03.09.2018

ಸಾಧಾರಣ ಕಾಲದ 22ನೇ - ಸೋಮವಾರ

ಮೊದನೇ ವಾಚನ: 1 ಕೊರಿಂಥಿಯರಿಗೆ  2:1-5

ಸಹೋದರರೇ, ದೇವರ ಸತ್ಯಾರ್ಥವನ್ನು ಸಾರಲು ನಿಮ್ಮಲ್ಲಿಗೆ ನಾನು ಬಂದಾಗ ವಾಕ್ಚಾತುರ್ಯವನ್ನಾಗಲಿ , ಜ್ಞಾನ ಭಂಡಾರವನ್ನಾಗಲಿ ಪ್ರದರ್ಶಿಸುತ್ತಾ ಬರಲಿಲ್ಲ. ನಾನು ನಿಮ್ಮೊಡನೆ ಇದ್ದಾಗ, ಯೇಸು ಕ್ರಿಸ್ತರನ್ನು, ಅದೂ ಶಿಲುಬೆಗೇರಿಸಲಾದ ಯೇಸುವನ್ನು ಹೊರತು ಬೇರೆ ಯಾವುದನ್ನೂ ಅರಿಯಲು ಆಶಿಸಲಿಲ್ಲ. ಈ ಕಾರಣ, ನಾನು ನಿಮ್ಮ ನಡುವೆ ದುರ್ಬಲನೂ ಭಯಭೀತನೂ ಆಗಿದ್ದೆ. ನನ್ನ ಬೋಧನೆ ಹಾಗೂ ಮಾತುಕತೆ ಕೇವಲ ಬುದ್ಧಿವಂತಿಕೆಯಿಂದಾಗಲಿ ಮಾತಿನ ಚಮತ್ಕಾರ್ಯದಿಂದಾಗಲಿ ಕೂಡಿರಲಿಲ್ಲ; ಅದಕ್ಕೆ ಬದಲಾಗಿ ದೇವರ ಆತ್ಮವನ್ನು, ಅವರ ಶಕ್ತಿಯನ್ನು ಸಮರ್ಥಿಸುತ್ತಿದ್ದವು. ಅಂತೆಯೇ ನಿಮ್ಮ ವಿಶ್ವಾಸವು ಮನುಷ್ಯ ಜ್ಞಾನವನ್ನು ಆಧರಿಸಿದೆ, ದೇವರ ಶಕ್ತಿಯನ್ನು ಆಧರಿಸಬೇಕೆಂಬುದೇ  ನನ್ನ ಉದ್ದೇಶವಾಗಿತ್ತು.

 ಕೀರ್ತನೆ;  119:97, 98, 99, 100, 101, 102

 ಶ್ಲೋಕ: ಪ್ರಭೂ, ನಿನ್ನ ಧರ್ಮಶಾಸ್ತ್ರ ನನಗೆನಿತೋ ಪ್ರಿಯ.

