20.06.24 - “ಜನರ ತಪ್ಪುಗಳನ್ನು ನೀವು ಕ್ಷಮಿಸಿದರೆ ಸ್ವರ್ಗದಲ್ಲಿರುವ ನಿಮ್ಮ ತಂದೆ ನಿಮ್ಮನ್ನು ಕ್ಷಮಿಸುವರು"

ಮೊದಲನೇ ವಾಚನ: ಸಿರಾಖನು 48:1-14

ಎಲೀಯನು ಆಮೇಲೆ ಪ್ರವಾದಿ ಎಲೀಯನೆದ್ದನು ಬೆಂಕಿಯಂತೆ ಉರಿಯಿತವನ ನುಡಿ ಪಂಜಿನಂತೆ. ಕ್ಷಾಮವನ್ನು ಬರಮಾಡಿದನಿವನು ಜನರ ಮೇಲೆ ಅವರನ್ನು ಕುಂದಿಸಿದನು ತನ್ನ ರೋಷದಿಂದಲೆ. ಆಕಾಶವನ್ನೇ ಮುಚ್ಚಿಬಿಟ್ಟನು ಸರ್ವೇಶ್ವರನ ಹೆಸರಿನಲ್ಲಿ ಬೆಂಕಿಯಿಳಿಯುವಂತೆ ಮಾಡಿದನು ಮೂರುಸಾರಿ. ಎಲೈ ಎಲೀಯನೇ, ಮಹತ್ಕಾರ್ಯಗಳಲ್ಲಿ ನೀನು ಎಷ್ಟು ಘನವಂತನಾಗಿದ್ದೆ ! ನಿನ್ನಂತೆ ಹೆಚ್ಚಳಪಡುವವರು ಯಾರಿದ್ದಾರೆ? ಸತ್ತವನನ್ನು ನೀನೆಬ್ಬಿಸಿದೆ ಮರಣದಿಂದ, ಪಾತಾಳದಿಂದ ಇದು ಸಾಧ್ಯವಾಯಿತು ಮಹೋನ್ನತನ ವಾಕ್ಯ ಶಕ್ತಿಯಿಂದ. ಅರಸುಗಳನ್ನು ನಾಶನಕ್ಕೆ ಗುರಿಮಾಡಿದವನು ನೀನು ಗಣ್ಯವ್ಯಕ್ತಿಗಳನ್ನು ಮಂಚದಿಂದ ಇಳಿಸಿದವನು ನೀನು. ಸೀನಾಯಿನಲ್ಲಿ ಗದರಿಸಿಕೊಂಡವನು ನೀನು ಹೋರೇಬಿನಲ್ಲಿ ಮುಯ್ಯಿತೀರಿಸುವ ನಿರ್ಣಯ ಕೇಳಿಸಿಕೊಂಡವನು ನೀನು. ಪ್ರತೀಕಾರ ಮಾಡುವುದಕ್ಕೆ ಅರಸರನ್ನು, ನಿನ್ನಾನಂತರ ಇರಬೇಕಾದ ಪ್ರವಾದಿಯನ್ನು ಅಭಿಷೇಕಿಸಿದವನು ನೀನು. ನೀ ಒಯ್ಯಲ್ಪಟ್ಟೆ ಬೆಂಕಿಯ ಬಿರುಗಾಳಿಯಲ್ಲಿ ಅಗ್ನಿಮಯ ಕುದುರೆಗಳೆಳೆದ ರಥದಲ್ಲಿ. ಕೋಪ ರೌದ್ರಕ್ಕೇರುವುದಕ್ಕೆ ಮುಂಚೆ ಅದನ್ನು ಶಾಂತಪಡಿಸುವುದಕ್ಕಾಗಿ ತಂದೆಯ ಹೃದಯವನ್ನು ಮಗನ ಕಡೆಗೆ ತಿರುಗಿಸುವುದಕ್ಕಾಗಿ ಇಸ್ರಯೇಲಿನ ಕುಲಗಳನ್ನು ಯಥಾಸ್ಥಿತಿಗೆ ತರುವುದಕ್ಕಾಗಿ ತಕ್ಕಕಾಲದಲ್ಲಿ ಗದರಿಸುವಾತ ನೀನೆಂದು ಬರೆದಿದೆ ನಿನ್ನ ವಿಷಯವಾಗಿ. ನಿನ್ನನು ನೋಡುವವರು ಧನ್ಯರು ಪ್ರೀತಿಯಿಂದ ನಿಧನರಾದವರು ಧನ್ಯರು ! ಕಾರಣ, ನಾವು ಸಹ ನಿಜವಾಗಿ ಜೀವಿಸುವೆವು. ಎಲೀಷ ಸುಳಿಗಾಳಿಯಿಂದ ಆವರಿಸಲ್ಪಟ್ಟವನು ಎಲೀಯನು ಅವನ ಆತ್ಮದಿಂದ ತುಂಬಿಕೊಂಡವನು ಎಲೀಷನು. ಇವನು ತನ್ನ ಜೀವನದಲ್ಲಿ ಜಗ್ಗಲಿಲ್ಲ ಯಾವ ಅರಸನ ಬೆದರಿಕೆಗು ಇವನನ್ನು ಅಧೀನದಲ್ಲಿಟ್ಟುಕೊಳ್ಳುವ ಶಕ್ತಿ ಇರಲಿಲ್ಲ ಯಾರಿಗು. ಇವನು ಸೋಲಲಿಲ್ಲ ಯಾವ ಮಾತಿಗು ಇವನ ದೇಹ ಪ್ರವಾದಿಸಿತು ಸತ್ತ ಮೇಲೂ. ಜೀವಮಾನಕಾಲದಲ್ಲಿ ಎಸಗಿದನು ಮಹತ್ಕಾರ್ಯಗಳನ್ನು ಸತ್ತಮೇಲೂ ಅವನ ಕಾರ್ಯಗಳು ಅಗಾಧವಾಗಿದ್ದವು.

