ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

16.06.24 - “ದೇವರ ಸಾಮ್ರಾಜ್ಯವು ರೈತನೊಬ್ಬನು ತನ್ನ ಹೊಲದಲ್ಲಿ ಮಾಡಿದ ಬಿತ್ತನೆಗೆ ಹೋಲಿಕೆಯಾಗಿದೆ"

ಮೊದಲನೇ ವಾಚನ: ಯೆಜೆಕಿಯೇಲ 17: 22-24

ಸರ್ವೇಶ್ವರನಾದ ದೇವರ ವಾಣಿಯಿದು: ನಾನೇ ನೆಡುವೆನು ರೆಂಬೆಯೊಂದನು ಎತ್ತರದ ದೇವದಾರು ಮರದ ಮೇಲಿಂದ ತಂದು ತುಂಟ ತುದಿಯ ಚಿಗುರುಗಳಲೊಂದನ್ನು ತಂದು ಅತಿ ಕೋಮಲವಾದುದನು ಚಿವುಟಿ ತಂದು, ನೆಡುವೆನದನು ಉನ್ನತೋನ್ನತವಾದ ಪರ್ವತದಲ್ಲಿ. ಹೌದು, ನೆಡುವೆನು ಇಸ್ರಯೇಲಿನಾ ಪರ್ವತಾಗ್ರದಲ್ಲಿ. ಆಗುವುದದು ಸೊಂಪಾದ ದೇವದಾರು ಮರ, ರೆಂಬೆಗಳನದು ಹರಡಿಕೊಂಡು ಕೊಡುವುದು ಫಲ. ಸಕಲವಿಧ ಪಕ್ಷಿಗಳು ವಾಸಿಸುವುವು ಅದರಲ್ಲಿ. ಆಶ್ರಯ ಪಡೆವುವು ಅದರ ರೆಂಬೆಗಳ ನೆರಳಲಿ. ಆಗ ತಿಳಿವುವು ವನದ ವೃಕ್ಷಗಳು: ಎತ್ತರವಾದ ಮರಗಳ ತಗ್ಗಿಸುವವನು ತಗ್ಗಾದುದನು ಎತ್ತರಪಡಿಸುವವನು ಹಸುರಾದುದನು ಒಣಗಿಸುವವನು ಒಣಗಿದುದನ್ನು ಚಿಗುರಿಸುವವನು ಸರ್ವೇಶ್ವರ ನಾನೇ ಎಂದು. ಇದ ನುಡಿದವ ನಾನು, ನುಡಿದದನು ನಡೆಸುವವ ನಾನು.”

ಕೀರ್ತನೆ: 92: 1-2, 12, 13-14
ಶ್ಲೋಕ: ಹೇ ಪ್ರಭೂ, ನಿನ್ನ ಗುಣಗಾನ ಮಂಗಳಕರ

ಹೇ ಪ್ರಭೂ, ನಿನ್ನ ಗುಣಗಾನ ಮಂಗಳಕರ
ಪರಾತ್ಪರನೆ, ನಿನ್ನ ನಾಮಭಜನೆ ಹಿತಕರ
ಪ್ರಾತಃಕಾಲದಲೆ ನಿನ್ನ ಪ್ರೀತಿಯನು
ರಾತ್ರಿಕಾಲದಲೆ ನಿನ್ನ ಸತ್ಯತೆಯನು. ಶ್ಲೋಕ

ಬೆಳೆಯುವರು ಸಜ್ಜನರು ಖರ್ಜೂರದ ವೃಕ್ಷದಂತೆ
ವೃದ್ಧಿಯಾಗುವರು ಲೆಬನೋನಿನ ದೇವದಾರಿನಂತೆ. ಶ್ಲೋಕ

ಅವರಿರುವರು ಪ್ರಭುವಿನಾಲಯದಲೆ ನೆಟ್ಟ ಸಸಿಗಳಂತೆ
ನಮ್ಮ ದೇವಾಂಗಳದಿ ಹುಲುಸಾಗಿ ಬೆಳೆವ ಮರಗಳಂತೆ
ಫಲಿಸುವರು ಮುಪ್ಪಿನಲೂ, ಶೋಭಿಸುವರು ಪಚ್ಚೆಪಸಿರಂತೆ. ಶ್ಲೋಕ

ಎರಡನೆಯ ವಾಚನ: 2 ಕೊರಿಂಥಿಯರಿಗೆ  5:6-10

ಈ ಕಾರಣದಿಂದಲೇ ನಾವು ಸದಾ ಸ್ಥಿರಚಿತ್ತರಾಗಿದ್ದೇವೆ. ಈ ದೇಹವನ್ನೇ ನೆಚ್ಚಿ ಇದರಲ್ಲೇ ನೆಲೆಯಾಗಿರುವವರೆಗೂ ನಾವು ಪ್ರಭುವಿನಿಂದ ದೂರವಿರುವ ಪ್ರವಾಸಿಗಳಂತೆ ಇದ್ದೇವೆ. ನಾವು ನೋಡಿ ನಡೆಯುವವರಲ್ಲ, ನಂಬಿ ನಡೆಯುವವರು. ಆದ್ದರಿಂದ ಈ ದೇಹವನ್ನು ತ್ಯಜಿಸಿ, ಪ್ರಭುವನ್ನೇ ನೆಚ್ಚಿ ನೆಲಸುವುದು ಲೇಸೆಂದು ಧೈರ್ಯದಿಂದ ಹೇಳುತ್ತೇವೆ. ಈ ಕಾರಣ, ಇಲ್ಲಾದರೂ ಸರಿ, ಅಲ್ಲಾದರೂ ಸರಿ, ಪ್ರಭು ಮೆಚ್ಚುವಂತೆ ಬಾಳುವುದೊಂದೇ ನಮ್ಮ ಗುರಿ. ನಾವು ಎಲ್ಲರೂ ನ್ಯಾಯ ವಿಚಾರಣೆಗಾಗಿ ಕ್ರಿಸ್ತ ಯೇಸುವಿನ ಮುಂದೆ ನಿಲ್ಲಲೇಬೇಕು. ಪ್ರತಿಯೊಬ್ಬನೂ ತನ್ನ ದೈಹಿಕ ಜೀವನದಲ್ಲಿ ಮಾಡಿದ ಪಾಪ ಪುಣ್ಯ ಕಾರ್ಯಗಳಿಗೆ ತಕ್ಕ ಪ್ರತಿಫಲವನ್ನು ಪಡೆಯಲೇಬೇಕು.

