ಸಾಧಾರಣ ಕಾಲದ 24ನೇಯ ಭಾನುವಾರ
ಮೊದಲನೇ ವಾಚನ : ಯೆಶಾಯ 50:5-9
ತೆರೆದಿಹನು ಸ್ವಾಮಿ ಸರ್ವೇಶ್ವರ ನನ್ನ ಕಿವಿಯನ್ನು ಎಂದೇ ವಿಮುಖನಾಗಲಿಲ್ಲ ನಾನು, ಪ್ರತಿಭಟಿಸಲಿಲ್ಲ ಆತನನ್ನು, ಬೆನ್ನುಕೊಟ್ಟೆನು ಹೊಡೆಯುವವನಿಗೆ ಗಡ್ಡ ಒಡ್ಡಿದೆನು ಅದನ್ನು ಕೀಳುವವರಿಗೆ ಮುಖ ಮರೆಮಾಡಲಿಲ್ಲ ಉಗುಳುಬುಗಳಿಗೆ. ನೆರವಾಗಿಹನು.ನನಗೆ ಸ್ವಾಮಿ ಸರ್ವೇಶ್ವರ ಎಂದೇ ತಲೆತಗ್ಗಿಸಲಿಲ್ಲ ನಾನು ನಾಚಿಕೆಯಿಂದ ಗಟ್ಟಿಮಾಡಿಕೊಂಡೆ ಮುಖವನ್ನು ಕಗ್ಗಲ್ಲಿನ ಹಾಗೆ ಆಶಾಬಂಗಪಡಲಾರೆನೆಂದು ಗೊತ್ತು ನನಗೆ. ನನ್ನ ಪರ ತೀರ್ಪುಕೊಡುವವನು ಇಹನು ಹತ್ತಿರದಲ್ಲೆ. ನನಗೆ ಪ್ರತಿಕಕ್ಷಿ ಯಾರೇ ಬರಲಿ ಮುಂದಕ್ಕೆ. ನನ್ನೊಡನೆ ವ್ಯಾಜ್ಯಮಾಡಬಲ್ಲವನಾರೇ ನಿಲ್ಲಲಿ ನ್ಯಾಯಕ್ಕೆ ಇಗೋ, ಸ್ವಾಮಿ ಸರ್ವೇಶ್ವರ ನಿಂತಿಹರು ನನಗೆ ನೆರವಾಗಿ ನಿರ್ಣಯಿಸುವವನು ಯಾರು ನನ್ನನ್ನು ಅಪರಾಧಿಯಾಗೀ ನುಸಿತಿಂದ ವಸ್ತ್ರದಂತೆ ಅಳಿದು ಹೋಗುವವರು ಜೀರ್ಣವಾಗಿ.
ಕೀರ್ತನೆ: 116:1-2, 3-4, 5-6, 8-9
ಶ್ಲೋಕ: ನಡೆವೆನು ನಾನು ಪ್ರಭುವಿನ ಕಣ್ಮುಂದೆ ಅಂತೆಯೇ ಬಾಳುವೆ ಜೀವಲೋಕದೊಳಿದ್ದೇ.
ಎರಡನೇ ವಾಚನ: ಯಕೋಬ 2:14-18
ಸಹೋದರರೇ, ಒಬ್ಬನು ತನಗೆ ವಿಶ್ವಾಸ ಇದೆಯೆಂದು ಕೊಚ್ಚಿಕೊಂಡು ಅದನ್ನು ಕಾರ್ಯತಃ ವ್ಯಕ್ತಪಡಿಸದಿದ್ದರೆ ಅದರಿಂದ ಪ್ರಯೋಜನ ಏನು? ಅಂಥ ವಿಶ್ವಾಸ ಅವನನ್ನು ಉದ್ಧಾರ ಮಾಡಬಲ್ಲುದೇ? ಒಂದು ವೇಳೆ ಒಬ್ಬ ಸಹೋದರನಾಗಲಿ, ಸಹೋದರಿಯಾಗಲಿ ದಿನನಿತ್ಯ ಊಟಬಟ್ಟೆಗಿಲ್ಲದೆ ಇರುವಾಗ, ನಿಮ್ಮಲ್ಲಿ ಯಾರಾದರೂ ಅವರಿಗೆ ಅಗತ್ಯವಾದುದನ್ನು ನೀಡದೆ, "ಹೋಗು, ಸುಖವಾಗಿ ಬಾಳು, ಚಳಿ ಕಾಯಿಸಿಕೊ, ಹೊಟ್ಟೆ ತುಂಬಾ ತಿನ್ನು," ಎಂದು ಬರೀ ಬಾಯಿಮಾತಿನಲ್ಲಿ ಉಪಚರಿಸಿದರೆ ಅದರಿಂದಾದ ಪ್ರಯೋಜನವೇನು? ಸತ್ಕ್ರಿಯೆಗಳಿಲ್ಲದ ವಿಶ್ವಾಸ ಸತ್ತ ವಿಶ್ವಾಸವೇ ಸರಿ. ಒಬ್ಬನು, "ನಿನ್ನಲ್ಲಿ ವಿಶ್ವಾಸವಿದೆ, ನನ್ನಲ್ಲಿ ಸತ್ಕ್ರಿಯೆಗಳಿವೆ" ಎನ್ನಬಹುದು. ಅಂಥವನಿಗೆ, "ಸತ್ಕ್ರಿಯೆಗಳಿಲ್ಲದ ನಿನ್ನ ವಿಶ್ವಾಸವನ್ನು ನನಗೆ ತೋರಿಸು; ನನ್ನ ಸತ್ಕಾರ್ಯಗಳ ಮೂಲಕ ನನ್ನ ವಿಶ್ವಾಸವನ್ನು ನಿನಗೆ ವ್ಯಕ್ತಪಡಿಸುತ್ತೇನೆ," ಎಂದು ಉತ್ತರಿಸಬಹುದು.
