ಸಾಧಾರಣ ಕಾಲದ 24ನೇ - ಶುಕ್ರವಾರ
ಮೊದಲನೇ ವಾಚನ: ಎಫೆಸಿಯರಿಗೆ: 4: 1-7, 11-13
ಪ್ರಭುವಿನ ಸೇವೆಯ ನಿಮಿತ್ತ ಸೆರೆಯಾಳಾಗಿರುವ ನಾನು ನಿಮ್ಮಲ್ಲಿ ಭಿನ್ನವಿಸುವುದು ಏನೆಂದರೆ: ದೇವರ ಕರೆಗೆ ಅನುಗುಣವಾಗಿ ಯೋಗ್ಯ ಬಾಳುವೆ ನಡೆಸಿರಿ. ಯಾವಾಗಲೂ, ದೀನದಯಾಳತೆ, ವಿನಯಶೀಲತೆ ಹಾಗು ಶಾಂತಿ ಸಮಾಧಾನವುಳ್ಳವರಾಗಿರಿ. ಪರಸ್ಪರ ಪ್ರೀತಿಯಿಂದಲೂ ಸಹನೆಯಿಂದಲೂ ವರ್ತಿಸಿರಿ. ಪವಿತ್ರಾತ್ಮರಿಂದ ಉಂಟಾಗುವ ಐಕ್ಯತೆಯನ್ನು ಕಾಪಾಡಿಕೊಳ್ಳಲು ಆಸಕ್ತರಾಗಿರಿ. ಅದು ನಿಮ್ಮನ್ನು ಸಮಾಧಾನದಲ್ಲಿ ಬಂಧಿಸುವುದು. ನೀವೆಲ್ಲರೂ ಒಂದೇ ಶರೀರಕ್ಕೆ ಸೇರಿದವರು; ಒಬ್ಬರೇ ಪವಿತ್ರಾತ್ಮರನ್ನು ಪಡೆದವರು; ಒಂದೇ ನಿರೀಕ್ಷೆಗಾಗಿ ಕರೆ ಹೊಂದಿದವರು. ನಮ್ಮೆಲ್ಲರಿಗೂ ಪ್ರಭು ಒಬ್ಬರೇ; ವಿಶ್ವಾಸವೂ ಒಂದೇ; ದೀಕ್ಷಾಸ್ನಾನವೂ ಒಂದೇ. ದೇವರು ಒಬ್ಬರೇ, ಸರ್ವರ ತಂದೆಯೂ ಅವರೇ; ಸರ್ವಶ್ರೇಷ್ಟರೂ ಅವರೇ. ಸರ್ವರ ಮೂಲಕ ಕಾರ್ಯ ನಿರ್ವಹಿಸುವವರೂ ಅವರೇ ಮತ್ತು ಆ ಸಮಸ್ತರಲ್ಲಿ ವಾಸಿಸುವವರೂ ಅವರೇ, ಆದರೂ ನಮ್ಮಲ್ಲಿ ಪ್ರತಿಯೊಬ್ಬನು ಕ್ರಿಸ್ತ ಯೇಸು ಅನುಗ್ರಹಿಸಿದ ಪ್ರಕಾರವೇ ವರಗಳನ್ನು ಪಡೆದಿದ್ದಾನೆ. ಎಂತಲೇ ಪವಿತ್ರಗ್ರಂಥದಲ್ಲಿ ಹೀಗಿದೆ: ಈ ವ್ಯಕ್ತಿ ನರ ಮಾನವರಿಗೆ ವರದಾನಗಳನ್ನಿತ್ತರು. ಕೆಲವರನ್ನು ಪ್ರೇಷಿತರನ್ನಾಗಿಯೂ ಕೆಲವರನ್ನು ಸಭಾ ಪಾಲಕರನ್ನಾಗಿಯೂ ಮತ್ತು ಬೋಧಕರನ್ನಾಗಿಯೂ ನೇಮಿಸಿದರು. ದೇವ ಜನರನ್ನು ಪರಿಣತರನ್ನಾಗಿಸಿ ದೇವರ ಸೇವೆಗೆ ಸಿದ್ದಗೊಳಿಸಲೆಂದು ಮತ್ತು ಯೇಸು ಕ್ರಿಸ್ತರ ದೇಹವಾದ ಧರ್ಮಸಭೆ ಅಭಿವೃದ್ದಿ ಹೊಂದಲೆಂದು ಈ ವರಗಳನ್ನು ಅವರಿಗೆ ನೀಡಿದರು. ಹೀಗೆ ನಾವೆಲ್ಲರೂ ಒಂದೇ ವಿಶ್ವಾಸದಿಂದಲೂ ದೇವರ ಪುತ್ರನನ್ನು ಕುರಿತ ಜ್ಞಾನದಿಂದಲೂ ಐಕ್ಯಮತ್ಯವನ್ನು ಮತ್ತು ಪರಿಪಕ್ವತೆಯನ್ನು ಪಡೆಯುತ್ತೇವೆ. ಜ್ಞಾನಾರ್ಜನೆಯನ್ನು ಪಡೆದವರಾಗಿ, ಕ್ರಿಸ್ತ ಯೇಸುವಿನ ಪರಿಪೂರ್ಣತೆಯ ಮಟ್ಟವನ್ನು ಮುಟ್ಟುತ್ತೇವೆ.
