ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

03.06.24 - ಮನೆ ಕಟ್ಟುವವರು ಬೇಡವೆಂದು ಬಿಸಾಡಿದ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು

ಮೊದಲನೇ ವಾಚನ: 2 ಪೇತ್ರನು1:2-7

ದೇವರ ಮತ್ತು ಪ್ರಭು ಯೇಸುಕ್ರಿಸ್ತರ ಬಗ್ಗೆ ನೀವು ಪಡೆಯುತ್ತಿರುವ ಜ್ಞಾನಾರ್ಜನೆಯು ನಿಮಗೆ ಕೃಪಾಶೀರ್ವಾದವನ್ನೂ ಶಾಂತಿಸಮಾಧಾನವನ್ನೂ ಅಧಿಕಾಧಿಕವಾಗಿ ತರಲಿ! ತಮ್ಮ ಸ್ವಂತ ಮಹಿಮೆಯಲ್ಲೂ ಸೌಭಾಗ್ಯದಲ್ಲೂ ಭಾಗಿಗಳಾಗಲು ದೇವರು ನಮ್ಮನ್ನು ಕರೆದಿದ್ದಾರೆ. ಅವರನ್ನು ಅರಿತುಕೊಳ್ಳುವುದರ ಮೂಲಕ ನಾವು ಭಕ್ತಿಯುತ ಜೀವನವನ್ನು ನಡೆಸಲು ಬೇಕಾದುದೆಲ್ಲವನ್ನೂ ಆ ಯೇಸುವಿನ ದಿವ್ಯಶಕ್ತಿಯಿಂದ ಪಡೆದಿದ್ದೇವೆ. ಹೀಗೆ ನೀವು ಲೋಕದಲ್ಲಿ ಆಶಾಪಾಶಗಳಿಂದ ಉಂಟಾಗುವ ಭ್ರಷ್ಟಾಚಾರದಿಂದ ತಪ್ಪಿಸಿಕೊಂಡು ದೈವಿಕಸ್ವಭಾವದಲ್ಲಿ ಪಾಲುಗಾರರಾಗುವಂತೆ, ದೇವರು ಅಮೂಲ್ಯವೂ ಅತ್ಯುತ್ತಮವೂ ಆದ ವಾಗ್ದಾನಗಳನ್ನು ಅನುಗ್ರಹಿಸಿದ್ದಾರೆ. ಈ ಕಾರಣ, ನೀವು ಪೂರ್ಣಾಸಕ್ತಿಯಿಂದ ನಿಮ್ಮ ವಿಶ್ವಾಸಕ್ಕೆ ಸದ್ಗುಣವನ್ನು, ಸದ್ಗುಣಕ್ಕೆ ಸುಜ್ಞಾನವನ್ನು ಸೇರಿಸಿರಿ. ಸುಜ್ಞಾನಕ್ಕೆ ಸಂಯಮವನ್ನು, ಸಂಯಮಕ್ಕೆ ಸ್ಥೈರ್ಯವನ್ನು, ಸ್ಥೈರ್ಯಕ್ಕೆ ಸದ್ಭಕ್ತಿಯನ್ನು ಕೂಡಿಸಿರಿ. ಈ ನಿಮ್ಮ ಸದ್ಭಕ್ತಿಗೆ ಸೋದರ ಸ್ನೇಹವನ್ನು, ಸೋದರ ಸ್ನೇಹಕ್ಕೆ ಪ್ರೀತಿಯನ್ನು ಬೆರೆಸಿರಿ.

