ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

08.05.22 - "ನಾನೂ ಪಿತನೂ ಒಂದೇ ಆಗಿದ್ದೇವೆ,"

ಮೊದಲನೇ ವಾಚನ: ಪ್ರೇಷಿತರ ಕಾರ್ಯಕಲಾಪಗಳು 13:14, 43-52

ಉಳಿದವರು ಪೆರ್ಗದಿಂದ ಹೊರಟು ಪಿಸಿದಿಯ ಸೀಮೆಗೆ ಸೇರಿದ ಅಂತಿಯೋಕ್ಯಕ್ಕೆ ಬಂದರು. ಸಬ್ಬತ್ ದಿನದಲ್ಲಿ ಪ್ರಾರ್ಥನಾಮಂದಿರಕ್ಕೆ ಹೋಗಿ ಕುಳಿತುಕೊಂಡರು. ಪ್ರಾರ್ಥನಾಕೂಟ ಮುಗಿದಮೇಲೆ ಅನೇಕ ಯೆಹೂದ್ಯರೂ ಯೆಹೂದ್ಯ ಮತಾವಲಂಬಿಗಳಾದ ಅನ್ಯರೂ ಪೌಲ ಮತ್ತು ಬಾರ್ನಬರನ್ನು ಹಿಂಬಾಲಿಸಿದರು. ಈ ಪ್ರೇಷಿತರು ಅವರೊಡನೆ ಮಾತನಾಡಿ ದೈವಾನುಗ್ರಹದಲ್ಲಿ ದೃಡವಾಗಿ ಬಾಳುವಂತೆ ಪ್ರೋತ್ಸಾಹಿಸಿದರು. ಮುಂದಿನ ಸಬ್ಬತ್ ದಿನ ದೇವರ ವಾಕ್ಯವನ್ನು ಕೇಳಲು ನಗರಕ್ಕೆ ನಗರವೇ ಆಗಮಿಸಿತು. ಜನರು ತಂಡೋಪತಂಡವಾಗಿ ಬರುತ್ತಿರುವುದನ್ನು ಕಂಡು ಯೆಹೂದ್ಯರು ಮತ್ಸರಭರಿತರಾದರು. ಅವರು ಪೌಲನ ಮಾತುಮಾತಿಗೂ ವಿರೋಧವಾಗಿ ವಾದಿಸಿ ದೂಷಣೆಮಾಡತೊಡಗಿದರು. ಪೌಲ ಮತ್ತು ಬಾರ್ನಬ ಮತ್ತಷ್ಟು ಧೈರ್ಯದಿಂದ ಮಾತನಾಡಿದರು: "ದೇವರ ವಾಕ್ಯವನ್ನು ಮೊಟ್ಟಮೊದಲು ನಿಮಗೆ ಬೋಧಿಸುವುದು