ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

27.06.24 - "ನನ್ನ ಈ ಮಾತುಗಳನ್ನು ಕೇಳಿಯೂ ಅದರಂತೆ ನಡೆಯದ ಪ್ರತಿಯೊಬ್ಬನೂ ಮರಳಿನ ಮೇಲೆ ಮನೆ ಕಟ್ಟಿಕೊಂಡ ಬುದ್ಧಿಹೀನನನ್ನು ಹೋಲುತ್ತಾನೆ"

ಮೊದಲನೇ ವಾಚನ: ೨ ಅರಸುಗಳು 24:8-17

ಯೆಹೋಯಾಖೀನನು ಅರಸನಾದಾಗ ಹದಿನೆಂಟು ವರ್ಷದವನಾಗಿದ್ದು ಜೆರುಸಲೇಮಿನಲ್ಲಿ ಮೂರು ತಿಂಗಳು ಆಳಿದನು. ಜೆರುಸಲೇಮಿನ ಎಲ್ನಾತಾನನ ಮಗಳಾದ ನೆಹುಷ್ಟಾ ಎಂಬಾಕೆ ಇವನ ತಾಯಿ. ಇವನು ತನ್ನ ತಂದೆಯಂತೆ ಸರ್ವೇಶ್ವರನ ದೃಷ್ಟಿಯಲ್ಲಿ ದ್ರೋಹಿಯಾಗಿದ್ದನು. ಅವನ ಕಾಲದಲ್ಲಿ ಬಾಬಿಲೋನಿನ ಅರಸ ನೆಬೂಕದ್ನೆಚ್ಚರನ ಸೈನ್ಯದವರು ಜೆರುಸಲೇಮಿಗೆ ದಂಡೆತ್ತಿ ಬಂದು ಅದಕ್ಕೆ ಮುತ್ತಿಗೆ ಹಾಕಿದರು. ಅಷ್ಟರಲ್ಲಿ ನೆಬೂಕದ್ನೆಚ್ಚರನೂ ಬಂದನು. ಆಗ ಜುದೇಯದ ಅರಸ ಯೆಹೋಯಾಖೀನನು, ತನ್ನ ತಾಯಿ, ಪರಿವಾರದವರು, ಸೇನಾಪತಿಗಳು, ಕಂಚುಕಿಗಳು ಇವರೊಡನೆ ಅವನ ಬಳಿಗೆ ಹೋದನು. ಅವನು ಇವನನ್ನು ತನ್ನ ಆಳ್ವಿಕೆಯ ಎಂಟನೆಯ ವರ್ಷದಲ್ಲಿ ಸೆರೆಹಿಡಿದನು. ಇದಲ್ಲದೆ, ಸರ್ವೇಶ್ವರ ಮುಂತಿಳಿಸಿದ ಪ್ರಕಾರ, ಅವನು ಸರ್ವೇಶ್ವರನ ಆಲಯದ ಮತ್ತು ಅರಮನೆಯ ಭಂಡಾರಗಳಲ್ಲಿದ್ದ ದ್ರವ್ಯವನ್ನೆಲ್ಲಾ ದೋಚಿಕೊಂಡು ಹೋದನು. ಇಸ್ರಯೇಲರ ಅರಸನಾದ ಸೊಲೊಮೋನನು ಸರ್ವೇಶ್ವರನ ಆಲಯಕ್ಕಾಗಿ ಮಾಡಿಸಿದ್ದ ಬಂಗಾರದ ಎಲ್ಲಾ ಆಭರಣಗಳನ್ನು ಮುರಿದುಬಿಟ್ಟನು. ಜೆರುಸಲೇಮಿನಲ್ಲಿದ್ದ ಎಲ್ಲಾ ಪದಾಧಿಕಾರಿಗಳನ್ನೂ ಯೋಧರನ್ನೂ ಕಮ್ಮಾರರು ಮೊದಲಾದ ಕೈಗಾರಿಕೆಯವರನ್ನೂ ಒಟ್ಟಾರೆ ಹತ್ತು ಸಾವಿರ ಜನರನ್ನು ಸೆರೆಗೊಯ್ದನು. ನಾಡಿನ ಜನರಲ್ಲಿ ಕೇವಲ ಬಡವರನ್ನು ಹೊರತಾಗಿ ಬೇರೆ ಯಾರನ್ನೂ ಬಿಡಲಿಲ್ಲ. ಅವನು ಯೆಹೋಯಾಖೀನನ್ನೂ ಅವನ ತಾಯಿ, ಹೆಂಡತಿಯರು, ಕಂಚುಕಿಗಳನ್ನೂ ನಾಡಿನ ಪ್ರಧಾನ ಪುರುಷರು ಇವರನ್ನೂ, ಏಳು ಸಾವಿರ ಮಂದಿ ಯೋಧರನ್ನೂ ಸಾವಿರ ಮಂದಿ ಕಮ್ಮಾರರು ಮೊದಲಾದ ಕೈಗಾರಿಕೆಯವರನ್ನೂ ಜೆರುಸಲೇಮಿನಿಂದ ಬಾಬಿಲೋನಿಗೆ ಒಯ್ದನು. ಅವರೆಲ್ಲರು ಪುಷ್ಟರೂ ರಣವೀರರೂ ಆಗಿದ್ದರು. ಬಾಬಿಲೋನಿನ ಅರಸನು ಯೆಹೋಯಾಖೀನನಿಗೆ ಬದಲಾಗಿ ಅವನ ಚಿಕ್ಕಪ್ಪನಾದ ಮತ್ತನ್ಯ ಎಂಬುವನನ್ನು ಅರಸನನ್ನಾಗಿ ನೇಮಿಸಿ ಅವನಿಗೆ ‘ಚಿದ್ಕೀಯ’ ಎಂಬ ಹೆಸರಿಟ್ಟನು.

