ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

25.04.22 - "ಅವರು ರೋಗಿಗಳ ಮೇಲೆ ಕೈ ಇಟ್ಟರೆ ರೋಗಿಗಳು ಗುಣಹೊಂದುವರು"

ಪೇತ್ರನು  ಬರೆದ  ಮೊದಲನೆಯ  ಪತ್ರ :  5:5-14

ಯುವಜನರೇ, ನೀವು ಹಿರಿಯರಿಗೆ ವಿಧೇಯರಾಗಿ ನಡೆದುಕೊಳ್ಳಿ.  ನೀವೆಲ್ಲರೂ ದೀನ  ಮನೋಭಾವನೆಯನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಸೇವೆಮಾಡಿ.  " ಗರ್ವಿಷ್ಠರನ್ನು ದೇವರು ವಿರೋಧಿಸುತ್ತಾರೆ.  ನಮ್ರರಿಗಾದರೋ ಅವರು ದಯೆ ತೋರುತ್ತಾರೆ, " ಎಂದು ಪವಿತ್ರಗ್ರಂಥದಲ್ಲಿ ಲಿಖಿತವಾಗಿದೆ.  ದೇವರ ಪರಾಕ್ರಮಕ್ಕೆ ತಗ್ಗಿ ನಮ್ರರಾಗಿ ನಡೆದುಕೊಳ್ಳಿ.  ಆಗ ಅವರು ನಿಮ್ಮನ್ನು ಸಕಾಲದಲ್ಲಿ ಮೇಲಕೆತ್ತುವರು;  ನಿಮ್ಮ ಚಿಂತೆಯನ್ನೆಲ್ಲಾ ಅವರಿಗೇ ಬಿಟ್ಟುಬಿಡಿ.  ನಿಮ್ಮ ಮೇಲೆ ಅವರಿಗೆ ಲಕ್ಷ್ಯವಿದೆ.  ಸ್ವಸ್ಥಚಿತ್ತರಾಗಿರಿ, ಜಾಗರೂಕರಾಗಿರಿ.  ಏಕೆಂದರೆ, ನಿಮ್ಮ ಶತ್ರುವಾಗಿರುವ ಸೈತಾನನು ಗರ್ಜಿಸುವ ಸಿಂಹದಂತೆ, ಯಾರನ್ನು ಕಬಳಿಸುವುದೆಂದು ಅತ್ತಿತ್ತ ಹುಡುಕಾಡುತ್ತಿರುವನು.  ವಿಶ್ವಾಸದಲ್ಲಿ ದೃಢವಾಗಿದ್ದು ಅವನನ್ನು ಎದುರಿಸಿರಿ.  ನಿಮ್ಮ ಸಹವಿಶ್ವಾಸಿಗಳು  ಜಗತ್ತಿನಲ್ಲೆಲ್ಲಾ ಇಂಥ ಹಿಂಸೆಬಾಧೆಗಳನ್ನೇ ಅನುಭವಿಸುತ್ತಿದ್ದಾರೆಂದು ನಿಮಗೆ ತಿಳಿದಿದೆ.  ಯೇಸು ಕ್ರಿಸ್ತರಲ್ಲಿ ನಿಮ್ಮನ್ನು ತಮ್ಮ ಶಾಶ್ವತ ಮಹಿಮೆಗೆ ಕರೆದ ಕೃಪಾನಿಧಿಯಾದ ದೇವರು ನೀವು ಸ್ವಲ್ಪಕಾಲ ಹಿಂಸೆಬಾಧೆಯನ್ನು ಅನುಭವಿಸಿದ ನಂತರ ನಿಮ್ಮನ್ನು ಪೂರ್ವಸ್ಥಿತಿಗೆ ತರುವರು;  ನಿಮ್ಮನ್ನು ಸ್ಥಿರಗೊಳಿಸಿ ಬಲಪಡಿಸುವರು.  ಅವರ ಆಳ್ವಿಕೆ ಯುಗಯುಗಾಂತರಕ್ಕೂ ಇರಲಿ.  ಆಮೆನ್.  ನನ್ನ ಈ ಪುಟ್ಟ ಪತ್ರವನ್ನು  ನಂಬಿಕಸ್ತ ಸಹೋದರನಾದ ಸಿಲ್ವಾನನ ಸಹಾಯದಿಂದ ನಿಮಗೆ ಬರೆದಿರುತ್ತೇನೆ.  ನಿಮ್ಮನ್ನು ಪ್ರೋತ್ಸಾಹಿಸಲೆಂದು ಮತ್ತು ಇದುವೇ ದೇವರ ನಿಜವಾದ ಅನುಗ್ರಹವೆಂದು ಸೃಷ್ಟೀಕರಿಸಲು ಬರೆದಿದ್ದೇನೆ.  ಈ ಅನುಗ್ರಹದಲ್ಲಿ ನೀವು ದೃಢವಾಗಿ ನಿಲ್ಲಿರಿ.  ನಿಮ್ಮ ಹಾಗೆ ದೇವರಿಂದ ಆಯ್ಕೆಯಾದ ಬಾಬಿಲೋನಿನಲ್ಲಿರುವ ಸಭೆ ನಿಮಗೆ ವಂದನೆಗಳನ್ನು ತಿಳಿಸುತ್ತದೆ.  ಅಂತೆಯೇ, ನನ್ನ ಮಗನಂತಿರುವ ಮಾರ್ಕನು ನಿಮ್ಮನ್ನು ವಂದಿಸಿದ್ದಾನೆ.  ಪ್ರೀತಿಯ ಮುದ್ದನ್ನಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ.  ಯೇಸುಕ್ರಿಸ್ತರಲ್ಲಿರುವ ನಿಮ್ಮೆಲ್ಲರಿಗೂ ಶಾಂತಿ ಸಮಾಧಾನ ಲಭಿಸಲಿ!

