆತನು ತಾನು ಕಂಡದ್ದನ್ನೂ ಕೇಳಿದ್ದನ್ನೂ ಕುರಿತೇ ಸಾಕ್ಷಿ ಹೇಳುತ್ತಾನೆ. ಆದರೂ ಆತನ ಮಾತನ್ನು ಯಾರೂ ಅಂಗೀಕರಿಸುವುದಿಲ್ಲ. ಆತನ ಮಾತನ್ನು ಅಂಗೀಕರಿಸುವವನು ದೇವರು ಸತ್ಯಸ್ವರೂಪಿ ಎಂದು ಸಾದೃಶ್ಯಪಡಿಸುತ್ತಾನೆ. ದೇವರು ಕಳುಹಿಸಿದಾತನು ದೇವರ ಮಾತುಗಳನ್ನೇ ಆಡುತ್ತಾನೆ. ಏಕೆಂದರೆ ದೇವರು ಆತನಿಗೆ ಪವಿತ್ರಾತ್ಮ ಅವರನ್ನು ಪೂರ್ಣವಾಗಿ ಕೊಟ್ಟಿರುತ್ತಾರೆ. ಪಿತ ಪುತ್ರನನ್ನು ಪ್ರೀತಿಸಿ ಸರ್ವಸ್ವವನ್ನೂ ಆತನ ಕೈಗೆ ಕೊಟ್ಟಿದ್ದಾರೆ. ಪುತ್ರನಲ್ಲಿ ವಿಶ್ವಾಸವಿಟ್ಟವನು ನಿತ್ಯಜೀವವನ್ನು ಪಡೆದಿರುತ್ತಾನೆ; ಪುತ್ರನಿಗೆ ಶರಣಾಗದವನು ನಿತ್ಯಜೀವವನ್ನು ಸವಿಯನು. ಅವನು ದೇವರ ಕೋಪಾಗ್ನಿಗೆ ಗುರಿಯಾಗುತ್ತಾನೆ.
ಮನಸಿಗೊಂದಿಷ್ಟು : ನಿತ್ಯ ಜೀವವನ್ನು ಪಡೆಯುವುದು ಅಥವಾ ದೇವರ ಕೋಪಾಗ್ನಿಗೆ ಗುರಿಯಾಗುವ ಆಯ್ಕೆ ನಮ್ಮದೇ ಆಗಿದೆ. ಯೇಸುವಲ್ಲಿ ವಿಶ್ವಾಸವಿಟ್ಟವರು ನಿತ್ಯ ಜೀವವನ್ನು ಪಡೆಯುತ್ತಾರೆ ಎನ್ನುವುದು ನಿಜ. ಆದರೆ ’ ನಿತ್ಯ ಜೀವವನ್ನು ಪಡೆದಿರುತ್ತಾರೆ’ ಎನ್ನುತ್ತದೆ ಇಂದಿನ ಶುಭಸಂದೇಶ. ಅದರ ಅರ್ಥ ಯೇಸುವನ್ನು ಪೂರ್ಣ ಪ್ರಮಾಣದಲ್ಲಿ ವಿಶ್ವಾಸಿಸುತ್ತಾ ನಿತ್ಯ ಜೀವವನ್ನು ಪಡೆಯುವ ಪ್ರಕ್ರಿಯೆಯಲ್ಲಿ ನಾವೀಗಲೇ ಭಾಗಿಯಾಗಲು ಸಾಧ್ಯವಿದೆ.
No comments:
Post a Comment