ಕೀರ್ತನೆ: 79:1-2, 3-5, 8, 9

ಶ್ಲೋಕ: ದೇವಾ, ನೆರವಾಗು ನಿನ್ನ ನಾಮಮಹಿಮೆಯ ನಿಮಿತ್ತ

ಶುಭಸಂದೇಶ: ಮತ್ತಾಯ 7:21-29

ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ನನ್ನನ್ನು ‘ಸ್ವಾಮೀ, ಸ್ವಾಮೀ,’ ಎನ್ನುವ ಪ್ರತಿಯೊಬ್ಬನೂ ಸ್ವರ್ಗಸಾಮ್ರಾಜ್ಯವನ್ನು ಪ್ರವೇಶಿಸನು. ಸ್ವರ್ಗದಲ್ಲಿರುವ ನನ್ನ ತಂದೆಯ ಚಿತ್ತಾನುಸಾರ ನಡೆಯುವವನು ಮಾತ್ರ ಅದನ್ನು ಪ್ರವೇಶಿಸುವನು. ತೀರ್ಪಿನ ದಿನದಂದು, ‘ಸ್ವಾಮೀ, ಸ್ವಾಮೀ, ನಿಮ್ಮ ಹೆಸರಿನಲ್ಲಿ ನಾವು ಪ್ರವಾದನೆ ಮಾಡಲಿಲ್ಲವೇ? ನಿಮ್ಮ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸಲಿಲ್ಲವೆ? ನಿಮ್ಮ ಹೆಸರಿನಲ್ಲಿ ಹಲವಾರು ಮಹತ್ಕಾರ್ಯಗಳನ್ನು ಮಾಡಲಿಲ್ಲವೇ?’ ಎಂದು ಅನೇಕರು ನನಗೆ ಹೇಳುವರು. ಆಗ ನಾನು ಅವರಿಗೆ ‘ಇಂದಿಗೂ ನಿಮ್ಮ ಗುರುತೇ ನನಗಿಲ್ಲ. ಅಧರ್ಮಿಗಳೇ, ನನ್ನಿಂದ ತೊಲಗಿರಿ,’ ಎಂದು ಬಹಿರಂಗವಾಗಿ ಹೇಳಿಬಿಡುವೆನು.” “ನನ್ನ ಈ ಮಾತನ್ನು ಕೇಳಿ ಅದರಂತೆ ನಡೆಯುವ ಪ್ರತಿಯೊಬ್ಬನೂ ಬಂಡೆಯ ಮೇಲೆ ಮನೆ ಕಟ್ಟಿಕೊಂಡ ಬುದ್ಧಿವಂತನನ್ನು ಹೋಲುತ್ತಾನೆ. ಮಳೆ ಬಿತ್ತು, ನೆರೆ ಬಂತು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು. ಆದರೂ ಅದು ಬೀಳಲಿಲ್ಲ. ಕಾರಣ ಅದರ ಅಡಿಗಟ್ಟು ಬಂಡೆಯ ಮೇಲಿತ್ತು. ನನ್ನ ಈ ಮಾತುಗಳನ್ನು ಕೇಳಿಯೂ ಅದರಂತೆ ನಡೆಯದ ಪ್ರತಿಯೊಬ್ಬನೂ ಮರಳಿನ ಮೇಲೆ ಮನೆ ಕಟ್ಟಿಕೊಂಡ ಬುದ್ಧಿಹೀನನನ್ನು ಹೋಲುತ್ತಾನೆ. ಮಳೆ ಬಿತ್ತು, ನೆರೆ ಬಂತು, ಗಾಳಿ ಬೀಸಿ ಆ ಮನೆಗೆ ಅಪ್ಪಳಿಸಿತು; ಅದು ಕುಸಿದು ಬಿತ್ತು. ಅದಕ್ಕಾದ ಪತನವೋ ಅಗಾಧ!” ಯೇಸುಸ್ವಾಮಿ ಇದೆಲ್ಲವನ್ನು ಹೇಳಿ ಮುಗಿಸಿದರು. ಅವರ ಬೋಧನೆ ಜನರಲ್ಲಿ ಅಮೋಘ ಪ್ರಭಾವವನ್ನು ಬೀರಿತು. ಏಕೆಂದರೆ, ಅವರ ಧರ್ಮಶಾಸ್ತ್ರಿಗಳಂತೆ ಬೋಧಿಸದೆ ಯೇಸು ಅಧಿಕಾರ ವಾಣಿಯಿಂದ ಪ್ರಬೋಧಿಸುತ್ತಿದ್ದರು.

No comments:

Post a Comment