ಕೀರ್ತನೆ              89:1-2,5-6,15-16

ಶ್ಲೋಕ:  ಪ್ರಭೂ ಕೀರ್ತಿಸುವೆನು ಸದಾ ನಿನ್ನಚಲ ಪ್ರೀತಿಯನು.

1. ಪ್ರಭು ಕೀರ್ತಿಸುವೆನು ನಿನ್ನಚಲ ಸದಾ ಪ್ರೀತಿಯನು|

ಸಾರುವೆನು ತಲತಲಾಂತರಕು ನಿನ್ನ ಸತ್ಯತೆಯನು||

ನಿನ್ನಚಲ ಪ್ರೀತಿ ಪ್ರಭು, ನನಗೆ ಶಾಶ್ವತ ಸಿದ್ದ|

ನಿನ್ನ ಸತ್ಯತೆ ಆಗಸದಂತೆ ಸ್ಥಿರ ಸ್ಥಾಪಿತ||


2. ಪ್ರಸಿದ್ದಪಡಿಸುವುದು ಪ್ರಭು, ಗಗನವು ನಿನ್ನ ಮಹತ್ತನು|

ಸಂಕೀರ್ತಿಸುವುದು ಸ್ವರ್ಗೀಯ ಸಭೆ, ನಿನ್ನ ಸತ್ಯತೆಯನು||

ಸ್ವರ್ಗೀಯ ಸಭೆಯಲ್ಲಿ ಪ್ರತಿಭಾವಂತನು ದೇವನು|

ಸುತ್ತಣದೆಲ್ಲ ಪರಿವಾರಕ್ಕಿಂತ ಬಹು ಭೀಕರನು||


3. ಸುಖಪಡಿಸೆಮ್ಮನು ನೀ ಕಷ್ಟಪಡಿಸಿದಷ್ಟು ಕಾಲ ಕೆಡುಕನ್ನು ನಾವು ಅನುಭವಿಸಿದಷ್ಟು ವರ್ಷ ಕಾಲ||

ಪ್ರಕಟವಾಗಲಿ ನಿನ್ನ ರಕ್ಷಾಕಾರ್ಯ ಭಕ್ತರಿಗೆ|

ನಿನ್ನ ಮಹಿಮಾಶಕ್ತಿ ಅವರ ಸಂತಾನಕೆ||

ಮಾರ್ಕನು ಬರೆದ ಪವಿತ್ರ ಶುಭಸಂದೇಶದಿಂದ ವಾಚನ 16:15-20


ಆ  ಕಾಲದಲ್ಲಿ ಯೇಸು ತಮ್ಮ ಶಿಷ್ಯರಿಗೆ  ಹೀಗೆಂದು  ಹೇಳಿದರು: " ನೀವು ವಿಶ್ವದ ಎಲ್ಲೆಡೆಗಳಿಗೂ ಹೋಗಿ, ಜಗತ್ತಿಗೆಲ್ಲ ಶುಭಸಂದೇಶವನ್ನು ಪ್ರಭೋಧಿಸಿರಿ.  ವಿಶ್ವಾಸವಿಟ್ಟು ದೀಕ್ಷಾಸ್ನಾನ ಪಡೆಯುವವನು ಜೀವೋದ್ಧಾರ ಹೊಂದುವನು.  ವಿಶ್ವಾಸಿಸದೆ ಇರುವವನು ಖಂಡನೆಗೆ ಗುರಿಯಾಗುವನು.  ವಿಶ್ವಾಸಿಸುವುದರಿಂದ ಈ ಅದ್ಭುತ ಕಾರ್ಯಗಳು ಆಗುವುವು.  ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು;  ಹೊಸ ಭಾಷೆಗಳಲ್ಲಿ ಮಾತಾಡುವರು; ಕೈಗಳಿಂದ ಸರ್ಪಗಳನ್ನು ಎತ್ತಿದರೂ ವಿಷ ಪದಾರ್ಥಗಳನ್ನೇನಾದರೂ ಕುಡಿದರೂ ಯಾವ ಹಾನಿಯೂ ಅವರಿಗಾಗದು.  ಅವರು ರೋಗಿಗಳ ಮೇಲೆ ಕೈ ಇಟ್ಟರೆ ರೋಗಿಗಳು ಗುಣಹೊಂದುವರು, " ಎಂದರು.  ಯೇಸು ಶಿಷ್ಯರೊಡನೆ ಮಾತನಾಡಿದ ಮೇಲೆ ಸ್ವರ್ಗಾರೋಹಣವಾಗಿ ದೇವರ ಬಲಪಾರ್ಶ್ವದಲ್ಲಿ ಆಸೀನರಾದರು.  ಇತ್ತ ಶಿಷ್ಯರು ಹೊರಟು ಹೋಗಿ, ಎಲ್ಲೆಡೆಗಳಲ್ಲಿಯೂ ಶುಭ ಸಂದೇಶವನ್ನು ಬೋಧಿಸ ತೊಡಗಿದರು.  ಪ್ರಭು ಯೇಸು ಅವರೊಂದಿಗೆ ಕಾರ್ಯಸಾಧಿಸುತ್ತಾ, ಮಹತ್ಕಾರ್ಯಗಳಿಂದ ಶುಭಸಂದೇಶವನ್ನು ಸಮರ್ಥಿಸುತ್ತಾ ಇದ್ದರು.

No comments:

Post a Comment