ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 15:1-2, 22-29
ಜುದೇಯದಿಂದ ಕೆಲವು ಜನರು ಅಂತಿಯೋಕ್ಯಕ್ಕೆ ಬಂದು ಅಲ್ಲಿನ ಭಕ್ತವಿಶ್ವಾಸಿಗಳಿಗೆ, "ಮೋಶೆಯ ನಿಯಮದಂತೆ ನೀವು ಸುನ್ನತಿ ಮಾಡಿಸಿಕೊಂಡ ಹೊರತು ಜೀವೋದ್ಧಾರ ಪಡೆಯಲಾರಿರಿ," ಎಂದು ಬೋಧಿಸತೊಡಗಿದರು. ಈ ವಿಷಯವಾಗಿ ಅವರಿಗೂ ಪೌಲ ಮತ್ತು ಬಾರ್ನಬರಿಗೂ ಭಿನ್ನಾಭಿಪ್ರಾಯ ಉಂಟಾಗಿ ತೀವ್ರ ವಿವಾದವೆದ್ದಿತು. ಆದುದರಿಂದ ಈ ಸಮಸ್ಯೆಯ ಬಗ್ಗೆ ಪೌಲ ಮತ್ತು ಬಾರ್ನಬರು ಅಂತಿಯೋಕ್ಯದ ಇನ್ನೂ ಕೆಲವರ ಸಮೇತ ಜೆರುಸಲೇಮಿಗೆ ಹೋಗಿ ಪ್ರೇಷಿತರನ್ನೂ ಪ್ರಮುಖರನ್ನೂ ಕಾಣಬೇಕೆಂದು ತೀರ್ಮಾನಿಸಲಾಯಿತು. ಅನಂತರ ಪ್ರೇಷಿತರೂ ಸಭಾಪ್ರಮುಖರೂ ಇಡೀ ಧರ್ಮಸಭೆಯ ಸಮ್ಮತಿ ಪಡೆದು, ತಮ್ಮಲ್ಲಿ ಕೆಲವರನ್ನು ಆರಿಸಿ, ಪೌಲ ಮತ್ತು ಬಾರ್ನಬರೊಂದಿಗೆ ಅಂತಿಯೋಕ್ಯಕ್ಕೆ ಕಳುಹಿಸಬೇಕೆಂದು ನಿರ್ಧರಿಸಿದರು. ಅಂತೆಯೇ, ಸಹೋದರರಲ್ಲಿ ಬಹು ಗೌರವಾನ್ವಿತರಾದ ಬಾರ್ನಬ ಎಂದು ಕರೆಯಲಾದ ಯೂದ ಮತ್ತು ಸೀಲ ಎಂಬ ಇಬ್ಬರನ್ನು ಆರಿಸಿದರು. ಈ ಕೆಳಗಿನ ಪತ್ರವನ್ನು ಬರೆದು ಅವರ ಕೈಯಲ್ಲಿ ಕಳುಹಿಸಿದರು. "ಅಂತಿಯೋಕ್ಯ, ಸಿರಿಯ ಮತ್ತು ಸಿಲಿಸಿಯಗಳಲ್ಲಿ ವಾಸಿಸುವ ಯೆಹೂದ್ಯೇತರ ಸಹೋದರರಿಗೆ - ಪ್ರೇಷಿತರೂ ಸಭಾಪ್ರಮುಖರೂ ನಿಮ್ಮ ಸಹೋದರರೂ ಆದ ನಮ್ಮ ಶುಭಾಶಯಗಳು! ನಮ್ಮ ಕಡೆಯ ಕೆಲವು ಜನರು ನಮ್ಮಿಂದ ಯಾವ ಆದೇಶವನ್ನೂ ಪಡೆಯದೆ ನಿಮ್ಮನ್ನು ತೊಂದರೆಗೆ ಈಡುಮಾಡಿ ನಿಮ್ಮ ಮನಸ್ಸನ್ನು ಕಲಕಿದರೆಂಬ ಸಮುಚಾರ ನಮ್ಮ ಗಮನಕ್ಕೆ ಬಂದಿದೆ. ಆದುದರಿಂದ ನಾವೆಲ್ಲರೂ ಸಭೆ ಸೇರಿ ಪ್ರತಿನಿಧಿಗಳನ್ನು ಆರಿಸಿ ನಿಮ್ಮಲ್ಲಿಗೆ ಕಳುಹಿಸಲು ನಿರ್ಧರಿಸಿದೆವು ನಮ್ಮ ಪ್ರಭುವಾದ ಯೇಸುಕ್ರಿಸ್ತರಿಗಾಗಿ ತಮ್ಮಪ್ರಾಣವನ್ನೇ ಮುಡಿಪಾಗಿಟ್ಟಿರುವ ನಮ್ಮೊಲವಿನ ಬಾರ್ನಬ ಮತ್ತು ಪೌಲರೊಡನೆ ಈ ಪ್ರತಿನಿಧಿಗಳು ಬರುತ್ತಿದ್ದಾರೆ. ಇವರೇ ನಾವು ಕಳುಹಿಸುತ್ತಿರುವ ಯೂದ ಮತ್ತು ಸೀಲ. ಇವರು ನಾವು ಬರೆದಿರುವುದನ್ನು ನಿಮಗೆ ಖುದ್ದಾಗಿ ತಿಳಿಸುವರು. ವಿಗ್ರಹಗಳಿಗೆ ನೈವೇದ್ಯವಾದುದು ಅಪವಿತ್ರವಾದುದು ಅದನ್ನು ಸೇವಿಸಬಾರದು; ರಕ್ತವನ್ನಾಗಲಿ, ಕುತ್ತಿಗೆ ಹಿಸುಕಿದ ಪ್ರಾಣಿಗಳನ್ನಾಗಲಿ ತಿನ್ನಬಾರದು; ಅನೈತಿಕತೆಯಿಂದ ದೂರವಿರಬೇಕು. ಈ ಅಗತ್ಯ ನಿಯಮಗಳ ಹೊರತು ಬೇರೆ ಯಾವ ಹೊರೆಯನ್ನೂ ನಿಮ್ಮ ಮೇಲೆ ಹೇರುವುದು ವಿಹಿತವಲ್ಲವೆಂಬುದು ಪವಿತ್ರಾತ್ಮ ಅವರ ಹಾಗೂ ನಮ್ಮ ತೀರ್ಮಾನ. ಈ ನಿಯಮಗಳನ್ನು ಅನುಸರಿಸಿದರೆ, ನಿಮಗೆ ಒಳಿತಾಗುವುದು, ನಿಮಗೆ ಶುಭವಾಗಲಿ!"
ಕೀರ್ತನೆ: 67:2-3, 5, 6, 8
ಶ್ಲೋಕ: ನಿನ್ನ ಕೀರ್ತಿಸಲಿ ದೇವಾ, ಜನರು ಸಂಕೀರ್ತಿಸಲಿ ಅವರೆಲ್ಲರೂ
ಎರಡನೇ ವಾಚನ: ಪ್ರಕಟನಾ ಗ್ರಂಥ 21:10-14, 22-23
ಆಗ ಯೊವಾನ್ನನಾದ ನಾನು ಪವಿತ್ರಾತ್ಮವಶನಾದೆ. ಆ ದೇವದೂತನು ನನ್ನನ್ನು ಎತ್ತರವಾದ ಬೆಟ್ಟದ ಮೇಲೆ ಕೊಂಡೂಯ್ದನು. ಅಲ್ಲಿ ಅವನಿಗೆ ಪವಿತ್ರ ನಗರವಾದ ಜೆರುಸಲೇಮನ್ನು ತೋರಿಸಿದನು. ಅದು ಸ್ವರ್ಗದಲ್ಲಿರುವ ದೇವರ ಬಳಿಯಿಂದ ಕೆಳಗಿಳಿದು ಬರುತ್ತಿತ್ತು; ದೇವರ ತೇಜಸ್ಸಿನಿಂದ ಕೂಡಿತ್ತು; ಅಮೂಲ್ಯ ರತ್ನದಂತೆ ಹೊಳೆಯುತ್ತಿತ್ತು. ಸ್ವಚ್ಛವಾದ ಸ್ಪಟಿಕದಂತೆ ಶುಬ್ರವಾಗಿತ್ತು. ಆ ನಗರದ ಸುತ್ತಲೂ ಎತ್ತರವಾದ ಕೋಟೆಯಿತ್ತು. ಅದಕ್ಕೆ ಹನ್ನೆರಡು ಹೆಬ್ಬಾಗಿಲುಗಳಿದ್ದವು. ಆ ಬಾಗಿಲುಗಳಿಗೆ ಹನ್ನೆರಡು ಮಂದಿ ದೇವದೂತರುಗಳು ಕಾವಲಿದ್ದರು. ಆ ಬಾಗಿಲುಗಳ ಮೇಲೆ ಇಸ್ರಯೇಲಿನ ಹನ್ನೆರಡು ಕುಲಗಳ ಹೆಸರುಗಳನ್ನು ಬರೆದಿತ್ತು. ಪೂರ್ವದಿಕ್ಕಿನಲ್ಲಿ ಮೂರು ಬಾಗಿಲುಗಳು, ಉತ್ತರ ದಿಕ್ಕಿನಲ್ಲಿ ಮೂರು ಬಾಗಿಲುಗಳು, ದಕ್ಷಿಣ ದಿಕ್ಕಿನಲ್ಲಿ ಮೂರು ಬಾಗಿಲುಗಳು, ಮತ್ತು ಪಶ್ಚಿಮ ದಿಕ್ಕಿನಲ್ಲಿ ಮೂರು ಬಾಗಿಲುಗಳು ಇದ್ದವು. ಆ ನಗರದ ಕೋಟೆಗೆ ಹನ್ನೆರಡು ಅಸ್ತಿವಾರಗಳಿದ್ದವು. ಅವುಗಳ ಮೇಲೆ ಹನ್ನೆರಡು ಹೆಸರುಗಳಿದ್ದವು ಯಜ್ಞದ ಕುರಿಮರಿಯ ಹನ್ನೆರಡು ಪ್ರೇಷಿತರ ಹೆಸರುಗಳು ಅವು ಆ ನಗರದಲ್ಲಿ ನಾನು ದೇವಾಲಯವನ್ನು ಕಾಣಲಿಲ್ಲ; ಏಕೆಂದರೆ, ಸರ್ವಶಕ್ತ ದೇವರಾದ ಪ್ರಭುವೂ ಯಜ್ಞದ ಕುರಿಮರಿಯಾದಾತನೂ ಅದರ ದೇವಾಲಯವಾಗಿದ್ದಾರೆ. ನಗರಕ್ಕೆ ಬೆಳಕನ್ನು ಕೊಡಲು ಸೂರ್ಯ ಇಲ್ಲವೆ ಚಂದ್ರನ ಅವಶ್ಯಕತೆ ಇಲ್ಲ. ಏಕೆಂದರೆ, ದೇವರ ತೇಜಸ್ಸೇ ಅದಕ್ಕೆ ಬೆಳಕು. ಯಜ್ಞದ ಕುರಿಮರಿಯೇ ಅದಕ್ಕೆ ಜ್ಯೋತಿ.
