ನಿತ್ಯ ಜೀವದ ದೈವ ವಾಕ್ಯವು ನನ್ನಯ ಬಾಳಿಗೆ ದಾರಿ ದೀಪವು

 August 2022

01 02 03 04 05 06 07 08 09 10 11 12 13 14 15 16 17 18 19 20 21 22 23 24 25 26 27 28 29 30 31 

06.06.24 - ಇದಲ್ಲದೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವಂತೆಯೇ ನಮ್ಮ ನೆರೆಯವರನ್ನೂ ಪ್ರೀತಿಸತಕ್ಕದ್ದು

ಮೊದಲನೇ ವಾಚನ: 2 ತಿಮೊಥೇಯನಿಗೆ 2:8-15


ಕ್ರಿಸ್ತಯೇಸುವನ್ನು ಸ್ಮರಿಸಿಕೋ. ದಾವೀದನ ವಂಶಸ್ಥರಾದ ಅವರು ಮೃತರಾಗಿ ಪುನರುತ್ಥಾನರಾದರು. ಇದೇ ನಾನು ಸಾರುವ ಶುಭಸಂದೇಶ. ಇದನ್ನು ಸಾರಿದ್ದರಿಂದಲೇ ನಾನು ಕಷ್ಟಗಳಿಗೆ ಈಡಾಗಿದ್ದೇನೆ; ಪಾತಕಿಯಂತೆ ಬೇಡಿಗಳಿಂದ ಬಂಧಿತನಾಗಿದ್ದೇನೆ. ಆದರೆ ದೇವರ ವಾಕ್ಯವನ್ನು ಯಾರೂ ಬಂಧಿಸುವಂತಿಲ್ಲ. ದೇವರಿಂದ ಆಯ್ಕೆಯಾದ ಪ್ರಜೆಗಳು ಪ್ರಭು ಯೇಸುವಿನಲ್ಲಿ ಲಭಿಸುವ ಜೀವೋದ್ಧಾರವನ್ನೂ ಅನಂತಮಹಿಮೆಯನ್ನೂ ನನ್ನೊಂದಿಗೆ ಪಡೆಯಲೆಂದು ನಾನು ಇದೆಲ್ಲವನ್ನೂ ಅವರಿಗಾಗಿ ಸಹಿಸುತ್ತಿದ್ದೇನೆ. ಈ ಮಾತು ನಂಬತಕ್ಕದ್ದಾಗಿದೆ: ನಾವು ಆತನೊಡನೆ ಸತ್ತಿದ್ದರೆ,  ಆತನೊಡನೆ ಜೀವಿಸುತ್ತೇವೆ; ಸೈರಣೆಯುಳ್ಳವರು ನಾವಾದರೆ, ಆತನೊಡನೆ ರಾಜ್ಯವಾಳುತ್ತೇವೆ; ನಾವಾತನನು ನಿರಾಕರಿಸಿದರೆ, ನಮ್ಮನ್ನಾತನು ನಿರಾಕರಿಸುತ್ತಾನೆ. ನಾವು ವಿಶ್ವಾಸಭ್ರಷ್ಟರಾದರೂ ವಿಶ್ವಾಸಪಾತ್ರನಾತ; ಕಾರಣ, ತನ್ನ ಸ್ವಭಾವಕ್ಕೆ ವಿರುದ್ಧ ವರ್ತಿಸನಾತ. ಈ ವಿಷಯಗಳನ್ನು ನಿನ್ನ ಸಭೆಯವರಿಗೆ ಜ್ಞಾಪಕಪಡಿಸು. ವ್ಯರ್ಥವಾದ ವಾಗ್ವಾದಗಳನ್ನು ನಿಲ್ಲಿಸಬೇಕೆಂದು ಅವರನ್ನು ದೇವರ ಮುಂದೆ ಖಂಡಿತವಾಗಿ ಎಚ್ಚರಿಸು. ಇಂಥ ವಾಗ್ವಾದಗಳಿಂದ ಕೇಳುವವರಿಗೆ ಕೇಡಾಗುವುದೇ ಹೊರತು ಒಳಿತೇನೂ ಆಗದು. ನೀನಾದರೋ ದೇವರಿಗೆ ಮೆಚ್ಚುಗೆಯಾದವನಂತೆ, ತನ್ನ ಕೆಲಸಕ್ಕೆ ಹಿಂದೆಗೆಯದ ಕೆಲಸಗಾರನಂತೆ, ಸುವಾರ್ತೆಯನ್ನು ಸರಿಯಾಗಿ ಸಾರುವವನಂತೆ ಬಾಳಲು ಪ್ರಯತ್ನಪಡು.

