ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

30.09.2018

ವರ್ಷದ ಇಪ್ಪತ್ತಾರನೆಯ ಭಾನುವಾರ

ಮೊದಲನೆಯ ವಾಚನ
ಸಂಖ್ಯಾಕಾಂಡದಿಂದ ವಾಚನ                                                                            11:25-29

ಸರ್ವೇಶ್ವರ ಅನುಗ್ರಹದಿಂದ ಅವರ ಜನರೆಲ್ಲರೂ
ಆತ್ಮಶಕ್ತಿಯನ್ನು ಹೊಂದಿ ಪ್ರವಾದಿಸುವವರಾದರೆ ಎಷ್ಟೋ ಒಳ್ಳೆಯದು.
ಮೋಶೆ ಜನರ ಹಿರಿಯರಲ್ಲಿ ಎಪ್ಪತ್ತು ಮಂದಿಯನ್ನು ಕೂಡಿಸಿ ದೇವದರ್ಶನದ ಗುಡಾರದ ಸುತ್ತಲೂ ನಿಲ್ಲಿಸಿದನು. ಆಗ ಸರ್ವೇಶ್ವರ ಮೇಘದಲ್ಲಿ ಇಳಿದು ಬಂದು ಅವನೊಡನೆ ಮಾತಾಡಿ ಅವನಿಗೆ ಅನುಗ್ರಹಿಸಲಾಗಿದ್ದ ಆತ್ಮಶಕ್ತಿಯಲ್ಲಿ ಕಿಂಚಿತ್ತನ್ನು ಆ ಎಪ್ಪತ್ತು ಮಂದಿ ಹಿರಿಯರಿಗೂ ಹಂಚಿದರು. ಆ ಶಕ್ತಿ ಅವರ ಮೇಲೆ ಇಳಿದುಬಂದಾಗ ಅವರು ಪರವಶರಾಗಿ ಪ್ರವಾದಿಸಿದರು. ಅಂಥ ಅನುಭವ ಅವರಿಗೆ ಮತ್ತೆ ಬರಲಿಲ್ಲ. ಎಲ್ದಾದ್ ಮತ್ತು ಮೇದಾದ್ ಎಂಬ ಹಿರಿಯರಿಬ್ಬರೂ ಪಾಳೆಯದೊಳಗೆ ಉಳಿದುಕೊಂಡಿದ್ದರು. ಅವರ ಹೆಸರು ಲಿಖಿತವಾಗಿದ್ದರೂ ಅವರು ದೇವದರ್ಶನದ ಗುಡಾರಕ್ಕೆ ಹೊರಟು ಬಂದಿರಲಿಲ್ಲ. ಆ ಆತ್ಮಶಕ್ತಿ ಅವರ ಮೇಲೂ ಇಳಿದುಬಂದುದರಿಂದ ಅವರು ಕೂಡ ಪಾಳೆಯದಲ್ಲೇ ಪರವಶರಾಗಿ ಪ್ರವಾದಿಸಿದರು. ಆಗ ಒಬ್ಬ ಯುವಕ ಮೋಶೆಯ ಬಳಿಗೆ ಓಡಿಬಂದು, ಎಲ್ದಾದ್ ಮತ್ತು ಮೇದಾದರು ಪಾಳೆಯದಲ್ಲೆ ಪರವಶರಾಗಿ ಪ್ರವಾದಿಸುತ್ತಿದ್ದಾರೆ, ಎಂದು ತಿಳಿಸಿದನು. ಚಿಕ್ಕಂದಿನಿಂದ ಮೋಶೆಗೆ ಶಿಷ್ಯನಾಗಿದ್ದ ಹಾಗೂ ನೂನನ ಮಗನಾಗಿದ್ದ ಯೆಹೋಶುವನು ಮೋಶೆ, ನನ್ನ ಗೌರವ ಕಾಪಾಡಲು ನಿನಗೇಕೆ ಅಸೂಯೆ? ಸರ್ವೇಶ್ವರನ ಅನುಗ್ರಹದಿಂದ ಅವರ ಜನರೆಲ್ಲರೂ ಆತ್ಮಶಕ್ತಿಯನ್ನು ಹೊಂದಿ ಪ್ರವಾದಿಸುವವರಾದರೆ ಎಷ್ಟೋ ಒಳ್ಳೆಯದು! ಎಂದನು.
ದೇವರ ವಾಕ್ಯವಿದು.