ಶುಭಸಂದೇಶ: ಯೊವಾನ್ನ 14:23-29
ಆಗ ಯೇಸು ತಮ್ಮ ಶಿಷ್ಯರಿಗೆ ಹೀಗೆಂದರು: "ನನ್ನನ್ನು ಪ್ರೀತಿಸುವವನು ನನ್ನ ಮಾತನ್ನು ಕೈಗೊಂಡು ನಡೆಯುವನು. ಅವನನ್ನು ನನ್ನ ಪಿತನೂ ಪ್ರೀತಿಸುವರು. ಮತ್ತು ನಾವಿಬ್ಬರೂ ಅವನ ಬಳಿ ಬಂದು ಅವನಲ್ಲಿ ನೆಲೆಸುವೆವು. ನನ್ನನ್ನು ಪ್ರೀತಿಸದೆ ಇರುವವನು ನನ್ನ ಮಾತನ್ನು ಕೈಗೊಂಡು ನಡೆಯುವುದಿಲ್ಲ. ನೀವು ಕೇಳುತ್ತಿರುವ ಮಾತು ನನ್ನದಲ್ಲ. ನನ್ನನ್ನು ಕಳುಹಿಸಿದ ಪಿತನದೇ. ನಾನು ನಿಮ್ಮೊಡನೆ ಇರುವಾಗಲೇ ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಆದರೆ ಪಿತನು ನನ್ನ ಹೆಸರಿನಲ್ಲಿ ಕಳುಹಿಸಿಕೊಡುವ ಪೊಷಕರಾದ ಪವಿತ್ರಾತ್ಮ ನಿಮಗೆ ಎಲ್ಲವನ್ನೂ ಬೋಧಿಸಿ ನಾನು ಹೇಳಿರುವುದನ್ನೆಲ್ಲಾ ನಿಮ್ಮ ನೆನಪಿಗೆ ತರುವರು. ನಾನು ಶಾಂತಿಸಮಾಧಾನವನ್ನು ನಿಮಗೆ ಬಿಟ್ಟು ಹೋಗುತ್ತೇನೆ; ಈ ಲೋಕವು ಕೊಡುವ ರೀತಿಯಲ್ಲಿ ನಾನದನ್ನು ನಿಮಗೆ ಕೊಡುವುದಿಲ್ಲ. ನೀವು ಹೃದಯದಲ್ಲಿ ಕಳವಳಗೊಳ್ಳದಿರಿ. ಭಯಪಡಬೇಡಿ. ನಾನು ಹೊರಟು ಹೋಗುತ್ತೇನೆಂದೂ ಮತ್ತೆ ನಿಮ್ಮ ಬಳಿಗೆ ಬರುತ್ತೇನೆಂದೂ ನಾನು ಹೇಳಿದ್ದನ್ನು ನೀವು ಕೇಳಿದ್ದೀರಿ ನೀವು ನನ್ನನ್ನು ಪ್ರೀತಿಸುವವರಾಗಿದ್ದರೆ ನಾನು ಪಿತನ ಬಳಿಗೆ ಹೋಗುತ್ತಿರುವುದನ್ನು ಕುರಿತು ಹಿಗ್ಗುತ್ತಿದ್ದಿರಿ. ಏಕೆಂದರೆ ಪಿತ ನನಗಿಂತಲೂ ಶ್ರೇಷ್ಠರು. ಇದೆಲ್ಲಾ ಈಡೇರುವಾಗ ನೀವು ವಿಶ್ವಾಸಿಸುವಂತೆ ಅದು ಈಡೇರುವುದಕ್ಕೆ ಮುಂಚೆಯೇ ನಿಮಗೆ ತಿಳಿಯಪಡಿಸಿದ್ದೇನೆ.
No comments:
Post a Comment