ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

07.06.24 - ಕೂಡಲೇ ರಕ್ತವೂ ನೀರೂ ಅಲ್ಲಿಂದ ಹೊರಗೆ ಹರಿದು ಬಂದವು

ಮೊದಲನೇ ವಾಚನ: ಹೊಶೇಯ 11:1, 3-4, 8-9


ಸರ್ವೇಶ್ವರ ಇಂತೆನ್ನುತ್ತಾರೆ: “ಪ್ರೀತಿಸಿದೆನು ಇಸ್ರಯೇಲನ್ನು ಅದರ ಬಾಲ್ಯಾವಸ್ಥೆಯಿಂದ; ಕರೆದೆನು ನನ್ನ ಆ ಪುತ್ರನನು ಈಜಿಪ್ಟಿನಿಂದ. ಎಫ್ರಯಿಮಿಗೆ ಅಂಬೆಗಾಲಿಡಲು ಕಲಿಸಿದವನು ನಾನೇ ಅದನ್ನು ಕೈಗಳಲ್ಲಿ ಎತ್ತಿಕೊಂಡು ಆಡಿಸಿದವನು ನಾನೇ ಆ ಜನರನ್ನು ಸ್ವಸ್ಥಮಾಡಿದವನೂ ನಾನೇ; ಆದರೆ ಅರಿತುಕೊಳ್ಳದೆ ಹೋದರು ಈ ವಿಷಯವನೇ. ಬೆಳೆಸಿದೆನು ಅವರನ್ನು ಕರುಣೆಯ ಕಟ್ಟುಗಳಲಿ, ಪ್ರೀತಿಯ ಬಂಧನದಲಿ ಸುಧಾರಿಸಿದೆ ಅವರ ಹೆಗಲಿಗೆ ಬಿಗಿದಿದ್ದ ನೊಗವನ್ನು ಬಿಚ್ಚಿ ಊಟ ಬಡಿಸಿದೆ ಅವರಿಗೆ ನೆಲಸಮ ಬಗ್ಗಿ. “ಹೇಗೆ ತ್ಯಜಿಸಲಿ ಎಫ್ರಯಿಮೇ, ನಿನ್ನನು ಹೇಗೆ ಕೈಬಿಡಲಿ ಇಸ್ರಯೇಲೇ, ನಿನ್ನನು. ಹೇಗೆ ಈಡುಮಾಡಲಿ ದುರ್ಗತಿಗೆ ನಿನ್ನನು ಅದ್ಮದಂತೆ, ಹೇಗೆ ನಾಶಮಾಡಲಿ ನಿನ್ನನು ಚೆಬೋಯೀಮನಂತೆ? ತಡೆಹಿಡಿಯುವೆನು ನನ್ನ ಉಗ್ರಕೋಪವನು ನಾಶಪಡಿಸಲಾರೆ ಮರಳಿ ಎಫ್ರಯಿಮನು. ನರಮಾನವನಲ್ಲ, ದೇವರು ನಾನು ನಿಮ್ಮಲ್ಲಿ ನೆಲೆಯಾಗಿರುವ ಸದಮಲಸ್ವಾಮಿಯು!

ಯೆಶಾಯ: 12: 2-6
ಶ್ಲೋಕ: ಉದ್ಧರಿಸುವಾ ಒರತೆಗಳಿಂದ, ಸೇದುವಿರಿ ನೀರನು ಹರುಷದಿಂದ.

ದೇವರೇ ಉದ್ಧಾರಕನೆನಗೆ
ಆತನಲ್ಲಿದೆ ನನಗೆ ನಿರ್ಭೀತ ನಂಬಿಕೆ.
ದೇವಾದಿದೇವನೇ ಎನಗೆ ಶಕ್ತಿ
ಆತನೆನ್ನ ಕೀರ್ತನೆಯ ವ್ಯಕ್ತಿ
ತಂದಿಹನಾತ ಎನಗೆ ಮುಕ್ತಿ.” ಶ್ಲೋಕ

ಉದ್ಧರಿಸುವಾ ಒರತೆಗಳಿಂದ
ಸೇದುವಿರಿ ನೀರನು ಹರುಷದಿಂದ.
ಹೇಳುವಿರಿ ನೀವು ಆ ದಿನದಂದು ಈ ಪರಿ -
“ಸಲ್ಲಿಸಿರಿ ಸರ್ವೇಶ್ವರನಿಗೆ ಕೃತಜ್ಞತೆಯನು
ಸ್ಮರಿಸಿರಿ ಆತನ ಶ್ರೀನಾಮವನು ಶ್ಲೋಕ

ಸಾರಿರಿ ಜನತೆಗೆ ಆತನ ಕಾರ್ಯಗಳನು
ಘೋಷಿಸಿರಿ ಆತನ ನಾಮಘನತೆಯನು.
ಹಾಡಿರಿ ಸರ್ವೇಶ್ವರನಿಗೆ ಸ್ತುತಿಯನು
ಎಸಗಿಹನಾತ ಮಹಿಮಾಕಾರ್ಯಗಳನು ಶ್ಲೋಕ

ತಿಳಿಸಿರಿ ಜಗದಾದ್ಯಂತಕೆ ಈ ವಿಷಯವನು.
ಸಿಯೋನಿನ ನಿವಾಸಿಗಳೇ, ಹಾಡಿರಿ, ಮಾಡಿರಿ ಭಜನ
ನಿಮ್ಮ ಮಧ್ಯೆಯಿರುವ ಆ ಘನವಂತನ
ಇಸ್ರಯೇಲಿನಾ ಸ್ವಾಮಿ ಪರಮಪಾವನ.” ಶ್ಲೋಕ

ಎರಡನೆಯ ವಾಚನ: ಎಫೆಸಿಯರಿಗೆ 3: 8-12, 14-19

ದೇವಜನರಲ್ಲೆಲ್ಲ ನಾನು ಅತ್ಯಲ್ಪನು. ಆದರೂ ಯೇಸುಕ್ರಿಸ್ತರ ಅಪರಿಮಿತ ಆಧ್ಯಾತ್ಮಿಕ ಸಿರಿಸಂಪತ್ತಿನ ಬಗ್ಗೆ ಅನ್ಯಜನರಿಗೆ ಪ್ರಬೋಧಿಸುವ ಸೌಭಾಗ್ಯ ನನ್ನದಾಯಿತು. ಸಮಸ್ತವನ್ನು ಸೃಷ್ಟಿಸಿದ ದೇವರ ಆದಿಯಿಂದಲೂ ಗುಪ್ತವಾಗಿಟ್ಟಿದ್ದ ತಮ್ಮ ಯೋಜನೆಯನ್ನು ಈಡೇರಿಸುವ ವಿಧಾನವನ್ನು ಸರ್ವಜನರಿಗೆ ತಿಳಿಯಪಡಿಸುವುದಕ್ಕಾಗಿ ನನ್ನನ್ನು ಆರಿಸಿಕೊಂಡಿರುವರು. ಹೀಗೆ ಧರ್ಮಸಭೆಯ ಮೂಲಕ ದೇವರ ಬಹುರೂಪದ ಜ್ಞಾನವು ಅಶರೀರ ಶಕ್ತಿಗಳ ಅಧಿಕಾರಿಗಳಿಗೂ ಅಧಿಪತಿಗಳಿಗೂ ಈಗಿನ ಕಾಲದಲ್ಲಿ ತಿಳಿಯಬೇಕೆಂಬುದೇ ಅವರ ಉದ್ದೇಶವಾಗಿತ್ತು. ತಮ್ಮ ಪೂರ್ವ ಸಂಕಲ್ಪದಂತೆಯೇ ಇದನ್ನು ದೇವರು ನಮ್ಮ ಪ್ರಭುವಾದ ಯೇಸುಕ್ರಿಸ್ತರಲ್ಲಿ ಕಾರ್ಯಗತಗೊಳಿಸಿದರು. ಯೇಸುಕ್ರಿಸ್ತರಲ್ಲಿ ನಾವಿಟ್ಟಿರುವ ವಿಶ್ವಾಸದ ಮೂಲಕ ಅವರಲ್ಲಿ ಒಂದಾಗಿ, ದೇವರ ಸಾನ್ನಿಧ್ಯವನ್ನು ಸೇರುವ ಧೈರ್ಯ ಹಾಗೂ ಭರವಸೆ ನಮಗಿದೆ. ಈ ಕಾರಣ ನಾನು ಮೊಣಕಾಲೂರಿ ಪಿತನಲ್ಲಿ ಪ್ರಾರ್ಥಿಸುತ್ತೇನೆ; ಸ್ವರ್ಗಲೋಕದಲ್ಲೂ ಭೂಲೋಕದಲ್ಲೂ ಪ್ರತಿ ಕುಟುಂಬವು ತನ್ನ ಹೆಸರನ್ನು ಪಡೆದಿರುವುದು ಅವರಿಂದಲೇ. ಅವರು ತಮ್ಮ ಮಹಿಮೆಯ ಸಂಪನ್ಮೂಲಗಳಿಂದ ಪವಿತ್ರಾತ್ಮ ಅವರ ಮುಖಾಂತರ ನಿಮ್ಮ ಅಂತರಂಗವನ್ನು ಬಲಗೊಳಿಸಲಿ; ನಿಮ್ಮ ವಿಶ್ವಾಸದ ಫಲವಾಗಿ, ಯೇಸುಕ್ರಿಸ್ತರು ನಿಮ್ಮ ಹೃದಯಗಳಲ್ಲಿ ಸದಾ ವಾಸಿಸಲಿ ಮತ್ತು ನಿಮ್ಮ ಜೀವನವು ಪ್ರೀತಿಯಲ್ಲಿ ಬೇರೂರಿ ಸದೃಢವಾಗಿ ನಿಲ್ಲಲಿ. ಹೀಗೆ ದೇವಜನರೆಲ್ಲರೊಡನೆ, ಕ್ರಿಸ್ತ ಯೇಸುವಿನ ಅಗಾಧ ಪ್ರೀತಿಯ ಉದ್ದ-ಅಗಲ, ಆಳ-ಎತ್ತರ ಎಷ್ಟೆಂಬುದನ್ನು ನೀವು ಗ್ರಹಿಸಿಕೊಳ್ಳುವಂತಾಗಲಿ. ಹೌದು, ಜ್ಞಾನವನ್ನು ಮೀರಿದ ಈ ಪ್ರೀತಿಯನ್ನು ಅರಿತುಕೊಳ್ಳಲು ಆಸಕ್ತರಾಗಬೇಕು, ದೇವರ ಪರಿಪೂರ್ಣತೆಯಿಂದ ತುಂಬಿದವರಾಗಬೇಕು ಎಂದು ನಾನು ಬೇಡಿಕೊಳ್ಳುತ್ತೇನೆ.