ಅಗತ್ಯವಾಗಿತ್ತು. ಆದರೆ ನೀವು ಅದನ್ನು ನಿರಾಕರಿಸಿ ಅಮರಜೀವಕ್ಕೆ ಅಪಾತ್ರರೆಂದು ನಿಮ್ಮನ್ನು ನೀವೇ ತೀರ್ಮಾನಿಸಿಕೊಂಡಿರಿ. ಆದುದರಿಂದ ನಾವು ನಿಮ್ಮನ್ನು ಬಿಟ್ಟು ಅನ್ಯಧರ್ಮದವರ ಕಡೆ ಹೋಗುತ್ತೇವೆ. ಏಕೆಂದರೆ ಪ್ರಭು ನಮಗಿತ್ತ ಆಜ್ಞೆ ಹೀಗಿದೆ: "ಅನ್ಯಧರ್ಮೀಯರಿಗೆ  ಜ್ಯೋತಿಯನ್ನಾಗಿಯೂ ವಿಶ್ವಪೂರ್ತಿಗೆ ಜೀವೋದ್ಧಾರ ಸಾದನವಾಗಿಯೂ ನಾನು ನಿಮ್ಮನ್ನು ನೇಮಿಸಿದ್ದೇನೆ" ಇದನ್ನು ಕೇಳಿದ ಅನ್ಯಧರ್ಮೀಯರು ಸಂತೋಷಪಟ್ಟು ದೇವರ ಸಂದೇಶಕ್ಕಾಗಿ ಸ್ತುತಿಸಿದರು. ಅಮರ ಜೀವಕ್ಕೆ ಆಯ್ಕೆಯಾದವರೆಲ್ಲರೂ ವಿಶ್ವಾಸಿಗಳಾದರು. ಪ್ರಭುವಿನ ವಾಕ್ಯ ಆ ಪ್ರದೇಶದಲ್ಲೆಲ್ಲಾ ಹಬ್ಬಿ ಹರಡಿತು. ಯೆಹೂದ್ಯರಾದರೋ ದೇವಭಕ್ತೆಯರಾದ ಕುಲೀನ ಸ್ತ್ರೀಯರನ್ನೂ ಪಟ್ಟಣದ ಪ್ರಮುಖ ಜನರನ್ನೂ ಪ್ರಚೋದಿಸಿದರು. ಪೌಲ ಮತ್ತು ಬಾರ್ನಬರನ್ನು ಹಿಂಸಿಸುವಂತೆ ಹುರಿದುಂಬಿಸಿ, ಅವರನ್ನು ಆ ಪ್ರದೇಶದಿಂದ ಹೊರಗಟ್ಟಿದರು. ಇದಕ್ಕೆ ಪ್ರತಿಯಾಗಿ ಪ್ರೇಷಿತರು ತಮ್ಮ ಪಾದ ಧೂಳನ್ನು ಝಾಡಿಸಿ ಇಕೋನಿಯಕ್ಕೆ ಹೊರಟು ಹೋದರು. ಭಕ್ತ ವಿಶ್ವಾಸಿಗಳಾದರೋ ಪರಮಾನಂದಪಟ್ಟರು, ಪವಿತ್ರಾತ್ಮಭರಿತರಾದರು.

