ಮೊದಲನೆಯ ವಾಚನ: ಪ್ರೇಷಿತರ ಕಾರ್ಯಕಲಾಪಗಳಿಂದ ವಾಚನ 4:1-12
ಪೇತ್ರ ಮತ್ತು ಯೊವಾನ್ನ ಜನರನ್ನು ಉದ್ದೇಶಿಸಿ ಇನ್ನೂ ಮಾತನಾಡುತ್ತಿದ್ದರು. ಆಗ ಯಾಜಕರೂ ಮಹಾದೇವಾಲಯದ ದಳಪತಿಗಳೂ ಸದ್ದುಕಾಯರೂ ಅಲ್ಲಿಗೆ ಬಂದರು. ಯೇಸುವಿನ ಪುನರುತ್ಥಾನದ ಆಧಾರದ ಮೇಲೆ ಮೃತರಾದ ಎಲ್ಲರೂ ಪುನರುತ್ಥಾನ ಹೋಂದುವರು ಎಂದು ಈ ಇಬ್ಬರು ಪ್ರೇಷಿತರು ಬೋಧಿಸುತ್ತಿದ್ದರು. ಇದನ್ನು ಕೇಳಿ ಸಿಟ್ಟುಗೊಂಡಿದ್ದ ಅವರು ಪೇತ್ರ ಯೊವಾನ್ನರನ್ನು ಬಂಧಿಸಿದರು. ಆಗಲೇ ಹೊತ್ತು ಮೀರಿದ್ದರಿಂದ ಮಾರನೆಯ ದಿನದವರೆಗೆ ಅವರನ್ನು ಸೆರೆಮನೆಯಲ್ಲಿಟ್ಟರು. ಆದರೆ ಪ್ರೇಷಿತರ ಬೋಧನೆಯನ್ನು ಕೇಳಿದ ಅನೇಕರು ವಿಶ್ವಾಸಿಗಳಿದರು. ಭಕ್ತವಿಶ್ವಾಸಿಗಳ ಸಂಖ್ಯೆ ಸುಮಾರು ಐದು ಸಾವಿರಕ್ಕೆ ಏರಿತು. ಮಾರನೆಯ ದಿನ ಯೆಹೂದ್ಯ ಅಧಿಕಾರಿಗಳೂ ಪ್ರಮುಖರೂ ಧರ್ಮಶಾಸ್ತ್ರಿಗಳೂ ಜೆರುಸಲೇಮಿನಲ್ಲಿ ಸಭೆ ಸೇರಿದರು. ಪ್ರಧಾನ ಯಾಜಕ ಅನ್ನಾ ಹಾಗೂ ಕಾಯಫ, ಯೊವಾನ್ನ, ಅಲೆಕ್ಸಾಂಡರ್ ಮತ್ತು ಪ್ರಧಾನ ಯಾಜಕನ ಕುಟುಂಬದವರು ಆ ಸಭೆಯಲ್ಲಿ ಹಾಜರಿದ್ದರು. ಪ್ರೇಷಿತರನ್ನು ಸಭೆಯ ಮುಂದೆ ನಿಲ್ಲಿಸಿ, " ಇದೆಲ್ಲವನ್ನು ನೀವು ಯಾರ ಹೆಸರಿನಲ್ಲಿ ಮತ್ತು ಯಾವ ಅಧಿಕಾರದಿಂದ ಮಾಡಿದಿರಿ ? " ಎಂದು ಪ್ರಶ್ನಿಸಿದರು. ಪೇತ್ರನು ಪವಿತ್ರಾತ್ಮಭರಿತನಾಗಿ ಹೀಗೆಂದು ಉತ್ತರಕೊಟ್ಟನು : "ಜನರ ಅಧಿಕಾರಿಗಳೇ, ಪ್ರಮುಖರೇ, ನಾವು ಒಬ್ಬ ಕುಂಟನಿಗೆ ಮಾಡಿದ ಸತ್ಕಾರ್ಯದ ಬಗ್ಗೆ, ಅವನು ಸ್ವಸ್ಥನಾದುದು ಹೇಗೆಂದು ನೀವು ನಮ್ಮನ್ನು ಇಂದು ಪ್ರಶ್ನಿಸುತ್ತಿರುವಿರಿ. ನಿಮಗೂ ಇಸ್ರಯೇಲಿನ ಎಲ್ಲಾ ಜನರಿಗೂ ಈ ವಿಷಯ ತಿಳಿದಿರಲಿ : ನಜರೇತಿನ ಯೇಸುಕ್ರಿಸ್ತರ ನಾಮದ ಶಕ್ತಿಯಿಂದಲೇ ಈ ಮನುಷ್ಯನು ಪೂರ್ಣ ಗುಣಹೊಂದಿ ನಿಮ್ಮ ಮುಂದೆ ನಿಂತಿದ್ದಾನೆ. ನೀವು ಶಿಲುಬೆಗೇರಿಸಿ ಕೊಂದದ್ದು ಈ ಯೇಸುವನ್ನೇ. ದೇವರು ಆವರನ್ನು ಪುನಲುಗೊಳಿಸಿದ್ದಾರೆ. 