30.04.2022 - “ನಾನೇ, ಇನ್ಯಾರೂ ಅಲ್ಲ; ಅಂಜಬೇಡಿ,”

 ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 6:1-7


ಭಕ್ತವಿಶ್ವಾಸಿಗಳ ಸಂಖ್ಯೆ ಹೆಚ್ಚುತ್ತಾ ಬಂದಿತು. ಆಗ ಗ್ರೀಕ್ ಮಾತನಾಡುತ್ತಾ ಇದ್ದವರ ಹಾಗೂ ಸ್ಥಳೀಯ ಭಾಷೆ ಮಾತನಾಡುತ್ತಿದ್ದವರ ನಡುವೆ ಭಿನ್ನಾಭಿಪ್ರಾಯ ಉಂಟಾಯಿತು. ದಿನನಿತ್ಯ ಮಾಡುವ ದೀನದಲಿತರ ಸೇವೆಯಲ್ಲಿ ತಮ್ಮ ಕಡೆಯ ವಿಧವೆಯರನ್ನು ಅಲಕ್ಷ್ಯಮಾಡಲಾಗುತ್ತಿದೆ ಎಂದು ಗ್ರೀಕರು ಗೊಣಗುಟ್ಟಿದರು. ಆಗ ಹನ್ನೆರಡು ಮಂದಿ ಪ್ರೇಷಿತರು ಭಕ್ತವಿಶ್ವಾಸಿಗಳ ಸಭೆಯನ್ನು ಕರೆದು, “ನಾವು ದೇವರ ವಾಕ್ಯದ ಬೋಧನೆಯನ್ನು ಅವಗಣಿಸಿ ಊಟೋಪಚಾರಗಳ ಸೇವೆಯಲ್ಲಿ ಮಗ್ನರಾಗಿ ಇರುವುದು ಸರಿಯಲ್ಲ. ಆದುದರಿಂದ ಸಹೋದರರೇ, ಪವಿತ್ರಾತ್ಮಭರಿತರೂ ಜ್ಞಾನಸಂಪನ್ನರೂ ಸನ್ಮಾನಿತರೂ ಆಗಿರುವ ಏಳು ವ್ಯಕ್ತಿಗಳನ್ನು ನಿಮ್ಮಿಂದ ಆರಿಸಿಕೊಳ್ಳಿ. ನಾವು ಅವರಿಗೆ ಈ ಜವಾಬ್ದಾರಿಯನ್ನು ವಹಿಸುತ್ತೇವೆ. ನಾವಾದರೋ ಪ್ರಾರ್ಥನೆಯಲ್ಲೂ ವಾಕ್ಯೋಪದೇಶದಲ್ಲೂ ನಿರತರಾಗುತ್ತೇವೆ,” ಎಂದರು. ಪ್ರೇಷಿತರ ಈ ಸಲಹೆಯನ್ನು ಇಡೀ ಸಭೆ ಅನುಮೋದಿಸಿತು. ಅಂತೆಯೇ ಅಗಾಧ ವಿಶ್ವಾಸ ಉಳ್ಳವನೂ ಪವಿತ್ರಾತ್ಮಭರಿತನೂ ಆದ ಸ್ತೇಫನ, ಫಿಲಿಪ್ಪ, ಪ್ರೊಖೋರ, ನಿಕನೋರ, ತಿಮೋನ, ಪರ್ಮೇನ ಮತ್ತು ಯೆಹೂದ್ಯ ಮತಾವಲಂಬಿಯಾದ ಅಂತಿಯೋಕ್ಯದ ನಿಕೊಲಾಯ ಎಂಬ ಏಳು ಮಂದಿಯನ್ನು ಆರಿಸಿಕೊಂಡರು. ಪ್ರೇಷಿತರ ಮುಂದೆ ಅವರನ್ನು ನಿಲ್ಲಿಸಿದರು. ಪ್ರೇಷಿತರು ಪ್ರಾರ್ಥನೆಮಾಡಿ ಅವರ ಮೇಲೆ ಹಸ್ತನಿಕ್ಷೇಪ ಮಾಡಿದರು. ದೇವರ ವಾಕ್ಯವು ಪ್ರವರ್ಧಿಸತೊಡಗಿತು. ವಿಶ್ವಾಸಿಗಳ ಸಂಖ್ಯೆ ಜೆರುಸಲೇಮಿನಲ್ಲಿ ಬಹಳವಾಗಿ ಹೆಚ್ಚಿತು. ಬಹುಮಂದಿ ಯಾಜಕರೂ ಆ ವಿಶ್ವಾಸಕ್ಕೆ ಶರಣಾದರು.

ಕೀರ್ತನೆ: 33:1-2, 4-5, 18-19

ಶ್ಲೋಕ: ನಮ್ಮ ಮೇಲಿರಲಿ ಪ್ರಭೂ, ನಿನ್ನ ಅಚಲ ಪ್ರೀತಿ , ಕಾದಿಹೆವು ಇದೋ ನಿನ್ನ ನಂಬಿ ಭರವಸದಿ. 

ಪ್ರಭು, ಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು I
ಪ್ರಭು, ಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು I

ಸಾರುವೆನು ತಲತಲಾಂತರಕು ನಿನ್ನ ಸತ್ಯತೆಯನು II
ನಿನ್ನಚಲ ಪ್ರೀತಿ ಪ್ರಭು, ನನಗೆ ಶಾಶ್ವತ ಸಿದ್ಧ I

ನಿನ್ನ ಸತ್ಯತೆ ಆಗಸದಂತೆ ಸ್ಥಿರ ಸ್ಥಾಪಿತ II
ಪ್ರಸಿದ್ಧಪಡಿಸುವುದು ಪ್ರಭು, ಗಗನವು ನಿನ್ನ ಮಹತ್ತನು I

ಸಂಕೀರ್ತಿಸುವುದು ಸ್ವರ್ಗೀಯ ಸಭೆ, ನಿನ್ನ ಸತ್ಯತೆಯನು II
ಮೇಘಮಂಡಲದಲಿ ಸಮಾನನಾರು ಪ್ರಭುವಿಗೆ I

ದೇವದೂತರೊಳು ಹೋಲಿಕೆ ಯಾವುದು ಆತನಿಗೆ II
ಧನ್ಯರು ಪ್ರಭು, ನಿನಗೆ ಜಯಕಾರ ಹಾಡುವವರು I

ನಿನ್ನ ಮುಖದ ಪ್ರಕಾಶದೊಳವರು ನಡೆಯುವರು II
ಆನಂದಿಸುವರವರು ಸದಾ ನಿನ್ನ ನಾಮದಲಿ I
ಪ್ರವರ್ಧಿಸುವರವರು ನಿನ್ನ ನ್ಯಾಯನೀತಿಯಲಿ II

ಶುಭಸಂದೇಶ: ಯೊವಾನ್ನ 6:16-21


ಸಾಯಂಕಾಲವಾದ ಮೇಲೆ ಯೇಸುಸ್ವಾಮಿಯ ಶಿಷ್ಯರು ಸರೋವರಕ್ಕೆ ಹೋಗಿ ದೋಣಿಯನ್ನು ಹತ್ತಿ ಕಫೆರ್ನವುಮಿನ ಕಡೆ ಸಾಗಿದರು. ಆಗಲೇ ಕತ್ತಲು ಕವಿದಿತ್ತು. ಯೇಸು ಅವರ ಬಳಿಗೆ ಇನ್ನೂ ಬಂದಿರಲಿಲ್ಲ. ಅಷ್ಟರಲ್ಲಿ ರಭಸವಾದ ಗಾಳಿ ಬೀಸತೊಡಗಿತು. ಸರೋವರವು ಅಲ್ಲೋಲಕಲ್ಲೋಲವಾಯಿತು. ಐದು ಆರು ಕಿಲೋಮೀಟರಿನಷ್ಟು ಹುಟ್ಟು ಹಾಕಿರಬೇಕು. ಆಗ ಯೇಸು ನೀರಿನ ಮೇಲೆ ನಡೆಯುತ್ತಾ ದೋಣಿಯನ್ನು ಸಮೀಪಿಸುತ್ತಿರುವುದು ಶಿಷ್ಯರಿಗೆ ಕಾಣಿಸಿತು. ಅದನ್ನು ನೋಡಿ ಅವರು ಹೆದರಿದರು. ಆಗ ಯೇಸು, “ನಾನೇ, ಇನ್ಯಾರೂ ಅಲ್ಲ; ಅಂಜಬೇಡಿ,” ಎಂದು ಹೇಳಿದರು. ಶಿಷ್ಯರು ಅವರನ್ನು ದೋಣಿಯೊಳಕ್ಕೆ ಬರಮಾಡಿಕೊಳ್ಳುವುದರಲ್ಲಿದ್ದರು. ಅಷ್ಟರಲ್ಲಿ, ದೋಣಿಯು ಸೇರಬೇಕಾಗಿದ್ದ ದಡವನ್ನು ತಲುಪಿತು.

ಮನಸಿಗೊಂದಿಷ್ಟು : ಇಂದಿನ ಶುಭಸಂದೇಶದಲ್ಲಿನ ‘ನಾನೇ ಇನ್ಯಾರು ಅಲ್ಲ’ ಎಂಬ ಮಾತನ್ನು ಗ್ರೀಕ್ ಭಾಷೆಯಲ್ಲಿ ‘ಇಗೋ ಇಮೈ’ ಎನ್ನುತ್ತಾರೆ. ಈ ಪದ ಯೊವಾನ್ನನ ಶುಭಸಂದೇಶದಲ್ಲಿ ಸುಮಾರು 24 ಬಾರಿ ವಿವಿಧ ಸಂದರ್ಭಗಳಲ್ಲಿ ಬಳಕೆಯಾಗಿದೆ ಎನ್ನಲಾಗಿದೆ. ‘ಇಗೋ ಇಮೈ’ ಎಂಬ ಉದ್ಘ್ಗಾರದ ನಂತರ ಆಯಾ ಸಂದರ್ಭಕ್ಕೆ ತಕ್ಕ ಮಾತುಗಳು ಬರುತ್ತದೆ.