ಕೀರ್ತನೆ: 100:1-2, 3, 5
ಶ್ಲೋಕ: ಆತನವರು ನಾವು, ಆತನ ಜನ, ಆತನೇ ಮೇಯಿಸುವ ಕುರಿಗಳು ನಾವು

ಎರಡನೇ ವಾಚನ: ಪ್ರಕಟನಾಗ್ರಂಥ 7:9, 14-17

ಇದಾದ ಬಳಿಕ ನಾನು ಇನ್ನೊಂದು ದಿವ್ಯದರ್ಶನವನ್ನು ಕಂಡೆ: ಯಾರಿಂದಲೂ ಎಣಿಸಲಾಗದಷ್ಟು ಒಂದು ದೊಡ್ಡ ಜನಸಮೂಹವು ನೆರೆದಿತ್ತು. ಅವರು ಎಲ್ಲಾ ದೇಶ, ಭಾಷೆ, ಕುಲಗೋತ್ರಗಳಿಂದ ಬಂದವರಾಗಿದ್ದರು. ಶ್ವೇತಾಂಬರರಾಗಿ ಸಿಂಹಾಸನದ ಮತ್ತು ಯಜ್ಞದ ಕುರಿಮರಿಯಾದನಾತ ಸಾನ್ನಿದ್ಯದಲ್ಲಿ ನಿಂತಿದ್ದರು. ಕೈಗಳಲ್ಲಿ ಕರ್ಜೂರದ ಗರಿಗಳನ್ನು ಹಿಡಿದಿದ್ದರು. ಸಭಾ ಪ್ರಮುಖರಲ್ಲಿ ಒಬ್ಬನು, "ಶ್ವೇತಾಂಬರರಾದ ಇವರೆಲ್ಲರೂ ಯಾರು? ಎಲ್ಲಿಂದ ಬಂದರು?"ಎಂದು ನನ್ನನ್ನು ಪ್ರಶ್ನಿಸಿದನು. ಅದಕ್ಕೆ ನಾನು, "ಸ್ವಾಮೀ ನೀವೇ ಬಲ್ಲಿರಿ", ಎಂದು ಉತ್ತರಕೊಟ್ಟೆ. ಆಗ ಆತನು ನನಗೆ ಹೀಗೆಂದನು: "ಇವರು ಆ ಭೀಕರ ಹಿಂಸೆಬಾಧೆಯನ್ನು ಅನುಭವಿಸಿ ಬಂದವರು. ತಮ್ಮ ನಿಲುವಂಗಿಗಳನ್ನು ಯಜ್ಞದ ಕುರಿಮರಿಯ ರಕ್ತದಿಂದ ತೊಳೆದು ಬಿಳುಪಾಗಿಸಿಕೊಂಡಿದ್ದಾರೆ.  "ಇರುವರು ದೇವರ ಸಿಂಹಾಸನದ ಸಮ್ಮುಖದಲ್ಲೇ ಆರಾಧಿಪರಾತತನನು ಹಗಲಿರುಳು ದೇವಾಲಯದಲ್ಲೇ ಸಂರಕ್ಷಿಪನಾತನು ಅವರನ್ನು ಗುಡಾರದಂತೆ. ಇನ್ನಿರದು ಅವರಿಗೆ ಹಸಿವು ಬಾಯಾರಿಕೆ ತಟ್ಟದವರನು ಬಿಸಿಲಿನ ತಾಪ, ಸೂರ್ಯನ ಕೋಪ. ನಿಂತಿಹನು ಕುರಿಮರಿಯಾದಾತನು ಸಿಂಹಾಸನದ ನಡುವೆ ಕಾಯುವನು ಅವರುಗಳನು ಕುರುಬನಂತೆ. ನಡೆಸುವನು ಅವರನು ಜೀವಜಲದ ಒರತೆಗಳ ಬಳಿಗೆ ದೇವನೊರಸುವನು ಅವರ ಕಂಬನಿಗಳನು ಬಿಡದೆ", ಎಂದು ನನಗೆ ತಿಳಿಸಿದನು.

ಶುಭಸಂದೇಶ: ಯೊವಾನ್ನ 10:27-30

ಯೇಸುಸ್ವಾಮಿ ತಮ್ಮ ಶಿಷ್ಯರನ್ನುದ್ದೇಶಿಸಿ: ನನ್ನ ಕುರಿಗಳಾದರೋ ನನ್ನ ಸ್ವರವನ್ನು ಗುರುತಿಸುತ್ತವೆ. ನಾನು ಅವರನ್ನು ಬಲ್ಲೆನು, ಅವು ನನ್ನನ್ನು ಹಿಂಬಾಲಿಸುತ್ತವೆ. ನಾನು ಅವುಗಳಿಗೆ ನಿತ್ಯ ಜೀವವನ್ನು ಕೊಡುತ್ತೇನೆ. ಅವು ಎಂದಿಗೂ ನಾಶವಾಗುವುದಿಲ್ಲ. ನನ್ನ ಕೈಯಿಂದ ಅವನ್ನು ಯಾರೂ ಕಸಿದುಕೊಳ್ಳಲಾರರು, ಅವನು ನನಗೆ ಕೊಟ್ಟ ಪಿತ ಸರ್ವಶ್ರೇಷ್ಠರು. ಪಿತನ ಕೈಯಿಂದ ಅವನ್ನು ಯಾರೂ ಕಸಿದುಕೊಳ್ಳಲಾರರು. ನಾನೂ ಪಿತನೂ ಒಂದೇ ಆಗಿದ್ದೇವೆ," ಎಂದರು.

No comments:

Post a Comment