ಸಾಧಾರಣ ಕಾಲದ ಇಪ್ಪತ್ತಮೂರನೆಯ ವಾರ - ಸೋಮವಾರ
ಮೊದಲನೇ ವಾಚನ: 1 ಕೊರಿಂಥಿಯರಿಗೆ 5:1-8
ಅನ್ಯಜನರಲ್ಲಿ ಕೂಡ ಇಲ್ಲದಂಥ ದುರ್ನಡತೆ ನಿಮ್ಮಲ್ಲಿದೆಯೆಂಬುದಾಗಿ ವರದಿ ಬಂದಿದೆ. ನಿಮ್ಮಲ್ಲಿ ಒಬ್ಬನು ತನ್ನ ತಂದೆಯ ಪತ್ನಿಯನ್ನೇ ಇಟ್ಟುಕೊಂಡಿದ್ದಾನಂತೆ. ಹೀಗಿರಲು, ನೀವು ಸೊಕ್ಕಿನಿಂದ ಮೆರೆಯಲು ಕಾರಣವಾದರೂ ಎಲ್ಲಿದೆ? ಬದಲಿಗೆ, ನೀವು ವ್ಯಸನಪಟ್ಟು ಅವನನ್ನು ನಿಮ್ಮ ಸಭಾಕೂಟದಿಂದ ಬಹಿಷ್ಕರಿಸಬೇಕಾಗಿತ್ತಲ್ಲವೇ? ನಾನು ಶಾರೀರಿಕವಾಗಿ ನಿಮ್ಮಿಂದ ದೂರವಿದ್ದರೂ ಆತ್ಮಿಕವಾಗಿ ನಿಮ್ಮ ಹತ್ತಿರವಿದ್ದೇನೆ. ನಿಮ್ಮ ಸಂಗಡವೇ ಇರುವವನಂತೆ ಅವನಿಗೆ ಏನು ಮಾಡಬೇಕೆಂದು ಈಗಾಗಲೇ ತೀರ್ಮಾನಿಸಿದ್ದೇನೆ. ಅದೇನೆಂದರೆ: ನೀವು ಸಭೆಸೇರಿ, ಪ್ರಭು ಯೇಸುವಿನ ಶಕ್ತಿಯ ಆಧಾರದ ಮೇಲೆ ಅವನನ್ನು ಸೈತಾನನಿಗೆ ಒಪ್ಪಿಸಿಬಿಡಬೇಕು. ನಾನು ಆತ್ಮಿಕವಾಗಿ ನಿಮ್ಮ ಮಧ್ಯಯಿರುತ್ತೇನೆ. ಅವನ ದೇಹವು ದಂಡನೆಗೊಳಗಾದರೂ ಅವನ ಆತ್ಮ ಪ್ರಭು ಯೇಸುವಿನ ದಿನದಂದು ಉದ್ಧಾರವಾಗುವಂತೆ ಹೀಗೆ ಮಾಡಬೇಕು. ನೀವು ಜಂಬ ಕೊಚ್ಚಿಕೊಳ್ಳುವುದು ತರವಲ್ಲ. ಒಂದಿಷ್ಟು ಹುಳಿ, ಹಿಟ್ಟನ್ನೆಲ್ಲಾ ಹುದುಗೆಬ್ಬಿಸುತ್ತದೆಂಬುದನ್ನು ನೀವು ಚೆನ್ನಾಗಿ ಬಲ್ಲಿರಿ. ನೀವು ಹುಳಿಯಿಲ್ಲದ ಕಣಕವಾಗಿದ್ದೀರಿ. ಅಪ್ಪಟ ರೊಟ್ಟಿಯಾಗುವಂತೆ ಹುಳಿಯನ್ನು ತೆಗೆದುಹಾಕಿರಿ. ಏಕೆಂದರೆ, ಪಾಸ್ಕ ಯಜ್ಞದ ಕುರಿಮರಿಯಾದ ಕ್ರಿಸ್ತಯೇಸು ಬಲಿಯಾಗಿದ್ದಾರೆ. ಆದಕಾರಣ ನಾವು ದುಷ್ಟತನ, ಕೆಡುಕುತನವೆಂಬ ಹುಳಿಹಿಟ್ಟನ್ನು ವರ್ಜಿಸೋಣ. ಪರಿಶುದ್ಧತೆ ಮತ್ತು ಸತ್ಯತೆ ಎಂಬ ಹುಳಿಯಿಲ್ಲದ ಹೊಸ ರೊಟ್ಟಿಯನ್ನು ತಿಂದು ಪಾಸ್ಕ ಹಬ್ಬವನ್ನು ಆಚರಿಸೋಣ.