 ಶುಭಸಂದೇಶ: ಲೂಕ 4:16-30
ಯೇಸುಸ್ವಾಮಿ ತಾವು ಬೆಳೆದ ಊರಾದ ನಜರೇತಿಗೆ ಬಂದರು. ವಾಡಿಕೆಯ ಪ್ರಕಾರ ಸಬ್ಬತ್ ದಿನ ಪ್ರಾರ್ಥನಾಮಂದಿರಕ್ಕೆ ಹೋದರು ಅಲ್ಲಿ ಪವಿತ್ರ ಗ್ರಂಥವನ್ನು ಓದುವುದಕ್ಕೆ ಅವರು ಎದ್ದು ನಿಂತಾಗ, ಪ್ರವಾದಿ ಯೆಶಾಯನ ಗ್ರಂಥದ ಸುರುಳಿಯನ್ನು ಅವರ ಕೈಗೆ ಕೊಟ್ಟರು. ಅದನ್ನು ಬಿಚ್ಚಿದಾಗ ಈ ಕೆಳಗಿನ ವಚನಗಳು ಯೇಸುವಿನ ಕಣ್ಣಿಗೆ ಬಿದ್ದವು: "ದೇವರಾತ್ಮ ನನ್ನ ಮೇಲಿದೆ ದೀನದಲಿತರಿಗೆ ಶುಭಸಂದೇಶವನ್ನು ಬೋಧಿಸಲೆಂದು ಅವರೆನ್ನನು ಅಭಿಷೇಕಿಸಿದ್ದಾರೆ. ಬಂಧಿತರಿಗೆ ಬಿಡುಗಡೆಯನ್ನು, ಅಂಧರಿಗೆ ದೃಷ್ಟಿದಾನವನ್ನು ಪ್ರಕಟಿಸಲೂ ಶೋಷಿತರಿಗೆ ಸ್ವಾತಂತ್ರ್ಯ ನೀಡಲೂ ದೇವರು ತಮ್ಮ ಜನತೆಯನ್ನು ಉದ್ಧರಿಸುವ ಕಾಲ ಬಂತೆದು ಸಾರಲೂ ಅವರು ನನ್ನನ್ನು ಕಳುಹಿಸಿದ್ದಾರೆ." ಈ ವಾಕ್ಯವನ್ನು ಓದಿ, ಸುರುಳಿಯನ್ನು ಸುತ್ತಿ, ಪ್ರಾರ್ಥನಾಮಂದಿರದ ಸೇವಕನ ಕೈಗಿತ್ತು, ಯೇಸು ಕುಳಿತುಕೊಂಡರು. ಅಲ್ಲಿದ್ದ ಎಲ್ಲರ ಕಣ್ಣುಗಳು ಅವರ ಮೇಲೆಯೇ ನಾಟಿದ್ದವು. ಆಗ ಯೇಸು, "ನೀವು ಈ ಪವಿತ್ರ ವಾಕ್ಯವನ್ನು ಕೇಳುತ್ತಿದ್ದ ಹಾಗೆಯೇ ಅದು ಇಂದು ನೆರವೇರಿತು," ಎಂದು ವಿವರಿಸಲಾರಂಭಿಸಿದರು. ಎಲ್ಲರೂ ಅವರನ್ನು ಬಹುವಾಗಿ  ಮೆಚ್ಚಿಕೊಂಡರು. ಅವರ ಬಾಯಿಂದ ಬಂದ ಮಧುರ ಮಾತುಗಳನ್ನು ಕೇಳಿ ಅಚ್ಚರಿಗೊಂಡರು. "ಇವನು ಜೋಸೆಫನ ಮಗನಲ್ಲವೇ?" ಎಂದು ಮಾತನಾಡಿಕೊಂಡರು. ಆನಂತರ ಯೇಸು ಅವರಿಗೆ,  "ವೈದ್ಯನೇ, ಮೊದಲು ನಿನ್ನನ್ನು ನೀನು ಗುಣಪಡಿಸಿಕೊ",  ಎಂಬ ಗಾದೆಯನ್ನು ನೀವು ನಿಸ್ಸಂದೇಹವಾಗಿ  ನನಗೆ ಅನ್ವಹಿಸುವಿರಿ; ಅಲ್ಲದೆ, 'ಕಫೆರ್ನವುಮಿನಲ್ಲಿ ನೀನು ಎಂಥೆಂಥ ಮಹಾತ್ಕಾರ್ಯಗಳನ್ನು ಮಾಡಿದೆ ಎಂದು ನಾವು ಕೇಳಿದ್ದೇವೆ; ಅಂಥವುಗಳನ್ನು ಈ ನಿನ್ನ ಸ್ವಂತ ಊರಿನಲ್ಲೂ ಮಾಡು.' ಎಂದು ಹೇಳುವಿರಿ. ಆದರೆ ಯಾವ ಪ್ರವಾದಿಯೂ ಸ್ವಗ್ರಾಮದಲ್ಲಿ ಸನ್ಮಾನಿತನಲ್ಲ. ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ. ಹಿಂದೆ ನಡೆದ ಒಂದು ಸಂಗತಿಯನ್ನು ಕೇಳಿ: ಎಲೀಯನ ಕಾಲದಲ್ಲಿ ಮೂರು ವರ್ಷ ಆರು ತಿಂಗಳು ಮಳೆ ಬಾರದೆ ದೇಶದಲ್ಲೆಲ್ಲಾ ದೊಡ್ಡ ಕ್ಷಾಮ ಬಂದೊದಗಿತ್ತು. ಆಗ ಇಸ್ರಯೇಲ್ ನಾಡಿನಲ್ಲಿ ಎಷ್ಟೋ ಮಂದಿ ವಿಧವೆಯರಿದ್ದರು. ಅವರಾರ ಬಳಿಗೂ ದೇವರು ಎಲಿಯನನ್ನು ಕಳಿಸಲಿಲ್ಲ, ಸಿದೋನ್ ದೇಶಕ್ಕೆ ಸೇರಿದ ಸರೆಪ್ತ ಊರಿನ ಒಬ್ಬ ವಿಧವೆಯ ಬಳಿಗೆ ಮಾತ್ರ ಕಳಿಸಿದರು. ಅಂತೆಯೇ, ಎಲೀಷನೆಂಬ ಪ್ರವಾದಿಯ ಕಾಲದಲ್ಲಿ ಇಸ್ರಯೇಲ್ ನಾಡಿನಲ್ಲಿ ಅನೇಕ ಕುಷ್ಠರೋಗಿಗಳು ಇದ್ದರು. ಅವರಲ್ಲಿ ಸಿರಿಯ ದೇಶದ ನಾಮನನನ್ನು ಬಿಟ್ಟು ಮಿಕ್ಕ ಯಾರೂ ಗುಣಮುಖರಾಗಲಿಲ್ಲ," ಎಂದು ಹೇಳಿದರು. ಇದನ್ನು ಕೇಳಿ, ಪ್ರಾರ್ಥನಾಮಂದಿರದಲ್ಲಿ ಇದ್ದ ಎಲ್ಲರೂ ಕಡುಗೋಪಗೊಂಡರು. ಯೇಸುವನ್ನು ಆ ಊರಹೊರಕ್ಕೆ ಎಳೆದುಕೊಂಡು, ತಮ್ಮ ಊರಿದ್ದ ಗುಡ್ಡದ ತುದಿಗೆ ಕೊಂಡೂಯ್ದು, ಅಲ್ಲಿಂದ ಅವರನ್ನು ಕೆಳಕ್ಕೆ ದಬ್ಬಬೇಕೆಂದಿದ್ದರು. ಯೇಸುವಾದರೋ, ಅವರ ನಡುವೆಯೇ ನಡೆದು, ತಮ್ಮ ದಾರಿ ಹಿಡಿದು ಹೋದರು.

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...