ಕೀರ್ತನೆ  : 19:8, 10,12-13,14

ಶ್ಲೋಕ : ಪ್ರಭುವಿನ ನಿಯಮ ನೀತಿಬದ್ಧ; ಮನಸ್ಸಿಗದು ಒಸಗೆ |

ಎರಡನೆಯ ವಾಚನ
ಸಂತ ಯಕೋಬನು ಬರೆದ ಪತ್ರದಿಂದ ವಾಚನ                                                5:1-6

ನಿಮ್ಮ ಐಶ್ವರ್ಯ ನಾಶವಾಗಿದೆ.
ಐಶ್ವರ್ಯವಂತರೇ, ಕೇಳಿ: ನಿಮಗೆ ಬರಲಿರುವ ಮಹಾಕಷ್ಟಗಳಿಗಾಗಿ ಕಣ್ಣೀರಿಡಿ, ಗೋಳಾಡಿರಿ. ನಿಮ್ಮ ಐಶ್ವರ್ಯ ನಾಶವಾಗಿದೆ. ನಿಮ್ಮ ಬೆಲೆಬಾಳುವ ಬಟ್ಟೆಗಳಿಗೆ ನುಸಿ ಹತ್ತಿದೆ. ನಿಮ್ಮ ಬೆಳ್ಳಿಬಂಗಾರಕ್ಕೆ ತುಕ್ಕುಹಿಡಿದಿದೆ. ಆ ತುಕ್ಕೇ ನಿಮಗೆ ವಿರುದ್ಧ ಸಾಕ್ಷಿಯಾಗಿ ನಿಮ್ಮನ್ನು ಬೆಂಕಿಯಂತೆ ದಹಿಸಿಬಿಡುತ್ತದೆ. ಅಂತ್ಯಕಾಲಕ್ಕಾಗಿ ನೀವು ಬೆಂಕಿಯನ್ನೇ ಶೇಖರಿಸಿಟ್ಟುಕೊಂಡಿದ್ದೀರಿ. ನಿಮ್ಮ ಹೊಲಗಳಲ್ಲಿ ದುಡಿದ ಆಳುಗಳ ಕೂಲಿಯನ್ನು ಮೋಸದಿಂದ ಹಿಡಿದಿಟ್ಟುಕೊಂಡಿದ್ದೀರಿ. ನೀವು ಕೊಡದ ಕೂಲಿಯೇ ನಿಮಗೆ ವಿರುದ್ಧವಾಗಿ ಕೂಗಿಕೊಳ್ಳುತ್ತಿದೆ. ಕೂಲಿಯಾಳುಗಳ ಗೋಳಾಟ ಸ್ವರ್ಗಸೇನಾಧೀಶ್ವರನಾದ ಪ್ರಭುವಿನ ಕಿವಿಗೂ ಬಿದ್ದಿದೆ. ಲೋಕದಲ್ಲಿ ನೀವು ಸುಖಭೋಗಿಗಳಾಗಿ ವಿಲಾಸ ಜೀವನ ನಡೆಸಿದ್ದೀರಿ. ವಧೆಯ ದಿನಕ್ಕಾಗಿ ಪಶುಗಳಂತೆ ನಿಮ್ಮನ್ನೇ ಕೊಬ್ಬಿಸಿಕೊಂಡಿದ್ದೀರಿ. ನಿಮ್ಮನ್ನು ವಿರೋಧಿಸಿದ ಸಜ್ಜನನನ್ನು ಖಂಡಿಸಿ ಕೊಲೆಮಾಡಿಸಿದ್ದೀರಿ.
- ದೇವರ ವಾಕ್ಯವಿದು.

ಘೋಷಣೆ                                                                                               ಯೊವಾನ್ನ 8:12
          ಅಲ್ಲೆಲೂಯ, ಅಲ್ಲೆಲೂಯ !
          ನಾನೇ ಜಗಜ್ಜ್ಯೋತಿ, ನನ್ನನ್ನು ಹಿಂಬಾಲಿಸುವವನು
          ಕತ್ತಲಲ್ಲಿ ನಡೆಯುವುದಿಲ್ಲ.
          ಜೀವದಾಯಕ ಜ್ಯೋತಿ ಅವನಲ್ಲಿರುತ್ತದೆ.
          ಅಲ್ಲೆಲೂಯ !