ಕೀರ್ತನೆ: 97:1-2, 3-4, 5-6, 7

ಶ್ಲೋಕ: ಸಜ್ಜನರೇ, ಪ್ರಭುವಿನಲಿ ಆನಂದಿಸಿರಿ

ಶುಭಸಂದೇಶ: ಮತ್ತಾಯ 6:7-15


ಯೇಸುಸ್ವಾಮಿ ತಮ್ಮ ಶಿಷ್ಯರಿಗೆ ಹೀಗೆಂದರು: “ಪ್ರಾರ್ಥನೆ ಮಾಡುವಾಗ ಪರಕೀಯರಂತೆ ನಿರರ್ಥಕ ಪದಗಳನ್ನು ಪಿಸುಗುಟ್ಟಬೇಡ. ತಮ್ಮ ಪ್ರಾರ್ಥನೆ ದೀರ್ಘವಾದಷ್ಟೂ ದೇವರು ಆಲಿಸುತ್ತಾರೆಂದು ಅವರು ಭಾವಿಸುತ್ತಾರೆ. ನೀವು ಅವರಂತೆ ಆಗಬೇಡಿ. ನಿಮ್ಮ ಅಗತ್ಯಗಳೇನೆಂದು ನೀವು ಕೇಳುವುದಕ್ಕೆ ಮೊದಲೇ ನಿಮ್ಮ ತಂದೆಗೆ ಗೊತ್ತಿದೆ. 9ಆದುದರಿಂದ ಹೀಗೆಂದು ಪ್ರಾರ್ಥನೆಮಾಡಿ: ‘ಸ್ವರ್ಗ ದಲ್ಲಿರುವ ಓ ನಮ್ಮ ತಂದೆಯೇ, ನಿಮ್ಮ ಪವಿತ್ರ ನಾಮ ಪೂಜಿತವಾಗಲಿ; ನಿಮ್ಮ ಸಾಮ್ರಾಜ್ಯ ಬರಲಿ; ನಿಮ್ಮ ಚಿತ್ತ ಸ್ವರ್ಗದಲ್ಲಿ ನೆರವೇರುವ ಪ್ರಕಾರ ಜಗತ್ತಿನಲ್ಲಿಯೂ ನೆರವೇರಲಿ. ನಮ್ಮ ಅನುದಿನದ ಆಹಾರವನ್ನು ನಮಗಿಂದು ಕೊಡಿ. ನಮಗೆ ತಪ್ಪುಮಾಡಿದವರನ್ನು ನಾವು ಕ್ಷಮಿಸುವ ಪ್ರಕಾರ ನಾವು ಮಾಡಿದ ತಪ್ಪುಗಳನ್ನು ಕ್ಷಮಿಸಿ. ನಮ್ಮನ್ನು ಶೋಧನೆಗೆ ಒಳಪಡಿಸಬೇಡಿ; ಕೇಡಿನಿಂದ ನಮ್ಮನ್ನು ರಕ್ಷಿಸಿರಿ.’ “ಜನರ ತಪ್ಪುಗಳನ್ನು ನೀವು ಕ್ಷಮಿಸಿದರೆ ಸ್ವರ್ಗದಲ್ಲಿರುವ ನಿಮ್ಮ ತಂದೆ ನಿಮ್ಮನ್ನು ಕ್ಷಮಿಸುವರು. ಜನರನ್ನು ನೀವು ಕ್ಷಮಿಸದಿದ್ದರೆ, ನಿಮ್ಮ ತಂದೆಯೂ ನಿಮ್ಮ ತಪ್ಪುಗಳನ್ನು ಕ್ಷಮಿಸರು.”

No comments:

Post a Comment

09.01.2026 - ಸ್ವಾವಿೂ, ತಾವು ಮನಸ್ಸುಮಾಡಿದರೆ ನನ್ನನ್ನು ಗುಣಮಾಡಬಲ್ಲಿರಿ

  ಮೊದಲನೇ ವಾಚನ: 1 ಯೊವಾನ್ನ 5: 5-13 ಪ್ರಿಯರೇ, ಯೇಸುವೇ ದೇವರ ಪುತ್ರನೆಂದು ನಂಬಿದವರೇ ಹೊರತು ಲೋಕವನ್ನು ಜಯಿಸಲು ಬೇರೆ ಯಾರಿಂದ ಸಾಧ್ಯ? ಕ್ರಿಸ್ತಯೇಸುವೇ ಜಲ ಮತ್ತು ರಕ...