ಕೀರ್ತನೆ: 91:1-2, 14-15, 15-16

ಶ್ಲೋಕ: ಪ್ರಭುವೇ ದುರ್ಗವೂ ನಾ ನಂಬಿದ ದೇವನೂ

ಶುಭಸಂದೇಶ: ಮಾರ್ಕ 12:1-12

ಅನಂತರ ಯೇಸು

ಸ್ವಾಮಿ ಅವರೊಡನೆ ಸಾಮತಿಗಳ ರೂಪದಲ್ಲಿ ಮಾತನಾಡತೊಡಗಿದರು: “ಒಬ್ಬನು ದ್ರಾಕ್ಷಿಯತೋಟ ಒಂದನ್ನು ಮಾಡಿ, ಅದರ ಸುತ್ತ ಬೇಲಿ ಹಾಕಿಸಿದ; ದ್ರಾಕ್ಷಾರಸವನ್ನು ತೆಗೆಯಲು ಆಲೆಯನ್ನು ಹೂಡಿಸಿ, ಕಾವಲಿಗಾಗಿ ಅಟ್ಟಣೆಯನ್ನು ಕಟ್ಟಿಸಿದ. ಬಳಿಕ ತೋಟವನ್ನು ಗೇಣಿದಾರರಿಗೆ ವಹಿಸಿ, ಹೊರನಾಡಿಗೆ ಹೊರಟುಹೋದ. ಫಲಕಾಲವು ಬಂದಾಗ ತನಗೆ ಬರತಕ್ಕ ಪಾಲನ್ನು ತರುವುದಕ್ಕಾಗಿ ಒಬ್ಬ ಸೇವಕನನ್ನು ಗೇಣಿದಾರರ ಬಳಿಗೆ ಕಳುಹಿಸಿದ. ಆದರೆ ಅವರು ಆ ಸೇವಕನನ್ನು ಹಿಡಿದು, ಹೊಡೆದು, ಬರಿಗೈಯಲ್ಲಿ ಹಿಂದಕ್ಕೆ ಅಟ್ಟಿದರು. ತೋಟದ ಯಜಮಾನ ಪುನಃ ಇನ್ನೊಬ್ಬ ಸೇವಕನನ್ನು ಕಳುಹಿಸಿದ. ಅವರು ಅವನ ತಲೆಯ ಮೇಲೆ ಹೊಡೆದು, ಅವಮಾನ ಮಾಡಿ ಕಳುಹಿಸಿದರು. ಯಜಮಾನ ಆಮೇಲೆ ಮತ್ತೊಬ್ಬ ಸೇವಕನನ್ನು ಕಳುಹಿಸಿದ. ಇವನನ್ನು ಅವರು ಕೊಂದುಹಾಕಿದರು. ಇನ್ನೂ ಅನೇಕರನ್ನು ಕಳುಹಿಸಲು, ಅವರಲ್ಲಿ ಕೆಲವರನ್ನು ಹೊಡೆದರು, ಕೆಲವರನ್ನು ಕಡಿದುಹಾಕಿದರು. ಯಜಮಾನನಿಗೆ ಇನ್ನು ಉಳಿದಿದ್ದವನೆಂದರೆ ಅವನ ಮುದ್ದುಮಗನೊಬ್ಬನೇ, “ನನ್ನ ಮಗನಿಗಾದರೂ ಅವರು ಮರ್ಯಾದೆಕೊಟ್ಟಾರು,” ಎಂದು ಭಾವಿಸಿ, ಕಟ್ಟಕಡೆಗೆ ಆ ಯಜಮಾನ ತನ್ನ ಮಗನನ್ನೇ ಅವರ ಬಳಿಗೆ ಕಳುಹಿಸಿದ. ಆದರೆ ಆ ಗೇಣಿದಾರರು, ‘ತೋಟಕ್ಕೆ ಇವನೇ ಉತ್ತರಾಧಿಕಾರಿ; ಬನ್ನಿ, ಇವನನ್ನು ಮುಗಿಸಿಬಿಡೋಣ. ಆಗ ಈ ಆಸ್ತಿ ನಮ್ಮದಾಗುವುದು,’ ಎಂದು ಒಳಸಂಚು ಹೂಡಿ, ಅವನನ್ನು ಹಿಡಿದು, ಕೊಂದುಹಾಕಿ ತೋಟದ ಆಚೆಗೆ ಎಸೆದುಬಿಟ್ಟರು. ಇಂತಹ ಪರಿಸ್ಥಿತಿಯಲ್ಲಿ ಆ ತೋಟದ ಯಜಮಾನ ಏನು ಮಾಡುವನು? ಅವನು ಬಂದು ಆ ಗೇಣಿದಾರರನ್ನು ಸಂಹರಿಸಿ ತೋಟವನ್ನು ಬೇರೆ ಗೇಣಿದಾರರಿಗೆ ಒಪ್ಪಿಸುವನು. ಪವಿತ್ರಗ್ರಂಥದಲ್ಲಿ : ಮನೆ ಕಟ್ಟುವವರು ಬೇಡವೆಂದು ಬಿಸಾಡಿದ ಕಲ್ಲೇ ಪ್ರಮುಖ ಮೂಲೆಗಲ್ಲಾಯಿತು; ಸರ್ವೇಶ್ವರನಿಂದಲೇ ಆದ ಈ ಕಾರ್ಯ ನಮ್ಮ ಕಣ್ಣಿಗೆ ಅದೆಂಥ ಆಶ್ಚರ್ಯ! ಎಂಬ ವಾಕ್ಯವನ್ನು ನೀವು ಓದಲಿಲ್ಲವೇ?" ಎಂದರು. ತಮ್ಮನ್ನು ಕುರಿತೇ ಈ ಸಾಮತಿಯನ್ನು ಹೇಳುತ್ತಿದ್ದಾರೆಂದು ಅರ್ಥಮಾಡಿಕೊಂಡ ಆ ಯೆಹೂದ್ಯ ಮುಖಂಡರು ಯೇಸುವನ್ನು ಹಿಡಿದು ಬಂಧಿಸಲು ಯತ್ನಿಸಿದರು. ಆದರೆ ಜನಸಮೂಹಕ್ಕೆ ಭಯಪಟ್ಟು ಅವರನ್ನು ಬಿಟ್ಟುಹೋದರು.

No comments:

Post a Comment