ಶುಭಸಂದೇಶ: ಮಾರ್ಕ 8:27-35
ಯೇಸುಸ್ವಾಮಿ ತನ್ನ ಶಿಷ್ಯರ ಸಂಗಡ ಫಿಲಿಪ್ಪನ ಸೆಜರೇಯ ಎಂಬ ಪಟ್ಟಣದ ಪಕ್ಕದಲ್ಲಿರುವ ಹಳ್ಳಿಗಳಿಗೆ ಪ್ರಯಾಣ ಬೆಳೆಸಿದರು. ದಾರಿಯಲ್ಲಿ, "ಜನರು ನನ್ನನ್ನು ಯಾರೆಂದು ಹೇಳುತ್ತಾರೆ?" ಎಂದು ಶಿಷ್ಯರನ್ನು ಕೇಳಿದರು. ಅದಕ್ಕೆ ಶಿಷ್ಯರು, "ಕೆಲವರು ತಮ್ಮನ್ನು "ಸ್ನಾನಿಕ ಯೊವಾನ್ನ' ಎನ್ನುತ್ತಾರೆ. ಇನ್ನು ಕೆಲವರು "ಎಲಿಯನು," ಮತ್ತೆ ಕೆಲವರು ಪ್ರವಾದಿಗಳಲ್ಲಿ ತಾವೂ ಒಬ್ಬರು ಎನ್ನುತ್ತಾರೆ," ಎಂದರು. ಆಗ ಯೇಸು, "ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?" ಎಂದು ಪ್ರಶ್ನಿಸಿದರು. ಅದಕ್ಕೆ ಪೇತ್ರನು, "ಅಭಿಷಿಕ್ತರಾದ ಲೋಕೋದ್ಧಾರಕ ತಾವೇ" ಎಂದು ಉತ್ತರವಿತ್ತನು. ಆಗ ಯೇಸು, "ಈ ವಿಷಯವನ್ನು ಯಾರಿಗೂ ತಿಳಿಸಬೇಡಿ," ಎಂದು ತಮ್ಮ ಶಿಷ್ಯರಿಗೆ ಕಟ್ಟಪ್ಪಣೆ ಮಾಡಿದರು. ಈ ಘಟನೆಯ ಬಳಿಕ ಯೇಸುಸ್ವಾಮಿ, "ನರಪುತ್ರನು ಕಠಿಣವಾದ ಯಾತನೆಯನ್ನು ಅನುಭವಿಸಬೇಕಾಗಿದೆ. ಸಭಾ ಪ್ರಮುಖರಿಂದಲೂ ಪ್ರಧಾನ ಯಾಜಕರಿಂದಲೂ ಧರ್ಮಶಾಸ್ತ್ರಿಗಳಿಂದಲೂ ಆತನು ತಿರಸ್ಕೃತನಾಗಿ ಕೊಲ್ಲಲ್ಪಡುವನು; ಆದರೆ ಮೂರನೇ ದಿನ ಪುನರುತ್ದಾನ ಹೊಂದುವನು," ಎಂದು ತಮ್ಮ ಶಿಷ್ಯರಿಗೆ ಮುಚ್ಚು ಮರೆಯಿಲ್ಲದೆ ಬೋಧಿಸಲಾರಂಭಿಸಿದರು. ಇದನ್ನು ಕೇಳಲಾಗದೇ ಪೇತ್ರನು ಅವರನ್ನು ಪ್ರತ್ಯೇಕವಾಗಿ ಕರೆದು, " ನೀವು ಹೀಗೆಲ್ಲಾ ಹೇಳಬಾರದು," ಎಂದು ಪ್ರತಿಭಟಿಸಿದನು. ಆಗ ಯೇಸು ಹಿಂದಕ್ಕೆ ತಿರುಗಿ, ತಮ್ಮ ಶಿಷ್ಯರನ್ನು ನೋಡಿ, ಪೇತ್ರನನ್ನು ಗದರಿಸುತ್ತಾ, "ಸೈತಾನನೇ, ತೊಲಗು ಇಲ್ಲಿಂದ; ನಿನ್ನ ಈ ಆಲೋಚನೆ ಮನುಷ್ಯರದೇ ಹೊರತು ದೇವರದಲ್ಲ," ಎಂದರು. ಆನಂತರ ಯೇಸುಸ್ವಾಮಿ ತಮ್ಮ ಶಿಷ್ಯರನ್ನೂ ಜನರ ಗುಂಪನ್ನೂ ಒಟ್ಟಾಗಿ ತಮ್ಮ ಬಳಿಗೆ ಕರೆದು, "ಯಾರಿಗಾದರೂ ನನ್ನನ್ನು ಹಿಂಬಾಲಿಸಲು ಮನಸ್ಸಿದ್ದರೆ, ಅವನು ತನ್ನನ್ನು ತಾನೇ ಪರಿತ್ಯಜಿಸಿ, ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ; ತನ್ನ ಪ್ರಾಣವನ್ನು ಉಳಿಸಿಕೊಳ್ಳಲು ಹಾತೊರೆಯುವವನು ಅದನ್ನು ಕಳೆದುಕೊಳ್ಳುವನು. ಆದರೆ ನನ್ನ ನಿಮಿತ್ತ ಹಾಗೂ ಶುಭಸಂದೇಶದ ನಿಮಿತ್ತ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ನಿತ್ಯಕ್ಕೂ ಉಳಿಸಿಕೊಳ್ಳುವನು.
No comments:
Post a Comment