ಶುಭಸಂದೇಶ
ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ                                9:38-43, 45, 47-48
ನಮಗೆ ವಿರೋಧಿ ಅಲ್ಲದವನು ನಮ್ಮ ಪರವಾದಿ.
ಯೊವಾನ್ನನು ಯೇಸುಸ್ವಾಮಿಗೆ, ಗುರುವೇ, ಯಾರೋ ಒಬ್ಬನು ತಮ್ಮ ಹೆಸರಿನಲ್ಲಿ ದೆವ್ವ ಬಿಡಿಸುವುದನ್ನು ಕಂಡೆವು. ಅವನು ನಮ್ಮವನಲ್ಲ. ಆದಕಾರಣ ಅವನನ್ನು ತಡೆದೆವು, ಎಂದನು. ಅದಕ್ಕೆ ಯೇಸು, ಅವನನ್ನು ತಡೆಯಬೇಡಿ, ನನ್ನ ಹೆಸರಿನಲ್ಲಿ ಅದ್ಭುತ ಮಾಡುವವನು ಮರುಕ್ಷಣವೇ ನನ್ನ ವಿಷಯವಾಗಿ ಅಪಪ್ರಚಾರ ಮಾಡನು. ನಮಗೆ ವಿರೋಧಿ ಅಲ್ಲದವನು ನಮ್ಮ ಪರವಾದಿ. ನೀವು ಕ್ರಿಸ್ತಭಕ್ತರು ಎಂದು ಯಾವನಾದರೂ ನಿಮಗೆ ಕುಡಿಯಲು ಒಂದು ಲೋಟ ನೀರನ್ನು ಕೊಟ್ಟರೂ ಅದಕ್ಕೆ ತಕ್ಕ ಪ್ರತಿಫಲವನ್ನು ಅವನು ತಪ್ಪದೆ ಪಡೆಯುವನು ಎಂದು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ, ಎಂದರು. ಯೇಸುಸ್ವಾಮಿ ತಮ್ಮ ಬೋಧನೆಯನ್ನು ಮುಂದುವರಿಸುತ್ತಾ, ನನ್ನಲ್ಲಿ ವಿಶ್ವಾಸವಿಟ್ಟಿರುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವನಾದರೂ ಪಾಪಕ್ಕೆ ಕಾರಣನಾದರೆ, ಅಂಥವನ ಕೊರಳಿಗೆ ದೊಡ್ಡ ಬೀಸುಕಲ್ಲನ್ನು ಕಟ್ಟಿ, ಅವನನ್ನು ಸಮುದ್ರದಲ್ಲಿ ದಬ್ಬುವುದೇ ಅವನಿಗೆ ಲೇಸು. ನಿನ್ನ ಕೈ ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿ ಹಾಕು; ನಿನ್ನ ಕಾಲು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕತ್ತರಿಸಿಹಾಕು. ನಿನ್ನ ಕಣ್ಣು ನಿನಗೆ ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತುಹಾಕು. ಎರಡು ಕಣ್ಣುಳ್ಳವನಾಗಿ ನರಕಕ್ಕೆ ತಳ್ಳಿಸಿಕೊಳ್ಳುವುದಕ್ಕಿಂತ ಒಕ್ಕಣ್ಣನಾಗಿ ದೇವರ ಸಾಮ್ರಾಜ್ಯ ಸೇರುವುದೇ ಲೇಸು. ನರಕದಲ್ಲಿ ಅವರನ್ನು ಕಡಿಯುವ ಹುಳ ಸಾಯದು, ಸುಡುವ ಬೆಂಕಿ ಆರದು, ಎಂದರು.
ಪ್ರಭು ಕ್ರಿಸ್ತ ಶುಭಸಂದೇಶವಿದು

ಚಿಂತನೆ : ಪಾಪ ಮಾಡಿದವನಿಗಿಂತ ಪಾಪಕ್ಕೆ ಕಾರಣವಾದುದರ ಬಗ್ಗೆ ಇಂದಿನ ಶುಭಸಂದೇಶ ಬಹಳ ಕಠಿಣವಾದ ನಿಲುವನ್ನು ತೆಗೆದುಕೊಳ್ಳುತ್ತದೆ. ಟಿನ್ನಿಸ್ ಆಟದಲ್ಲಿ ಒಬ್ಬ ಆಟಗಾರನ ಸೋಲು ಗೆಲುವಿಗೆ ಅವನ ಉತ್ತಮ ಆಟ ಹೇಗೆ ಕಾರಣವಾಗಬಲ್ಲದೋ, ಅವನು ಆಟದಲ್ಲಿ ಮಾಡಿದ Forced errors ಹಾಗೂ unforced errors ಕೂಡ ಅಷ್ಟೇ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಎದುರಾಳಿಯ ಉತ್ತಮ ಆಟದಿಂದ ನಾವು ಮಾಡಬಹುದಾದ ತಪ್ಪುಗಳು forced errorsಗಳಾದರೆ, ನಮ್ಮದೇ ತಪ್ಪುಗಳು unforced errors ಆಗುತ್ತದೆ. ಆದಷ್ಟು ಕಡಿಮೆ ತಪ್ಪುಗಳನ್ನು ಮಾಡುವ ಆಟಗಾರ ಆ ಪಂದ್ಯವನ್ನು ಗೆಲ್ಲುವುದು ಸಹಜ. 

ಅಂತೆಯೇ ನಮ್ಮ ಜೀವನದಲ್ಲಿ ನಮ್ಮ ಪಾಪಗಳಿಗೆ ಸಹಾ ಬಾಹಿರ ವಿಷಯಗಳು ಎಷ್ಟು ಕಾರಣವೋ, ನಮ್ಮದೇ ದೌರ್ಬಲ್ಯಗಳೂ ಅಷ್ಟೇ ಕಾರಣವಾಗಬಲ್ಲದು. ಈ ಕಾರಣವಾಗುವ ಅಂಶಗಳತ್ತ ಗಮನಕೊಟ್ಟು ಅದನ್ನು ದೂರವಿರಿಸಿಕೊಳ್ಳಬೇಕೆಂಬ ಸಂದೇಶ ನಮಗಿದೆ. ನಮ್ಮ ಪಾಪಗಳಿಗೆ ಕಾರಣವಾಗುವ forced ಹಾಗೂ unforced ಕಾರಣಗಳ ಬಗ್ಗೆ ಧ್ಯಾನಿಸೋಣ, ಸರಿಪಡಿಸಿಕೊಳ್ಳೋಣ -  ಪ್ರಮಇ

No comments:

Post a Comment