ಕೀರ್ತನೆ: 19: 2-3, 4-5
ಶ್ಲೋಕ: ಅವುಗಳ ನುಡಿಮಾತು ವ್ಯಾಪಿಸಿದೆ ಜಗದಾದ್ಯಂತ.
ಶುಭಸಂದೇಶ: ಮತ್ತಾಯ: 9: -9-13
ಯೇಸುಸ್ವಾಮಿ ಆ ಸ್ಥಳವನ್ನು ಬಿಟ್ಟು ಮುಂದಕ್ಕೆ ಹೋಗುತ್ತಿದ್ದಾಗ ಮತ್ತಾಯ ಎಂಬುವನನ್ನು ಕಂಡರು. ಅವನು ಸುಂಕ ವಸೂಲಿಗಾಗಿ ಉಕ್ಕಡದಲ್ಲಿ ಕುಳಿತ್ತಿದ್ದನು. "ನನ್ನನ್ನು ಹಿಂಬಾಲಿಸು," ಎಂದು ಹೇಳಿ ಯೇಸು ಅವನನ್ನು ಕರೆದರು. ಮತ್ತಾಯನು ಎದ್ದು ಅವರನ್ನು ಹಿಂಬಾಲಿಸಿದನು. ಇದಾದ ಮೇಲೆ ಯೇಸುಸ್ವಾಮಿ ಮತ್ತಾಯನ ಮನೆಯಲ್ಲಿ ಊಟಕ್ಕೆ ಕುಳಿತ್ತಿದ್ದರು. ಬಹುಮಂದಿ ಸುಂಕದವರೂ ಪಾಪಿಷ್ಟರೂ ಅಲ್ಲಿಗೆ ಬಂದರು. ಯೇಸು ಮತ್ತು ಅವರ ಶಿಷ್ಯರು ಕುಳಿತ್ತಿದ್ದ ಪಂಕ್ತಿಯಲ್ಲೇ ಇವರೂ ಊಟಕ್ಕೆ ಕುಳಿತರು. ಫರಿಸಾಯರು ಇದನ್ನು ಕಂಡದ್ದೇ ಯೇಸುವಿನ ಶಿಷ್ಯರನ್ನುದ್ದೇಶಿಸಿ, "ನಿಮ್ಮ ಗುರು ಇಂತಹ ಬಹಿಷ್ಕೃತ ಜನರ ಜೊತೆಯಲ್ಲಿ ಊಟ ಮಾಡುವುದೇ?" ಎಂದು ಆಕ್ಷೇಪಿಸಿದರು. ಇದನ್ನು ಕೇಳಿಸಿಕೊಂಡ ಯೇಸು, "ವೈದ್ಯನ ಅವಶ್ಯಕತೆ ಇರುವುದು ರೋಗಿಗಳಿಗೆ; ಆರೋಗ್ಯವಂತರಿಗಲ್ಲ. ನೀವು ಹೋಗಿ, ’ನನಗೆ ಬೇಕಾದುದು ದಯೆ ಯಜ್ಞ ಬಲಿಯಲ್ಲ’ ಎಂದು ಪವಿತ್ರಗ್ರಂಥದಲ್ಲಿ ಬರೆದಿರುವ ವಾಕ್ಯದ ಅರ್ಥವನ್ನು ಕಲಿತುಕೊಳ್ಳಿ. ನಾನು ಕರೆಯಲು ಬಂದಿರುವುದು ಧರ್ಮಿಷ್ಟರನ್ನಲ್ಲ, ಪಾಪಿಷ್ಟರನ್ನು," ಎಂದರು.
No comments:
Post a Comment