08.07.24 - "ಮಗಳೇ, ಹೆದರಬೇಡ; ನಿನ್ನ ವಿಶ್ವಾಸ ನಿನ್ನನ್ನು ಗುಣಪಡಿಸಿದೆ,"

ಮೊದಲನೇ ವಾಚನ: ಹೊಶೇಯ 2:16, 17-18, 21-22

ಸರ್ವೇಶ್ವರ ಇಂತೆನ್ನುತ್ತಾರೆ: ಆ ದಿನಗಳಲ್ಲಿ ನೀನು ನನ್ನನ್ನು ‘ಬಾಳ್‍ದೇವತೆ’ ಎಂದು ಕರೆಯದೆ ‘ನನ್ನ ಪತಿ’ ಎಂದು ಕರೆಯುವೆ. ಬಾಳ್‍ದೇವತೆಗಳ ಹೆಸರುಗಳನ್ನು ನಿನ್ನ ಬಾಯಿಂದ ತೊಲಗಿಸುವೆನು; ಇನ್ನೆಂದಿಗೂ ಅವುಗಳನ್ನು ನೀನು ಉಚ್ಚರಿಸದಂತೆ ಮಾಡುವೆನು. ಆ ದಿನಗಳಲ್ಲಿ ನನ್ನ ಜನರಿಗೆ ಹಾನಿ ಮಾಡದಂತೆ ಕಾಡಿನ ಮೃಗಗಳೊಂದಿಗೂ, ಆಕಾಶದ ಪಕ್ಷಿಗಳೊಂದಿಗೂ, ನೆಲದ ಮೇಲೆ ಹರಿದಾಡುವ ಕ್ರಿಮಿಕೀಟಗಳೊಂದಿಗೂ ಒಪ್ಪಂದ ಮಾಡಿಕೊಳ್ಳುವೆನು. ಬಿಲ್ಲುಬಾಣ, ಕತ್ತಿಕಠಾರಿಗಳು ಅವರ ನಾಡಿನಲ್ಲಿ ಇಲ್ಲದಂತೆ ಮಾಡುವೆನು; ನನ್ನ ಜನರು ಸುರಕ್ಷಿತವಾಗಿ ನೆಲಸುವಂತೆ ಮಾಡುವೆನು. ಸರ್ವೇಶ್ವರ ಇಂತೆನ್ನುತ್ತಾರೆ: ಆ ದಿನದಂದು ಪ್ರೀತಿಸುವೆನು ನಿನ್ನನು; ಆಲಿಸುವೆನು ಆಗಸದ ಮೊರೆಯನು. ಆಗಸವು ಆಲಿಸುವುದು ಭೂಮಿಯ ಮೊರೆಯನು ಇವು ಆಲಿಸುವುವು ಇಸ್ರಯೇಲಿನ ಮೊರೆಯನು.