ಇದು ಕೇವಲ ಅಂಕಿ ಅಂಶವಲ್ಲ, ಮಾಹಿತಿಯಲ್ಲ. ಯೇಸುವೇ ದೇವರ ಪುತ್ರ, ದೇವರು ಎಂದು ಸ್ಪಷ್ಟಪಡಿಸಲು ಯಾವ ಅವಕಾಶವನ್ನು ಬಿಡದ  ಯೊವಾನ್ನರು ಅಷ್ಟೂ ಸಂದರ್ಭಗಳಲ್ಲಿ ‘ಇಗೋ ಇಮೈ’ ಎಂಬ ಯೇಸುವಿನ  ಮಾತಿನ ಮೂಲಕ ಯೇಸುವಿನ ದೈವತ್ವಕ್ಕೆ ಮುದ್ರೆ ಒತ್ತುತ್ತಾ ಹೋಗುತ್ತಾರೆ.

ಇಲ್ಲಿ ಯೇಸುವನ್ನು ಬಿಟ್ಟು ಶಿಷ್ಯರು ದೋಣಿಯಲ್ಲಿ ಹೋಗಲಿಲ್ಲ. ಯೇಸುವೇ ಅವರನ್ನು ಕಳುಹಿಸಿ ತಾವು ನಡೆದುಕೊಂಡು ಬರುತ್ತಾರೆ. ಗಾಳಿಯ ರಭಸಕ್ಕೆ ಸರೋವರ ಅಲ್ಲೋಲಕಲ್ಲೋಲವಾಗಿ ಶಿಷ್ಯರಿಗೆ ಹೆದರಿಕೆಯಾಗಿರಬೇಕು. ಆದರೆ ಯೇಸು ಸಮೀಪಿಸಿದಾಗ  ಅವರನ್ನು ಗುರುತಿಸದೆ ಮತ್ತಷ್ಟು ಹೆದರುತ್ತಾರೆ. ‘ನಾನೇ ಮತ್ತ್ಯಾರು ಅಲ್ಲ’ ಎನ್ನುವ ಯೇಸುವಿನ ಮಾತಿನೊಂದಿಗೆ ಆ ಘಟನೆ ಸುಖಾಂತ್ಯದಲ್ಲಿ ಕೊನೆಗೊಳ್ಳುತ್ತದೆ.

ನಮ್ಮ ಜೀವನದಲ್ಲಿ ನಾವು ಒಮ್ಮೊಮ್ಮೆ ಯೇಸುವಿನೊಂದಿಗೆ ದೂರ ಸಾಗುತ್ತೇವೆಇನ್ನೂ ಕೆಲವೊಮ್ಮೆ ಯೇಸುವಿನಿಂದ ದೂರ ಸಾಗುತ್ತವೆ. ಆದರೆ ಯೇಸು ಗಮನಿಸುತ್ತಿರುತ್ತಾರೆ. ನಮ್ಮ ಕಷ್ಟದ ಸಮಯದಲ್ಲಿ ಬರುತ್ತಾರೆ. ಆದರೆ ನಾವು ಗಮನಿಸದೆ ಹೋಗುತ್ತೇವೆ. ರಕ್ಷಿಸಲು ತಮ್ಮದೇ ವಿಧಾನಗಳನ್ನು ಬಳಸುತ್ತಾರೆ. ನಾವು ಅರ್ಥಮಾಡಿಕೊಳ್ಳದೆ  ಆ ಶಿಷ್ಯರಂತೆ ಮತ್ತಷ್ಟು ಭಯಪಡುತ್ತೇವೆ. ಕೊನೆಗೆ ಅವರು  ನಮ್ಮನ್ನು  ದಡ ತಲುಪಿಸುತ್ತಾರೆ.

ಯೊವಾನ್ನರ ಶುಭಸಂದೇಶದ ಪ್ರತಿ ವಾಕ್ಯದಲ್ಲೂ ಸುಲಭವಾಗಿ ಕಾಣುವ ಅರ್ಥದ ಜೊತೆಗೆ ಮತ್ತೊಂದು ಗೂಢ ಅರ್ಥವಿರುತ್ತದೆ ಎನ್ನುತ್ತಾರೆ ಚಿಂತಕರು. ‘ನಾನೇ ಇನ್ಯಾರು’ ಅಲ್ಲ ಎನ್ನುವುದು ಆ ಸಂದರ್ಭದ ಮಾತಾದರೂನಮಗೆ ನಮ್ಮ ಬದುಕಿಗೆ ನಮ್ಮ ನಿತ್ಯಜೀವದ ಆಶಯಕ್ಕೆ ‘ಯೇಸು ಮಾತ್ರವೇ, ಇನ್ಯಾರು  ಇಲ್ಲ’ ಎಂಬ ಎಂಬ ಮಾತೇ ನಿತ್ಯ ಸತ್ಯ .

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...