'ಮನೆಕಟ್ಟುವವರಾದ ನೀವು ಬೇಡವೆಂದು ಮೂಲೆಗೆಸೆದ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು' ಎಂದು ಬರೆದಿರುವುದು ಇವರನ್ನು ಕುರಿತೇ. ಇವರಿಂದಲ್ಲದೆ ಬೇರಾರಿಂದಲೂ ನಮಗೆ ಜೀವೋದ್ಧಾರವಿಲ್ಲ. ಇವರ ನಾಮವನ್ನು ಬಿಟ್ಟರೆ ಈ ಧರೆಯಲ್ಲಿರುವ ಬೇರೆ ಯಾವ ನಾಮದಿಂದಲೂ ನಾವು ಜೀವೋದ್ಧಾರ ಹೊಂದುವಂತಿಲ್ಲ."
ಕೀರ್ತನೆ 118:1-2, 4, 22-27.
ಶ್ಲೋಕ: ಮನೆಕಟ್ಟುವವರು ಮೂಲೆಗೆಸದ ಕಲ್ಲು, ಆಯಿತು ನೋಡು, ಮುಖ್ಯವಾದ ಮೂಲೆಗಲ್ಲು.
ಸಲ್ಲಿಸಿ ನೀವೆಲ್ಲ ಪ್ರಭುವಿಗೆ ಧನ್ಯವಾದ|
ಆತ ಒಳ್ಳೆಯವ, ಆತನ ಪ್ರೀತಿ ಶಾಶ್ವತ||
ಸಾರಲಿ ಇಸ್ರಯೇಲಿನ ಜನತೆ|
ಆತನ ಪ್ರೀತಿ ಶಾಶ್ವತ ಎಂದೇ||
ಸಾರಲಿ ಆತನ ಭಕ್ತರ ಪಂಥ|
ಆತನ ಪ್ರೀತಿ ಶಾಶ್ವತ ಅಂಥ||
ಮನೆಕಟ್ಟುವವರು ಮೂಲೆಗೆಸದ ಕಲ್ಲು|
ಆಯಿತು ನೋಡು, ಮುಖ್ಯವಾದ ಮೂಲೆಗಲ್ಲು||
ಪ್ರಭುವಿನಿಂದಲೇ ಆದ ಈ ಕಾರ್ಯ|
ನಮ್ಮ ಕಣ್ಣಿಗೆ ಅದೆಂತಹ ಆಶ್ಚರ್ಯ||
ಪ್ರಭುವೇ ನಿಯೋಜಿಸಿದ ದಿನವಿದು|
ಹರ್ಷಿಸಿ ಆನಂದಿಸೋಣ ಇಂದು ||
ರಕ್ಷಿಸು ಪ್ರಭೂ, ರಕ್ಷಿಸು ದಯವಿಟ್ಟು|
ಸುಕ್ಷೇಮ ನೀಡು ಪ್ರಭೂ ಕರುಣೆಯಿಟ್ಟು||
ಪ್ರಭುವಿನ ನಾಮದಲಿ ಬರುವವನಿಗೆ ಜಯಮಂಗಳ||
ಪ್ರಭುವೇ ದೇವನು, ನಮ್ಮ ಮೇಲೆ ಜ್ಯೋತಿಯನು ಬೆಳಗಿದವನು ||
ಘೋಷಣೆ ಕೀರ್ತನೆ 118:24
ಅಲ್ಲೆಲೂಯ, ಅಲ್ಲೆಲೂಯ ! ಪ್ರಭುವೇ ನಿಯೋಜಿಸಿದ ದಿನವಿದು| ಹರ್ಷಿಸಿ ಆನಂದಿಸೋಣ ಇಂದು | ಅಲ್ಲೆಲೂಯ !