ಶುಭಸಂದೇಶ: ಯೋವಾನ್ನ 9: 31-37


ಅಂದು ಪಾಸ್ಕ ಹಬ್ಬದ ಹಿಂದಿನ ದಿನ. ಮಾರನೆಯ ದಿನ ಸಬ್ಬತ್ ದಿನವೂ ದೊಡ್ಡ ಹಬ್ಬವೂ ಆಗಿತ್ತು. ಸಬ್ಬತ್ ದಿನದಂದು ಶವಗಳು ಶಿಲುಬೆಯ ಮೇಲೆ ತೂಗಾಡುವುದು ಸರಿಯಲ್ಲ ಎಂದುಕೊಂಡು ಶಿಲುಬೆಗೇರಿಸಲಾಗಿದ್ದವರ ಕಾಲುಗಳನ್ನು ಮುರಿದು ಅವರ ಶವವನ್ನು ಅಂದೇ ತೆಗೆಯಿಸಿಬಿಡಲು ಯೆಹೂದ್ಯರು ಪಿಲಾತನಿಂದ ಅಪ್ಪಣೆ ಕೇಳಿಕೊಂಡರು. ಅಂತೆಯೇ ಸೈನಿಕರು ಬಂದು ಯೇಸುವಿನೊಡನೆ ಶಿಲುಬೆಗೇರಿಸಲಾಗಿದ್ದ ಮೊದಲನೆಯವನ ಮತ್ತು ಎರಡನೆಯವನ ಕಾಲುಗಳನ್ನು ಮುರಿದರು. ತರುವಾಯ ಯೇಸುವಿನ ಬಳಿಗೆ ಬಂದರು. ಯೇಸು ಆಗಲೇ ಸತ್ತುಹೋಗಿರುವುದನ್ನು ಕಂಡು, ಅವರ ಕಾಲುಗಳನ್ನು ಮುರಿಯಲಿಲ್ಲ. ಆದರೂ ಸೈನಿಕರಲ್ಲಿ ಒಬ್ಬನು ಈಟಿಯಿಂದ ಅವರ ಪಕ್ಕೆಯನ್ನು ತಿವಿದನು. ಕೂಡಲೇ ರಕ್ತವೂ ನೀರೂ ಅಲ್ಲಿಂದ ಹೊರಗೆ ಹರಿದು ಬಂದವು. ಇದು ಕಣ್ಣಾರೆ ಕಂಡವನ ಹೇಳಿಕೆ. ಈ ಹೇಳಿಕೆ ಸತ್ಯವಾದುದು; ತಾನು ಸತ್ಯವನ್ನೇ ನುಡಿಯುತ್ತಿದ್ದೇನೆಂಬ ಅರಿವು ಅವನಿಗೆ ಇದೆ. ನೀವು ವಿಶ್ವಾಸಿಸಬೇಕೆಂದೇ ಆತನು ಇದನ್ನು ಹೇಳಿದ್ದಾನೆ. 'ಆತನ ಎಲುಬೊಂದನ್ನು ಮುರಿಯಕೂಡದು’ ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ. ಆ ವಾಕ್ಯ ನೆರವೇರುವಂತೆ ಹೀಗೆ ನಡೆಯಿತು. ‘ತಾವು ಇರಿದವನನ್ನೇ ಅವರು ನಿರೀಕ್ಷಿಸುವರು’ ಎನ್ನುತ್ತದೆ ಇನ್ನೊಂದು ವಾಕ್ಯ.

No comments:

Post a Comment