ಮೊದಲನೇ ವಾಚನ: 1 ಕೊರಿಂಥಿಯರಿಗೆ 4:1-5
ನಾವು ಕ್ರಿಸ್ತಯೇಸುವಿನ ದಾಸರೆಂದೂ ದೇವರ ಸತ್ಯಾರ್ಥಗಳ ನಂಬಿಗಸ್ಥ ನಿರ್ವಾಹಕರೆಂದೂ ಜನರು ನಮ್ಮನ್ನು ಪರಿಗಣಿಸಲಿ. ನಿರ್ವಾಹಕರು ಪ್ರಾಮಾಣಿಕರಾಗಿರಬೇಕಾದುದು ಅತ್ಯವಶ್ಯ. ನನ್ನ ವಿಷಯದಲ್ಲಿ ಹೇಳುವುದಾದರೆ, ನಿಮ್ಮಿಂದಾಗಲೀ, ಮಾನವ ನಿಯಮಿತ ನ್ಯಾಯಾಲಯದಿಂದಾಗಲೀ, ನನ್ನ ವಿಚಾರಣೆಯಾಗುವುದರ ಬಗ್ಗೆ ನನಗೆ ಕಿಂಚಿತ್ತೂ ಚಿಂತೆಯಿಲ್ಲ. ನನಗೆ ನಾನೇ ನ್ಯಾಯತೀರ್ಪು ಮಾಡಿಕೊಳ್ಳುವುದೂ ಇಲ್ಲ. ನನ್ನಲ್ಲಿ ದೋಷವಿದೆಯೆಂದು ಹೇಳುವಂತಿಲ್ಲ. ನನ್ನ ನ್ಯಾಯನಿರ್ಣಯ ಮಾಡುವವರು ಪ್ರಭುವೇ. ಅದೇ ಮೇರೆಗೆ, ನೀವು ಸೂಕ್ತಕಾಲಕ್ಕೆ ಮುಂಚೆ ತೀರ್ಪುಮಾಡಬೇಡಿ; ಪ್ರಭುವಿನ ಪುನರಾಗಮನದವರೆಗೂ ಕಾದುಕೊಂಡಿರಿ. ಕತ್ತಲಲ್ಲಿ ಗುಪ್ತವಾಗಿರುವುಗಳನ್ನು ಪ್ರಭುವು ಬೆಳಕಿಗೆ ತರುವರು. ಅಂತರಂಗದ ಯೋಜನೆಗಳನ್ನು ಬಹಿರಂಗ ಪಡಿಸುವರು. ಆಗ ಪ್ರತಿಯೊಬ್ಬನಿಗೂ ತಕ್ಕ ಪ್ರಶಂಸೆ ದೇವರಿಂದಲೇ ದೊರಕುವುದು.
ಕೀರ್ತನೆ: 37:3-4, 5-6, 27-28, 39-40
ಶ್ಲೋಕ: ಸಜ್ಜನರ ಜೀವೋದ್ಧಾರ ಪ್ರಭುವಿನಿಂದ
ಶುಭಸಂದೇಶ: ಲೂಕ 5:33-39
"ಯೊವಾನ್ನನ ಶಿಷ್ಯರು ಪದೇ ಪದೇ ಉಪವಾಸವಿದ್ದು ಪ್ರಾರ್ಥನೆ ಮಾಡುತ್ತಾರೆ. ಅದರಂತೆಯೇ, ಫರಿಸಾಯರ ಶಿಷ್ಯರೂ ಮಾಡುತ್ತಾರೆ. ನಿನ್ನ ಶಿಷ್ಯರಾದರೋ ತಿಂದು ಕುಡಿಯುವುದರಲ್ಲಿಯೇ ಇದ್ದಾರೆ," ಎಂದು ಕೆಲವರು ಮೂದಲಿಸಿದರು. ಅದಕ್ಕೆ ಯೇಸು, "ಮದುವಣಿಗನು ಜೊತೆಯಲ್ಲಿರುವಾಗ ಮದುವೆಯ ಅತಿಥಿಗಳನ್ನು ಉಪವಾಸವಿರಿಸಲಾದೀತೆ? ಮದುವಣಿಗನು ಅವರಿಂದ ಅಗಲ ಬೇಕಾಗುವ ಕಾಲವು ಬರುವುದು ಆ ದಿನಗಳು ಬಂದಾಗ ಅವರು ಉಪವಾಸಮಾಡುವರು." ಎಂದು ಉತ್ತರಕೊಟ್ಟರು. ಮತ್ತೆ ಅವರಿಗೆ ಯೇಸು ಈ ಸಾಮತಿಯನ್ನು ಹೇಳಿದರು. "ಹಳೆಯ ಅಂಗಿಗೆ ತೇಪೆ ಹಾಕಲು ಹೊಸ ಅಂಗಿಯಿಂದ ತುಂಡನ್ನು ಯಾರೂ ಹರಿಯುವುದಿಲ್ಲ. ಹಾಗೆ ಮಾಡಿದ್ದೇ ಆದರೆ ಹೊಸದೂ ಹರುಕಲಾಗಿ, ಹಳೆಯದೂ ಹೊಸ ತೇಪೆಗೆ ಹೊಂದಿಕೆಯಾಗದೆ ಹೋಗುತ್ತದೆ. ಅಂತೆಯೇ, ಹಳೆಯ ಬುದ್ದಲಿಗಳಲ್ಲಿ ಹೊಸ ಮದ್ಯವನ್ನು ಯಾರೂ ತುಂಬಿಡುವುದಿಲ್ಲ. ತುಂಬಿ ಇಟ್ಟರೆ, ಹೊಸ ಮದ್ಯವು ಬುದ್ದಲಿಗಳನ್ನು ಬಿರಿಯುತ್ತದೆ; ಮದ್ಯ ಚೆಲ್ಲಿ ಹೋಗುತ್ತದೆ; ಬುದ್ದಲಿಗಳು ಹಾಳಾಗುತ್ತವೆ. ಆದುದರಿಂದ ಹೊಸ ಮದ್ಯವನ್ನು ಹೊಸ ಬುದ್ದಲಿಗಳಲ್ಲೇ ತುಂಬಿಡಬೇಕು. ಹಳೇ ಮದ್ಯ ಕಡಿದವನಿಗೆ ಹೊಸದು ರುಚಿಸುವುದಿಲ್ಲ. ಅವನು ಹಳೆಯದೇ ಶ್ರೇಷ್ಠವೆನ್ನುತ್ತಾನೆ," ಎಂದರು.
No comments:
Post a Comment