ಕೀರ್ತನೆ: 5:5-6, 7, 12
ಶ್ಲೋಕ: ಸತ್ಯಪಥದಲಿ ನಡೆಸೆನ್ನನು ದೇವಾ.
ಶುಭಸಂದೇಶ: ಲೂಕ 6:6-11
ಮತ್ತೊಂದು ಸಬ್ಬತ್ ದಿನ ಯೇಸುಸ್ವಾಮಿ ಪ್ರಾರ್ಥನಾಮಂದಿರಕ್ಕೆ ಹೋಗಿ ಉಪದೇಶ ಮಾಡುತ್ತಿದ್ದರು. ಅಲ್ಲಿ ಬಲಗೈ ಬತ್ತಿ ಹೋಗಿದ್ದ ಒಬ್ಬಾತ ಇದ್ದನು. ಅವನನ್ನು ಸಬ್ಬತ್ ದಿನದಲ್ಲಿ ಸ್ವಸ್ಥಪಡಿಸಿದ್ದೇ ಆದರೆ ಯೇಸುವಿನ ವಿರುದ್ಧ ತಪ್ಪು ಹೊರಿಸಬಹುದೆಂಬ ಉದ್ದೇಶದಿಂದ ಧರ್ಮಶಾಸ್ತ್ರಿಗಳು ಮತ್ತು ಫರಿಸಾಯರು ಹೊಂಚುಹಾಕಿ ನೋಡುತ್ತಿದ್ದರು. ಯೇಸು ಅವರ ಆಲೋಚನೆಗಳನ್ನರಿತು ಬತ್ತಿದ ಕೈಯುಳ್ಳವನಿಗೆ, "ಬಂದು ಇಲ್ಲಿ ನಿಲ್ಲು," ಎಂದರು. ಅವನು ಎದ್ದು ಬಂದು ನಿಂತನು. ಆಗ ಯೇಸು ಅವರಿಗೆ, "ನಾನು ನಿಮಗೊಂದು ಪ್ರಶ್ನೆ ಹಾಕುತ್ತೇನೆ: ಸಬ್ಬತ್ ದಿನದಲ್ಲಿ ಏನು ಮಾಡುವುದು ಧರ್ಮ? ಒಳಿತನ್ನೋ ಅಥವಾ ಕೆಡುಕನ್ನೋ? ಒಬ್ಬನ ಪ್ರಾಣವನ್ನು ಉಳಿಸುವುದೋ ಅಥವಾ ಅಳಿಸುವುದೋ?" ಎಂದರು. ಆನಂತರ ಸುತ್ತಲೂ ಇದ್ದವರೆಲ್ಲರನ್ನು ದಿಟ್ಟಿಸಿ ನೋಡಿ ಬತ್ತಿದ ಕೈಯುಳ್ಳವನ ಕಡೆ ತಿರುಗಿ, "ನಿನ್ನ ಕೈಯನ್ನು ಚಾಚು," ಎಂದರು. ಅವನು ಚಾಚಿದ. ಕೈ ಸ್ವಸ್ಥವಾಯಿತು. ಅವರಾದರೋ ಕ್ರೋಧಭರಿತರಾಗಿ, ಯೇಸುವಿಗೆ ಏನಾದರೂ ಮಾಡಬೇಕೆಂದು ತಮ್ಮತಮ್ಮೊಳಗೆ ಸಂಚುಮಾಡಿದರು.
No comments:
Post a Comment