ಶುಭಸಂದೇಶ: ಮಾರ್ಕ 4: 26-34


ಯೇಸುಸ್ವಾಮಿ ಇನ್ನೊಂದು ಸಾಮತಿಯನ್ನು ಹೇಳಿದರು: “ದೇವರ ಸಾಮ್ರಾಜ್ಯವು ರೈತನೊಬ್ಬನು ತನ್ನ ಹೊಲದಲ್ಲಿ ಮಾಡಿದ ಬಿತ್ತನೆಗೆ ಹೋಲಿಕೆಯಾಗಿದೆ. ಬಿತ್ತನೆಯಾದ ಬಳಿಕ ಅವನು ರಾತ್ರಿಯಲ್ಲಿ ಮಲಗಿರಲಿ, ಹಗಲಲ್ಲಿ ಎದ್ದಿರಲಿ, ಅವನಿಗೆ ಹೇಗೆಂದು ತಿಳಿಯದೆಯೇ ಆ ಬೀಜವು ಮೊಳೆತು ಬೆಳೆಯುತ್ತಿರುತ್ತದೆ. ಭೂಮಿ ಮೊದಲು ಸಸಿಯನ್ನೂ ಅನಂತರ ಹೊಡೆಯನ್ನೂ ತರುವಾಯ ತೆನೆತುಂಬ ಕಾಳನ್ನೂ ತನ್ನಷ್ಟಕ್ಕೆ ತಾನೇ ಉತ್ಪತ್ತಿಮಾಡುತ್ತದೆ. ಬೆಳೆಯು ಮಾಗಿದಾಗ, ಸುಗ್ಗಿಯು ಬಂತೆಂದು ವ್ಯವಸಾಯಗಾರನು ಕುಡುಗೋಲನ್ನು ಬಳಸುತ್ತಾನೆ,” ಎಂದರು. ಯೇಸುಸ್ವಾಮಿ ತಮ್ಮ ಉಪದೇಶವನ್ನು ಮುಂದುವರಿಸಿ, “ದೇವರ ಸಾಮ್ರಾಜ್ಯವನ್ನು ಇನ್ನು ಯಾವುದಕ್ಕೆ ಹೋಲಿಸೋಣ? ಅದಕ್ಕಾಗಿ ಯಾವ ಸಾಮತಿಯನ್ನು ಉಪಯೋಗಿಸೋಣ? ಭೂಮಿಯಲ್ಲಿರುವ ಕಾಳುಗಳಲ್ಲಿ ಅತಿ ಚಿಕ್ಕದಾಗಿರುವ ಸಾಸಿವೆಕಾಳಿಗೂ ಅದನ್ನು ಹೋಲಿಸಬಹುದು. ಸಾಸಿವೆಕಾಳು ಚಿಕ್ಕದಾಗಿದ್ದರೂ ಬಿತ್ತನೆಯ ತರುವಾಯ ಮೊಳೆತು ಎಲ್ಲಾ ಕಾಯಿಪಲ್ಯದ ಸಸ್ಯಗಳಿಗಿಂತಲೂ ದೊಡ್ಡದಾಗಿ ಬೆಳೆಯುತ್ತದೆ. ಹಕ್ಕಿಗಳು ಕೂಡ ಬಂದು ಅದರ ನೆರಳಿನಲ್ಲಿ ಗೂಡುಕಟ್ಟಿ ವಾಸಿಸುವಷ್ಟು ದೊಡ್ಡದಾದ ರೆಂಬೆಗಳನ್ನು ಅದು ತಳೆಯುತ್ತದೆ,” ಎಂದರು. ಸಾಮತಿಗಳ ಪ್ರಯೋಗವೇಕೆ? ಯೇಸುಸ್ವಾಮಿ ಈ ಬಗೆಯ ಸಾಮತಿಗಳನ್ನು ಉಪಯೋಗಿಸಿ ಜನರಿಗೆ ದೇವರ ಸಂದೇಶವನ್ನು ಅವರವರ ತಿಳುವಳಿಕೆಗೆ ತಕ್ಕಂತೆ ಉಪದೇಶಿಸುತ್ತಿದ್ದರು. ಸಾಮತಿಗಳನ್ನು ಉಪಯೋಗಿಸದೆ ಅವರು ಬೋಧಿಸುತ್ತಿರಲಿಲ್ಲ. ಆದರೆ ತಮ್ಮ ಆಪ್ತ ಶಿಷ್ಯರೊಡನೆ ಪ್ರತ್ಯೇಕವಾಗಿದ್ದಾಗ ಅವರಿಗೆ ಎಲ್ಲವನ್ನು ವಿವರಿಸಿ ಹೇಳುತ್ತಿದ್ದರು.

No comments:

Post a Comment