ಸಾಧಾರಣ ಕಾಲದ 25ನೇ ಬುಧವಾರ
ಮೊದಲನೇ ವಾಚನ: ಜ್ಞಾನೋಕ್ತಿಗಳು: 30: 5-9
ದೇವರ ಒಂದೊಂದು ಮಾತೂ ಪರಿಶುದ್ದ; ಆತನೇ ಶರಣರ ಖೇಡ್ಯ; ಆತನ ಮಾತುಗಳಿಗೆ ಯಾವುದನ್ನೂ ಸೇರಿಸಬೇಡ, ಇಲ್ಲವಾದರೆ ಆತ ನಿನ್ನನ್ನು ಖಂಡಿಸಿಯಾನು, ನೀನು ಸುಳ್ಳುಗಾರನಾಗಿ ತೋರಿ ಬಂದೀಯೆ! ನಿನ್ನಿಂದ ಎರಡು ವರಗಳನ್ನು ಬೇಡಿಕೊಂಡಿದ್ದೇನೆ: ನಿರಾಕರಿಸಬೇಡ, ನಾನು ಸಾಯುವುದರೊಳಗೆ ಅವುಗಳನ್ನು ಅನುಗ್ರಹಿಸು: ಕಪಟವಾದುದನ್ನು, ಮಿಥ್ಯವಾದುದನ್ನು ನನ್ನಿಂದ ತೊಲಗಿಸು; ನನಗೆ ಬಡತನ ಬೇಡ, ಐಶ್ವರ್ಯವೂ ಬೇಡ, ಸಾಕಷ್ಟು ಆಹಾರವನ್ನು ಮಾತ್ರ ನೀಡು. ಎಲ್ಲವೂ ಇದ್ದರೆ "ಸರ್ವೇಶ್ವರನು ಯಾರು?" ಎಂದು ನಿನ್ನನ್ನೇ ನಾನು ತಿರಸ್ಕರಿಸೇನು. ಬಡವನಾದರೆ ಕಳ್ಳತನ ಮಾಡಿ ನನ್ನ ದೇವರಾದ ನಿನ್ನ ಹೆಸರಿಗೆ ಅಪಕೀರ್ತಿ ತಂದೇನು.
ಕೀರ್ತನೆ: 119: 29, 72, 89, 101, 104, 163
ಶ್ಲೋಕ: ನಿನ್ನ ವಾಕ್ಯ ನನ್ನ ಕಾಲಿನ ನಡೆಗೆ ಕೈದೀಪ.
ಶುಭಸಂದೇಶ: ಲೂಕ: 9:1-6
ಯೇಸುಸ್ವಾಮಿ ಹನ್ನೆರಡು ಮಂದಿ ಪ್ರೇಷಿತರನ್ನು ಒಟ್ಟಿಗೆ ಕರೆದು ಎಲ್ಲ ದೆವ್ವಗಳನ್ನು ಬಿಡಿಸಲೂ ರೋಗ ನಿವಾರಣೆಮಾಡಲೂ ಅವರಿಗೆ ಶಕ್ತಿಯನ್ನು ಮತ್ತು ಅಧಿಕಾರವನ್ನು ಕೊಟ್ಟರು. ಅನಂತರ ದೇವರ ಸಾಮ್ರಾಜ್ಯವನ್ನು ಕುರಿತು ಬೋಧಿಸಿಸುವುದಕ್ಕೂ ರೋಗಿಗಳನ್ನು ಗುಣಪಡಿಸುವುದಕ್ಕೂ ಅವರನ್ನು ಕಳುಹಿಸಿದರು. ಕಳುಹಿಸುವಾಗ ಅವರಿಗೆ ಇಂತೆಂದರು, "ಪ್ರಯಾಣಕ್ಕೆಂದು ಏನನ್ನೂ ತೆಗೆದುಕೊಳ್ಳಬೇಡಿ; ದಂಡ, ಜೋಳಿಗೆ, ಬುತ್ತಿ ಅಥವಾ ಹಣ ಯಾವುದೂ ಬೇಡ. ಎರಡು ಅಂಗಿಗಳು ಬೇಕಾಗಿಲ್ಲ. ಯಾವ ಮನೆಯವರು ನಿಮ್ಮನ್ನು ಬರಮಾಡಿಕೊಳ್ಳುತ್ತಾರೋ ಆ ಮನೆಯಲ್ಲೇ ತಂಗಿರಿ. ಅಲ್ಲಿಂದಲೇ ಮುಂದಕ್ಕೆ ಸಾಗಿರಿ. ಯಾವ ಊರಿನವರಾದರೂ ನಿಮ್ಮನ್ನು ಸ್ವಾಗತಿಸದೆ ಹೋದಲ್ಲಿ, ನೀವು ಆ ಊರನ್ನು ಬಿಟ್ಟು ಹೋಗುವಾಗ ನಿಮ್ಮ ಪಾದಕ್ಕೆ ಹತ್ತಿದ ಧೂಳನ್ನು ಕೂಡ ಝಾಡಿಸಿಬಿಡಿ. ಅದು ಅವರ ವಿರುದ್ದ ಸಾಕ್ಷಿಯಾಗಿರಲಿ," ಎಂದರು. ಪ್ರೇಷಿತರು ಹೊರಟು ಹಳ್ಳಿಹಳ್ಳಿಗೂ ಹೋಗಿ ಎಲ್ಲ ಕಡೆ ಶುಭಸಂದೇಶವನ್ನು ಬೋಧಿಸಿದರು; ರೋಗಿಗಳನ್ನು ಗುಣಪಡಿಸಿದರು.
ಚಿಂತನೆ : ಇಂದಿನ ಶುಭಸಂದೇಶದಲ್ಲಿನ ವೈರುದ್ಧ್ಯವನ್ನು ಗಮನಿಸಬಹುದು. ಬರಿಗೈ ದಾಸರಾದ ಯೇಸು ಮತ್ತು ಶಿಷ್ಯರು ದೇವರ ವಾಕ್ಯವನ್ನು ಸಾರಲು, ರೋಗಿಗಳನ್ನು ಗುಣಪಡಿಸಲು ಹೊರಡುತ್ತಾರೆ. ಕೇವಲ ದೈವ ಸಹಾಯ ಹಾಗೂ ಸೇವೆಯನ್ನು ನೆಚ್ಚಿಕೊಂಡ ಅವರಿಗೆ ಊರುಗಳಲ್ಲಿ ಸ್ವಾಗತ ಸಿಗಬಹುದೆಂಬ ಎಂಬ ಖಾತ್ರಿಯೂ ಇಲ್ಲ, ಆದರೂ ಪರಸೇವೆಯೆಡೆಗೆ ಅವರ ಚಿತ್ತ. ಅದೇ ಇಡೀ ರಾಜ್ಯವನ್ನೇ ಹೊಂದಿರುವ, ಎಲ್ಲಿ ಹೋದರೂ ಸ್ವಾಗತ, ಮನ್ನಣೆ ಸಿಗಬಹುದಾದ ರಾಜ, ತನಗೆ ತನ್ನ ಅಧಿಕಾರಕ್ಕೆ ಪ್ರತಿಸ್ಪರ್ಧಿಯೊಬ್ಬ ಹುಟ್ಟಿಕೊಂಡಿದಾನಲ್ಲ ಎಂದು ಚಿಂತಾಕ್ರಾಂತನಾಗಿದ್ದಾನೆ.
ನಮ್ಮದು ಶಿಷ್ಯರ ಚಿತ್ತವೋ, ರಾಜನ ಚಿಂತೆಯೋ?
No comments:
Post a Comment