ಕೀರ್ತನೆ: 25:4-5, 8-9, 10, 14

ಶ್ಲೋಕ: ನಿನ್ನ ಮಾರ್ಗವನು ಪ್ರಭೂ, ನನಗೆ ತೋರಿಸು

ಶುಭಸಂದೇಶ: ಮಾರ್ಕ 12:28-34

ಧರ್ಮಶಾಸ್ತ್ರಿ ಒಬ್ಬನು, ಯೇಸುಸ್ವಾಮಿ ಸದ್ದುಕಾಯರಿಗೆ ಸಮರ್ಪಕವಾದ ಉತ್ತರವನ್ನು ಕೊಟ್ಟಿದ್ದನ್ನು ಮೆಚ್ಚಿ, ಅವರ ಬಳಿಗೆ ಬಂದು, “ಆಜ್ಞೆಗಳಲ್ಲೆಲ್ಲಾ ಪ್ರಪ್ರಥಮ ಆಜ್ಞೆ ಯಾವುದು?” ಎಂದು ಕೇಳಿದನು. ಯೇಸು ಅವನಿಗೆ, “ಇಸ್ರಯೇಲ್ ಸಮಾಜವೇ ಕೇಳು: ನಮ್ಮ ದೇವರಾದ ಸರ್ವೇಶ್ವರ ಏಕೈಕ ಸರ್ವೇಶ್ವರ; ನಿನ್ನ ದೇವರಾದ ಸರ್ವೇಶ್ವರನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಆತ್ಮದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ನಿನ್ನ ಪೂರ್ಣ ಶಕ್ತಿಯಿಂದಲೂ ಪ್ರೀತಿಸು. ಇದೇ ಪ್ರಪ್ರಥಮ ಆಜ್ಞೆ. “ನಿನ್ನನ್ನು ನೀನೇ ಪ್ರೀತಿಸಿಕೊಳ್ಳುವಂತೆ ನಿನ್ನ ನೆರೆಯವನನ್ನೂ ಪ್ರೀತಿಸು. ಇದೇ ಎರಡನೆಯ ಆಜ್ಞೆ. ಇವೆರಡು ಆಜ್ಞೆಗಳಿಗಿಂತ ಶ್ರೇಷ್ಠವಾದ ಆಜ್ಞೆ ಬೇರೊಂದೂ ಇಲ್ಲ,” ಎಂದರು. ಇದನ್ನು ಕೇಳಿದ ಆ ಧರ್ಮಶಾಸ್ತ್ರಿ, “ಬೋಧಕರೇ, ಚೆನ್ನಾಗಿ ಹೇಳಿದಿರಿ. ದೇವರು ಒಬ್ಬರೇ, ಅವರ ಹೊರತು ಬೇರೆ ದೇವರಿಲ್ಲ, ಎಂದು ನೀವು ಹೇಳಿದ್ದು ಸತ್ಯ; ಅವರನ್ನು ನಾವು ಪೂರ್ಣ ಹೃದಯದಿಂದಲೂ ಪೂರ್ಣ ಜ್ಞಾನದಿಂದಲೂ ಪೂರ್ಣ ಶಕ್ತಿಯಿಂದಲೂ ಪ್ರೀತಿಸತಕ್ಕದ್ದು. ಇದಲ್ಲದೆ ನಮ್ಮನ್ನು ನಾವು ಪ್ರೀತಿಸಿಕೊಳ್ಳುವಂತೆಯೇ ನಮ್ಮ ನೆರೆಯವರನ್ನೂ ಪ್ರೀತಿಸತಕ್ಕದ್ದು. ಇವು ಎಲ್ಲಾ ದಹನಬಲಿಗಳಿಗಿಂತಲೂ ಯಜ್ಞಯಾಗಾದಿಗಳಿಗಿಂತಲೂ ಎಷ್ಟೋ ಮೇಲಾದುವು,” ಎಂದನು. ಅವನ ವಿವೇಕಪೂರ್ಣವಾದ ಉತ್ತರವನ್ನು ಮೆಚ್ಚಿ ಯೇಸು, "ನೀನು ದೇವರ ಸಾಮ್ರಾಜ್ಯದಿಂದ ದೂರವಿಲ್ಲ," ಎಂದರು. ಇದಾದ ಬಳಿಕ ಯೇಸುವನ್ನು ಪ್ರಶ್ನಿಸುವುದಕ್ಕೆ ಯಾರೊಬ್ಬರೂ ಧೈರ್ಯಗಳ್ಳಲಿಲ್ಲ. 

No comments:

Post a Comment