ಕೀರ್ತನೆ: 145:2-3, 4-5, 6-7, 8-9

ಶ್ಲೋಕ: ಪ್ರಭು ದಯಾನಿಧಿ, ಕೃಪಾಸಾಗರನು

ಶುಭಸಂದೇಶ: ಮತ್ತಾಯ 9:18-26


ಯೇಸುಸ್ವಾಮಿ ಹೀಗೆ ಬೋಧಿಸುತ್ತಿರುವಾಗಲೇ ಯೆಹೂದ್ಯ ಅಧಿಕಾರಿಯೊಬ್ಬನು ಅಲ್ಲಿಗೆ ಬಂದನು. ಅವನು ಯೇಸುವಿನ ಮುಂದೆ ಮೊಣಕಾಲೂರಿ, "ನನ್ನ ಮಗಳು ಈಗ ತಾನೆ ಸತ್ತುಹೋದಳು. ಆದರೂ ತಾವು ದಯಮಾಡಿಸಿ ತಮ್ಮ ಹಸ್ತವನ್ನು ಆಕೆಯ ಮೇಲಿಡಬೇಕು. ಅವಳು ಮರಳಿ ಬದುಕುವಳು," ಎಂದು ಬೇಡಿಕೊಂಡನು. ಯೇಸು ಎದ್ದು ಅವನ ಹಿಂದೆ ಹೊರಟರು. ಶಿಷ್ಯರೂ ಹಿಂಬಾಲಿಸಿ ಹೋದರು. ಹೋಗುತ್ತಿದ್ದಾಗ, ಹನ್ನೆರಡು ವರ್ಷಗಳಿಂದ ರಕ್ತಸ್ರಾವ ರೋಗದಿಂದ ಬಹಳವಾಗಿ ನರಳುತ್ತಿದ್ದ ಒಬ್ಬ ಮಹಿಳೆ ಹಿಂಬದಿಯಿಂದ ಬಂದು ಯೇಸುಸ್ವಾಮಿಯ ಉಡುಪಿನ ಅಂಚನ್ನು ಮುಟ್ಟಿದಳು. "ನಾನು ಅವರ ಉಡುಪನ್ನು ಮುಟ್ಟಿದರೂ ಸಾಕು, ಗುಣಹೊಂದುವೆನು" ಎಂದುಕೊಂಡಿದ್ದಳು ಆಕೆ. ಯೇಸು ಹಿಂದಿರುಗಿ ಆಕೆಯನ್ನು ನೋಡಿ, "ಮಗಳೇ, ಹೆದರಬೇಡ; ನಿನ್ನ ವಿಶ್ವಾಸ ನಿನ್ನನ್ನು ಗುಣಪಡಿಸಿದೆ," ಎಂದರು. ಆ ಕ್ಷಣದಲ್ಲೇ ಆಕೆ ವ್ಯಾಧಿಯಿಂದ ಮುಕ್ತಳಾದಳು. ಯೇಸು ಆ ಅಧಿಕಾರಿಯ ಮನೆಯನ್ನು ತಲುಪಿದರು. ಅಲ್ಲಿ ವಾದ್ಯಗಾರರನ್ನೂ ಗದ್ದಲ ಮಾಡುತ್ತಿದ್ದ ಜನಜಂಗುಳಿಯನ್ನೂ ಕಂಡು, "ಎಲ್ಲರೂ ಇಲ್ಲಿಂದ ಹೊರಡಿರಿ, ಬಾಲಕಿ ಸತ್ತಿಲ್ಲ; ನಿದ್ರಿಸುತ್ತಿದ್ದಾಳೆ" ಎಂದರು. ಜನರು ನಕ್ಕು ಅವರನ್ನು ಪರಿಹಾಸ್ಯ ಮಾಡಿದರು. ಆದರೂ ಜನರ ಗುಂಪನ್ನು ಹೊರಗೆ ಕಳುಹಿಸಿ, ಯೇಸು ಕೊಠಡಿಯೊಳಕ್ಕೆ ಹೋಗಿ, ಬಾಲಕಿಯ ಕೈಹಿಡಿದು ಎಬ್ಬಿಸಿದರು. ಆಕೆ ಎದ್ದಳು. ಈ ಸಮಾಚಾರ ಆ ನಾಡಿನಲ್ಲೆಲ್ಲಾ ಹಬ್ಬಿ ಹರಡಿತು. 

No comments:

Post a Comment

11.01.26 - "ಅವರು ನಮಗೆ ಪವಿತ್ರಾತ್ಮ ಅವರಿಂದಲೂ ಅಗ್ನಿಯಿಂದಲೂ ದಿಕ್ಷಾಸ್ನಾನ ಕೊಡುವರು"

ಮೊದಲನೇ ವಾಚನ: ಯೆಶಾಯ 40:1-5, 9-11 (ಯೆಶಾಯ: 41:1-4, 6-7) ನಿಮ್ಮ ದೇವರು ಇಂತೆನ್ನುತ್ತಾರೆ: "ಸಂತೈಸಿ, ನನ್ನ ಜನರನ್ನು ಸಂತೈಸಿರಿ. ಜೆರುಸಲೇಮಿನೊಡನೆ ಪ್ರೀತಿಯ...