ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

23.09.2018

ವರ್ಷದ ಇಪ್ಪತ್ತೈದನೆಯ ಭಾನುವಾರ
ವರ್ಷ – B

ಮೊದಲನೆಯ ವಾಚನ

 ಸುಜ್ಞಾನ ಗ್ರಂಥದಿಂದ ವಾಚನ    - 2:12, 17-20
ಅವಮಾನಕರ ಮರಣಶಿಕ್ಷೆಯನ್ನು ಅವನಿಗೆ ವಿಧಿಸೋಣ
ನೀತಿವಂತನಿಗಾಗಿ ಹೊಂಚುಹಾಕೋಣ ಬಲೆಯೊಡ್ಡಿ 
ಅವನು ನಮಗೊಂದು ಪೀಡೆ, ನಮ್ಮ ನಡತೆಗೆ ಅಡ್ಡಿ
ಆರೋಪಿಸುತ್ತಾನೆ ಧರ್ಮಕ್ಕೆ ವಿರುದ್ಧ ಪಾಪಕಟ್ಟಿಕೊಂಡೆವೆಂದು
ದೂಷಿಸುತ್ತಾನೆ ಸಂಪ್ರದಾಯದ ವಿರುದ್ಧ ಪಾಪ ಮಾಡಿದೆವೆಂದು.
ಅವನ ಮಾತುಗಳೇ ಸತ್ಯವೇನೋ ನೋಡೋಣ
ಅವನ ಜೀವಾಂತ್ಯದ ಗತಿ ಏನೆಂದು ಪರೀಕ್ಷಿಸೋಣ.
ನೀತಿವಂತ ದೇವಕುಮಾರನಾಗಿದ್ದರೆ ದೇವರು ಅವನಿಗೆ ನೆರವಾಗಬೇಕು
ಶತ್ರುಗಳ ಕೈಯಿಂದ ಅವನನ್ನು ತಪ್ಪಿಸಿ ಕಾಪಾಡಬೇಕು.
ಅಂಥವನನ್ನು ಹಿಂಸಿಸಿ, ಪೀಡಿಸಿ, ಪರೀಕ್ಷಿಸೋಣ
ಅವನಲ್ಲಿ ಸೌಜನ್ಯ ಎಷ್ಟಿದೆಯೆಂದು ತಿಳಿಯೋಣ
ಅನ್ಯಾಯದೆದುರು ತಾಳ್ಮೆಯೆಷ್ಟಿದೆಯೆಂದು ಶೋಧಿಸೋಣ;
ಅವಮಾನಕರ ಮರಣಶಿಕ್ಷೆಯನ್ನು ಅವನಿಗೆ ವಿಧಿಸೋಣ
ದೇವರು ರಕ್ಷಿಸುತ್ತಾನೆ’ ಎಂದಾಗಿತ್ತಲ್ಲವೇ ಅವನ ವಾದ?

- ದೇವರ ವಾಕ್ಯವಿದು.