ಶುಭಸಂದೇಶ: ಯೊವಾನ್ನ 21:1-14
ಆ ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ ಮತ್ತೊಮ್ಮೆ ತಿಬೇರಿಯ ಸರೋವರದ ಬಳಿ ಕಾಣಿಸಿಕೊಂಡರು. ಅದು ಹೀಗೆ ನಡೆಯಿತು: ಸಿಮೋನ ಪೇತ್ರನು, ದಿದುಮನೆಂಬ ತೋಮನು, ಗಲಿಲೇಯದ ಕಾನಾ ಊರಿನ ನತಯೇಲನು, ಜೆಬೆದಾಯನ ಪುತ್ರರು ಮತ್ತು ಯೇಸುವಿನ ಇನ್ನಿಬ್ಬರು ಶಿಷ್ಯರು ಒಟ್ಟಿಗೆ ಸೇರಿದ್ದರು. ಆಗ ಸಿಮೋನ ಪೇತ್ರನು, " ನಾನು ಮೀನು ಹಿಡಿಯಲು ಹೋಗುತ್ತೇನೆ, " ಎಂದನು. ಮಿಕ್ಕವರು, " ನಾವೂ ನಿಮ್ಮೊಡನೆ ಬರುತ್ತೇವೆ, " ಎಂದರು. ಅವರೆಲ್ಲರೂ ಹೊರಟು ದೋಣಿಯನ್ನು ಹತ್ತಿದರು. ಆ ರಾತ್ರಿಯೆಲ್ಲಾ ಅವರಿಗೆ ಒಂದು ಮೀನೂ ಸಿಗಲಿಲ್ಲ. ಬೆಳಗಾಗುವಷ್ಟರಲ್ಲಿ ಯೇಸು ತೀರದಲ್ಲಿ ನಿಂತಿದ್ದರು. ಆದರೆ ಅವರು ಯೇಸು ಎಂದು ಶಿಷ್ಯರಿಗೆ ಹೊಳೆಯಲಿಲ್ಲ. ಯೇಸು ಅವರಿಗೆ, " ಮಕ್ಕಳೇ, ಊಟಕ್ಕೆ ಏನಾದರೂ ಸಿಕ್ಕಿತೆ? " ಎಂದು ಕೇಳಿದರು. " ಏನೂ ಇಲ್ಲ, " ಎಂದರು ಅವರು. " ದೋಣಿಯ ಬಲಗಡೆ ಬಲೆ ಬೀಸಿರಿ, ಮೀನುಗಳು ಸಿಗುತ್ತವೆ, " ಎಂದು ಯೇಸು ಹೇಳಲು ಅವರು ಹಾಗೆಯೇ ಮಾಡಿದರು. ಆಗ ಮೀನುಗಳು ರಾಶಿರಾಶಿಯಾಗಿ ಸಿಕ್ಕಿದವು. ಬೆಲೆಯನ್ನು ಎಳೆಯಲೂ ಆಗದೆ ಹೋಯಿತು. ಆಗ ಯೇಸುವಿನ ಆಪ್ತ ಶಿಷ್ಯನು ಪೇತ್ರನಿಗೆ, " ಅವರೇ ಪ್ರಭೂ " ಎಂದನು. ಪ್ರಭುವೆಂದು ಕೇಳಿದ್ದೇ ತಡ, ಬರೀ ಮೈಯಲ್ಲಿದ್ದ ಪೇತ್ರನು ಬಟ್ಟೆಯನ್ನು ಹಾಕಿಕೊಂಡು ನೀರಿಗೆ ಧುಮುಕಿಧನು. ಮಿಕ್ಕ ಶಿಷ್ಯರು ಮೀನು ತುಂಬಿದ್ದ ಬೆಲೆಯನ್ನು ಎಳೆಯುತ್ತಾ ಸುಮಾರು ಮುನ್ನೂರು ಅಡಿ ದೂರದಲ್ಲಿ ಇದ್ದ ದಡಕ್ಕೆ ದೋಣಿಯಲ್ಲೇ ಬಂದರು. ಅವರು ದಡವನ್ನು ಸೇರಿದಾಗ ಅಲ್ಲಿ ಇದ್ದಲಿನ ಬೆಂಕಿ ಮಾಡಲಾಗಿತ್ತು. ಕೆಂಡದ ಮೇಲೆ ಮೀನುಗಳಿದ್ದವು. ರೊಟ್ಟಿಯೂ ಅಲ್ಲಿತ್ತು. ಯೇಸು ಅವರಿಗೆ, " ನೀವು ಈಗ ತಾನೇ ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿ, " ಎಂದು ಹೇಳಿದರು. ಸಿಮೋನ ಪೇತ್ರನು ದೋಣಿಯನ್ನು ಹತ್ತಿ ಬಲೆಯನ್ನು ದಡಕ್ಕೆ ಎಳೆದು ತಂದನು. ಬಲೆಯ ತುಂಬ ದೊಡ್ಡ ಮೀನುಗಳು - ಒಟ್ಟಿಗೆ ನೂರೈವತ್ತಮೂರು ಇದ್ದವು. ಅಷ್ಟು ಮೀನುಗಳಿದ್ದರೂ ಬಲೆಯು ಹರಿದಿರಲಿಲ್ಲ. ಯೇಸು ಅವರಿಗೆ, " ಬಂದು ಊಟಮಾಡಿ, " ಎಂದು ಅವರನ್ನು ಕರೆದರು. ಅವರು ಪ್ರಭುವೆಂದು ಅರಿತಿದ್ದ ಕಾರಣ ಶಿಷ್ಯರಲ್ಲಿ ಒಬ್ಬನಿಗಾದರೂ, " ನೀವು ಯಾರು ? " ಎಂದು ಕೇಳುವಷ್ಟು ಧೈರ್ಯ ಇರಲಿಲ್ಲ.
ಯೇಸು ಹತ್ತಿರಕ್ಕೆ ಬಂದು ರೊಟ್ಟಿಯನ್ನು ತೆಗೆದುಕೊಂಡು ಅವರಿಗೆ ಕೊಟ್ಟರು, ಹಾಗೆಯೇ ಮೀನನ್ನೂ ಕೊಟ್ಟರು. ಯೇಸು ಸತ್ತು ಜೀವಂತರಾಗಿ ಎದ್ದ ಬಳಿಕ ತಮ್ಮ ಶಿಷ್ಯರಿಗೆ ಕಾಣಿಸಿಕೊಂಡದ್ದು ಇದು ಮೂರನೆಯ ಸಾರಿ.
No comments:
Post a Comment