ಕೀರ್ತನೆ : 54:1-4, 7.4
ಶ್ಲೋಕ : ದೇವನೆನಗೆ ಜೀವಪೋಷಕನು

ಎರಡನೆಯ ವಾಚನ
ಸಂತ ಯಕೋಬನು ಬರೆದ ಪತ್ರದಿಂದ ವಾಚನ : 3:16 - 4:3 
“ಸಮಾಧಾನಪಡಿಸುವವರು ಸಮಾಧಾನವೆಂಬ ಬೀಜವನ್ನೇ ಬಿತ್ತಿ ದೇವರೊಡನೆ ಸತ್ಸಂಬಂಧವೆಂಬ ಫಲವನ್ನು ಕೊಯ್ಯುತ್ತಾರೆ.”
ಸಹೋದರರೇ, ಮರ್ಮಮತ್ಸರವೂ ಸ್ವಾರ್ಥಾಭಿಲಾಶೆಯೂ ಇರುವ ಕಡೆಗಳಲ್ಲೆಲ್ಲಾ ನಾನಾ ವಿಧವಾದ ಅಕ್ರಮಗಳೂ ದುಶ್ಚಟಗಳು ಇರುತ್ತವೆ. ದೇವರಿಂದ ಬರುವ ಜ್ಞಾನವಾದರೋ ಮೊಟ್ಟಮೊದಲನೆಯದಾಗಿ ಪವಿತ್ರವಾದುದು. ಅದು ಶಾಂತಿಸಮಾಧಾನವುಳ್ಳದ್ದು, ಸಹನೆ ಸಂಯಮವುಳ್ಳದ್ದು, ನ್ಯಾಯಸಮ್ಮತವಾದದ್ದು, ದಯೆದಾಕ್ಷಿಣ್ಯಗಳಿಂದಲೂ ಸತ್ಕಾರ್ಯಗಳಿಂದಲೂ ಫಲಭರಿತವಾದದ್ದು, ವಂಚನೆಯಾಗಲಿ, ಚಂಚಲತೆಯಾಗಲಿ ಅದರಲ್ಲಿ ಇರುವುದಿಲ್ಲ. ಸಮಾಧಾನಪಡಿಸುವವರು ಸಮಾಧಾನವೆಂಬ ಬೀಜವನ್ನು ಬಿತ್ತಿ ದೇವರೊಡನೆ ಸತ್ಸಂಬಂಧವೆಂಬ ಫಲವನ್ನು ಕೊಯ್ಯುತ್ತಾರೆ. ನಿಮ್ಮಲ್ಲಿ ಕಲಹ ಕಾದಾಟಗಳು ಉಂಟಾಗುವುದು ಹೇಗೆ? ನಿಮ್ಮ ಇಂದ್ರಿಯಗಳಲ್ಲಿ ಗೊಂದಲವೆಬ್ಬಿಸುವ ದುರಿಚ್ಛೆಗಳಿಂದಲ್ಲವೇ? ಪರರ ಆಸ್ತಿಪಾಸ್ತಿಗಳನ್ನು ಬಯಸುತ್ತೀರಿ; ಅವುಗಳು ಸಿಗದೆ ಇದ್ದಾಗ, ನೀವು ಕೊಲೆ ಮಾಡಲೂ ಹಿಂಜರಿಯುವುದಿಲ್ಲ. ದುರಾಶೆಗಳಿಗೆ ಬಲಿಯಾಗುತ್ತೀರಿ; ಅವುಗಳು ಈಡೇರದಾಗ ಜಗಳವಾಡುತ್ತೀರಿ, ಕಾದಾಡುತ್ತೀರಿ. ನಿಮಗೆ ಬೇಕಾದುದು ನಿಮ್ಮಲ್ಲಿಲ್ಲ. ಏಕೆಂದರೆ, ನೀವು ಅದಕ್ಕಾಗಿ ಬೇಡಿಕೊಳ್ಳಲಿಲ್ಲ. ಬೇಡಿಕೊಂಡರೂ ನಿಮಗದು ದೊರಕುವುದಿಲ್ಲ. ಏಕೆಂದರೆ, ನಿಮ್ಮ ಬೇಡಿಕೆ ದುರುದ್ದೇಶದಿಂದ ಕೂಡಿರುತ್ತದೆ. ಭೋಗಾಭಿಲಾಶೆಗಳ ಈಡೇರಿಕೆ ನಿಮ್ಮ ಗುರಿಯಾಗಿರುತ್ತದೆ.
- ದೇವರ ವಾಕ್ಯವಿದು.

ಘೋಷಣೆ :  
ಅಲ್ಲೆಲೂಯ ಅಲ್ಲೆಲೂಯ !
ಸರ್ವೇಶ್ವರನ ನಾಮದಲಿ ಬರುವ ಅರಸನಿಗೆ ಜಯವಾಗಲಿ !
ಶಾಂತಿ ಸ್ವರ್ಗದಲಿ, ಮಹಿಮೆ ಮಹೋನ್ನತದಲಿ !
ಅಲ್ಲೆಲೂಯ !

ಶುಭಸಂದೇಶ

ಸಂತ ಮಾರ್ಕನು ಬರೆದ ಶುಭಸಂದೇಶದಿಂದ ವಾಚನ : 9 :30-37
“ನಿಮ್ಮಲ್ಲಿ ಮೊದಲಿಗನಾಗಲು ಬಯಸುವವನು ಎಲ್ಲರಿಗೂ ಕಡೆಯವನಾಗಿರಲಿ.”
ಯೇಸುಸ್ವಾಮಿ ಮತ್ತು ಶಿಷ್ಯರು ಹೊರಟು ಗಲಿಲೇಯದ ಮಾರ್ಗವಾಗಿ ಮುಂದಕ್ಕೆ ಪ್ರಯಾಣ ಮಾಡಿದರು. ಇದು ಯಾರಿಗೂ ತಿಳಿಯಬಾರದು ಎಂಬುದು ಯೇಸುವಿನ ಇಚ್ಛೆಯಾಗಿತ್ತು. ಕಾರಣ, ತಮ್ಮ ಶಿಷ್ಯರಿಗೆ ಪ್ರಬೋಧಿಸುವುದರಲ್ಲಿ ಅವರು ನಿರತರಾಗಿದ್ದರು. “ನರಪುತ್ರನನ್ನು ಜನರ ವಶಕ್ಕೆ ಒಪ್ಪಿಸಲಾಗುವುದು. ಅವರು ಆತನನ್ನು ಕೊಲ್ಲುವರು. ಕೊಂದ ಮೂರನೆಯ ದಿನ ಆತನು ಪುನರುತ್ಥಾನ ಹೊಂದುವನು.” ಎಂದು ಯೇಸು ಅವರಿಗೆ ತಿಳಿಸಿದರು. ಆದರೆ ಯೇಸು ಹೇಳಿದ ಈ ಮಾತುಗಳನ್ನು ಶಿಷ್ಯರು ಅರ್ಥಮಾಡಿಕೊಳ್ಳಲಿಲ್ಲ. ಅವುಗಳ ಬಗ್ಗೆ ಪ್ರಶ್ನಿಸಲು ಸಹ ಅಂಜಿದರು. ಆನಂತರ ಅವರೆಲ್ಲರೂ ಕಫೆರ್ನವುಮಿಗೆ ಬಂದರು. ಮನೆ ಸೇರಿದಾಗ ಯೇಸುಸ್ವಾಮಿ, “ದಾರಿಯಲ್ಲಿ ಬರುತ್ತಾ ನೀವು ನಿಮ್ಮಲ್ಲೇ ಏನು ಚರ್ಚೆಮಾಡುತ್ತಿದ್ದಿರಿ?” ಎಂದು ಶಿಷ್ಯರನ್ನು ಕೇಳಿದರು. ಅವರು ಮೌನ ತಾಳಿದರು. ಏಕೆಂದರೆ, ತಮ್ಮಲ್ಲಿ ಯಾವನು ಅತಿ ಶ್ರೇಷ್ಠನು ಎಂದು ತಮ್ಮ ತಮ್ಮಲ್ಲೇ ವಾದಿಸುತ್ತಾ ಬಂದಿದ್ದರು. ಯೇಸು ಕುಳಿತುಕೊಂಡು, ಹನ್ನೆರಡು ಮಂದಿಯನ್ನೂ ಕರೆದು, ಅವರಿಗೆ, “ನಿಮ್ಮಲ್ಲಿ ಮೊದಲಿಗನಾಗ ಬಯಸುವವನು ಎಲ್ಲರಿಗೂ ಕಡೆಯವನಾಗಿರಲಿ; ಎಲ್ಲರ ಸೇವೆ ಮಾಡುವವನಾಗಿರಲಿ,” ಎಂದರು. ಆನಂತರ ಯೇಸು, ಒಂದು ಚಿಕ್ಕ ಮಗುವನ್ನು ಕರೆದು ನಡುವೆ ನಿಲ್ಲಿಸಿ, ಅದನ್ನು ತಬ್ಬಿಕೊಂಡು ತಮ್ಮ ಶಿಷ್ಯರಿಗೆ, “ನನ್ನ ಹೆಸರಿನಲ್ಲಿ ಇಂಥ ಮಗುವೊಂದನ್ನು ಯಾರು ಬರಮಾಡಿಕೊಳ್ಳುತ್ತಾನೋ ಅವನು ನನ್ನನ್ನೇ ಬರಮಾಡಿಕೊಳ್ಳುತ್ತಾನೆ; ಯಾರು ನನ್ನನ್ನು ಬರಮಾಡಿಕೊಳ್ಳುತ್ತಾನೋ ಅವನು ನನ್ನನ್ನು ಅಲ್ಲ, ನನ್ನನ್ನು ಕಳುಹಿಸಿದಾತನನ್ನೇ ಬರಮಾಡಿಕೊಳ್ಳುತ್ತಾನೆ,” ಎಂದರು.
-ಪ್ರಭು ಕ್ರಿಸ್ತರ ಶುಭಸಂದೇಶವಿದು.

ಚಿಂತನೆ : ಒಂದು ಸಣ್ಣ ಮಗು ಎಷ್ಟು ಮುದ್ದೋ, ಮುಗ್ದವೋ, ಪಾಪರಹಿತವೋ ಅಷ್ಟೇ ಅಸಹಾಯಕವೂ ಹೌದು. ಅದಕ್ಕೆ ಲಾಲನೆ, ಪಾಲನೆ, ನಮ್ಮ ಗಮನ ಎಲ್ಲವೂ ಬೇಕು. ಈ ಸಮಾಜದಲ್ಲೂ ಮಕ್ಕಳಂತೆ ಅಸಹಾಯಕರೂ, ಬಡವರು, ನಮ್ಮ ಸಹಾಯವನ್ನು ಮತ್ತೆ ಮರಳಿಸಲು ಸಾಧ್ಯವಾಗದವರು, ಯಾವುದೇ ಪ್ರಭಾವವಿಲ್ಲದವರು ಇರುತ್ತಾರೆ. ಇಂಥಹ ಜನರಿಗೆ ನಾವು ಬೆನ್ನು ತೋರಿಸದೇ ಅವರನ್ನು ಬರಮಾಡಿಕೊಳ್ಳುವ ಮನಸ್ಸುಳ್ಳವರಾಗಬೇಕೆಂಬ ಸಂದೇಶ ಇಂದಿನ ಶುಭಸಂದೇಶದಲ್ಲಿದೆ. ಇತರರಿಗಿಂತ ತಾನು ಶ್ರೇಷ್ಠ, ಮೊದಲಿಗ ಎಂಬ ಮನಸ್ಸು ನಮ್ಮನ್ನು ದೀನತೆಯಿಂದ ದೂರಕ್ಕೆ ಕರೆದ್ಯೊಯ್ಯುತ್ತದೆ ಎಂಬದನ್ನು ನೆನಪಿನಲ್ಲಿಟ್ಟುಕೊಳ್ಳೋಣ.   

1 comment:

  1. Fine brother u ppl posting reflection also try to do it daily

    ReplyDelete